Monday, March 29, 2010

NGO ಗಳ ಹಿಡಿತದಲ್ಲಿ...

ಇತ್ತೀಚೆಗೆ ನಮ್ಮ ಆಫೀಸಿಗೆ ಭೇಟಿಕೊಡುತ್ತಿರುವ NGO (Non-governmental Organization)ಗಳ ಸಂಖ್ಯೆ ಹೆಚ್ಚುತ್ತಿದೆ. ಆಫೀಸಿನ ಕಾಫಿ ಯಂತ್ರದ ಬಳಿ ಮೇಜು-ಕುರ್ಚಿ ಹಾಕಿ ಕೂತ ಪ್ರತಿನಿಧಿಗಳು ಅತ್ತ ಹೋದವರನ್ನೆಲ್ಲಾ ಕರೆದು ವಿವರಣೆ ನೀಡುತ್ತಾರೆ. ಕೊನೆಯದಾಗಿ ನವಿರಾಗಿ ಸಹಾಯ, ಕೊಡುಗೆ ಯಾಚಿಸಿ ನಮ್ಮನ್ನು ಇಲ್ಲ ಎನ್ನಲಾಗದ ಸಿ್ಥತಿಗೆ ತಳ್ಳುತ್ತಾರೆ. ಮೊದಲು ನನಗೆ ಇವುಗಳ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಈಗ ಅತಿಯಾದರೆ ಅಮೃತವೂ ವಿಷವೆಂಬಂತೆ NGOದ ಪ್ರತಿನಿಧಿಗಳು ಬರುವರೆಂದರೆ ಹೆದರಿಕೆಯಾಗತೊಡಗಿದೆ.
ಈ NGOಗಳ ಜೊತೆ ನನಗೆ ಎದುರಾದ ಕೆಲ ಪ್ರಸಂಗಗಳನ್ನು ಬರೆಯುತ್ತೇನೆ.

ದೀಪಾವಳಿ ಸಮಯದಲ್ಲಿ ಬೌದ್ಧಿಕವಾಗಿ ಕಡಿಮೆ ಬೆಳೆದಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಸಂಸ್ಥೆಯಿಂದ ಒಬ್ಬರು ಬಂದಿದ್ದರು. ಅವರು ಆ ಸಂಸ್ಥೆಯ ಆಶ್ರಯದಲ್ಲಿರುವವರು ಮಾಡಿದ ಗ್ರೀಟಿಂಗ್ ಕಾರ್ಡ್, ಬಣ್ಣದ envelop, ರಟ್ಟಿನ ಫೋಟೋ ಫ್ರೇಮ್, ಬಣ್ಣ ಹಚ್ಚಿದ ಹಣತೆ, ಮೇಣದ ಬತ್ತಿ ಹೀಗೆ ಬೇರೆ ಬೇರೆ ವಸ್ತುಗಳನ್ನು ಮಾರಾಟಕ್ಕೆ ತಂದಿದ್ದರು. ಹಣ ಜಾಸ್ತಿ ಇದ್ದರೂ ಸಹಾಯದ ರೂಪದಲ್ಲಿ ಹೆಚ್ಚು ಜನ ಕೊಂಡರು. ನನಗೂ ಈ ಸಹಾಯ ಕೋರುವ ವಿಧಾನ ಬಹಳ ಹಿಡಿಸಿತು. ಆದರೆ ಅವರು ಮರುದಿನವೂ ಬಂದರು. ಒಂದು ತಿಂಗಳಲ್ಲಿ ಮತ್ತೆ ಬಂದರು! ನನಗೆ ಪುನಃ ವ್ಯಾಪಾರ ಮಾಡುವ ಮನಸಿರಲಿಲ್ಲ. ಅತ್ತ ಸುಳಿದಾಡಲು ದಾಕ್ಷಿಣ್ಯವಾಗಿ ಚಹಾ ಬಿಟ್ಟು ನನ್ನ ಜಾಗದಲ್ಲೇ ಕುಳಿತಿದ್ದೆ. ಕೊನೆಗೆ ಸಂಜೆ ರೂ. 80 ತೆತ್ತು ಮೇಣದ ಬತ್ತಿಯೊಂದನ್ನು ಕೊಂಡೆ.

ಇದಾಗಿ ಜನವರಿ ತಿಂಗಳಲ್ಲಿ ವೃದ್ಧರಿಗೆ ಸಹಕರಿಸುವ ಸಂಸ್ಥೆಯವರು ಬಂದರು. ಚಹಾ ಕುಡಿಯಲು ಹೊರಟಾಗ ಹಿಡಿದರು. ಸಧ್ಯಕ್ಕೆ ಬೆಂಗಳೂರಿನಲ್ಲಿ ತಮ್ಮ ಶಾಖೆ ಇಲ್ಲವೆಂದೂ, ಬೇಗನೇ ತೆರೆಯಲಿದೆಯೆಂದೂ ಹೇಳಿ ತಮ್ಮ ಸಂಸ್ಥೆಯ ಕಾರ್ಯಕ್ರಮಗಳನ್ನೂ ಹೇಳಿದರು. ನಾನು ಹೂಂ... ಹೂಂ... ಎನ್ನುತ್ತಾ ಕೇಳುತ್ತಿದ್ದೆ. ಒಬ್ಬ ಅಜ್ಜ ಅಥವಾ ಅಜ್ಜಿಯನ್ನು ದತ್ತು ತೆಗೆದುಕೊಂಡರೆ ವರ್ಷಕ್ಕೆ ರೂ. 1,200, ಬೇರೆ ಬೇರೆ ಚಿಕಿತ್ಸೆಗಳಿಗೆ ರೂ. 4,000, ರೂ 6,000 ಇತ್ಯಾದಿ ಸಹಾಯಕ್ಕೆ ಅವಕಾಶವಿದೆ ಎಂದರು. ಕೊನೆಗೆ "ನಿಮ್ಮ ಕಂಪನಿಯವರಿಗೆ ಈ ರೂ. 4,000 ದ ಕಣ್ಣಿನ ಚಿಕೆತ್ಸೆಯ ಅವಕಾಶ ಮಾತ್ರ ಕೊಡುತ್ತಿದ್ದೇವೆ" ಎಂದರು. ಅರೇ... ಇದೇನು? ನಮಗೆ ಇಷ್ಟಬಂದಷ್ಟು ಸಹಾಯ ಮಾಡುವ ಅವಕಾಶವೇ ಇಲ್ಲವಲ್ಲಾ ಎಂದುಕೊಳ್ಳುತ್ತಾ ಹೋಗಲನುವಾದೆ. "ನಾಳೆ ಚೆಕ್ ತನ್ನಿ. ಮೊಬೈಲ್ ನಂಬರ ಕೊಡಿ. ನಾಳೆ ಚೆಕ್ ತರಲು ನೆನಪಿಸುತ್ತೇವೆ" ಎಂದರು. ನಾಳೆ ಪುನಃ ಅವರ ಮುಖ ನೋಡಬೇಕಾದ ಕಾರಣ ಸರಿಯಾದ ನಂಬರೇ ಕೊಟ್ಟು ಬಂದೆ. ಮರುದಿನ ಬೆಳಗ್ಗೆ ಬಂತು ಫೋನ್. ಚೆಕ್ ತರಲು ನೆನಪಿಸಿದರು. ನಾನು ಆಯಿತೆಂದು ಹೇಳಿದರೂ ಚೆಕ್ ಕೊಂಡು ಹೋಗಲಿಲ್ಲ. ಚಹಾ ಕುಡಿಯಲು ಹೋದಾಗ ಹೇಗೋ ದಾಕ್ಷಿಣ್ಯಬಿಟ್ಟು "sorry ನಾನು ಸಹಕರಿಸಲಾರೆ" ಎಂದೆ. ಮುಂದಿ ತಿಂಗಳು ಪುನಃ ಫೋನ್ ಮಾಡುತ್ತೇವೆ ಎಂದು ಹೇಳಿ ಹೋದರು.

ಈ ಮಾರ್ಚ್ ತಿಂಗಳು. ಬಾಲ ಕಾರ್ಮಿಕರನ್ನು ರಕ್ಷಿಸಿ ಶಿಕ್ಷಣ ನೀಡಲು ಸಹಕರಿಸುವ, ಬುಡಕಟ್ಟು ಜನಾಂಗದ ಹುಡುಗಿಯರ ಕಲ್ಯಾಣ, woman empowerment, ಜನರ ವಸತಿ ಮತ್ತು ಶ್ರೇಯಾಭಿವೃದ್ಧಿ ಕಾರ್ಯಕ್ರಮಕ್ಕೆ ಶ್ರಮಿಸುವುದೆಂದು ಹೇಳಿಕೊಳ್ಳುವ ಸಂಸ್ಥೆಯವರು ಬಂದರು. ಪುನ: ನನ್ನ ಚಹಾಕ್ಕೆ ಕುತ್ತಾದರು. ಈ ಬಾರಿ ಅವರ ಬಳಿ ಹೋಗಿ ದಾಕ್ಷಿಣ್ಯಕ್ಕೆ ಕಟ್ಟುಬೀಳುವ ಪರಿಸ್ಥತಿ ಬರಬಾರದೆಂದು ಆ ಕಡೆಗೆ ನೋಡದೆ ಹೋಗುತ್ತಿದ್ದೆ. ಒಬ್ಬ ಪ್ರತಿನಿಧಿ ಹಿಂಬಾಲಿಸಿ ಬಂದ. ಪುನಃ ಅವೇ ಮಾತುಗಳು. "... ನಿಮ್ಮ ಕಂಪನಿಯಲ್ಲಿ ಬಾಲಕಾರ್ಮಿಕರ ನಿಧಿಗೆ ಸಹಾಯ ಕೋರುತ್ತಿದ್ದೇವೆ. ಒಂದು ಮಗುವಿಗೆ ರೂ. 2,400 ಕೊಟ್ಟು sponsor ಮಾಡಬೇಕು" ಎಂದು ಕೇಳಲಾರಂಭಿಸಿದ. ನವಿರಾಗಿ ನಿರಾಕರಿಸಿದೆ. emotional blackmail ರೂಪದ್ದೇನೋ ಆರಂಭಿಸಿದ. "ಮಾ್ಯಡಮ್, ಭಾರತದಲ್ಲಿ ಬಾಲ ಕಾರ್ಮಿಕರ ಪರಿಸ್ಥಿತಿ ನಿಮಗೆ ಗೊತ್ತಿಲ್ಲವೇ? ನಿಮ್ಮ ಮನದಲ್ಲಿ ಅವರಿಗೆ ಸಹಕರಿಸುವ ಭಾವನೆ ಇಲ್ಲವೇ? ತಿಂಗಳಿಗೆ ನೂರು-ಇನ್ನೂರು ರೂಪಾಯಿ ನಿಮಗೆ ದೊಡ್ಡದೇ? Why ma'am? Don't you like to help them" ಎಂದು ಮುಂದಿನ ತಿಂಗಳಿಗೆ ಚೆಕ್ ಬರೆದು ಕೊಟ್ಟರೂ ಆದೀತೆಂದು ದಂಬಾಲು ಬಿದ್ದ. ನನಗೆ ನುಣುಚಿಕೊಳ್ಳಲು ಸಾಕು ಸಾಕಾಯಿತು. ಇನ್ನು ಮುಂದೆ NGO ಬರುವ ದಿನ ಚಹಾವನ್ನು ಕನಸಿನಲ್ಲೂ ನೆನೆಸಲಾರೆ ಎಂದುಕೊಂಡೆ.

ಸಮಸ್ಯೆ NGO ಗಳ ಸಹಾಯ ಯಾಚನೆಯ ವಿಷಯವಲ್ಲ. ಸಮಸ್ಯೆ ಪ್ರತಿನಿಧಿಗಳ ಮಾತುಗಳು, ಅವರು ವಿಧಿಸುವ ಕಟ್ಟಳೆಗಳು.
ಸಹಾಯ ಮಾಡುವ ಮನಸಿದ್ದವರು ಅವರಿಗೆ ಸಾಧ್ಯವಾದಷ್ಟು ಕೊಡುತ್ತಾರೆ. ಅದನ್ನು ಸ್ವೀಕರಿಸಬೇಕೆಂಬುದು ನನ್ನ ಅನಿಸಿಕೆ. ಅದಲ್ಲದೆ ಇಂಥದೇ scheme ಆರಿಸಬೇಕೆಂದು ಹೇರುವುದು ನನಗೆ ಸರಿಕಾಣುವುದಿಲ್ಲ. ಮತ್ತೆ ಫೋನ್ ಮಾಡಿ ಯಾಚಿಸುವುದು ಅಥವಾ ಮಾತಿನಲ್ಲಿ emotional blackmail ಮಾಡುವುದು ಸರಿಯಲ್ಲ. ಎಷ್ಟೋ ಸಾರಿ ನಮಗೆ ಅವರ ಮೇಲೆ ಭರವಸೆಯೇ ಇರುವುದಿಲ್ಲ. ನಾವು ಒಳ್ಳೆ ಮನಸಿಂದ ಕೊಟ್ಟ ಹಣ ಸರಿಯಾಗಿ ಬಳಕೆಯಾಗುವುದೆಂದ ನಂಬಕೆ ಬರುವುದಿಲ್ಲ. ವರ್ಷದಲ್ಲಿ ಆರೇಳು ಸಂಸ್ಥೆಗಳಿಗೆ ಸಹಾಯ ನೀಡಲೂ ಸಾಧ್ಯವಿಲ್ಲ. ಇನ್ನೂ ಅನೇಕ ಬಾರಿ ಕರ್ನಾಟಕದಲ್ಲಿ ಇಲ್ಲದ ಸಂಸ್ಥೆಗೆ ಕೊಡಬೇಕು ಎನಿಸುವುದಿಲ್ಲ. ಇವು personal choice. ಇವಕ್ಕೆ ಗೌರವ ಕೊಡಬೇಕು. ಒತ್ತಾಯಿಸಲು ಇವು ಸಾಮಾನು ಖರೀದಿಸಿದಂತಲ್ಲ. ಕೊಡುವವನು ಸಂತೋಷದಿಂದ ಕೊಟ್ಟರೆ ಚೆನ್ನ. ಕೊಟ್ಟವರ ಮನಸಿಗೆ ತೃಪ್ತಿಯಿರಬೇಕು ಎಂದು ನನ್ನ ಭಾವನೆ.

ನಾನು ದಕ್ಷಿಣ ಕನ್ನಡದ ಕನ್ಯಾನದಲ್ಲಿ ಬಹಳ ಹಳೆಯ ಕಾಲದಿಂದ ನಡೆಯುತ್ತಿರುವ ಸೇವಾಶ್ರಮವನ್ನು ನೋಡಿದ್ದೇನೆ. ಏನೋ ಒಂದೆರಡು ಬಾರಿ ಅಲ್ಲಿಗೆ ಅಲ್ಪ ಸಹಾಯ ನೀಡಿದ್ದೆ. ಕೆಲದಿನಗಳಲ್ಲಿ ಅವರಿಂದ ಒಂದು ಪತ್ರ ಬಂದಿತ್ತು. ಜೊತೆಗೆ ವಿಭೂತಿ ಮತ್ತು ಕುಂಕುಮ. ಸಹಕರಿಸಿದವರ ಹೆಸರಲ್ಲಿ ಪೂಜೆ ಮಾಡಿಸಿದ್ದರ ಪ್ರಸಾದ ಎಂದಿತ್ತು. ಒಮ್ಮೆ ಆ ದಾರಿಯಲ್ಲಿ ಹೋದಾಗ ಅಲ್ಲಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಅವರು ಬಲು ಪ್ರೀತಿಯಿಂದ ಬರಮಾಡಿಕೊಂಡು ಮಾತಾಡಿಸಿದರು. ಸಹಾಯ ಬಂದ್ದನ್ನು ಹೇಗೆ ಉಪಯೋಗಸುತ್ತಿದ್ದೇವೆಂದು ತೋರಿಸಿದರು. ಆಶ್ರಮಕ್ಕೆ ನಿಶ್ಚಿತ ಆದಾಯ ಬರುವಂತೆ ತೋಟ ಖರೀದಿ ಮಾಡುವ ಯೋಜನೆಯನ್ನು ಹೇಳಿದರು. ಅಲ್ಲಿ ನನ್ನಿಂದ ಏನೂ ನಿರೀಕ್ಷೆ ಮಾಡಲಿ್ಲಲ್ಲ. ಬದಲಾಗಿ ಹಬ್ಬದ ಸಮಯ ಎಂದು ನನಗೆ ಸೀರೆ ಉಡುಗೊರೆ ನೀಡಿ ಕಳಿಸಿದರು. ಅದು ನನ್ನ ಮನಸಿಗೆ ಬಹಳ ತಟ್ಟಿತು. ಯಾವತ್ತಾದರೂ ಸಹಾಯ ನೀಡುವ ಸಂದರ್ಭ ಬಂದರೆ ಇಲ್ಲಿಗೇ ಕೊಡುವೆ ಅನಿಸಿತು. ಆ ನಂತರ ಎರಡು ವರ್ಷಗಳಿಂದ ಅತ್ತ ಹೋಗಿಲ್ಲ. ಆದರೂ ವರ್ಷವೂ ಅವರ ಆಶ್ರಮದ ಉತ್ಸವವೊಂದಕ್ಕೆ ಆಮಂತ್ರಣ ಪತ್ರವನ್ನು ಪ್ರೀತಿಯಿಂದ ಕಳಿಸುತ್ತಾರೆ.

ಇದೇ ಕಾರಣಕ್ಕೋ ಏನೋ ಈ ಕಾಫಿ ಯಂತ್ರದಬಳಿ ಎರಡು ತಿಂಗಳಿಗೊಮ್ಮೆ ಕಾಣುವ NGO stall ಗಳು, ಅವುಗಳ ಅರಳು ಹುರಿದಂತೆ ಇಂಗ್ಲೀಷ್ ಮಾತಾಡುವ ಪ್ರತಿನಿಧಿಗಳು ನನ್ನನ್ನು ಸೆಳೆಯಲು ವಿಫಲವಾದದ್ದು.

Monday, March 15, 2010

ಸಣ್ಣದೊಂದು ಅನುಭವದ ಪಾಠ

ಎಷ್ಟೋ ದಿನಗಳಿಂದ ಉಸಿರುಗಟ್ಟಿಸುವಷ್ಟು ಕೆಲಸದಲ್ಲಿ ಹುದುಗಿ ಹೋಗಿದ್ದರಿಂದ ಅನೇಕ ಬರೆಯಲರ್ಹ ವಿಚಾರಗಳು ತಲೆಯಲ್ಲಿ ಬಂದರೂ ಬರೆಯಲಾಗದೆ ಕೆಲವಂತೂ ಮರೆತೇ ಹೋಗಿವೆ. ಏನಿಂಥಾ ಕೆಲಸ? ಎಂದು ಯೋಚಿಸುತ್ತಿದ್ದೀರಾದರೆ ಕೇಳಿ.

ನನ್ನ ಯಜಮಾನರಿಗೆ ಕಾಲಿನ ಚಿಕ್ಕ ಶಸ್ತ್ರಚಿಕಿತ್ಸೆಯೊಂದು ಆಗಬೇಕಾಗಿದ್ದು ಹಲವು ವರ್ಷಗಳಿಂದ "TODO" list ನಲ್ಲಿ ಇತ್ತು. ಹಠಾತ್ತಾಗಿ ಅದನ್ನು ಮಾಡಬೇಕಾದ ಸಂದರ್ಭ ಬಂದು (ಕಾಲ ಕೂಡಿಬಂದುದು ಎಂದು ಹೇಳಬಹುದೇನೋ) ಅದೇ ವಿಚಾರದಲ್ಲಿ ಎರಡು ತಿಂಗಳು ಆಫೀಸು, ಮನೆ, ಆಸ್ಪತ್ರೆ ಎಂದು ಓಡಾಡಬೇಕಾಗಿ ಬಂತು. ಅದರ ನಡುವೆ ಕೆಲ ವಾರಗಳಿಂದ ಪ್ರಾಜೆಕ್ಟ್ ನ ರಿಲೀಸ್ ಎಂದು ದಿನದಲ್ಲಿ ೧೦ ಗಂಟೆ ಆಫೀಸಿನಲ್ಲಿ ಒದ್ದಾಡಿ ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಿರಬೇಕಾದರೆ, ವೈರಸ್ ಗಳು "ನಿನ್ನನ್ನು ಸುಮ್ಮನೆ ಕೂರಲು ಬಿಡಲಾರೆವು" ಎಂದು ಶೀತ, ಕೆಮ್ಮು ತಂದಿಟ್ಟಿವೆ. ಯಜಮಾನರಿಗೆ ನಾಲ್ಕು ಚಕ್ರದ ವಾಹನ ಬಿಡಲು ಡಾಕ್ಟರು ಸಮ್ಮತಿ ನೀಡಿದ್ದೊಂದು ಸಮಾಧಾನ.

ಈ ಎರಡು ತಿಂಗಳಲ್ಲಿ ನನಗೆ ಹೊಸತಾದ ಬೇರೆ ಬೇರೆ ಅನುಭವಗಳಾಗಿವೆ. ಅವುಗಳಿಂದ ಚಿಕ್ಕ ಚಿಕ್ಕ ಪಾಠಗಳೂ ಸಿಕ್ಕಿವೆ. ಅದರಲ್ಲಿ ಒಂದನ್ನು ಇಲ್ಲಿ ಹೇಳಲಿದ್ದೇನೆ.

ನಾವು ಪ್ರತಿದಿನ ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಲೆತ್ನಿಸುತ್ತೇವೆ. ಹೆಚ್ಚಿನ ಸಲ ಅದು ನಮ್ಮ ಆಸಕ್ತಿಯಿಂದಾಗಿರುತ್ತದೆ. ನಮಗೆ ಉಪಯೋಗವಿದೆಯೋ ಇಲ್ಲವೋ ಎಂದು ನೋಡಲು ಹೋಗುವುದಿಲ್ಲ. ಕೆಲವು ಬಾರಿ ಹೀಗೆ ಯಾವತ್ತೋ ತಿಳಿದುಕೊಂಡ ವಿಚಾರಗಳು ಇನ್ನು ಯಾವತ್ತೋ ಉಪಯೋಗಕ್ಕೆ ಬರುತ್ತವೆ. ಸ್ಟೀವ್ ಜಾಬ್ಸ್ ಎಂದೋ ಕಲಿತ calligraphy, ಮೊದಲ Macintosh computer ನ ಸುಂದರ typography ಗೆ ಕಾರಣವಾದಂತೆ. (ನನ್ನದು ಇಷ್ಟು ದೊಡ್ಡ ವಿಚಾರವಲ್ಲ!)

ನಮ್ಮ ಆಸ್ಪತ್ರೆ ಖರ್ಚುಗಳನ್ನು ಇನ್ಶೂರೆನ್ಸ್ ಕಂಪನಿ ನೋಡಿಕೊಳ್ಳುವುದಿತ್ತು. ನಾನು ಆಸ್ಪತ್ರೆಯಲ್ಲಿ ಕುಳಿತು ನನ್ನ ಯಜಮಾನರ ಹೆಲ್ತ್ ಇನ್ಶೂರೆನ್ಸ್ ನ ಅತ್ಯಂತ ಉದಾಸೀನಮಯವಾದ document ಅನ್ನು ಓದುತ್ತಿದ್ದೆ. ಯಾಕೆ ಓದಬೇಕೆಂದೂ ತಿಳಿದಿರಲಿಲ್ಲ. ಮಾಡಲು ಕೆಲಸವಿಲ್ಲದೆ ಅದನ್ನು ಓದುತ್ತಿದ್ದೆ. ಡಿಸ್ಚಾರ್ಜ್ ಮಾಡುವ ದಿನ ನೋಡಿದಾಗ ಬಿಲ್ ನಲ್ಲಿ ಕೆಲವು ಸಾವಿರ ನಮ್ಮ ಕೈಯಿಂದ ಕೊಡಬೇಕೆಂದು(copayment) ಬರೆದಿತ್ತು. ನನಗೆ ಆಶ್ಚರ್ಯವಾಯಿತು. ಆ document ಪ್ರಕಾರ ನಮಗೆ ಕೋ-ಪೇಮೆಂಟು ಬೀಳಬಾರದಿತ್ತು. ಬಿಲ್ ಕೌಂಟರಿನಲ್ಲಿದ್ದವನ ಬಳಿ ಇನ್ಶೂರೆನ್ಸ್ ಕಂಪನಿ ಕಳಿಸಿದ ಮನ್ನಣೆ ಪತ್ರವನ್ನು (approval letter) ತೋರಿಸಲು ಕೇಳಿದೆ. ಅದನ್ನು ಓದಿ, ಆತ ಹಾಕಿರುವ ಲೆಕ್ಕಾಚಾರ ತಪ್ಪಿದೆಯೆಂದು ಮನವರಿಕೆ ಮಾಡಿಸಲು ಸಾಕು ಸಾಕಾಯಿತು. ಕೊನೆಗೆ ಆತ ತನ್ನ ತಪ್ಪನ್ನು ಒಪ್ಪಿ ಕ್ಷಮೆ ಕೇಳುತ್ತಾ ಹೊಸದಾಗಿ ಬಿಲ್ ತಯಾರಿಸಿ ಕೊಟ್ಟ. ನನಗೆ ಆ ಇನ್ಶೂರೆನ್ document ನಲ್ಲಿ ಏನಿದೆಯೆಂದು ತಿಳಿದಿಲ್ಲದಿದ್ದರೆ ಕೆಲವು ಸಾವಿರ ನಷ್ಟ ಮಾಡಿಕೊಳ್ಳಬೇಕಾಗುತ್ತಿತ್ತೇನೋ. ಸುಮ್ಮನೆ ಓದಿದ್ದು ಉಪಯೋಗಕ್ಕೆ ಬಂದಿತ್ತು.

ಇದು ಇನ್ನೊಂದು ವಿಷಯ. ನಾನು ಕಾರು ನಡೆಸಲು ಕಲಿತು, ಲೈಸನ್ಸ್ ಪಡೆದು ನಾಲ್ಕು ವರ್ಷವಾಗಿದೆಯೇನೋ. ಇಂದಿಗೂ ಸರಿಯಾಗಿ ನಡೆಸಿದ್ದಿಲ್ಲ. ಮೂರು ನಾಲ್ಕು ಕಿಲೋಮೀಟರು ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ನಡೆಸಿ ಸುಮ್ಮನೇ ಬಿಟ್ಟಿದ್ದೆ. ಅಭ್ಯಾಸ ಬಿಟ್ಟು ಹೋದಂತೆಲ್ಲ, ಕಾರು ಬಿಡಲು ಕುಳಿತಾಗ ಭಯ ಆವರಿಸಲಾರಂಭಿಸಿತ್ತು. ಆಸ್ಪತ್ರೆ, ಮನೆ, ಆಫೀಸು ಎಂದು ಓಡಾಡುವಾಗೆಲ್ಲಾ ರಿಕ್ಷಾ, ಟ್ಯಾಕ್ಸಿ ಅಥವಾ ವಜ್ರ (ಬಸ್ಸು)ವನ್ನು ನಂಬಿಕೊಂಡೇ ಬದುಕಬೇಕಾದ್ದಕ್ಕೆ ನನ್ನನ್ನು ನಾನೇ ಹಳಿದುಕೊಂಡಿದ್ದೆ. ಉಪಯೋಗವಿತ್ತೋ, ಇಲ್ಲವೋ ಕಾರೊಂದು ಕಲಿತಿದ್ದರೆ... ಎಂದು ಬಹಳ ಸಲ ಯೋಚಿಸುವಂತಾಗಿತ್ತು. ನಾವು ಏನಾದರೂ ಕಲಿಯುತ್ತಿರುವಾಗ ಸಧ್ಯದ ಉಪಯೋಗವನ್ನು ಮನಸಲ್ಲಿರಿಸದಿರುವುದೇ ಒಳ್ಳೆಯದೇನೋ. ಕಲಿತದ್ದು ಎಂದಾದರೂ ಒಂದುದಿನ ಉಪಯೋಗಕ್ಕೆ ಬರುತ್ತದೆ. ಕಲಿತದ್ದರ ಅಗತ್ಯ ಬಾರದಿದ್ದರೆ ಸುಮ್ಮನಿದ್ದುಬಿಡುವುದು, ಅಗತ್ಯ ಬಂದಾಗ ಕಲಿತಿರದೆ ದುಃಖಿಸುವುದಕ್ಕಿಂತ ಒಳ್ಳೆಯದೆಂದು ನಾನು ಅರಿತುಕೊಂಡೆ.