Thursday, July 5, 2012

ಹೀಗೊಬ್ಬಳು ಗೆಳತಿ


ಒಂದು ವರ್ಷದಿಂದ ಸತ್ತಂತಿದ್ದ ಬ್ಲಾಗ್ ಅನ್ನು ಈಗ ಎಬ್ಬಿಸುತ್ತಿದೇ್ದನೆ. ಬರೆಯದಿದ್ದುದಕ್ಕೆ ಕಾರಣಗಳು ಹಲವಿವೆ. ಅದನ್ನು ಹೇಳುವ ಅಗತ್ಯ ಕಾಣುತ್ತಿಲ್ಲ. ಅದರ ಮೇಲೆ ನನ್ನ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಡಂ ಬದಲಾಯಿಸಲಾಗಿ ಕನ್ನಡ ಬರಹ ಏನೇನೋ ಆಗುತ್ತಿದೆ.

ನಿನ್ನೆ ಬಿದ್ದ ಕನಸೊಂದು ನನ್ನ ಬಹು ವರ್ಷಗಳ ನೆನಪೊಂದನ್ನು ಮರಳಿ ತಂದಿತು. ಕನಸಲ್ಲಿ ಬಂದವಳು ನನ್ನ ಒಬ್ಬಳು ಗೆಳತಿ. ಶಾಲೆಯ ಒಂದನೇ ತರಗತಿಯಿಂದ ಏಳು ವರ್ಷ ಜೊತೆಗಿದ್ದವಳು. ಅವಳ ಹೆಸರು ಇಲ್ಲಿ ಅನಗತ್ಯ. ನಮ್ಮ ಮನೆಯ ಸಮೀಪದಲೇ್ಲ ಅವಳ ಮನೆ ಇತ್ತು. ಆದರೂ ಮನೆಗೆ ಹೋಗಿ ಬರುವ ರೂಢಿ ಇರಲಿಲ್ಲ. ಅವಳ ಅತಿ ದೊಡ್ಡ ಸಮಸ್ಯೆ ಎಂದರೆ ಅವಳಿಗೆ ಓದು ತಲೆಗೆ ಹತ್ತುತ್ತಲೇ ಇರಲಿಲ್ಲ. ಬರೆಯುವಾಗ ವಿಚಿತ್ರವಾಗಿ ಪನ್ನು ಹಿಡಿಯುತ್ತಿದ್ದು ಅಕ್ಷರಗಳು ಗೆರೆಯ ಮೇಲೆ ಮೂಡದೆ ಓರೆ ಓರೆಯಾಗಿ ಮೂಡುತ್ತಿದ್ದವು. 

ಚಿಕ್ಕ ತರಗತಿಗಳಲ್ಲಿ ಹೇಗಿದ್ದಳೋ ನೆನಪಿಲ್ಲ. ಆದರೆ ಮೂರನೇ ತರಗತಿ ಮತ್ತು ಐದನೇ ತರಗತಿಯಿಂದ ಬಾಲ್ ಪೆನ್ ಉಪಯೋಗಿಸಿ ಬರೆಯುತ್ತಿದ್ದ ಕಾಲದಲ್ಲಿ (ನಮ್ಮ ಶಾಲೆಯಲ್ಲಿ ಎಂದೂ ಇಂಕ್ ಪೆನ್ ಉಪಯೋಗಿಸಲು ಹೇಳಲಿಲ್ಲ) ನನ್ನ ಪಕ್ಕವೇ ಆಕೆ ಕುಳಿತಿರುತ್ತಿದ್ದುದು ನೆನಪಿದೆ. ಟೀಚರು ಹೇಳುತ್ತಿದ್ದ ಪ್ರತಿ ನೋಟ್ಸೂ ಅವಳಿಗೆ ಕಬ್ಬಿಣದ ಕಡಲೆಯಾಗಿ ಪ್ರತಿ ಅಕ್ಷರವನ್ನೂ ನನ್ನ ಪುಸ್ತಕ ನೋಡಿ ನಕಲು ಮಾಡುತ್ತಿದ್ದಳು. ಟೀಚರು ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆಗೂ ಉತ್ತರಿಸುತ್ತಿರಲಿಲ್ಲ. ಸದಾ ಏಟು, ಬೈಗಳು ತಿನ್ನುವುದು ನಡೆದಿತ್ತು. ಅವಳು ಒಳ್ಳೆ ಗುಣದವಳೂ, ಪ್ರಾಮಾಣಿಕಳೂ ಆಗಿದ್ದಳು. ಶಾಲೆಯಲ್ಲಿ ಯಾರೋ ಕಳೆದುಕೊಂಡಿದ್ದ ಚಿನ್ನದ ಸರವು ಅವಳಿಗೆ ಸಿಕ್ಕಾಗ ಅದನ್ನು ಮರಳಿಸಿ ಪ್ರಾಮಾಣಿಕತೆಗೆ ಬಹುಮಾನ ಪಡೆದಿದ್ದಳು.
ಆಗ ನನಗೆ ಬೇರೆ ಗೆಳತಿಯರಿದ್ದರು. ಹಾಗಾಗಿ ಅವಳು ತುಂಬ ಹತ್ತಿರದ ಗೆಳತಿಯೇನು ಆಗಿರಲಿಲ್ಲ. ಆದರೆ ನನಗೆ ತಿಳಿದಂತೆ ಆಕೆ ನನ್ನನ್ನು ತುಂಬಾ ಹಚ್ಚಿಕೊಂಡಿದ್ದಳು. ನಾನು ಟೀಚರಿಂದ ಭೇಷ್ ಅನ್ನಿಸಿಕೊಂಡಾಗಲೆಲ್ಲ ಅವಳು ಅತೀವ ಸಂತೋಷ ಪಡುತ್ತಿದ್ದಳು. ನಾನೂ ಅವಳ ಓದು ಬರಹಗಳಿಗೆ ತಕ್ಕ ಮಟ್ಟಿಗೆ ನೆರವಾಗುತ್ತಿದ್ದೆ. 

ಆಗ ನಾವು ಚಿಕ್ಕ ಪ್ರಾಯದವರಾಗಿ ಜಗತ್ತಿನ ಪರಿವೆಯೇ ಇರದಿದ್ದ ಕಾಲ. ನನಗೆ ಅವಳ ಕೆಲವು ಸಂಗತಿಗಳು ವಿಚಿತ್ರವೆನಿಸುತ್ತಿದ್ದವು. ಅವಳು ಮನೆಯಲ್ಲಿ ಆಗಾಗ ತಂದೆಯಿಂದ ಬಹಳವಾಗಿ ಏಟು ತಿನ್ನುತ್ತಿದ್ದಳು. ಒಮ್ಮೆ ತುಟಿ ಹರಿದುಕೊಂಡು ಅದಕ್ಕೆ ಕಾರಣವೇ ಹೇಳಿರಲಿಲ್ಲ. ಇನ್ನೊಮ್ಮೆ ಮುಖದಲ್ಲಿ ಮೂಗಿನ ಬಳಿ ಸುಟ್ಟ ಗಾಯ ಮಾಡಿಕೊಂಡು ಬಂದಿದ್ದಳು. ಹಲವು ಬಾರಿ ನಾನು ಪ್ರಶ್ನಿಸಿದ ನಂತರ, ಅವಳ ಅಣ್ಣ(ಚಿಕ್ಕಪ್ಪನ ಮಗ)ನಿಗೆ ದೇವರ ಪ್ರಸಾದ ಕೊಡಲು ಮರೆತಳು ಎಂಬ ಕ್ಷುಲ್ಲಕ ಕಾರಣವೊಂದಕ್ಕೆ ಅವಳ ತಂದೆ ದೀಪದ ಬೆಂಕಿಗೆ ಮುಖವೊಡ್ಡಿಸಿದರು ಎಂದಳು. ನನಗೆ ಇದು ಅರಗಿಸಿಕೊಳ್ಳಲಾರದ ವಿಷಯವಾಗಿತ್ತು. ನೌಕರಿಯಲ್ಲಿದ್ದು ಗೌರವಸ್ಥರಂತೆ ಕಾಣುತ್ತಿದ್ದ ಅವಳ ತಂದೆ ಕೋಪಿಷ್ಟರೆಂದು ಕೇಳಿದ್ದರೂ ಈರೀತಿ ಮಾಡಬಹುದೆಂಬ ಕಲ್ಪನೆಯೇ ಇರಲಿಲ್ಲ. ಅವಳ ಹಲ್ಲುಗಳಿಗೆ ಹುಳ ಹಿಡಿದಿದ್ದರೂ ಅವಳನ್ನು ಮನೆಯವರು ಒಮ್ಮೆಯೂ ವೈದ್ಯರಲ್ಲಿಗೆ ಕರೆದೊಯ್ಯಲಿಲ್ಲ. ಅವಳ ತಾಯಿಯು ತವರು ಮನೆಗೆ ಹೋಗದೆ ಅವಳಷೇ್ಟ ವರ್ಷಗಳಾಗಿದ್ದವಂತೆ. ಹಾಗಾಗಿ ಅವಳಿಗೆ ಅಜ್ಜನ ಮನೆಯ ಸಂಪರ್ಕವೇ ಇರಲಿಲ್ಲ. ಅವರನ್ನು ತವರಿನೊಂದಿಗೆ ಯಾವ ಸಂಪರ್ಕವೂ ಇಡದಂತೆ ಮಾಡಲಾಗಿತ್ತಂತೆ. ನಾನು ಆಗ ಇಂಥ ಕೌಟುಂಬಿಕ ಕೌ್ರರ್ಯಗಳು ಅರ್ಥವಾಗುವಷ್ಟು ದೊಡ್ಡವಳಿರಲಿಲ್ಲ.

ನಾವು ಏಳನೇ ತರಗತಿಯಲ್ಲಿರುವಾಗ ಪಬ್ಲಿಕ್ ಪರೀಕ್ಷೆ ಇತ್ತು. ಫಲಿತಾಂಶದ ದಿನ ಅವಳಷ್ಟು ಖುಷಿ ಪಟ್ಟವರನ್ನು ನಾನು ಕಾಣಲೇ ಇಲ್ಲ. ಅವಳು ಅತಿ ಕಡಿಮೆ ಅಂಕದಲ್ಲೂ ಪಾಸ್ ಆಗಿದ್ದಳೂ. ಅವಳು "ನಾನು ಪಾಸ್, ನಾನು ಪಾಸ್" ಎಂದು ದೆವ್ವ ಹಿಡಿದಂತೆ ಓಡಿಬಂದು ನನ್ನನ್ನು ಗಟ್ಡಿಯಾಗಿ ಕುಲುಕಿದ್ದು ಈಗಲೂ ಕಣ್ಣಿಗೆ ಕಟ್ಟುತ್ತದೆ. ನಾನು ಆಗ ಅವಳ ಮನಸ್ಥಿತಿ ಗೊತ್ತಾಗದೆ "ಹಾಂ" ಎಂದಷೇ್ಟ ಹೇಳಿದ್ದು ಈಗ ಬೇಸರ ತರಿಸುತ್ತದೆ. 

ಪೌ್ರಢ ಶಿಕ್ಷಣದಲ್ಲಿ ನಮ್ಮ ತರಗತಿಗಳು ಬೇರೆಯಾದವು. ನಮ್ಮ ಮನೆಯೂ ಬೇರೆ ಕಡೆಗೆ ಬದಲಾಯಿತು. ನನಗೆ ಬೇರೆ ಗೆಳತಿಯರು ಸಿಕ್ಕಿದರು. ಅವಳು ಆಗೀಗ ಕಂಡರೂ ನನಗೆ ವಿಶೇಷವಾಗಿ ಮಾತಿಗೇನು ಸಿಗುತ್ತಿರಲಿಲ್ಲ. ನನಗೆ ತಿಳಿದಂತೆ ಅವಳು ಎಂಟನೇ, ಒಂಭತ್ತನೇ ತರಗತಿಗಳಲ್ಲಿ ಒಮ್ಮೊಮ್ಮೆ ಫೇಲ್ ಆಗಿರಬೇಕು. ಆಗೆಲ್ಲ ಮನೆಯಲ್ಲಿ ಎಷ್ಟು ಹೊಡೆತ ತಿಂದಳೋ ದೇವರಿಗೇ ಗೊತ್ತು. ಹತ್ತನೆಯಲ್ಲಿ ಫೇಲ್ ಆದ ಕೆಲ ಸಮಯ ನಂತರ ಓದನೇ್ನ ಬಿಟ್ಟಿರಬೇಕು. ಆಮೇಲೆ ಅವಳಿಗೆ ಮದುವೆಯಾಯಿತು. ಅಲ್ಲಿಗೆ ಅವಳ ಸಂಪರ್ಕವೇ ಮುಗಿಯಿತು.

ಮುಂದೊಂದು ದಿನ (ಐದಾರು ವರ್ಷ ನಂತರ) ಅನಿರೀಕ್ಷಿತವಾಗಿ ಅವಳು ಕಂಡಳು. ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು ಹೋಗುತ್ತಿದ್ದು, ದಾರಿಯಲ್ಲಿ ನನ್ನನ್ನು ಕಂಡಾಕ್ಷಣ ನಿಲ್ಲಿಸಿದರು. ಹಿಂದೆ ಕುಳಿತಿದ್ದ ಅವಳು ಬಂದು ನನ್ನನ್ನು ಮಾತಾಡಿಸಿದಾಗ ನನಗೆ ಅಚ್ಚರಿಯೂ ಸಂತೋಷವೂ ಆಯಿತು. ಬೈಕ್ ಚಲಾಯಿಸುತ್ತಿದ್ದಾತನನ್ನು ತನ್ನ ಪತಿ ಎಂದು ಪರಿಚಯಿಸಿದಳು. ಅವಳ ಮುಖ ಸಂತಸದಿಂದ ಕೂಡಿತ್ತು. ನಕ್ಕಾಗ ಹುಳುಕು ಹಲ್ಲುಗಳ ಬದಲು ಹೊಸದಾಗಿ ಮಾಡಿಸಿದ ಹಲ್ಲುಗಳು ಕಂಡವು. ಐದು ನಿಮಿಷವಷೇ್ಟ ಮಾತನಾಡಿ ತಮ್ಮ ದಾರಿ ಹಿಡಿದರು. ನನಗೆ ಅಷೇ್ಟ ಸಾಕಿತ್ತು. ಅವಳು ನನ್ನನ್ನು ಕಂಡಾಗ ನಿಲ್ಲಿಸಿ ಮಾತನಾಡುವಷ್ಟು ಪ್ರೀತಿ ಇಟ್ಟುಕೊಂಡದ್ದು ಮನಸಿಗೆ ತಟ್ಟಿತು. ಅವಳ ಅರಳಿದ ಮುಖ ಈಗ ಅವಳ ಜೀವನ ಸುಂದರವಾಗಿದೆ ಎಂದು ಹೇಳಿದಂತಿತ್ತು. ಇಷ್ಟು ವರ್ಷಗಳ ನಂತರವಾದರೂ ಒಳ್ಳೆ ಬದುಕು ಸಿಕ್ಕಿತಲ್ಲಾ ಎಂದು ನಾನು ಸಮಾಧಾನ ಪಟ್ಟೆ. ಆಮೇಲೆ ಅವಳು ನನಗೆ ಸಿಕ್ಕಿಲ್ಲ. ಅವಳು ಈಗಲೂ ಸಂತೋಷದ ಜೀವನ ನಡೆಸುತ್ತಿರಲಿ ಎಂದು ಸದಾ ಬಯಸುತೇ್ತನೆ.

1 comment:

Shivanand PB said...

Welcome back, reading was as if you were narrating the story :)