Wednesday, October 28, 2009

ಚಿತ್ರದುರ್ಗ trip

ಬಹು ದಿನಗಳಿಂದ ನನ್ನ ಬ್ಲಾಗಿನಲ್ಲಿ ಎನೂ ಬರಹ ಕಾಣಿಸಿಲ್ಲವೆಂದು ಬ್ಲಾಗ್ ನ "The End" ಆಗಿದೆಯೆಂಬ ಸಂದೇಹ ಅನೇಕರಿಗೆ ಕಾಡಿರಬಹುದು. ಬರೆಯುವಂತಹ ವಿಷಯವೇನೂ ನನ್ನಲ್ಲಿ ಇರಲಿಲ್ಲ. ಇಂದು ವಿಷಯವಿದೆ. ಚಿತ್ರದುರ್ಗದ ಬಗ್ಗೆ!

ಸೆಪ್ಟೆಂಬರ್ 18, 19, 20, 21 ನನಗೆ ಮತ್ತು ನನ್ನ ಕುಟುಂಬದವರೆಲ್ಲರಿಗೂ ರಜೆ ಇರುವ ಕಾರಣ ಎಲ್ಲಾದರೂ ಸುತ್ತಾಡಲು ಹೋಗಬೇಕು ಎಂದು ಒಂದು ತಿಂಗಳು ಮೊದಲೇ ಯೋಚನೆ ಮಾಡಹತ್ತಿದ್ದೆವು. 18 ನೇ ತಾರೀಖಿನವರೆಗೂ finalists ಗಳ ಪಟ್ಟಿಯಿಂದ winner ನ ಆಯ್ಕೆ ಆಗಿರಲಿಲ್ಲ. ಕೊನೆಗೆ ಮಡಿಕೇರಿ, ವಯನಾಡು, ಚಿಕ್ಕಮಗಳೂರು ಗಳನ್ನು ಹಿಂದಿಕ್ಕಿ ಚಿತ್ರದುರ್ಗ winner ಆಗಿ ಆಯ್ಕೆಯಾಯಿತು. ನಾನು, ಕೃಷ್ಣ, ಅತ್ತೆ, ಮಾವ, ಕೃಷ್ಣನ ಅಕ್ಕ, ಭಾವ ಮತ್ತು ಅವರ ಮಗ ನಿಖಿಲ್ ಪಯಣಿಗರು. ಎಂಟು ಜನ ತುಂಬುವ Toyota Qualis ಅನ್ನು 19, ಶನಿವಾರ ಬೆಳಿಗ್ಗೆ 6:30ಕ್ಕೆ ಬರಹೇಳಿದ್ದಾಯಿತು. ಬ್ಯಾಗು ತುಂಬಿಸಿಕೊಳ್ಳದೆ ನಡು ರಾತ್ರಿವರೆಗೆ Qualis ಅಲ್ಲಿ CD Player ಇದೆಯೋ ಇಲ್ಲವೋ ಗೊತ್ತಿರದಿದ್ದರೂ MP3 ಹಾಡುಗಳನ್ನು CD ಗೆ copy ಮಾಡುತ್ತಿದ್ದ ನನ್ನನ್ನು ನೋಡಿ "ಹಾಕಲು ಬಟ್ಟೆ ಇಲ್ಲದಿದ್ದರೂ CD ready" ಎಂದು ಕೃಷ್ಣ ನಕ್ಕುದಾಯಿತು.

(Day 1)

4:30 ಕ್ಕೆ ಕಿರುಚಿದ alarm ಅನ್ನು snooze ಎಂದು ಮುಂದೆ ಹಾಕಿ ಹಾಕಿ, 5:30 ಕ್ಕೆ ಎದ್ದುದಾಯಿತು. ರಪ ರಪನೆ ಹೊರಟು 6:45 ಕ್ಕೆ Toyota Qualis ಹತ್ತಿದ್ದಾಯಿತು. ನನ್ನ ಅತ್ತೆ ಮತ್ತು ಅತ್ತಿಗೆ ಸೇರಿ 10 litre ನೀರನ್ನು can ಒಂದರಲ್ಲಿ ತುಂಬಿಕೊಂಡಿದ್ದರು. ಇಷ್ಟು ನೀರು ಏಕಪ್ಪಾ ಎಂದುಕೊಳ್ಳುತ್ತಿದ್ದ ನನ್ನ ಯೋಚನೆ ತಪ್ಪು ಎಂದು ಅರಿವಾಗಲು ಬಹಳ ಹೊತ್ತು ಬೇಕಾಗಲಿಲ್ಲ.

ಮೈಸೂರಿಂದ ಶ್ರೀರ೦ಗಪಟ್ಟಣ, ಪಾಂಡವಪುರ, ತುರುವೆಕೆರೆ ದಾಟಿ ಚಿಕ್ಕನಾಯಕನ ಹಳ್ಳಿ ತಲುಪಿದಾಗ ಎಲ್ಲರ ಹೊಟ್ಟೆಯೂ ಚುರುಗುಟ್ಟುತ್ತಿತ್ತು. ಈ ದಾರಿಯಲ್ಲಿ ಎಲ್ಲೂ ಸರಿಯಾದ ಹೋಟೆಲ್ ಗಳಿಲ್ಲದಿರಿವುದು ದೊಡ್ಡ ತೊಂದರೆಯೇ ಸರಿ. ಚೆನ್ನಾಗಿರುವ Toilet ಇರುವ ಹೋಟೆಲ್ ಹುಡುಕುತ್ತ ಸಾಗಿದ್ದ ನಮಗೆ ಒಂದೂ ಹೋಟೆಲ್ ಸಿಗದ ಪರಿಸ್ಥಿತಿ ಎದುರಾಯಿತು. ಕೊನೆಗೆ ಚಿಕ್ಕನಾಯಕನ ಹಳ್ಳಿಯಲ್ಲಿ ಚಿಕ್ಕ ಹೋಟೆಲ್ ಕಂಡಾಗ ತಿಂಡಿತಿನ್ನಲು ಇಳಿಯಲೇ ಬೇಕಾಯಿತು.

ಒಬ್ಬ ಅಡುಗೆಯವನಿದ್ದ ಹೋಟೆಲ್ ನಲ್ಲಿ ಇಡ್ಲಿ ತಿನ್ನುತ್ತಾ ಸಹೃದಯಿ ಮಾಲಕನಲ್ಲಿ ಮಾತಾಡುತ್ತಿದ್ದಾಗ ತಿಳಿಯಿತು ಅವರು ಉಡುಪಿ ಬಳಿಯವರೆಂದು! ನನ್ನನ್ನು ಬಿಟ್ಟು ಉಳಿದ ಆರು ಜನರಿಗೂ ಅಲ್ಲಿಯ ತಿಂಡಿ ಇಷ್ಟವಾಯಿತು. ಹೊರಡಲನುವಾದಾಗ Toilet ಹುಡುಕುತ್ತಿದ್ದ ನಮ್ಮ ಸಮಸ್ಯೆಯನ್ನರಿತ ಅವರು ಪಕ್ಕದಲ್ಲಿದ್ದ ತಮ್ಮ ಮನೆಗೆ ಕರೆದೊಯ್ದರು. ಅವರ ಹೆಂಡತಿಯೂ ಚೆನ್ನಾಗಿ ಮಾತಾಡಿದರಲ್ಲದೆ ತಾವು ಉಡುಪಿ ಬಳಿಯ ಬಾರ್ಕೂರಿನವರು ಎಂದಾಗ ನನಗೆ ಅಚ್ಚರಿಯಾಯಿತು. ಉಡುಪಿ ಬಿಟ್ಟು ಇಲ್ಲೇಕಿರುವರಪ್ಪಾ ಎಂಬ ಸಂದೇಹವೂ ಬರದಿರಲಿಲ್ಲ. ನಂತರ ಕೆಲವೇ ನಿಮಿಷಗಳಲ್ಲಿ ಅವರ ಮುದ್ದಾದ ಪುಟ್ಟ ಮಗನ ಕೈಲಿ ಚಾಕಲೇಟು ತುರುಕಿ, ಟಾಟಾ ಹೇಳಿ ನಮ್ಮ ಪ್ರಯಾಣ ಮುಂದುವರಿಯಿತು.

ಎಲ್ಲರೂ ರಿಲ್ಯಾಾಾಾಕ್ಸ್ ಆಗಿ Qualis ನಲ್ಲಿ ಕುಳಿತಿರುವಾಗ ನಾನು CD Player ನಲ್ಲಿ ನಾನು ತಂದಿದ್ದ CD ತುರುಕಿದೆ. ಸ್ವಲ್ಪ ಹೊತ್ತಿನಲ್ಲಿ ಹೆಚ್ಚಿನವರು ನಿದ್ದೆಹೋದರು. (ನನ್ನ ಹಾಡುಗಳಿಂದಾಗಿ ಅಲ್ಲ). ನಾನು ಸುತ್ತಲಿನ ದೃಶ್ಯವನ್ನು ನೋಡುವ ಅವಕಾಶ ಕಳೆದುಕೊಳ್ಳಲಿಚ್ಛಿಸದೆ ನಿದ್ದೆ ಮಾಡದೆ ಕುಳಿತಿದ್ದೆ. ಆ ಹಳೆಯ Qualis ನ ಕೊನೆಯ ಸಾಲಿನ seat ನಲ್ಲಿ ಕಿಟಕಿ ತೆರೆಯಲಾಗದಿದ್ದರೂ ಕಷ್ಟಪಟ್ಟು ಹೊರ ನೋಡುವುದರಲ್ಲಿ ಏನೋ ಖುಷಿ ಇತ್ತು. Qualis 11 ಗಂಟೆಯ ಹೊತ್ತಿಗೆ ಬೆಂಗಳೂರು-ಪುಣೆ ಹೆದ್ದಾರಿ ತಲುಪಿತ್ತು. ದೂರದ ಗುಡ್ಡಗಳಲ್ಲಿ ಗಾಳಿ ಯಂತ್ರಗಳು (wind mill) ಕಾಣಲಾರಂಭಿಸಿದುವು. ಮತ್ತೊಂದು ಗಂಟೆಯಲ್ಲಿ ನಾವು ಚಿತ್ರದುರ್ಗ ತಲುಪಿದ್ದೆವು.

ಸೀದ ಹೋಗಿ ಕೋಟೆಯ ಮುಂದೆ ಇಳಿದ ನಾವು ಗೊತ್ತು ಗುರಿ ಇಲ್ಲದಂತೆ ಅಡ್ಡಾಡತೊಡಗಿದವು. ಕೋಟೆಯ ದ್ವಾರದಲ್ಲಿ ಮುಖ್ಯ ಭಾಗಗಳ map ಇದ್ದುದನ್ನು ನಾವು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಕೋಟೆಯ ಎಡಭಾಗದಲ್ಲಿ ಮುಂದುವರಿದು ನಾವು ಬನಶಂಕರಿ ಗುಡಿ ಹಾಗೂ ಮದ್ದು ಬೀಸುವ ಕಲ್ಲು ನೋಡಿದೆವು. ಅಲ್ಲಿ ಅದನ್ನು ಬಳಸುತ್ತಿದ್ದ ಬಗ್ಗೆ ವಿವರಣೆ ಇದ್ದ ಫಲಕವಿದ್ದರೂ ಆ ಬರಹಕ್ಕೂ ನಮ್ಮ ಕಲ್ಪನೆಗೂ ತಾಳೆಯಾದಂತೆ ಕಾಣಲಿಲ್ಲ. ನಮ್ಮಲ್ಲೇ Computer, Electronics, Mechanical, Civil ಎಂಜಿನಿಯರುಗಳೊಂದಿಗೆ M.Tec. ರಾಂಕ್ ಪಡೆದವರಿದ್ದರೂ ಅ ಕಲ್ಲುಗಳನ್ನು ಬಳಸುತ್ತಿದ್ದುದು ಹೇಗಿರಬಹುದು ಎಂದು ಎಷ್ಟು ಯೋಚಿಸಿದರೂ ತಿಳಿಯಲಿಲ್ಲ. ನೆತ್ತಿ ಮೇಲೆ ಬಿಸಿಲು ಕಾಯುತ್ತಿತ್ತು. ಮರದ ನೆರಳಲ್ಲಿ ಕುಳಿತಿದ್ದ Guide ಒಬ್ಬ "ಊಟ ಮಾಡ್ಕೊಂಡ್ ಬನ್ನಿ ಸಾರ್, ಕೋಟೆ ತೋರಿಸ್ತೀನಿ" ಅಂದ. ಊಟ ಮಾಡಿ lodge ಹುಡುಕಹೊರಟ ನಾವು ಇಂಟರ್ ನೆಟ್ ನೋಡಿ ಮೊದಲೇ ಪಟ್ಟಿ ಮಾಡಿದ್ದ ಹೋಟೆಲುಗಳನ್ನು ನೋಡುವುದೆಂದು ನಿಶ್ಚಯಿಸಿದೆವು. ಪೇಟೆಯೊಳಗಿನ ಹೋಟೆಲುಗಳು ಸರಿಯಾದ maintenance ಇಲ್ಲದೆ ಕೆಟ್ಟದಾಗಿದ್ದವು. ಇದೇ ನೋಡುತ್ತಿದ್ದರೆ mood ಹಾಳಾದೀತೆಂದು "ಆದದ್ದಾಗಲಿ ಮತ್ತೆ ನೋಡೋಣ" ಎಂದು ಕೋಟೆಯತ್ತ ಹೊರಟೆವು.

ಮದ್ದು ಬೀಸುವ ಕಲ್ಲು:


ಕೋಟೆಯ ದ್ವಾರದಲ್ಲಿ ಮುಖ್ಯಪಟ್ಟ ಭಾಗಗಳ ನಕ್ಷೆ ಇದೆ. ಅದನ್ನು ನೋಡಿದರೆ ದಾರಿಯ ಅಲ್ಪ ಕಲ್ಪನೆ ಮಾಡಬಹುದು. ಈ ಕೋಟೆಯನ್ನು Archaeological Survey of India ಸಂರಕ್ಷಿಸುತ್ತಿರುವ ಕಾರಣ ಅಲ್ಲಲ್ಲಿ ಬೋರ್ಡ್ ಗಳು ಹಾಕಲ್ಪಟ್ಟಿದ್ದಲ್ಲದೆ ಸ್ವಚ್ಛತೆಯನ್ನೂ ಕಾಪಾಡಲಾಗಿದೆ.

ನಕ್ಷೆ:


ಹಾಗೇ ಹೊರಟ ನಮಗೆ ಒಬ್ಬ ಸಾಧು ಸ್ವಭಾವದ guide ಸಿಕ್ಕಿದ. ಆತ ಉರು ಹೊಡೆದಂತೆ ಕೋಟೆಯ ಬಗ್ಗೆ ವಿವರಣೆ ನೀಡಲಾರಂಭಿಸಿದ. ಆತ ಹೇಳುತ್ತಿದ್ದ ಕೆಲ ಕತೆಗಳು ನಂಬಲರ್ಹವಾಗಿರದಿದ್ದರೂ ಹೆಚ್ಚಿನ ವಿವರಣೆಗಳು ಚೆನ್ನಾಗಿದ್ದವು. ಆತ ತನಗೆ ಬೇಕಾದ ದಾರಿಯಲ್ಲಿ ನಮ್ಮನ್ನು ಕರೆದೊಯ್ಯತ್ತಾ ವಿವರಿಸುತ್ತಿದ್ದ. ನನಗೇಕೋ ಆತನ ಉಪಸ್ಥಿತಿ ನನ್ನ ಸ್ವಾತಂತ್ರ್ಯವನ್ನು ಕಸಿಯುತ್ತಿದೆ ಎನ್ನಿಸಿತು. ಆದರೆ ನಮ್ಮಲ್ಲಿ ಕೋಟೆ ಯಾ ಚಿತ್ರದುರ್ಗಕ್ಕೆ ಸಂಬಂಧಿಸಿದ ಯಾವುದೇ ಪುಸ್ತಕಗಳಿರಲಿಲ್ಲದ ಕಾರಣ ಅವನು ತೋರಿಸಿದ ದಾರಿಯಲ್ಲಿ ನಡೆಯದೆ ವಿಧಿ ಇರಲಿಲ್ಲ. ಸಂದರ್ಭ ಸಿಕ್ಕಾಗಲೆಲ್ಲ ಮನೆಯವರಿಂದ ಬೇರ್ಪಟ್ಟು ಓಡಿ ನನಗೆ ನೋಡಬೇಕೆನಿಸಿದ ವಿಷಯಗಳನ್ನು ನೋಡಿ photo ತೆಗೆದುಕೊಂಡು ಬಂದೆ. camcorder ನಲ್ಲಿ record ಮಾಡುವ ಕೆಟ್ಟ ಜವಾಬ್ದಾರಿಯನ್ನು ಹೊತ್ತಿದ್ದ ನಾನು ಸ್ವಂತ ಕಣ್ಣಿಗಿಂತ ಹೆಚ್ಚಾಗಿ camera ದ ಮೂಲಕ ನೋಡಬೇಕಿದ್ದ ನನ್ನ ಅವಸ್ಥೆಯನ್ನು ಹಳಿಯುತ್ತಾ ನಡೆದಿದ್ದೆ.

ಕೋಟೆಯ ಸುತ್ತುಗಳನ್ನು, ವಿವಿಧ ದ್ವಾರಗಳನ್ನು ತೋರಿಸುತ್ತಾ ನಡೆದಿದ್ದ ಆ guide ನ ಹಿಂದೆ ವಿಧಿ ಇಲ್ಲದೆ ಸಾಗಿದ್ದೆ. ಅದೆಲ್ಲಿ ಇದೆಲ್ಲಿ ಎಂಬ ನನ್ನ ಪ್ರಶ್ನೆಗಳು ಆತನ ಉರುಹೊಡೆದು ಒಪ್ಪಿಸುತ್ತಿದ್ದ ಕ್ರಿಯೆಗೆ ಭಂಗ ತಂದಂತೆ ಕಾಣಲಿಲ್ಲ. ನಾನು ಆತನತ್ತ ಕಿವಿ ಕೊಡದೆ ಪ್ರಕೃತಿ ಸೌಂದರ್ಯ ನೋಡುತ್ತಾ ಬೆರಗಾಗಿ ನಡೆದಿದ್ದೆ. ಬಂಡೆಗಳು ಆನೆ, ಮೊಲ, ಕಪ್ಪೆ ಹೀಗೆ ಬಗೆ ಬಗೆ ಆಕಾರ ತಳೆದು ಆಶ್ಚರ್ಯ ಹುಟ್ಟಿಸುತ್ತಿದ್ದವು. ಬಿಸಿಲು ಓರೆಯಾಗುತ್ತಾ ಬಂದಂತೆ ಬಂಡೆಗಳಲ್ಲಿ ಪ್ರತಿಫಲಿಸಿ ಅವು ವಿವಿಧ ಬಣ್ಣಗಳಲ್ಲಿ ಕಾಣಿಸತೊಡಗಿದವು. ಆ guide ನಮ್ಮನ್ನು ಕರೆದೊಯ್ಯುತ್ತಿದ್ದುದು ಒನಕೆ ಓಬವ್ವನ ಕಿಂಡಿಯ ಬಳಿ. ಆ ಮಾರ್ಗದಲ್ಲಿ ಏನೇನು ಕಾಣಸಿಗುವುದೋ ಅಷ್ಟನ್ನು ಮಾತ್ರ ತೋರಿಸುತ್ತಾ ಸಾಗಿದ್ದ ಆತ.

ಓಬವ್ವನ ಕಿಂಡಿಯತ್ತ ಬರುವ ಹಾದಿ:


ಓಬವ್ವನ ಕಿಂಡಿ ತೋರಿಸಿದ ಆತ ನಮ್ಮನ್ನು ಅಲ್ಲೇ ಬಿಟ್ಟು ತನ್ನ ಕೆಲಸವಾಯಿತು ಎಂದು ದುಡ್ಡು ತೆಗೆದುಕೊಂಡು ಹೋದ. ನಾನು ಸೂರ್ಯ ಮುಳುಗುವುದರೊಳಗೆ ಇನ್ನಷ್ಟು ನೋಡೋಣ ಎಂದು ಓಡಾಡತೊಡಗಿದೆ. ಎಲ್ಲರಿಗೂ ಸುಸ್ತಾಗಿತ್ತು. ಮುಂದೆ ಇಲ್ಲಿಗೆ ಯಾವತ್ತು ಬರುವುದೋ? (ನನ್ನ ಪತಿದೇವರು ತಮ್ಮ ಆವಾಸ ಸ್ಥಾನ ಬಿಟ್ಟು ಕದಲಲು ಇನ್ನೆಂದು ಮನಸು ಮಾಡುವುದೋ?) ಎಂಬ ಭಯದಲ್ಲಿ ಹೆಚ್ಚು ಜಾಗಗಳನ್ನು ನೋಡಲು ಹಂಬಲಿಸಿದ್ದೆ. ನನ್ನ ಅತ್ತಿಗೆಯ ಗಂಡ ನನ್ನೊಡನೆ ಬರುವ ಮನಸು ಮಾಡಿದರು. ನಾವಿಬ್ಬರು ಗೋಪಾಲಸ್ವಾಮಿ ದೇವಾಲಯದತ್ತ ಹೊರಟೆವು. ಉಳಿದವರು ಮಂಗಗಳ ಉಪಟಳ ಸಹಿಸುತ್ತಾ ಅಲ್ಲೇ ಇರಬಯಸಿದರು.

ಹಾ! ಮಂಗಗಳ ಬಗ್ಗೆ ಹೇಳುವುದನ್ನು ಮರೆತೆ. ಕೋಟೆಯೊಳಗೆ ಹಲವಾರು ಮಂಗಗಳು ತಿಂಡಿಯಂತೆ ಕಾಣುವ ವಸ್ತುಗಳನ್ನು ಕೈಯಿಂದ ಕಸಿಯಲು ಬರುತ್ತವೆ. ಅವು cameraದ ಚೀಲವನ್ನೂ ತಿಂಡಿಯೆಂದು ಭಾವಿಸಲು ಸಾಧ್ಯವಿದೆ. ಒಂಟಿಯಾಗಿ ಅಥವಾ ದಂಡಿನಲ್ಲಿ ಬರುವ ಇವು ಜನರನ್ನು ಬೆದರಿಸಿ ತಿಂಡಿ ಕಸಿಯುತ್ತವೆ. ಕೋಟೆಯೊಳಗೆ ಅಲ್ಲಲ್ಲಿ ಕಬ್ಬಿಣದ ಆಳವುಳ್ಳ ಕಸದ ತೊಟ್ಟಿಗಳಿದ್ದರೂ ಕಸವನ್ನು ಅವುಗಳೊಳಗೆ ಹಾಕುವ ಮೊದಲೇ ಮಂಗ ಕಸಿದೊಯ್ದರೆ ಎನೂ ಮಾಡಲು ಸಾಧ್ಯವಿಲ್ಲ.

ಗೋಪಾಲಸ್ವಾಮಿ ದೇವಾಲಯದತ್ತ ಹೊರಟ ನಮಗೆ ತಣ್ಣಗಿನ ತೊರೆಯೊಂದು ಎದುರಾಯಿತು. ಅದು ಬರುತ್ತಿದ್ದುದು ಸುಂದರವಾದ ಗೋಪಾಲಸ್ವಾಮಿ ಹೊಂಡದಿಂದ. ಅಲ್ಲಿದ ಮೇಲೆ ಹತ್ತಿದರೆ ಗೋಪಾಲಸ್ವಾಮಿ ದೇವಾಲಯ. ಅದರ ಬಾಗಿಲು ಮುಚ್ಚಿದ್ದರೂ ನನಗೆ ಏನೋ ವಿಚಿತ್ರ ಸಂತೋಷವಾಗುತ್ತಿತ್ತು. ನಾನೇ ಏನೋ explore ಮಾಡಿದೆ ಎಂಬ ಭಾವನೆ. ಅದನ್ನು ದಾಟಿ ಹೋದರೆ ಅರಮನೆಯ ಆವರಣ ನೋಡಬಹುದಿತ್ತು. ಆದರೆ ಆಗಲೇ 6 ಗಂಟೆಯಾಗಿತ್ತು. ಅಲ್ಲಿಂದ ಹಿಂದೆ ಬರುತ್ತಾ ಎಲ್ಲರೂ ಏಕನಾಥೇಶ್ವರಿ ದೇವಾಲಯ ಮತ್ತು ಹಿಡಿಂಬೇಶ್ವರ ದೇವಾಲಯ ನೋಡಿದೆವು. ಅಲ್ಲೇ ದಿಣ್ಣೆಯೊಂದರ ಮೇಲೆ ಕುಳಿತು ಸೂರ್ಯಾಸ್ತಕ್ಕೆ ಕಾಯತೊಡಗಿದೆವು. ಗುಲಾಬಿ ಬಣ್ಣದಲ್ಲಿ ಮೆಲ್ಲಗೆ ಇಳಿಯುತ್ತಿದ್ದ ಸೂರ್ಯನ ಹಿಂದೆ ಕತ್ತಲಾವರಿಸುತ್ತಿತ್ತು. ಬಂಡೆಗಳೊಡನೆ ನಮ್ಮ ಎದುರಿದ್ದ ಉಯ್ಯಾಲೆಯ ಕಲ್ಲಿನ ಚೌಕಟ್ಟು ಕೇಸರಿಯಿಂದ ಕೆಂಪಗಾಗಿ, ಕಂದಾಗಿ, ಕಪ್ಪಾಗಿ ಬದಲಾಗುತ್ತಿತ್ತು. ಆಹ್ಲಾದಕರವಾಗಿ ಬೀಸುತ್ತಿದ್ದ ಗಾಳಿ ದಿನದ ದಣಿವನ್ನು ಮರೆಸುತ್ತಿತ್ತು.

ಗೋಪಾಲಸ್ವಾಮಿ ಹೊಂಡ:


ಗಾಳಿ ಗೋಪುರ:


ಸೂರ್ಯಾಸ್ತ:


ಸೂರ್ಯಾಸ್ತದ ನಂತರ ನಾವು ಕೋಟೆಯಿಂದ ಹೊರಬಂದೆವು. ಮುಂದಿನ ಬಹುದೊಡ್ಡ ಕಾರ್ಯಕ್ರಮ ರಾತ್ರಿಗೆ ತಂಗಲು lodge ಹುಡುಕುವುದಾಗಿತ್ತು.

ಪೇಟೆಯೊಳಗಿನ ಹೋಟೆಲುಗಳಲ್ಲಿ ಕೊಳಕಾದ ಹಾಸಿಗೆಗಳು, ಸ್ವಚ್ಛವಿರದ ಬಾತ್ ರೂಮು ನೋಡಿ ಬೇಸತ್ತಿದ್ದ ನಾವು NH4 ನಲ್ಲಿದ್ದ ಹೋಟೆಲುಗಳನ್ನು ನೋಡಲು ಹೊರಟೆವು. ಐಶ್ವರ್ಯ ಫೋರ್ಟ್ ಹೋಟೆಲಿಗೆ ಫೋನ್ ಮಾಡಿದಾಗ ಎಲ್ಲ ರೂಮುಗಳು ಭರ್ತಿವಾಗಿವೆ ಎಂಬ ಉತ್ತರ ಬಂತು. ನಮಗೆ tension ಶುರುವಾಯಿತು. ಅಲ್ಲಿಂದ ವೇದ ಕಂಫರ್ಟ್ ಗೆ ಹೋದೆವು. ಎಲ್ಲರಿಗೂ ಸುಸ್ತಾಗಿದ್ದರಿಂದ ರೂಮು ನೋಡಲು ನಾನು, ಕೃಷ್ಣ ಮತ್ತು ಕೃಷ್ಣನ ಭಾವ ಹೋದೆವು. ಕೊಳೆಯಾದ ಗೋಡೆಗಳು, fresh ಆಗಿರದ ಬಾತ್ ರೂಮು ನೋಡಿ ನಾನು ಬೇಡವೆಂದೆ. ನನ್ನ cleanliness ನ ಹುಚ್ಚಿಗೆ ಎಲ್ಲರಿಗೂ ಕಿರಿಕಿರಿ ಆಗಹತ್ತಿತ್ತೇನೋ. "ಒಂದು ದಿನಕ್ಕೆ adjust ಮಾಡಲು ಬರುವುದಿಲ್ಲ ನಿನಗೆ" ಎಂದು ಕೃಷ್ಣ ಮುನಿಸಿಕೊಂಡಾಗ ಸಹನೆಯ ಹದ್ದು ಮೀರಲು ಹೊತ್ತು ಹಿಡಿಯಲಿಕ್ಕಿಲ್ಲ ಎನ್ನಿಸಿತು. ಹೋಟೆಲ್ ರವಿ ಮಯೂರ ನೋಡಿದಾಗ ಬಾತ್ ರೂಮು ಸುಮಾರಾಗಿದ್ದರೂ ಇದಕ್ಕಿಂತ ಒಳ್ಳೆಯದು ಇನ್ನು ಸಿಗಲಿಕ್ಕಿಲ್ಲ ಎಂದು ಅದೇ ಆಗಬಹುದಂದೆ. ಮೂರು ರೂಮು ತಗೆದುಕೊಂಡೆವು. ನಮ್ಮ ಹತ್ತು ಲೀಟರ್ ನೀರಿನ can ಯಾವಾಗಲೋ ಖಾಲಿಯಾಗಿ ಮತ್ತೆ ನಾಲ್ಕು ಲೀಟರ್ ನೀರು ಖರೀದಿಸಿಯಾಗಿತ್ತು.

ಊಟ ಆದ ನಂತರ ನಾವು ನಮ್ಮ ನಮ್ಮ ಕೋಣೆಗಳಿಗೆ ಹೋದೆವು. ನೋಡಬೇಕಾಗಿದ್ದ ಹಾಗೂ ನೋಡಿದ್ದ ಜಾಗಗಳನ್ನು ಮೆಲುಕು ಹಾಕತೊಡಗಿದೆ. ಕೋಟೆಯ ಹೊರಗಿದ್ದ map ನಲ್ಲಿ 25 ಜಾಗಗಳು ಗುರುತಿಸಲ್ಪಟ್ಟಿದ್ದವು. ಅದರಲ್ಲಿ ನಾವು ನೋಡಿದ್ದು ಕೊಳ, ಮದ್ದಿ ಬೀಸುವ ಕಲ್ಲು, ಗಣೇಶ ದೇವಾಲಯ, ಏಕನಾಥೇಶ್ವರಿ ದೇವಾಲಯ, ಹಿಡಿಂಬೇಶ್ವರ ದೇವಾಲಯ, ಮುರಿದು ಹೋಗಿದ್ದ ಟಂಕಸಾಲೆ ಮತ್ತು ಪಾಳೇಗಾರರ ಕಛೇರಿ, ಗೋಪಾಲಸ್ವಾಮಿ ಹೊಂಡ ಮತ್ತು ದೇವಾಲಯ, ದೂರದಿಂದ ಕಾಶಿ ವಿಶ್ವನಾಥ ದೇವಾಲಯ ಮತ್ತು ಆಂಜನೇಯ ದೇವಾಲಯ, ಒನಕೆ ಓಬವ್ವನ ಕಿಂಡಿ ಹೀಗೇ 11 ಜಾಗಗಳು ಮಾತ್ರ. ಕೋಟೆಯ ಅಗಾಧ ವಿಸ್ತೀರ್ಣದ ಕಲ್ಪನೆಯಿಲ್ಲದಿದ್ದುದರಿಂದ ಎರಡು ದಿನದ trip ಸಾಕು ಎಂದು ಹೊರಡುವ ಮೊದಲೇ ನಿರ್ಧರಿಸಿಯಾಗಿತ್ತು. ಉಳಿದ ಜಾಗಗಳನ್ನು ನೋಡಬೇಕೆಂಬ ಉತ್ಸಾಹವಿದ್ದರೂ ಎರಡನೆ ದಿನದ ಕಾರ್ಯಕ್ರಮಗಳು ಮೊದಲೇ ನಿಗದಿಯಾಗಿದ್ದರಿಂದ ಏನು ಮಾಡಲೂ ಸಾಧ್ಯವಿರಲಿಲ್ಲ. ಮರುದಿನ ಚಂದ್ರವಳ್ಳಿ, ಮುರುಗ ಮಠ, ವಾಣಿವಿಲಾಸ ಸಾಗರ dam ನೋಡುವುದೆಂದು ಪಟ್ಟಿಮಾಡಿಯಾಗಿತ್ತು. ಮನಸ್ಸನ್ನು ಹೇಗೋ ಸಮಾಧಾನ ಪಡಿಸುತ್ತಾ ನಿದ್ದೆ ಹೋದೆ.

(Day 2)

ಮರುದಿನ ಬೆಳಗ್ಗೆ ಎದ್ದಾಕ್ಷಣ ಕಿರಿಕಿರಿ ಕಾದಿತ್ತು. Driver "ಟೈರ್ ಪಂಕ್ಚರ್" ಎಂಬ ಸುದ್ದಿ ತಂದ. ಅವನು ಅದನ್ನು ಸರಿಪಡಿಸುವಷ್ಟರಲ್ಲಿ ಸಮಯ ಕಳೆದಿತ್ತು. ನಾವು ಲಗುಬಗೆಯಿಂದ ಚಂದ್ರವಳ್ಳಿಯತ್ತ ಹೊರಟೆವು. ಅಲ್ಲಿ ಮನುಷ್ಯ ನಿರ್ಮಿತ ಝರಿ ಮನಸೆಳೆಯಿತು. ಅದು ಸುಂದರವಾದ ಕುಡಿಯುವ ನೀರಿನ ಚಂದ್ರವಳ್ಳಿ ಕೆರೆಯಿಂದ ಹರಿದು ಬರುತ್ತಿದ್ದುದು. ಅದರ ಬಳಿ ಅರ್ಧ ಗಂಟೆ ಸಮಯ ಕಳೆದು, ಬಳಿಯಿದ್ದ ದೇವಸ್ಥಾನ ನೋಡಿ ಮುಂದುವರಿದೆವು. ಅಲ್ಲಿ ನಾವು ನೋಡಹೊರಟದ್ದು ಚಂದ್ರವಳ್ಳಿ ಗುಹೆ ಅಥವಾ ಅಂಕಲಿ ಮಠ. ಅಲ್ಲಿ ಮಾರ್ಗದರ್ಶಿಯೊಬ್ಬ ಕೆಲ ಜನರನ್ನು ಕರೆದುಕೊಂಡು ಗುಹೆಯೊಳಗೆ ಹೋಗಿದ್ದನಾದ್ದರಿಂದ ನಾವು ಅವರು ಹಿಂತಿರುಗುವವರೆಗೆ ಕಾಯಬೇಕಾಯಿತು.

ಚಂದ್ರವಳ್ಳಿ ಕೆರೆ:


ಅದು ನೆಲದ ಮಟ್ಟಕ್ಕಿಂತ ಕೆಲವು ಅಡಿ ಕೆಳಗಿದ್ದು ಪೂರ್ಣ ಕತ್ತಲಿನಿಂದ ತುಂಬಿತ್ತು. ಬಾಗಿಲ ಬಳಿ ಬಾವಲಿ ಹಿಕ್ಕೆ ವಾಸನೆಯಾಡುತ್ತಿತ್ತು. ಮೊದಲೇ ಗುಹೆಗಳನ್ನು ನೋಡಿದರೆ ಒಂದು ರೀತಿಯ phobia ವಿದ್ದ ನನಗೆ ಹೆದರಿಕೆಯಾಗಹತ್ತಿದ್ದರೂ MTV Rodies, Colours ನ Khatron ke khiladi ನೋಡಿ ಈ phobia ವನ್ನು ಮೆಟ್ಟಿ ನಿಲ್ಲುವ ಧೈರ್ಯ ಮಾಡತೊಡಗಿದೆ.

ಮಾರ್ಗದರ್ಶಿ 10-15 ಮಂದಿಯೊಂದಿಗೆ ಗುಹೆಯೊಳಗಿಂದ ಪ್ರತ್ಯಕ್ಷನಾದ. ಕೈಲಿ lantern ಮತ್ತು torch ಹಿಡಿದಿದ್ದ ಆತನಿಗೆ ಹದಿನೈದೋ ಇಪ್ಪತ್ತೋ ರೂಪಾಯಿ ಕೊಟ್ಟು ಜನ ಅವರ ದಾರಿ ಹಿಡಿದರು. ಈಗ ನಮ್ಮ ಸರದಿ ಬಂದಿತ್ತು. ಮಾರ್ಗದರ್ಶಿಯನ್ನು ಉದ್ದೇಶಿಸಿ, "ಒಳಗೇನಿದೆ" ಎಂದು ಪ್ರಶ್ನಿಸಿದೆ. ನನ್ನ ಹೃದಯ ಬಡಿತ ಜೋರಾಗಲಾರಂಭಿಸಿತ್ತು. ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ "ನೀವೇ ನೋಡಿ" ಎಂದ ಆತ. ಹಲವಾರು ಅಡಿಗಳಷ್ಟು ಒಳಗೆ ಸುರಂಗದಂತೆ ಇದೆ, ಕತ್ತಲು, ಗೊಂದಲಕ್ಕೀಡು ಮಾಡಲು ನಾಲ್ಕು ಬಾಗಿಲುಗಳಿವೆ, ಒಬ್ಬೊಬ್ಬರೇ ಹೋದರೆ ದಾರಿ ತಪ್ಪೀತು, ಆದರೆ ನೋಡದೆ ಹೋದರೆ ಜೀವನದಲ್ಲಿ ಏನೋ ಕಳೆದುಕೊಂಡಂತೆ ಎಂದ.

"ನಾನು ಒಳಗೆ ಕಳೆದು ಹೋದರೆ!" ಭಯ ಆವರಿಸುತ್ತಾ ಧೈರ್ಯವನ್ನು ಕುಗ್ಗಿಸಲಾರಂಭಿಸಿತು. "Oxygen ಸಿಗದೆ ಉಸಿರು ಕಟ್ಟಿದರೆ!". "ಶ್ರವಣ ಬೆಳಗೊಳದ ಬಾಹುಬಲಿಯ ಎತ್ತರಕ್ಕಿಂತ ಮಿಗಿಲಾದ ದೂರವನ್ನು ನೆಲದಡಿಯಲ್ಲಿ ಕ್ರಮಿಸಬೇಕೇ?" phobia... ತನ್ನ ಕೆಟ್ಟ ಹಸ್ತ ಚಾಚಿ ನನ್ನನ್ನು ಎಳೆಯಲಾರಂಭಿಸಿತ್ತು. ಅಮ್ಮನ ನೆನಪಾಯಿತು. ಜೀವನದ ಕಡೆಯ ಕ್ಷಣಗಳು ಇವಾದರೆ ಅಮ್ಮನ ಬಳಿ ಕೊನೆಯ ಮಾತು ಆಡುತ್ತೇನೆ ಎಂದು ಫೋನ್ ಮಾಡಿದೆ. "ಅಮ್ಮಾ ಚಂದ್ರವಳ್ಳಿ ಗುಹೆಯೊಳಗೆ ಹೋಗುತ್ತಿದ್ದೇವೆ. ಬಂದ ಮೇಲೆ ಮಾತಾಡುತ್ತೇನೆ. ಅಪ್ಪ ಇದ್ದಾರಲ್ಲ?" ಎಂದು ಹೇಳಿ ಪೋನ್ ಇಟ್ಟೆ. ಧೈರ್ಯ ಬಂತು. ಗುಹೆಯೊಳಗೆ ಹೊರಟೆ. ಒಂದು ಹೆಜ್ಜೆ, ಎರಡು ಹೆಜ್ಜೆ, ಮೂರು.... "ಅಯ್ಯೋ ಉಸಿರು ಕಟ್ಟುತ್ತಿದೆ. ದಾರಿ ಕಾಣುತ್ತಿಲ್ಲ"... ಕೈ ಕಾಲು ನಡುಗಿ, Rodies, Khatron ke khiladi ಮರೆತು ಹೋಗಿ ಸತ್ತೆನೋ ಕೆಟ್ಟೆನೋ ಎಂದು "ನೀವೆಲ್ಲ ನೋಡಿ ಬನ್ನಿ, ನಾನು ಇಲ್ಲೇ ಕಾಯುತ್ತೇನೆ" ಎಂದು ಹೊರಗೋಡಿದೆ. ಆ ಕತ್ತಲ ಗುಹೆಗಿಂತ ಹೊರಗೆ ಒಂಟಿಯಾಗಿ ಕಾಯುವುದರಲ್ಲಿ ಭಯ ಕಡಿಮೆ ಎನಿಸಿತ್ತು ನನಗೆ!

ನನ್ನ family ಅರ್ಧ ಗಂಟೆಯಲ್ಲಿ ಗುಹೆಯೊಳಗಿಂದ ಮತ್ತೆ ಪ್ರತ್ಯಕ್ಷವಾಯಿತು. ನಾನು ಪಕ್ಕದೂರಿನಿಂದ D.Ed. ಪರೀಕ್ಷೆ ಬರೆಯಲು ಬಂದಿದ್ದ ಹುಡುಗಿಯರೊಡನೆ ಆಗಷ್ಟೇ ಹರಟಲಾರಂಭಿಸಿದ್ದೆ. ಒಳಗೇನಿದೆಯೆಂದು ತಿಳಿಯಲು ನಾವೆಲ್ಲರೂ ಉತ್ಸುಕರಾಗಿದ್ದೆವು. "ಒಳಗೆ ಮಲಗುವ ಕೋಣೆ, ಸ್ನಾನದ ಕೋಣೆ, ಗುಪ್ತ ಸಮಾಲೋಚನೆ ಕೊಠಡಿ ಇತ್ಯಾದಿಗಳಿವೆ, ಉಸಿರಾಟಕ್ಕೆ ಗಾಳಿಗಾಗಿ ಮೇಲಿನಿಂದ ಬೇರೊಂದು ಸುರಂಗ ಮಾಡಲಾಗಿದೆ" ಎಂದೆಲ್ಲ ಹೇಳಿದಾಗ ನನ್ನ ಕಲ್ಪನೆಗೆ ಮೀರಿದ್ದು ಎಂದು ಸುಮ್ಮನಾದೆ. (ಮುಂದೆ ನಾನು YouTube ನಲ್ಲಿ ಯಾರೋ upload ಮಾಡಿದ್ದ camcorder ನಲ್ಲಿ ಚಿತ್ರೀಕರಿಸಿದ video ನೋಡಿ ಗುಹೆಯ ಕಲ್ಪನೆ ಮಾಡಿದೆನೆನ್ನಿ.) D.Ed. ಹುಡುಗಿಯರು ಭಯ, ಕಾತರಗಳಿಂದ ಗುಹೆಯೊಳಗೆ ಹೋಗಲನುವಾದರು. ನಾವು ಮುರುಗ ಮಠದತ್ತ ನಮ್ಮ ಪ್ರಯಾಣ ಮುಂದುವರಿಸಿದೆವು.

ಮುರುಗಮಠ ಚಿತ್ರದುರ್ಗ ಪೇಟೆಯಿಂದ ಸ್ವಲ್ಪ ಹೊರಗಿದೆ. ಅಲ್ಲಿ ಇರುವುದು ಮುರುಗರಾಜೇಂದ್ರ ಸಾ್ವಮೀಜಿಯವರ ಜೀವ ಸಮಾಧಿ. ಹೊರಗೆ ವಿಶಾಲವಾದ ಉದ್ಯಾನ ಮತ್ತು ಕೆಲವು ಪ್ರಾಣಿಗಳ ಸಂಗ್ರಹಾಲಯ. ಬಂಡೆಗಳ ಹಿನ್ನೆಲೆಯಲ್ಲಿ ಆ ಉದ್ಯಾನ ಸುಂದರವಾಗಿ ಕಂಡು ಮುಸ್ಸಂಜೆಯ ವಿಹಾರಕ್ಕೆ ಸೂಕ್ತ ಸ್ಥಳ ಎನಿಸಿತು ನನಗೆ. ಜಿಂಕೆ, ಬಾತುಕೋಳಿ, ಎಮು ಇತ್ಯಾದಿಗಳ ಫೋಟೋ ತೆಗೆಯುತ್ತಾ ಅಲ್ಲೇ ಸುತ್ತಾಡತೊಡಗಿದೆ. ಮಠದ ಒಂದು ಪಾರ್ಶ್ವದಲ್ಲಿ renovation ಕೆಲಸ ನಡೆಯುತ್ತಿತ್ತು. ಅಲ್ಲಿ ಕೆಲವು ರಾಜರ ಕಾಲದ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರೂ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಮಠದಲ್ಲಿ ಮಧ್ಯಾಹ್ನ ರಾಗಿಮುದ್ದೆ ಊಟ ಸಿಗುವುದೆಂದು ಗೊತ್ತಾಯಿತು. ನನ್ನ ಅತ್ತೆಗೆ ಅಲ್ಲಿ ಊಟಮಾಡುವ ಮನಸ್ಸಿದ್ದರೂ ಬೇಗನೆ ಮನೆಗೆ ಮರಳಬೇಕಾದ ಅನಿವಾರ್ಯತೆ ಇದ್ದುದರಿಂದ ಆ ಯೋಚನೆಯನ್ನು ಕೈಬಿಡಬೇಕಾಯಿತು.

ಮಠದತ್ತ ಹೊರಟಾಗಲೇ Qualisನ ಹೊಸದಾಗಿ ಕೂರಿಸಿದ್ದ stepney ವಿಚಿತ್ರ ಶಬ್ದ ಮಾಡಹತ್ತಿತ್ತು. Driver ಅದನ್ನು ತಾತ್ಕಾಲಿಕವಾಗಿ ಸರಿಪಡಿಸಿದ್ದರೂ ಬೇಗನೆ ಮರಳುವುದು ಉತ್ತಮ ಎನ್ನುತ್ತಿದ್ದ. ನಾವು ಅನಿವಾರ್ಯವಾಗಿ ಹೋಟೆಲಿಗೆ ಹಿಂತಿರುಗಬೇಕಾಯಿತು. ಮಧ್ಯಾಹ್ನದ ಊಟ ಮುಗಿಸಿ, ರೂಮ್ ಖಾಲಿ ಮಾಡಿ ಹೊರಟಾಗ ನಾನು ಹೇಳಿದೆ "ಈಗ ವಾಣಿವಿಲಾಸ dam". ನನ್ನ ಅತ್ತಿಗೆ ಹೇಳಿದರು "ಆಲು ರಾಮೇಶ್ವರ!".

ಸರಿ "ಆಲು ರಾಮೇಶ್ವರ" ನೋಡಿ ಮತ್ತೆ ವಾಣಿವಿಲಾಸ dam ನೋಡಿ ಮೈಸೂರಿಗೆ ಹೋಗುವುದು ಎಂದು ನಿರ್ಧರಿಸಿಯಾಯಿತು. ದಾರಿಹೋಕರೊಬ್ಬರ ಬಳಿ ದಾರಿ ಕೇಳಲು ವಾಹನ ನಿಲ್ಲಿಸಿದೆವು. ಅವರು ನಾವು ಹೋಗಬೇಕಿದ್ದ ಎರಡು ಸ್ಥಳಗಳು ವಿರುದ್ಧ ದಿಕ್ಕಿನಲ್ಲಿವೆ ಎಂದೂ ಅರ್ಧದಿನದಲ್ಲಿ ಎರಡೂ ಜಾಗಗಳನ್ನು ನೋಡಿ ಮೈಸೂರಿಗೆ ಮರಳುವುದು ಅಸಾಧ್ಯವೆಂದೂ ಹೇಳಲಾಗಿ ನಮ್ಮನ್ನು ಪೇಚಿಗೆ ಸಿಲುಕಿಸಿದರು. ಕೊನೆಗೆ ವಾಣಿವಿಲಾಸವನ್ನು ಹಿಂದಿಕ್ಕಿ "ಆಲು ರಾಮೇಶ್ವರ" ಜಯಿಸಿತು. ನಾನು ಬೇಸರದಿಂದಲೇ ಒಪ್ಪಿಕೊಂಡೆ. "ಆಲು ರಾಮೇಶ್ವರ" ಜಯಿಸಲು ಕಾರಣ ಚಿತ್ರದುರ್ಗ ಕೋಟೆ ತೋರಿಸಿದ guide ನ ಉತ್ಪ್ರೇಕ್ಷೆ.

ಕೋಟೆ ತೋರಿಸಿದ guide ನ ಬಳಿ ನೋಡಲರ್ಹ ಸ್ಥಳಗಳು ಯಾವುವೆಂದು ಕೇಳಿದಾಗ ಆತ "ಒಲಲ್ಕೆರೆ" ರಸ್ತೆಯಲ್ಲಿ "ಆಲು ರಾಮೇಶ್ವರ" ಎಂಬ ಜಾಗವಿದೆಯೆಂದೂ ಅಲ್ಲಿರುವ ದೇವಸ್ಥಾನದ ಕೆರೆಯಲ್ಲಿ ಬೇಕಾದುದನ್ನು ಕೇಳಿಕೊಂಡು ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಸುವುದಾದರೆ ನೀರಿನಿಂದ ಮಂಗಳ ದ್ರವ್ಯಗಳು - ತೆಂಗಿನ ಕಾಯಿ, ಹೂವು ಇತ್ಯಾದಿ - ಮೇಲೆ ಬರುತ್ತವೆ, ಇಲ್ಲವಾದರೆ ಕಸ ಕಡ್ಡಿ, ಹಾವು, ಚೇಳಿನಂತಹ ಅಮಂಗಳಕಾರಿ ವಸ್ತುಗಳು ಮೇಲೇಳುತ್ತವೆಯೆಂದೂ ವಿವರಿಸಿದ್ದ. ಆತನ ವಿವರಣೆಗೆ ನಮ್ಮೆಲ್ಲರ ಕಲ್ಪನೆಗೆ ರಕ್ಕೆ ಪುಕ್ಕ ಬಂದು ಮನಸ್ಸಿನಲ್ಲಿ ಆ ಜಾಗದ ಬಗ್ಗೆ ಬಹು ದೊಡ್ಡ ಚಿತ್ರಣ ತಯಾರಾಗಿತ್ತು. ನನ್ನ ಅತ್ತಿಗೆ ಅಲ್ಲಿ ಕೇಳಿಕೊಳ್ಳಲು ಮನದಲ್ಲೇ ಬೇಡಿಕೆಯನ್ನು ಸಿದ್ಧಮಾಡಿದಂತಿತ್ತು.

Qualisನಲ್ಲಿ ಮುಂದುವರಿಯುತ್ತಿದ್ದಂತೆ ನಾವು ಹೋಗಬೇಕಿದ್ದ "ಒಲಲ್ಕೆರೆ" ರಸ್ತೆಯಲ್ಲಿನ "ಆಲು ರಾಮೇಶ್ವರ", ಹೊಳಲ್ಕೆರೆ ರಸ್ತೆಯಲ್ಲಿನ ಹಾಲು ರಾಮೇಶ್ವರ ಎಂದು ತಿಳಿಯಿತು. ಚಿತ್ರದುರ್ಗದಿಂದ ಶಿವಗಂಗಾ ದಾಟಿ ಹೊಸದುರ್ಗ ಹೋಗುವ ಮಾರ್ಗದಲ್ಲಿ ಹಾಲು ರಾಮೇಶ್ವರ ಸಿಗುತ್ತದೆ. guide ನ ವಿವರಣೆ ಕೇಳಿ, ಏನೇನೋ ಕಲ್ಪಿಸಿಕೊಂಡು ಹೋದ ನಮಗೆ ಹಾಲು ರಾಮೇಶ್ವರ ನಿರಾಸೆಯನ್ನುಂಟುಮಾಡಿದ್ದಂತೂ ನಿಜ. ಮಧ್ಯಾಹ್ನದ ಬಿಸಿಲಲ್ಲಿ ಹಾಲು ರಾಮೇಶ್ವರ ದೇವಸ್ಥಾನ ಜನ ಜಂಗುಳಿಯಿಂದ ತುಂಬಿತ್ತು. ಇಷ್ಟಾರ್ಥ ಪೂರ್ತಿಯನ್ನು ಬಿಂಬಿಸುವ ಕೆರೆ ಬಲು ಚಿಕ್ಕದಾಗಿದ್ದು ನಮಗೆ ಗುರುತಿಸಲು ಕಷ್ಟವಾಯಿತು. ಅಲ್ಲಿ "ಚೀಟಿ ಮಾಡಿಸಿಕೊಂಡು ಬಂದು ಪೂಜೆ ಮಾಡಿ, ಕೆರೆಯಿಂದ ಪ್ರಸಾದ ಬರುತ್ತದೆ" ಎಂದು ಹೇಳಿದರಷ್ಟೇ ವಿನಹ ಹಾವು, ಚೇಳು ಮೇಲೇರುವ ವಿಷಯವನ್ನು ಯಾರೂ ಎತ್ತಲಿಲ್ಲ. ಆದರೆ Qualis ಸುಸ್ಥಿತಿಯಲ್ಲಿ ಇರದಿದ್ದ ಕಾರಣ ನಮಗೆ ಅಲ್ಲಿ ಜನಜಂಗುಳಿಯಲ್ಲಿ ಕಾಯಲು ಸಮಯ ಇರಲಿಲ್ಲ, ಮನಸ್ಸೂ ಬರಲಿಲ್ಲ. ಹಾಗಾಗಿ ನಾವು ದೇವರಿಗೆ ದೂರದಿಂದಲೇ ನಮಸ್ಕರಿಸಿ ಪ್ರಯಾಣ ಮುಂದುವರಿಸಿದೆವು. "ಆ guide ನ ವಿವರಣೆ ಕೇಳಿ ಇಲ್ಲಿಗೆ ಬಂದೆವು, ಇಲ್ಲದಿದ್ದರೆ ವಾಣಿ ವಿಲಾಸ ಸಾಗರ ನೋಡಿ ಹೋಗಬಹುದಿತ್ತು, ಪುನಃ ಇತ್ತ ಯಾವತ್ತು ಬರುವುದೋ?" ಎಂದು ನಾನು ಮತ್ತು ನನ್ನ ಅತ್ತಿಗೆ ದುಃಖಿಸಿದೆವು.

ಮರ ಗಿಡಗಳು ಓಡುತ್ತಿದ್ದವು. ನನ್ನ music CD ಹಾಡುಗಳನ್ನು ಬಿಡುವಿಲ್ಲದೆ play ಮಾಡುತ್ತಿತ್ತು. ಎಲ್ಲ ಒಬ್ಬೊಬ್ಬರಾಗಿ ನಿದ್ದೆ ಹೋಗಹತ್ತಿದ್ದರು. ನಾನು ಮಾತ್ರ ಹೊರಗಿನ ದೃಶ್ಯಗಳನ್ನು ಮನಸ್ಸಿನಲ್ಲಿ ಸವಿ ನೆನಪಾಗಿರಿಸಲು ಎಚ್ಚರದಿಂದಿದ್ದೆ. ಸೂರ್ಯ ಮೆಲ್ಲನೆ ಕಂತುತ್ತಿದ್ದ. ತಣ್ಣನೆ ಗಾಳಿ ಮನಸ್ಸನ್ನು ಶಾಂತಗೊಳಿಸುತ್ತಾ ದೇಹದ ದಣಿವನ್ನು ನೀಗುತ್ತಾ ಉಲ್ಲಾಸದಾಯಕವಾಗಿ ಬೀಸುತ್ತಿತ್ತು. Driver ಮತ್ತು ನನ್ನನ್ನು ಬಿಟ್ಟು ಎಲ್ಲರೂ ನಿದ್ದೆಹೋಗಿದ್ದರು. ಆಕಾಶದಲ್ಲಿ ಕತ್ತಲಿನ ಜೊತೆ ಮೋಡವೂ ಕವಿಯಲಾರಂಭಿಸಿತ್ತು. ಸ್ವಲ್ಪ ಹೊತ್ತಿನಲ್ಲಿ ಮಳೆ ಸುರಿಯಲಾರಂಭಿಸಿತು. Driver ಜಾಗ್ರತೆಯಿಂದ ವಾಹನ ನಡೆಸುತ್ತಿದ್ದಂತೆ ಕಂಡಿತು. ಸುತ್ತಲೂ ಹಬ್ಬಿದ ಕತ್ತಲು. ಕಿಟಕಿ ತೆರೆಯಲಾರದಂತೆ ಮಳೆ. ನನಗೆ ಮಾಡಲೇನೂ ಕೆಲಸವಿರಲಿಲ್ಲ. ಸುಂದರ ಪ್ರಯಾಣವೊಂದು ಕೊನೆಮುಟ್ಟಲಿತ್ತು. ಚಿತ್ರದುರ್ಗದ ಕೋಟೆಯ, ಮಾನವ ನಿರ್ಮಿತವಾದರೂ ಪ್ರಕೃತಿಯೊಂದಿಗೆ ಬೆರೆತು ಹೋದ ಸೌಂದರ್ಯವನ್ನು ನೆನಪಲ್ಲಿ ಮೂಡಿಸುತ್ತಾ ನಾನೂ ನಿದ್ದೆಗೆ ಜಾರಿದೆ.

--------------------------------------------------------------------------------------

ಚಿತ್ರದುರ್ಗ ಕೋಟೆ:


ಕೋಟೆಯ ಹೊರಗಿನ ದೃಶ್ಯ:

Thursday, October 15, 2009

Customer care ಅನುಭವ

ಈಗಷ್ಟೇ Airtel prepaid customer care ಗೆ phone ಮಾಡಿದ್ದೆ. ಕೈ ತಪ್ಪಿ ಭಾಷೆ "ಕನ್ನಡ" ಎಂದು ಆರಿಸಿದೆ. Customer care executive ಎಷ್ಟು ಸ್ಫುಟವಾಗಿ, ಸುಂದರವಾಗಿ ಕನ್ನಡ ಮಾತನಾಡಿದಳೆಂದರೆ ಇಡಲು ಮನಸ್ಸೇ ಬರಲಿಲ್ಲ. ಇನ್ನೂ ಕೇಳುತ್ತಲೇ ಇರಬೇಕೆನ್ನಿಸಿತು. ನಿಜಕ್ಕೂ Wow!