Wednesday, July 28, 2010

ಸಂಸ್ಕೃತಿಯ ತುಣುಕುಗಳನ್ನು ಅರಸುತ್ತಾ...

(ಇದೊಂದು ಸ್ವಗತ. ಬರಹ ರೂಪದಲ್ಲಿ ಹಾಕೋಣ ಎನಿಸಿತು. ಇಲ್ಲಿ ಹಾಕಿದ್ದೇನೆ)

"ಸಂಸ್ಕೃತಿ" ಎಂದರೇನು? ಈ ಪ್ರಶ್ನೆ ಯಾವತ್ತೂ ನನನ್ನು ಕಾಡಿರಲಿಲ್ಲ. ಆಗ ನಾನು ಪಿ.ಯು.ಸಿ ಓದುತ್ತಿದ್ದೆ. ನಾನು ಆರಿಸಿಕೊಂಡ ಭಾಷೆ ಕನ್ನಡವಾಗಿತ್ತು. ಒಂದು ದಿನ ನಮಗೆ ಕನ್ನಡ ಕಲಿಸುತ್ತಿದ್ದ ಮೀನಾಕ್ಷಿ ಮೇಡಮ್ ಕಾ್ಲಸ್ ನಲ್ಲಿ ಒಂದು ಪ್ರಶ್ನೆ ಕೇಳಿದರು. "ಸಂಸ್ಕೃತಿ ಎಂದರೇನು?". ಕೆಲ ಕ್ಷಣಗಳ ಮೌನದ ನಂತರ ಕೆಲವು ಧ್ವನಿಗಳು ಕೇಳಿದವು. "ಮೇಡಮ್ ಬಳೆ ಹಾಕಿಕೊಳ್ಲೂದೂ..., ಬೊಟ್ಟು ಹಾಕಿಕೊಳ್ಳೂದೂ..." ,
"ಮೇಡಮ್ ಹೂವು, ಸೀರೇ..."
"ಕುಂಕುಮಾ...."
ಮೇಡಮ್ ನಕ್ಕರು. "ಸಂಸ್ಕೃತಿ ಎಂದರೆ ಅಷ್ಟೇಯಾ?... ಬಳೆ, ಬೊಟ್ಟು, ಹೂವು, ಸೀರೆ... ಹೂಮ್?" ಎಂದರು.
ಯಾರೂ ಮಾತನಾಡಲಿಲ್ಲ. "ಏನು ಸಂಸ್ಕೃತಿ ಎಂದರೆ?" ಇನ್ನೊಮ್ಮೆ ಕೂಗಿದರು. ಎಲ್ಲರೂ ಮೌನ. ಒಮ್ಮೆ ಮುಗುಳ್ನಕ್ಕು ಪಾಠ ಮುಂದುವರಿಸಿದರು. ನಾವು ಉತ್ತರಕ್ಕಾಗು ಕಾದೆವು. ಮೇಡಮ್ ಮಾತ್ರ ಅಂದು ಉತ್ತರ ಹೇಳಲೇ ಇಲ್ಲ. ಆದರೆ ನನ್ನ ತಲೆಯೊಳಗೆ ಆ ದಿನ ಅವರು ಹುಳ ಬಿಟ್ಟರು.
ನಾನು ಅನೇಕ ಬಾರಿ ಈ ಸಂದರ್ಭ ನೆನಪಾದಾಗ ಉತ್ತರ ಹುಡುಕಲು ಪ್ರಯತ್ನಿಸಿದೆ. ಈಗಲೂ ಹುಡುಕುತ್ತಿದ್ದೇನೆ. ಸರಿಯಾದ ಉತ್ತರ ಸಿಕ್ಕಿರದಿದ್ದರೂ ಕೆಲವು ಸಂಸ್ಕೃತಿಯ ತುಣುಕುಗಳು ಕಾಣಸಿಕ್ಕಿವೆ. ಆಗೆಲ್ಲ ಇದೇ "ಸಂಸ್ಕೃತಿ" ಇರಬೇಕು ಎಂದುಕೊಂಡು ಆ ತುಣುಕುಗಳನ್ನು ಆಯ್ದಿಡುತ್ತಿದ್ದೇನೆ.

1. ನಾವು ಚಿತ್ರದುರ್ಗಕ್ಕೆ ಹೊರಟ ದಿನ.
ಮೈಸೂರಿಂದ ಚಿಕ್ಕನಾಯಕನ ಹಳ್ಳಿ ತಲುಪಿದಾಗ ಎಲ್ಲರ ಹೊಟ್ಟೆಯೂ ಚುರುಗುಟ್ಟುತ್ತಿತ್ತು. ಈ ದಾರಿಯಲ್ಲಿ ಎಲ್ಲೂ ಸರಿಯಾದ ಹೋಟೆಲ್ ಗಳಿಲ್ಲ. ಚೆನ್ನಾಗಿರುವ Toilet ಇರುವ ಹೋಟೆಲ್ ಹುಡುಕುತ್ತ ಸಾಗಿದ್ದ ನಮಗೆ ಒಂದೂ ಹೋಟೆಲ್ ಸಿಗದ ಪರಿಸ್ಥಿತಿ ಎದುರಾಗಿತ್ತು. ಕೊನೆಗೆ ಚಿಕ್ಕನಾಯಕನ ಹಳ್ಳಿಯಲ್ಲಿ ಸುಮುಖ ರಿಫ್ರೆಶ್ ಮೆಂಟ್ಸ್ ಎಂಬ ಚಿಕ್ಕ ಹೋಟೆಲ್ ನಲ್ಲಿ ತಿಂಡಿತಿನ್ನಲು ಹೋದೆವು. ಅಲ್ಲಿಯ ಮಾಲಕನಲ್ಲಿ "ಈ ಪಕ್ಕದ ಮನೆ ನಿಮ್ಮದೇ?" ಎಂದಾಗ Toilet ಹುಡುಕುತ್ತಿದ್ದ ನಮ್ಮ ಸಮಸ್ಯೆ ಅವರಿಗೆ ಅರಿವಾಯಿತು. ಅವರು ತಕ್ಷಣ ಮುಂದೆ ಇದ್ದ ತಮ್ಮ ಮನೆಗೆ ಕರೆದೊಯ್ದು ಅವರ ಹೆಂಡತಿಯಲ್ಲಿ ಏನೋ ಹೇಳಿ ಹೋದರು. ಅವರ ಹೆಂಡತಿ ನಮಗೆ ಮುಖ-ಕೈ-ಕಾಲು ತೊಳೆದು ಫ್ರೆಶ್ ಆಗಲು ಬಿಸಿಬಿಸಿ ನೀರು ಕೊಟ್ಟರು. ಅದಲ್ಲದೆ ಒರೆಸಿಕೊಳ್ಳಲು ಬಟ್ಟೆ ಬೇರೆ. ಯಾರೆಂದೇ ಅರಿಯದ ಮನುಷ್ಯರನ್ನು ನಂಬಿಕೆಯಲ್ಲಿ ಮನೆಯೊಳಗೆ ಬರಲು ಬಿಟ್ಟು, ಚೆನ್ನಾಗಿ ಮಾತನಾಡಿಸಿ, ಉಪಚರಿಸಿ ಕಳುಹಿಸಿದ ಅವರು ಎಷ್ಟು ಸಹೃದಯಿಗಳು ಎಂದುಕೊಳ್ಳುತ್ತಾ ಹೊರಟೆವು. ಅವರಲ್ಲಿ ಅಂದು ಕಂಡ ಸಂಸ್ಕೃತಿಯ ತುಣುಕನ್ನು ನಾನು ಆಯ್ದುಕೊಂಡೆ.

2. ನಮ್ಮ ಪರಿಚಯದವರೊಬ್ಬರು ತಮ್ಮ ಕುಟುಂಬದ ಜೊತೆ ನೆಂಟರಿಷ್ಟರ ಊರಿಗೆ ಹೋಗಿದ್ದರು. ಅಲ್ಲಿ ಒಂದೆರಡು ಮನೆಗಳಿಗೆ ಹೋಗಿ ಮಾತನಾಡಿ, ಊಟ ಮಾಡಿದ ನಂತರ ನಿದ್ದೆ ಮಾಡಲು ಇನ್ನೊಬ್ಬರ ಮನೆಗೆ ಹೊರಟರು. ಕೊನೆ ಗಳಿಗೆಯಲ್ಲಿ ಫೋನ್ ಮಾಡಿ ತಾವು ಬರುತ್ತಿರುವುದನ್ನು ಹೇಳಿದ ನಮ್ಮ ಈ ನೆಂಟರಿಗೆ ಆ ಕಡೆಯಿಂದ ಸಿಕ್ಕಿದ ಪ್ರತಿಕ್ರಿಯೆ ಏನೂ ಆಶಾದಾಯಕವಾಗಿರಲಿಲ್ಲ. ರಾತ್ರಿಯಾಗಿದ್ದಲ್ಲದೆ ಮಳೆ ಬರುತ್ತಿದ್ದ ಕಾರಣ ಬೇರೆ ಕಡೆತಂಗಲು ವ್ಯವಸ್ಥೆ ಸಿಗದಿದ್ದರೆ ಗೆಸ್ಟ್ ಹೌಸ್ ನೋಡಬೇಕಾದೀತೆಂದು ಯೋಚನೆ ಮಾಡತೊಡಗಿದರು. ಕೊನೆಯದಾಗಿ ಅವರ ಪತ್ನಿ ತಮ್ಮ ಅಣ್ಣನ ಮಗಳಿಗೆ ಹಿಂಜರಿಯುತ್ತಲೇ ಫೋನ್ ಮಾಡಿದರು. ಅವಳು ಸಂತಸದಿಂದ ಬರಹೇಳಿದ್ದಲ್ಲದೆ, ಅವಳು ಮತ್ತು ಅವಳ ಪತಿ ನಮ್ಮ ನೆಂಟರು ತಲುಪುವ ಮೊದಲೇ ಚಾಪೆ ಹಾಸಿ ಮಲಗಲು ವ್ಯವಸ್ಥೆಮಾಡಿದರಂತೆ. ಊಟಕ್ಕೇ ಬರಬೇಕಿತ್ತು ಎಂದರಂತೆ. ಅವಳ ನಡತೆಯಲ್ಲಿ ಅಂದು ಕಂಡ ಸಂಸ್ಕೃತಿಯ ತುಣುಕನ್ನು ನಾನು ಆಯ್ದುಕೊಂಡೆ.

3. ನಾನು ಬಾಳಸಂಗಾತಿಯನ್ನು ಆರಿಸ ಹೊರಟ ಸಂದರ್ಭ.
ಹುಡುಗನ ಮನೆ ಮೈಸೂರು. ಅದು ನನ್ನ ಆಪ್ತ ಬಂಧುಗಳೂ ಇರುವ ಊರು. ಏನೂ ನಿರ್ಧಾರವಾಗದೆ ಎಲ್ಲರಿಗೂ ಪ್ರಚಾರ ಮಾಡಲಿಚ್ಛಿಸದ ನನ್ನ ಅಪ್ಪ, ಅಮ್ಮ ಮೈಸೂರಿಗೆ ನಾವೇ ಹೋಗಿ ನನ್ನ ಸೋದರ ಮಾವನ ಮನೆಯಲ್ಲಿ ಹುಡುಗಿ-ಹುಡುಗ ನೋಡುವ ಕಾರ್ಯಕ್ರಮ ಇಟ್ಟುಕೊಳ್ಳುವುದು ಉತ್ತಮವೆಂದು ಮನಗಂಡರು. ನನ್ನ ಅಮ್ಮ ಸಿಹಿ ತಿಂಡಿ (ಹುಡುಗ ಮತ್ತು ಮನೆಯವರಿಗೆ ತಿನ್ನಲು ಕೊಡಬೇಕಲ್ಲವೇ?) ಮನೆಯಲ್ಲೇ ಮಾಡಿ ಕೊಂಡೊಯ್ಯುವುದೆಂದು ನಿರ್ಧರಿಸಿದರು. ಹಾಗೇ ಸಿಹಿ, ಖಾರ ಮನೆಯಲ್ಲೇ ಮಾಡಿ ತೆಗೆದುಕೊಂಡು ಹೋದೆವು. ಅಲ್ಲಿ ತಲುಪಿದಾಗ ನಮಗೆ ಆಶ್ಚರ್ಯ ಕಾದಿತ್ತು. ನನ್ನ ಅತ್ತೆ (ಸೋದರ ಮಾವನ ಮಡದಿ) ತಾವೇ ಉತ್ಸಾಹದಲ್ಲಿ ಸಿಹಿತಿಂಡಿ ತಯಾರಿಸಿದ್ದರು. ಅಲ್ಲದೇ ತಮ್ಮಿಂದ ಏನೂ ಕುಂದುಂಟಾಗದಂತೆ ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಕಿಟಕಿಯ ಪರದೆಗಳು, ಸೋಫಾದ ಹೊದಿಕೆಗಳು ಇತ್ಯಾದಿಗಳನ್ನು ಒಗೆದು ಹಾಕಿದ್ದರು. ತಮ್ಮದೇ ಮನೆಯ ಶುಭಕಾರ್ಯದಂತೆ ಸಹಕರಿಸಿದ್ದರು. ಅವರ ಈ ನಡತೆ ನಮಗೆ ಬಹಳ ಖುಷಿಕೊಟ್ಟಿತು. ನಮ್ಮೊಡನೆ ಬೆರೆತು, ಸಹಕರಿಸಿ, ಆನಂದಿಸಿದ ಅವರಲ್ಲಿ ನಾನು ಸಂಸ್ಕೃತಿಯ ತುಣುಕೊಂದನ್ನು ಆಯ್ದುಕೊಂಡೆ.

4. ನನ್ನ ಅತ್ತೆ, ಮಾವ ಇರುವಲ್ಲಿ ಬಿಲ್ವಪತ್ರೆ ಮಾರುವ ಅಜ್ಜಿಯೊಬ್ಬರು ಆಗಾಗ ಹಸಿವೆ ಎಂದುಕೊಂಡು ಬರುತ್ತಾರೆ. ನನ್ನ ಅತ್ತೆಯವರು ಏನಾದರೂ ತಿನಿಸು ಕೊಟ್ಟು ಕಳಿಸುತ್ತಾರೆ. (ನನಗೆ ಆ ಅಭ್ಯಾಸವಿಲ್ಲ!). ಒಂದು ದಿನ ನಾವು ಮಧ್ಯಾಹ್ನದ ಊಟಕ್ಕೆ ಬೇರೆಕಡೆ ಹೋಗುವುದಿತ್ತು. ಅಡುಗೆ ಮಾಡಿರಲಿಲ್ಲ. ಹಿಂದಿನ ದಿನ ಉಳಿದ ಎರಡು ಹಿಡಿ ಅನ್ನವನ್ನು ನನ್ನ ಅತ್ತೆಯವರು ರುಚಿಯಾದ ಮೊಸರನ್ನವಾಗಿ ಬದಲಿಸಿದ್ದರು. ನಾವು ಹೊರಡುವ ಹೊತ್ತಿಗೆ ಬಿಲ್ವಪತ್ರೆ ಅಜ್ಜಿ ಹಸಿವೆಂದು ಬಂದರು. ನನ್ನತ್ತೆ ಆಗಷ್ಟೇ ಮಾಡಿದ ಮೊಸರನ್ನವನ್ನು ಆಕೆಗೆ ಕೊಟ್ಟರು. ನನಗೆ ಬಹಳ ಆಶ್ಚರ್ಯವಾದರೂ ಇದೂ ಸಂಸ್ಕೃತಿಯ ಒಂದು ತುಣುಕೇ ಎಂದು ಆಯ್ದಿಟ್ಟೆ.

5. ನನ್ನ ಅತ್ತಿಗೆಯ (ಗಂಡನ ಅಕ್ಕ) ಹತ್ತು ವರ್ಷದ ಮಗ ನಾನು ಕೊಟ್ಟ ಬಹು ಸಣ್ಣದೊಂದು ಚಿಪ್ಸ್ ಪಾ್ಯಕೇಟ್ ಹಿಡಿದು ಗೆಳೆಯರೊಂದಿಗೆ ಹಂಚಿ ತಿನ್ನುತ್ತೇನೆ ಎಂದು ಹೊರಗೋಡಿದಾಗ ನನಗೆ ಸಿಕ್ಕಿದ್ದು ಸಂಸ್ಕೃತಿಯ ಇನ್ನೊಂದು ತುಣುಕು.

ಮನೆಗೆ ಯಾರಾದರೂ ಬಂದರೆ ಮನೆಯವರೆಲ್ಲರೂ ಒಮ್ಮೆ ಬಂದು ಕುಶಲ ವಿಚಾರಿಸುವುದು, ವಿಶೇಷ ಅಡಿಗೆಯೇನಾದರೂ ಮಾಡಿದರೆ ಆಪ್ತರೊಡನೆ (ಗೆಳೆಯರು, ಪಕ್ಕದ ಮನೆಯವರು) ಹಂಚಿಕೊಳ್ಳುವುದು, ಉಪ್ಪಿನಕಾಯಿ, ಹಪ್ಪಳಗಳನ್ನು ನೂರಾರು ಕಿಲೋ ಮೀಟರು ದೂರದ ನೆಂಟರಿಗೆ ಕಳಿಸುವುದು, ಸಂತಸದ ವಿಷಯಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು ಇವುಗಳಲ್ಲೆಲ್ಲ ನನಗೆ ಕಾಣುವುದು ಸಂಸ್ಕೃತಿಯ ತುಣುಕುಗಳು.
ಇಲ್ಲಿ ಒಳ್ಳೆಯದೋ ಕೆಟ್ಟದೋ ಎಂಬ ಯೋಚನೆ ನಾನು ಮಾಡುತ್ತಿಲ್ಲ. ತುಂಬಾ ಯೋಚಿಸುತ್ತಾ ಹೋದರೆ ಚಿಕ್ಕ ಪುಟ್ಟ ವಿಷಯಗಳನ್ನು ಹಿಡಿದು ಸಾರ್ವಜನಿಕವಾಗಿ ಜಗಳಾಡುವುದು, ಊರಿಗೆ ಹೊಸಬರು ಬಂದರೆ ಸುಳ್ಳು ಹೇಳಿ ವಂಚಿಸುವುದು ಕೂಡಾ ಸಂಸ್ಕೃತಿಯ ಭಾಗವಾದೀತೇನೋ. ಆಗ ಸುಸಂಸ್ಕೃತಿ, ಅಸಂಸ್ಕೃತಿ ಎಂದು ವಿಂಗಡನೆ ಮಾಡಬೇಕಾದೀತು.
ನಾನು ಆಯುತ್ತಿರುವ ಸಂಸ್ಕೃತಿಯ ತುಣುಕುಗಳು ಕಾಲಾಂತರದಲ್ಲಿ ಚೆಲ್ಲಿ ಚದುರಿ ಹೋದಾವು. ಹೊಸ ತುಣುಕುಗಳು ಸಿಕ್ಕಿಯಾವು. ಹರಿವ ನೀರಿನಂತೆ ಸಂಸ್ಕೃತಿ ಬದಲಾಗುತ್ತಿರುವುದು. ಬದಲಾಗಬೇಕೂ ಕೂಡಾ. ಇಲ್ಲದಿದ್ದರೆ ನಿಂತ ನೀರಿನಂತೆ ಕೊಳೆತೀತು. ಬಾಂಧವ್ಯಗಳು ಹಳಸಿಯಾವು. ಬದಲಾಗುತ್ತಿದ್ದರೂ (ಸು)ಸಂಸ್ಕೃತಿಯ ಮೂಲ ಮೌಲ್ಯಗಳು ಉಳಿದರೆ ಸಾಕು.
- - - -

Friday, July 23, 2010

ಬಿಸಿಲ ನೆನಪು

ಮುಂಜಾನೆ (ನನಗೆ ಮುಂಜಾನೆಯೆಂದರೆ ಬೆಳಗ್ಗಿನ ಏಳು ಗಂಟೆ) ಬಿಸಿಲು ನೋಡುವುದೆಂದರೆ ನನಗೆ ಒಂದು ರೀತಿಯ ಖುಷಿ. ಬೇರೆ ಬೇರೆ ಊರುಗಳಲ್ಲಿ ಬಿಸಿಲು ಬೇರೆ ಬೇರೆ ರೀತಿಯಲ್ಲಿರುತ್ತದೆ ಎಂದು ನನ್ನ ಅನಿಸಿಕೆ.
ನಾನು ಮೂಡುಬಿದಿರೆಯಲ್ಲಿದ್ದಾಗ (ದಕ್ಷಿಣ ಕನ್ನಡ) ಒಂದು ರೀತಿಯ ಬಿಸಿಲಿತ್ತು. ನಾನು ಆಗ ಒಂಭತ್ತು ಗಂಟೆ ನಂತರ ಏಳುತ್ತಿದ್ದ ಕಾರಣ ಈ characteristic ಬಿಸಿಲು ಕಾಣಸಿಗುತ್ತಿದ್ದುದು ಕಡಿಮೆ. ಆದರೂ ಮನೆಯ ಅಂಗಳದಲ್ಲಿ ಕೂತು ಅಮ್ಮ ಮಾಡಿದ ರುಚಿ ಚಹಾ ಕುಡಿಯುತ್ತಾ ಬಿಸಿಲನ್ನು ನೋಡುವುದು ಖುಷಿ ಕೊಡುತ್ತಿತ್ತು. ಮನೆಯ ಸುತ್ತುಮುತ್ತಲಿದ್ದ ತೆಂಗು, ಪೇರಳೆ(ಸೀಬೆ), ಚಿಕ್ಕಿನ ಮರ(ಸಪೋಟ)ಗಳ ನಡುವಿಂದ ಇಳಿದ ಉದ್ದುದ್ದನೆಯ ಬಿಸಿಲ ಕೋಲುಗಳು, ಅವುಗಳಲ್ಲಿ ಮಿಣಮಿಣ ಹೊಳೆಯುತ್ತ ತೇಲುವ ಧೂಳ ಕಣಗಳು.

ಉಡುಪಿಯಲ್ಲಿ ಬೇರೆ ರೀತಿಯ ಬಿಸಿಲು. ಎಳೆಬಿಸಿಲಲ್ಲಿ ನನ್ನ room mate (ನಾವು paying guest ಆಗಿ ಮನೆಯವರೊಂದಿಗೇ ಇರುತ್ತಿದ್ದುದು) ಮನೆಯ ದೇವರ ಕೋಣೆ ಅಲಂಕರಿಸಲು ಹೂವು ಕೊಯ್ಯುತ್ತಿದ್ದಳು. ಆ ಬಿಸಿಲು ಏರಲು ಶುರುವಾಗುವಾಗಲೇ ನಾವು ಆಫೀಸಿಗೆ ನಡೆದು ಹೋಗುತ್ತಿದ್ದುದು. ಮಳೆಗಾಲದಲ್ಲಿ ಆ ದಾರಿಯ ಬದಿಯಲ್ಲಿದ್ದ ಗದ್ದೆಯೊಂದರಲ್ಲಿ (ಅಲ್ಲಿ ಬೆಳೆ ಬೆಳೆದ ನೆನಪಿಲ್ಲ) ಪಕ್ಕದ ಹೊಳೆಯಿಂದ ಹರಿದ ನೀರು ತುಂಬಿರುತ್ತಿತ್ತು. ಅದರಲ್ಲಿ ತಾವರೆ, ನೈದಿಲೆ ಬೆಳೆದು ಬಿಸಿಲಿಗೆ ಅರಳುತ್ತಿದ್ದವು. ಮಳೆಗಾಲ ಮುಗಿದ ಮೇಲೂ ಕೆಲವು ತಿಂಗಳು ನೀರು ತುಂಬಿರುತ್ತಿತ್ತು. ಬೆಳಗ್ಗಿನ ನಸು ಬಿಸಿಲಲ್ಲಿ ಕೆಲವರು ತಾವರೆ ಕೊಯ್ಯುತ್ತಿದ್ದರು.

ಮೈಸೂರಿನಲ್ಲಿ ಬಹಳ ಎಳೆಯ ನಾಜೂಕಾದ ಬಿಸಿಲು. ಮೈಸೂರನ್ನು ಮುಂಜಾನೆ ನೋಡಿದರೆ ಬಹಳ ಸುಂದರ ಊರು ಅನ್ನಿಸುವುದು. ಎಲ್ಲ ಮೌನ, ಶಾಂತ. ನನ್ನ ಮಾವನವರು ಅತಿ ಇಷ್ಟಪಟ್ಟು ಬೆಳೆಸಿ ಸಾಕುತ್ತಿರುವ ಹೂದೋಟದ ತುಂಬಾ ಚಿಲಿಪಿಲಿಗುಟ್ಟುವ ಹಕ್ಕಿಗಳು. ಎಲೆಗಳ ಮೇಲೆ, ಹೂವುಗಳ ದಳಗಳ ಅಂಚಿನಲ್ಲಿ ಬಿಸಿಲಿಗೆ ಹೊಳೆಯುವ ನೀರ ಹನಿಗಳು. (ಇಬ್ಬನಿಯೋ, ಮಾವನವರು ಹಾಕಿದ ನೀರೋ ಗೊತ್ತಿಲ್ಲ)

ಬೆಂಗಳೂರಿನ characteristic ಬಿಸಿಲು? ಎರಡು ವರ್ಷವಾಯಿತು. ಇನ್ನೂ ಕಂಡಿಲ್ಲ. ದಿನವೂ ಬೆಳಗ್ಗೆ ಅಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಬಿಸಿಲಿನ analysis ಮಾಡಲು ಪುರುಸೊತ್ತಿಲ್ಲ. ವಾರಾಂತ್ಯದಲ್ಲಿ ಬಿಸಿಲೇರುವವರೆಗೆ ನಿದ್ದೆ!

ಕೆಲವೊಮ್ಮೆ ಒಂದು ಜಾಗದ ಬಿಸಿಲು ಇನ್ನೊಂದೆಡೆ ಕಾಣಸಿಗುತ್ತದೆ. ಮೂಡುಬಿದಿರೆಯ ಚಳಿಗಾಲದಲ್ಲಿ ಕೆಲವೊಮ್ಮೆ ಬೀಳುವ ಬಿಸಿಲು ಮೈಸೂರನ್ನು ನೆನಪಿಸುತ್ತದೆ. ಮೊನ್ನೆ ಬೆಂಗಳೂರಲ್ಲಿ ಮಳೆ ಬಂದು ಹತ್ತು ಗಂಟೆಗೆ ಮೂಡಿದ ಬಿಸಿಲು ಉಡುಪಿಯನ್ನು ನೆನಪಿಸಿತು. "ಇಂದು ಬೆಂಗಳೂರಲ್ಲಿ ಉಡುಪಿಯ ಬಿಸಿಲು" ಎಂದಿದ್ದೆ ನಾನು. ಸಂಜೆಯ ಬಿಸಿಲಲ್ಲಿ ನನಗೆ ಈವರೆಗೆ ಬೆಳಗಿನ ಬಿಸಿಲಂತಹ ವ್ಯತ್ಯಾಸ ಕಂಡಿಲ್ಲ. ಅಥವಾ ಬೆಳಗಿನ ಬಿಸಿಲಿನ ಈ ವಿಶೇಷಣಗಳೂ ನನ್ನ ಭ್ರಮೆಯೇನೋ. ಏನೇ ಇರಲಿ ಹೊಂಬಿಸಿಲು ಸಿಹಿ ನೆನಪುಗಳನ್ನು ಮೂಡಿಸುವುದು ನನಗೆ ಖುಷಿ ಕೊಡುತ್ತಿದೆ.