Friday, July 8, 2011

ಇಂಗ್ಲೀಷ್ ಭಾಷೆ… ಒಂದು "ಭಾಷೆ".

ಎಷ್ಟೋ ದಿನಗಳ ನಂತರ ಬರೆಯಲು ಹೊರಟದ್ದೇನೆ.
ಬೇರೆ ಬೇರೆ ಕಾರಣಗಳಿಂದ (ಮದುವೆ ಸಮಾರಂಭಗಳ ತಿರುಗಾಟ, ಅನಾರೋಗ್ಯ, ಕೆಲಸ ಮಾಡದ ಕಂಪ್ಯೂಟರ್ ಇತ್ಯಾದಿ) ಬ್ಲಾಗ್ ಬರಹಕ್ಕೆ ಸಮಯ ಹೊಂದಿಸಿಕೊಳ್ಳಲಾಗದೆ ಇಂದು ಹೇಗೋ ಹೊಂದಿಸಿಕೊಂಡಿದ್ದೇನೆ.
ಬರೆಯಲು ಅನೇಕ ವಿಷಯಗಳು ತಲೆಯಲ್ಲಿ ಮೂಡಿ ಮರೆತೂ ಹೋಗಿವೆ. ಕಂಪ್ಯೂಟರಿನೊಳಗಿದ್ದ ಬರೆಯಲರ್ಹ ವಿಷಯಗಳ ಪಟ್ಟಿ ಕಾಣೆಯಾಗಿದೆ. ಸಧ್ಯದಲ್ಲಿ ನೆನಪಿರುವುದು ಇಂಗ್ಲೀಷ್ ಭಾಷೆಯ ಬಗ್ಗೆ ಮಾತನಾಡಬೇಕೆನಿಸಿದ ವಿಷಯಗಳು.

ನಾನು ಏಳನೆ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತವಳು. ಎಂಟನೇ ತರಗತಿಯಲ್ಲಿ ಆಂಗ್ಲ ಮಾಧ್ಯಮಕ್ಕೆ ಸೇರಿದರೂ, ನಮ್ಮ ಆ ಸಣ್ಣ ಊರಲ್ಲಿ ಹೀಗೆ ಕನ್ನಡದಿಂದ ಇಂಗ್ಲೀಷ್ ಗೆ ಬದಲಿಸುವವರು ಹಲವರಿದ್ದುದರಿಂದ ಅಧ್ಯಾಪಕರು ಇಂಗ್ಲೀಷ್, ಕನ್ನಡ ಎರಡೂ ಭಾಷೆಯಲ್ಲಿ ವಿವರಿಸುತ್ತಿದ್ದರು. ಆಗ ನನ್ನ ಇಂಗ್ಲೀಷ್ ಜ್ಞಾನ ಪರೀಕ್ಷೆಗೆ ಓದಲು ಹಾಗೂ ಬರೆಯಲು ಬೇಕಾಗುವಷ್ಟೇ ಇತ್ತು. ಮಾತನಾಡಲು ಬರುತ್ತಿರಲಿಲ್ಲ.

ಪಿ.ಯು.ಸಿ.ಯಲ್ಲೂ ಕನ್ನಡದಲ್ಲೇ ಮಾತು. ಪಾಠ ಮಾತ್ರವೇ ಇಂಗ್ಲೀಷ್ ನಲ್ಲಿ ಇದ್ದುದು! ಇಂಥ ನಮೂನೆ ಬೆಳೆದವಳಿಗೆ ಎಂಜಿನೀರಿಂಗ್ ಸೇರಿದಾಗ ಪೇಚಾಟಕ್ಕಿಟ್ಟುಕೊಂಡಿತು. ಕಾಲೇಜು ದಕ್ಷಿಣ ಕನ್ನಡದ್ದೇ ಆಗಿದ್ದರೂ ಅನೇಕರು ಕನ್ನಡ ಬರದವರೂ, ಕನ್ನಡ ಬರದಂತೆ ನಟಿಸುವವರೂ ಅಲ್ಲಿದ್ದರು. ಅದಲ್ಲದೆ ಮಲಯಾಳ ಮಾತನಾಡುತ್ತಿದ್ದ ನನ್ನ ರೂಂ ಮೇಟ್ ಜೊತೆ ಇಂಗ್ಲೀಷ್ ಅಲ್ಲದೆ ಬೇರೇನೂ ಭಾಷೆ ಮಾತನಾಡುವುದು ಸಾಧ್ಯವಿರಲಿಲ್ಲ. ಅವಳೊಡನೆ ಹೇಗೋ ಕಷ್ಟಪಟ್ಟು ಮಾತನಾಡುತ್ತಾ ನಿಧಾನಕ್ಕೆ ಭಾಷೆಯ ಮೇಲೆ ಹಿಡಿತ ಸಿಗಲ;ಾರಂಭಿಸಿತು. ಆದರೆ ಇತರೆ ಓದುವಿಕೆಯು ಕನ್ನಡದಲ್ಲೇ ಇದ್ದಕಾರಣ ಶಬ್ಧಗಳು ನಾಲಿಗೆ ಮೇಲೆ ಬೇಕಾದಂತೆ ಕುಣಿಯುತ್ತಿರಲಿಲ್ಲ. ಆದರೂ ಮಾತನಾಡಲು ಏನೂ ತೊಂದರೆಯಾಗಲಿಲ್ಲ.

ವರುಷಗಳ ನಂತರ ಮದುವೆಯಾಯಿತು. ನನ್ನ ಯಜಮಾನರು ಮರಾಠಿ ಮಾಧ್ಯಮದಲ್ಲಿ ಕಲಿತವರು! ಅವರಿಗೆ ಓದುವ ಹವ್ಯಾಸವೂ ಇಲ್ಲ. ಅವರ ಇಂಗ್ಲೀಷ್ ಕೂಡಾ ಒಮ್ಮೊಮ್ಮೆ ತಡವರಿಸುತ್ತಿತ್ತು. ಕೆಲವು ಕಡೆ ವ್ಯಾಕರಣ ತಪ್ಪುತ್ತಿತ್ತು. ನನಗೆ ಅದನ್ನು ಸರಿಪಡಿಸಬೇಕೆಂದು ಬಲವಾಗಿ ಅನಿಸಿತು. ಮನೆಗೆ ಇಂಗ್ಲೀಷ್ ಪೇಪರ್ ತರಿಸಿ ಓದಲು ಹೇಳಿದೆ. ಓದುವ ಹವ್ಯಾಸ ಇಲ್ಲದಿದ್ದರೂ ಅದು ಓದು, ಇದು ಓದು ಎಂದು ಕೊಡತೊಡಗಿದೆ. ಅದು ಅವರಿಗೆ ಅಷ್ಟೊಂದು ಇಷ್ಟವಾಗುತ್ತಿದ್ದಂದೆ ಕಾಣಲಿಲ್ಲ.

ಮತ್ತೊಂದು ದಿನ ಆಫೀಸಿನಲ್ಲಿ ಹೊರ ರಾಜ್ಯದವರೊಡನೆ ಮಾತನಾಡುವಾಗ ನನ್ನ ದೃಷ್ಟಿಕೋನವೇ ಬದಲಾಗುವಂಥ ಸಂದರ್ಭ ಬಂತು. ಆಫೀಸಿನಲ್ಲಿ ಕನ್ನಡಿಗರಲ್ಲದವರೊಬ್ಬರು ಕನ್ನಡದ ಒಂದೆರಡು ಶಬ್ದಗಳನ್ನು ವಾಕ್ಯಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರು. ನನಗೆ ಇದನ್ನು ಕಂಡು ಬಹಳ ಖುಷಿಯಾಗಿ ಅವರಿಗೆ ವಾಕ್ಯ ಪೂರ್ಣ ಮಾಡಲು ಹೇಳಿಕೊಟ್ಟೆ. ತಪ್ಪಿದ್ದರೆ ತೊಂದರೆಯಿಲ್ಲ, ನಮ್ಮ ಭಾಷೆ ಕಲಿಯಲು ಯತ್ನಿಸಿದ್ದಾರೆ ಎಂದು ಸಂತೋಷಗೊಂಡು ಇನ್ನಷ್ಟು ಪ್ರೋತ್ಸಾಹಿಸಿದೆ. ಆಗ "ನಮ್ಮ ಭಾಷೆ ಅರಿಯದವರು ಅದನ್ನು ಕಲಿತು ತೊದಲಿದರೂ ನಮಗೆ ಇಷ್ಟವಾಗುತ್ತದೆ, ಹೆಮ್ಮೆಯೆನಿಸುತ್ತದೆ, ಆದರೆ ಇಂಗ್ಲೀಷ್ ಭಾಷೆಯಲ್ಲಿ ತಡವರಿಸುವವರನ್ನು ಕಂಡರೆ ಹಾಗೇಕೆ ಅನ್ನಿಸುವುದಿಲ್ಲ" ಎಂದು ಆಶ್ಚರ್ಯ ಪಟ್ಟೆ.

ನಾನು ಅನೇಕರನ್ನು ನೋಡಿದ್ದೇನೆ. ಇಂಗ್ಲೀಷ್ ಮಾತನಾಡಲು ಬರುವವರು ಇಂಗ್ಲೀಷ್ ಬಾರದವರನ್ನು ಗೇಲಿ ಮಾಡುವುದನ್ನು ಕಂಡಿದ್ದೇನೆ. ಅಲ್ಲದೆ ನನ್ನ ಸಹಪಾಠಿಗಳಲ್ಲಿ ಹಲವರು ಕನ್ನಡ ಬರುತ್ತಿದ್ದರೂ "I don't know Kannada" ಎಂದು ಹೆಮ್ಮೆಯಿಂದ ಹೇಳುವುದನ್ನು ಕೇಳಿದ್ದೇನೆ. ಅಪರಿಚಿತರಲ್ಲಿ ಕನ್ನಡದಲ್ಲಿ ದಾರಿಕೇಳಿದಾಗ, ಅಂಗಡಿಗಳಲ್ಲಿ ಸಾಮಾನು ವಿಚಾರಿಸಿದಾಗ ಇಂಗ್ಲೀಷ್ ಮಾತನಾಡಲು ಬರದಿದ್ದರೂ ಕಷ್ಟ ಪಟ್ಟು ಏನೇನೋ ಉತ್ತರ ಕೊಡುವುದನ್ನು ನೋಡಿದ್ದೇನೆ. ನಾನೇ ಇಂಗ್ಲೀಷ್ ಮಾಧ್ಯಮಕ್ಕೆ ಸೇರಿದಾಗ ಹಲವು ಮಕ್ಕಳು ಇಂಗ್ಲೀಷ್ ಮಾತನಾಡುವುದನ್ನು ನೋಡಿ ಕೀಳರಿಮೆಗೊಳಗಾಗಿದ್ದೇನೆ. ಈಗ ನೆನಪಿಸಿಕೊಂಡರೆ ಅಂದು ಹೆಚ್ಚಿನ ಮಕ್ಕಳು ಕನ್ನಡವನ್ನು ನೇರ ಇಂಗ್ಲೀಷ್ ಗೆ ತರ್ಜುಮೆ ಮಾಡಿ ಮಾತನಾಡಿಕೊಳ್ಳುತ್ತಿದ್ದುದು ಎಂದು ಗೊತ್ತಾಗಿ ನಗು ಬರುತ್ತದೆ. ಕೇವಲ ಇಂಗ್ಲೀಷ್ ಗೆ ಹೀಗೇಕೆ ಎಂದು ಬಹಳ ವಿಚಿತ್ರವೆನಿಸುತ್ತದೆ.

ಬಹುಶಃ ನಾವು ಇಂಗ್ಲೀಷ್ ಅನ್ನು ಒಂದು ಭಾಷೆಯ ರೂಪದಲ್ಲಿ ನೋಡುತ್ತಲೇ ಇಲ್ಲ. ಅದರ ಜೊತೆ ನಮ್ಮ prestige, pride ಅನ್ನು ಅಂಟಿಸಿಕೊಳ್ಳುತ್ತೇವೆ. ಯಾವುದೇ ರಾಜ್ಯದವರಾಗಲೀ ನಾವು ಅವರ ಭಾಷೆ ಮಾತನಾಡಲು ಯತ್ನಿಸಿದರೆ ಸಂತೋಷ ಪಡುತ್ತಾರೆ. ಇದನು್ನ ಭಾಷಾಭಿಮಾನ ಎನ್ನೋಣವೇ? ಹಾಗಾದರೆ ಇಂಗ್ಲೀಷ್ ಬಗ್ಗೆ ಯಾರಿಗೂ ಅಭಿಮಾನವೇ ಇಲ್ಲ ಎಂದಹಾಗಾಯಿತಲ್ಲ! ಇಂಗ್ಲೀಷ್ ಅನ್ನು ಇತರ ಭಾಷೆಗಳಂತೆ ಒಂದು communication ನ ಮಾಧ್ಯಮವಾಗಿ ನೋಡಿದರೆ ಏನೂ ಸಮಸ್ಯೆಯೇ ಇರಲಿಕ್ಕಿಲ್ಲ ಅಲ್ಲವೇ?

ನನ್ನ ಸಹೋದ್ಯೋಗಿಯ ಆ ಸಣ್ಣ ಪ್ರಯತ್ನ ಇಂಗ್ಲೀಷ್ ಭಾಷೆಯನ್ನು ನೋಡುವ ದೃಷ್ಟಿಯನ್ನೇ ಬದಲಿಸಿತು. ಈಗ ನಾನು ಯಜಮಾನರ ಇಂಗ್ಲೀಷ್ ಭಾಷಾಜ್ಞಾನದ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ದಿನವೂ ಪೇಪರ್ ಓದುವ ಅಭ್ಯಾಸ ಅವರಿಗೆ ಹಿಡಿದಿರುವುದರಿಂದ ಶಬ್ದ ಭಂಡಾರವೂ ನಿಧಾನಕ್ಕೆ ಉತ್ತಮಗೊಳ್ಳುತ್ತದೆ. ನಾವು ಹೇಳಿದ್ದು ಎದುರಿನ ವ್ಯಕ್ತಿಗೆ ಸರಿಯಾಗಿ ಅರ್ಥವಾಗುತ್ತಿದ್ದರೆ ಅದರಲ್ಲಿ ಇನ್ನೇನು ತೊಂದರೆಯಿದೆ? ಈಗ ಇಂಗ್ಲೀಷ್ ನನಗೆ ಕೇವಲ ಒಂದು ಭಾಷೆ. ಹೊಸ ಶಬ್ದಗಳನ್ನು ಕಲಿಯುತ್ತೇನೆ, ವ್ಯಾಕರಣ ಸರಿಪಡಿಸಿಕೊಳ್ಳುತ್ತೇನೆ, ಇತರ ಭಾಷೆಗಳಂತೆ ಪ್ರೀತಿಸುತ್ತೇನೆ (ಕನ್ನಡದಷ್ಟು ಅಲ್ಲ) ಮತ್ತು ಯಾವತ್ತಾದರೂ ತಪ್ಪುಗಳಾದರೆ ಕೀಳರಿಮೆ ಹಚ್ಚಿಕೊಳ್ಳುವುದಿಲ್ಲ :-)
-