Monday, February 7, 2011

"Sorry" ಮತ್ತು "Thank you"? ನಾನು ಹೇಳಲ್ಲ ಬಿಡಿ.

ಶುಕ್ರವಾರವೆಂದರೆ ಮೆಜೆಸ್ಟಿಕ್ ಹೋಗುವ ಬಸ್ ಗಳೆಲ್ಲ ಊರಿಗೆ ಹೊರಟ ಜನರು ಹಾಗೂ ಅವರ ಬ್ಯಾಗುಗಳಿಂದ ತುಂಬಿರುತ್ತವೆ. ಸೀಟು ಬಿಡಿ, ನಿಲ್ಲಲು ಜಾಗ ಸಿಕ್ಕಿದರೆ ಸಾಕು ಎಂಬ ಪರಿಸ್ಥಿತಿ ಇರುತ್ತದೆ. ಕಳೆದ ಶುಕ್ರವಾರ ತಡವಾಗಿ ಆಫೀಸ್ ಬಿಟ್ಟ ನಾನು ಇಂಥದ್ದೇ ಒಂದು ಕಿಕ್ಕಿರಿದ ವಜ್ರದಲ್ಲಿ (ವೋಲ್ವೋ ಬಸ್) ಆಫೀಸ್ ನ ಭಾರದ ಬ್ಯಾಗ್ ಹೊತ್ತು ನಿಂತು ಸಾಗಿದ್ದೆ. ಹಸಿವೆಯಿಂದ ಹೊಟ್ಟೆ ಖಾಲಿಯಾಗಿ ತೊಳಸಿದಂತಾಗುತ್ತಿತ್ತು. ಅಂತೂ ಅರ್ಧ ಗಂಟೆಯ ಒದ್ದಾಟದ ನಂತರ ಇಳಿಯುವ ಜಾಗ ಬಂತು. ಅಲ್ಲಿಂದ ಬೇರೆ ಬಸ್. ಹತ್ತು ನಿಮಿಷ ಕಾದಾಗ ಕಿಕ್ಕಿರಿದ ಬಸ್ ಬಂತು. ಮೆಜೆಸ್ಟಿಕ್ ನಿಂದ ಹೊರಬರುವ ಬಸ್ಸೂ ಹೀಗೆ ಜನರಿಂದ ತುಂಬಿರುವುದೇಕೆ ಎಂದು ಒಂದೆಡೆ ಆಶ್ಚರ್ಯವಾದರೆ, ಇನ್ನೊಂದೆಡೆ ಪುನಃ ನಿಂತೇ ಪ್ರಯಾಣಿಸಬೇಕಾದ ಕಷ್ಟವನ್ನು ಯೋಚಿಸಿ ಬೇಸರದಿಂದ ಬಸ್ ಹತ್ತಿದೆ.

ಹತ್ತು ನಿಮಿಷ ಕಳೆದಾಗ ಸೀಟು ಸಿಕ್ಕಿತು. ಪಕ್ಕದಲ್ಲಿ ಮುದುಕರೊಬ್ಬರು ಕುಳಿತಿದ್ದರು. ನಾನು ಆದಿನ ಕಷ್ಟಪಡಬೇಕೆಂಬುದು ಹಣೆಬರಹವಾಗಿತ್ತೋ ಎಂಬಂತೆ ಸ್ವಲ್ಪ ಹೊತ್ತಿನಲ್ಲೇ ಪುಟ್ಟ ಮಗುವೊಂದನ್ನು ಎತ್ತಿಕೊಂಡು ಸಭ್ಯರಂತೆ ಕಾಣುತ್ತಿದ್ದ ಹೆಂಗಸರಿಬ್ಬರು ಹತ್ತಿದರು. ಅಷ್ಟಲ್ಲದೆ "ಸೀಟು ಕೊಡ್ರೀ, ಸೀಟು ಕೊಡ್ರೀ" ಎಂದು ಆಚೆ ಈಚೆ ಬೊಬ್ಬಿಡತೊಡಗಿದರು. ಮುದುಕರನ್ನು ಏಕೆ ಏಳಿಸಬೇಕು ಎಂದು ನಾನೇ ಸೀಟು ಕೊಟ್ಟೆ. "Thanks" ಹೇಳದಿದ್ದರೆ ಪರವಾಗಿಲ್ಲ, ಆದರೆ ಆ ಹೆಂಗಸು ನನ್ನನ್ನು, ತನ್ನ ಹಕ್ಕಿನ ಸೀಟು ಕಸಿದಿರುವವಳಂತೆ ದುರುಗುಟ್ಟಿ ನೋಡಿ ಕುಳಿತಳು. ಬಸ್ ಆಮೆಯಂತೆ ಸಾಗುತ್ತಿತ್ತು. ನನಗೆ ಹಸಿವು ಜೋರಾಗಿ ತಲೆನೋಯುತ್ತಿತ್ತು. ಕಾಲು ಗಂಟೆ ಕಳೆದಿರಬೇಕು. ನನ್ನ ಪಕ್ಕದಲ್ಲಿ ಕುಳಿತಿದ್ದ ಮುದುಕರು ಎದ್ದು ಹೋದರು. ನಾನು ಆ ಸೀಟಿನಲ್ಲಿ ಕೂರಬೇಕೆನ್ನುವಷ್ಟರಲ್ಲಿ ಆ ಹೆಂಗಸು ತನ್ನೊಂದಿಗಿದ್ದ ಇನ್ನೊಬ್ಬ ಹೆಂಗಸನ್ನು ಕರೆದು ಅಲ್ಲಿ ಕೂರಿಸಿದರು! ನನಗೆ ದಿಗಿಲಾಯಿತು. ಇವರಿಗೆ ಯಾಕೆ ಸೀಟು ಕೊಡಬೇಕಿತ್ತೋ ಎಂದು ಬೇಸರವಾಯಿತು.

ಡಿಸೆಂಬರಿನಲ್ಲಿ ನಾನು ನೆಂಟರ ಮನೆಗೆ ಉಪನಯನವೊಂದಕ್ಕೆ ಹೋಗಿದ್ದೆ. ಅಲ್ಲಿ ನನ್ನ cousin ನ ನಾಲ್ಕು ವರ್ಷದ ಮಗಳು ಬಂದಿದ್ದಳು. ದಕ್ಷಿಣ ಅಮೇರಿಕಾದಲ್ಲಿ ಇರುವ ಅವಳಿಗೆ ಹಸು ಎಂದರೆ ಪಂಚಪ್ರಾಣ. ಇಡೀ ದಿನ ಹಟ್ಟಿಯಲ್ಲಿ ಹಸುಗಳನ್ನು ನೋಡುತ್ತಾ, ಅವಕ್ಕೆ ಹುಲ್ಲು ಹಾಕುತ್ತಾ ನಿಂತಿರುತ್ತಿದ್ದಳು. ನಾನು ಅವಳತ್ತ ಹೋದಾಗೆಲ್ಲ ಸ್ವಲ್ಪ ಹುಲ್ಲು ತಂದು ಕೊಡಲು ಹೇಳುತ್ತಿದ್ದಳು. ನಾನು ಪ್ರತಿ ಬಾರಿ ಹುಲ್ಲು ತೆಗೆದು ಕೊಟ್ಟಾಗಲೂ "Thank you" ಎನ್ನುತ್ತಿದ್ದಳು. ಸಂಜೆ ಆಟವಾಡುತ್ತಾ ನನ್ನ ಕೈಗೆ ಏನೋ ಕೊಟ್ಟಳು. ನಾನು ಅದನ್ನು ನೋಡುತ್ತಿರಬೇಕಾದರೆ "Say thank you" ಎಂದಳು. ಅವಳು ಕಲಿಯುತ್ತಿರುವ ಶಾಲೆಯಲ್ಲಿ ಎಷ್ಟು ಚಿಕ್ಕಂದಿನಲ್ಲೇ "Thanks" ಮತ್ತು "Sorry" ಗಳನ್ನು ಕಲಿಸುತ್ತಾರೆ ಎಂದು ತಿಳಿದು ಆಶ್ಚರ್ಯವೂ, ಸಂತೋಷವೂ ಆಯಿತು.

ಒಮ್ಮೆ ಬಸ್ ನಲ್ಲಿ conductor ಭರ್ತಿ ಮೂರು ಬಾರಿ ಕಾಲು ತುಳಿದು "ರಶ್ ಇದೆ ಅಡ್ಜಸ್ಟ ಮಾಡಿಕೊಳ್ಳಿ" ಎಂದು ನನಗೇ ಬೈದುದಿದೆ. ಬೆಂಗಳೂರಿನ ಪ್ರತಿಷ್ಠಿತ ಎನಿಸಿರುವ ಬಿಷಪ್ ಕಾಟನ್ ಶಾಲೆಯ ಮಕ್ಕಳೂ ಬಸ್ ನಲ್ಲಿ ಕಾಲು ತುಳಿದಾಗ "Sorry" ಎನ್ನುವ ಸೌಜನ್ಯ ತೋರಿಸದಿರುವುದನ್ನು ಕಂಡು ನಾನು ಬೆರಗಾಗಿದ್ದೇನೆ. ನನ್ನ ಸಹೋದ್ಯೋಗಿಯೊಬ್ಬಳು "ನಾವು ತಪ್ಪು ಮಾಡಿದ್ದರೂ ಬೇರೆಯವರಿಗೆ ತಪ್ಪಿತಸ್ಥರು ಯಾರೆಂದು ಗೊತ್ತಾಗದಿದ್ದರೆ "Sorry" ಹೇಳಿ ಸಣ್ಣವರೇಕೆ ಆಗಬೇಕು?" ಎಂದು ವಾಗ್ವಾದಕ್ಕಿಳಿದದ್ದು ನೋಡಿದ್ದೇನೆ. ಹಲವು ದೇಶಗಳಲ್ಲಿ ವಾಹನ over take ಮಾಡುವಾಗ ಬದಿಗೆ ಸರಿದ ಚಾಲಕನಿಗೆ "Thank you" ಹೇಳುವ ಕ್ರಮವಿದೆಯಂತೆ. ನಮ್ಮ ಸಂಸ್ಕೃತಿಯ ಶ್ರೇಷ್ಠತೆಯನ್ನು ಕೊಂಡಾಡುತ್ತಾ ಇತರ ಸಂಸ್ಕೃತಿಗಳನ್ನು ತುಚ್ಛವೆಂದು ಭಾವಿಸುವವರಿಗೆ ಕ್ಷಮೆ ಹಾಗೂ ಧನ್ಯವಾದಕ್ಕೆ ಹಿಂಜರಿಯುವ ಮನಸ್ಥಿತಿಯ ಬಗ್ಗೆ ಹೇಗೆ ಅನ್ನಿಸುತ್ತದೆ ಎಂದು ಕೇಳಬೇಕೆನಿಸುತ್ತದೆ. ನಾವೆಷ್ಟೇ ಸಂಸ್ಕಾರವಂತರೆಂದರೂ ಕಲಿಯಲೇ ಬೇಕಾದ ಚಿಕ್ಕ ಪುಟ್ಟ ವಿಚಾರಗಳು ಅನೇಕವಿವೆ. ಬೇರೆ ಸಂಸ್ಕೃತಿಗಳನ್ನು ನೋಡುವಾಗ ಬರೇ "ಮಕ್ಕಳು ಅಪ್ಪ ಅಮ್ಮನನ್ನು ವೃದ್ಧಾಶ್ರಮದಲ್ಲಿ ಬಿಡುತ್ತಾರೆ. ಮದುವೆಯಾದ ಕೆಲ ವರ್ಷಗಳಲ್ಲಿ ಬೇರೆೆಯಾಗುತ್ತಾರೆ" ಎಂದಷ್ಟೇ ನೋಡದೆ ಒಳ್ಳೆಯ ಅಂಶಗಳನ್ನೂ ನೋಡಬೇಕಿದೆ. ಹುಡುಕಿದರೆ ನಮ್ಮ ಸಂಸ್ಕೃತಿಯಲ್ಲೂ ಹುಳುಕು ಸಿಗದೆ ಇದ್ದೀತೇ?
-