Monday, July 16, 2012

"ನನ್ನ ತೇಜಸ್ವಿ" ಪುಸ್ತಕ ಪರಿಚಯ


ತೇಜಸ್ವಿ ಅಭಿಮಾನಿಯಾದ ನಾನು ಕೆಲ ಸಮಯದ ಹಿಂದೆ ಇಂಟರ್ನೆಟ್ ನಲ್ಲಿ ಏನೋ ಹುಡುಕುತ್ತಿದ್ದಾಗ "ನನ್ನ ತೇಜಸ್ವಿ" ಪುಸ್ತಕದ ವಿಮರ್ಷೆ ಕಾಣಸಿಕ್ಕಿತು. ಎರಡು ಕಡೆ ನಾನು ಈ ಪುಸ್ತಕದ ಬಗ್ಗೆ ಒಳ್ಳೆ ಅಭಿಪ್ರಾಯ ಬರೆಯಲ್ಪಟ್ಟದ್ದನ್ನು ನೋಡಿ ಓದುವ ಆಸಕ್ತಿಯಿಂದ ಕೊಂಡು ತಂದೆ. ಅದನ್ನು ಓದಿ ಮುಗಿಸಿ ಕೆಲವು ತಿಂಗಳುಗಳಾದವು. ಆದರೂ ಅದರ ಬಗ್ಗೆ ಒಂದೆರಡು ಅಭಿಪ್ರಾಯ ಬರೆಯಬೇಕು ಎಂದು ಅನ್ನಿಸಿ ಇಲ್ಲಿ ಬರೆಯುತ್ತಿದೇ್ದನೆ. 
(ಇದು ಕೇವಲ ನನ್ನ ಅಭಿಪ್ರಾಯ ಎಲ್ಲರಿಗೆ ಅನ್ವಯಿಸಬೇಕೆಂದಿಲ್ಲ)

ಈ ಪುಸ್ತಕ ಸುಮಾರು 600 ಪುಟ ಹೊಂದಿದ್ದು (ಬೆಲೆ ರೂ: 369) ಬಹು ನಿರೀಕ್ಷೆಯಿಟ್ಟು ಓದಲಾರಂಭಿಸಿದಾಗ ಆರಂಭದಲ್ಲಿ ನನಗೆ ನಿರಾಸೆಯುಂಟುಮಾಡಿತು.  ಆರಂಭದಲ್ಲಿಯೇ ಲೇಖಕಿ ರಾಜೇಶ್ವರಿಯವರು ಇದು ಬರಹದ ತಮ್ಮ ಪ್ರಥಮ ಪ್ರಯತ್ನವೆಂದೂ, ತಮಗೆ ಆ ಬಗ್ಗೆ ಹೆಚ್ಚಿನ ಅನುಭವವಿಲ್ಲವೆಂದೂ ಹೇಳಿದ್ದರಿಂದ ಓದನ್ನು ಮುಂದುವರಿಸಿದೆ. ಪ್ರಾರಂಭದ ಕೆಲವು ಆಧ್ಯಾಯಗಳ ನಂತರ ಬರಹದ ಕ್ರಮ ಸ್ವಲ್ಪ ಅಭ್ಯಾಸವಾಯಿತು. ತೇಜಸ್ವಿಯವರ ದಿನ ನಿತ್ಯದ ಬದುಕು, ಅವರ ಆಸಕ್ತಿಗಳು, ಅಭಿಪ್ರಾಯಗಳು ಇತ್ಯಾದಿಗಳನೇ್ನ ಹೆಚಾ್ಚಗಿ ಬರೆದಿರುವ ಲೇಖಕಿ ತೇಜಸ್ವಿಯವರ ತಂದೆ, ತಾಯಿ, ಸಹೋದರ, ಸಹೋದರಿಯರ ವಿವರಗಳನ್ನೂ ಸೇರಿಸಿದ್ದಾರೆ. 

ಆದರೆ ಹಲವು ಹಲವು ಕಡೆ ಬರಹದ ಶೈಲಿ ಅರ್ಥವಾಗದಂತಿದೆ. ಉದಾಹರಣೆಗೆ ತೇಜಸ್ವಿಯವರು ಮನೆಗೆ ನೀರು ಬರಿಸಲು ಅಳವಡಿಸಿದ ಪಂಪ್ ನ ಕಾರ್ಯವಿಧಾನದ ವಿವರಣೆ ಇದ್ದರೂ ಅದು ಏನೆಂದು ಸರಿ ಅರ್ಥವೇ ಆಗುವುದಿಲ್ಲ. ಅನೇಕ ಕಡೆ ಒಂದು ವಿಷಯದ ನಡುವೆ ಇನ್ನೊಂದು ವಿಷಯ ಹೊಕ್ಕು ನಮ್ಮನ್ನು ಎತ್ತಲೋ ಕೊಂಡೊಯು್ಯತ್ತದೆ. ಪುನಃ ಹಿಂದಿನ ವಿಷಯಕ್ಕೆ ಬಂದಾಗ ದಾರಿ ತಪ್ಪಿದಂತಾಗುತ್ತದೆ. ಇದು ಆರಂಭಿಕ ಅಧ್ಯಾಯಗಳಲ್ಲಿ ಅವರ ಕಾಲೇಜು ದಿನಗಳ ವಿವರಣೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 

ಇದರ ನಂತರ ಅನೇಕ ಪುಟಗಳು ರಾಜೇಶ್ವರಿ ಮತ್ತು ತೇಜಸ್ವಿಯವರ ಪತ್ರ ವ್ಯವಹಾರಕ್ಕೆ ಮೀಸಲಿದೆ. ಆದರೆ ರಾಜೇಶ್ವರಿಯವರು ತೇಜಸ್ವಿಯವರ ಪತ್ರಗಳನ್ನು ಮಾತ್ರ ಸಂರಕ್ಷಿಸಿದ್ದು ತಮ್ಮ ಪತ್ರಗಳನ್ನು ಸುಟ್ಟು ಹಾಕಿದುದಾಗಿ ಹೇಳಿದ್ದು, ಪುಸ್ತಕದಲ್ಲಿ ಕೇವಲ ತೇಜಸ್ವಿಯವರ ಪತ್ರಗಳನ್ನು ಮಾತ್ರ ಪ್ರಕಟಿಸಲಾಗಿದೆ. ಬೆರಳೆಣಿಕೆಯಷ್ಟು ಮಾತ್ರ ತಮ್ಮ ಪತ್ರಗಳನ್ನು ಪ್ರಕಟಿಸಿದ್ದಾರೆ. ಇದರಿಂದ ನಮಗೆ ಕೆಲವು ಕಡೆ ಸಂದರ್ಭವೇ ಅರ್ಥವಾಗದಂತಿದೆ. ಪತ್ರಗಳನ್ನು ಹೊಂದಿದ ಅಧ್ಯಾಯ ಬಹು ನೀರಸವೆನಿಸುತ್ತದೆ.

ಲೇಖಕಿಯವರು ತೇಜಸ್ವಿಯವರ ಬಗ್ಗೆ ತಮ್ಮ ಅಭಿಪ್ರಾಯ ಹೇಳದೆ nutral ಆಗಿ ಬರೆಯಬೇಕಿತ್ತು ಎಂದು ನನಗೆ ಪುಸ್ತಕದ ಮೊದಲಿಂದ ಕೊನೆವರೆಗೂ ಅನ್ನಿಸಿತು. ಪುಸ್ತಕದ ತುಂಬಾ ಅನೇಕ ಕಡೆ ತೇಜಸ್ವಿಯವರನ್ನು ಸ್ವಲ್ಪ ಉನ್ನತ ಮಟ್ಟಕ್ಕೆ ಏರಿಸಿ ಬರೆದಂತೆ ನನಗೆ ಕಾಣಿಸಿತು. (ಉದಾ: ಅವರಿಂದ ಅವರ ಆಪ್ತರು ಹೇಗೆ ಪ್ರಭಾವಿತರಾಗಿದ್ದರು, ಚಿಕ್ಕ ಪ್ರಾಯದಲ್ಲಿ ಅವರ ಯೋಚನೆಗಳು ಯಾವ ರೀತಿ ಇದ್ದವು, ಅವರು ಕಂಪ್ಯೂಟರ ಕಲಿಕೆಯಲ್ಲಿ ಪಳಗಿದ್ದು ಇತ್ಯಾದಿ) ಈ ಅಭಿಪ್ರಾಯವನ್ನು ಪತ್ನಿಯಾಗಿ ಅವರು ಬರೆಯದೆ ಇದ್ದರೆ ಒಳ್ಳೆಯದಿತ್ತು ಎನಿಸಿತು. ತೇಜಸ್ವಿಯವರ ಬಗ್ಗೆ ಎಂತಹ ಅಭಿಪ್ರಾಯ ಹೊಂದಬೇಕೆನ್ನುವುದನ್ನು ಓದುಗರಿಗೇ ಬಿಡಬೇಕಿತ್ತು. 

ಉಳಿದಂತೆ ಕೆಲವು ಉತ್ತಮ ಮಾಹಿತಿಗಳು (ಪ್ರಕೃತಿಯ ಬಗ್ಗೆ, ಕಾಫಿ ಬೆಳೆಯ ಬಗ್ಗೆ, ತೇಜಸ್ವಿವಯರ ಚಳುವಳಿಗಳ ಬಗ್ಗೆ, ಕುವೆಂಪು ಅವರ ಜೀವನದ ಬಗ್ಗೆ), ಸ್ವಾರಸ್ಯಕರ ಘಟನೆಗಳು ಉಲೇ್ಲಖಿಸಲ್ಪಟ್ಟಿವೆ.
ಒಟ್ಟಿನಲ್ಲಿ ಈ ಪುಸ್ತಕವನ್ನು ಓದಿದರೆ ನಮಗೆ ತೇಜಸ್ವಿಯವರ ಜೀವನದ ಇನ್ನೊಂದು ಆಯಾಮ ಕಾಣಸಿಗುತ್ತದೆ. ಆದರೆ ತೇಜಸ್ವಿ ಅಭಿಮಾನಿಗಳಲ್ಲದವರಿಗೆ ಈ ಪುಸ್ತಕ ಇಷ್ಟವಾಗುವುದು ಅನುಮಾನ. ನನ್ನ ದೃಷ್ಟಿಯಲ್ಲಿ ಇದು ಹೆಚ್ಚಿನ ನಿರೀಕ್ಷೆಯಿಲ್ಲದೆ ಸಮಯ ಕಳೆಯಲು ಓದಬಹುದಾದ ಪುಸ್ತಕ. ಓದದೆ ಹೋದರೆ ದೊಡ್ಡ ನಷ್ಟವೇನೂ ಆಗಲಾರದು ಎಂದು ನನ್ನ ಅನಿಸಿಕೆ.


2 comments:

Swarna said...

ನಂಗೂ ಈ ಪುಸ್ತಕದ ಕೆಲವು ಭಾಗ ಮಾತ್ರ ಇಷ್ಟ ಆಯ್ತು.
ಚೆನ್ನಾಗಿ ಬರೆದಿದ್ದೀರಿ.
ಸ್ವರ್ಣಾ

ವಿ.ರಾ.ಹೆ. said...

ನಾನೂ ಈ ಪುಸ್ತಕ ಓದಲು ಶುರುಮಾಡಿ ಕೊನೆಗೆ ಮೇಲ್ಮೇಲೆ ಹಾಗೇ ಓದಿ ಮುಗಿಸಿದೆ... ಆದರೆ ಕೆಲವೊಂದು ಭಾಗಗಳು ಆಸಕ್ತಿ ಮೂಡಿಸುತ್ತವೆ.