Friday, July 8, 2011

ಇಂಗ್ಲೀಷ್ ಭಾಷೆ… ಒಂದು "ಭಾಷೆ".

ಎಷ್ಟೋ ದಿನಗಳ ನಂತರ ಬರೆಯಲು ಹೊರಟದ್ದೇನೆ.
ಬೇರೆ ಬೇರೆ ಕಾರಣಗಳಿಂದ (ಮದುವೆ ಸಮಾರಂಭಗಳ ತಿರುಗಾಟ, ಅನಾರೋಗ್ಯ, ಕೆಲಸ ಮಾಡದ ಕಂಪ್ಯೂಟರ್ ಇತ್ಯಾದಿ) ಬ್ಲಾಗ್ ಬರಹಕ್ಕೆ ಸಮಯ ಹೊಂದಿಸಿಕೊಳ್ಳಲಾಗದೆ ಇಂದು ಹೇಗೋ ಹೊಂದಿಸಿಕೊಂಡಿದ್ದೇನೆ.
ಬರೆಯಲು ಅನೇಕ ವಿಷಯಗಳು ತಲೆಯಲ್ಲಿ ಮೂಡಿ ಮರೆತೂ ಹೋಗಿವೆ. ಕಂಪ್ಯೂಟರಿನೊಳಗಿದ್ದ ಬರೆಯಲರ್ಹ ವಿಷಯಗಳ ಪಟ್ಟಿ ಕಾಣೆಯಾಗಿದೆ. ಸಧ್ಯದಲ್ಲಿ ನೆನಪಿರುವುದು ಇಂಗ್ಲೀಷ್ ಭಾಷೆಯ ಬಗ್ಗೆ ಮಾತನಾಡಬೇಕೆನಿಸಿದ ವಿಷಯಗಳು.

ನಾನು ಏಳನೆ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತವಳು. ಎಂಟನೇ ತರಗತಿಯಲ್ಲಿ ಆಂಗ್ಲ ಮಾಧ್ಯಮಕ್ಕೆ ಸೇರಿದರೂ, ನಮ್ಮ ಆ ಸಣ್ಣ ಊರಲ್ಲಿ ಹೀಗೆ ಕನ್ನಡದಿಂದ ಇಂಗ್ಲೀಷ್ ಗೆ ಬದಲಿಸುವವರು ಹಲವರಿದ್ದುದರಿಂದ ಅಧ್ಯಾಪಕರು ಇಂಗ್ಲೀಷ್, ಕನ್ನಡ ಎರಡೂ ಭಾಷೆಯಲ್ಲಿ ವಿವರಿಸುತ್ತಿದ್ದರು. ಆಗ ನನ್ನ ಇಂಗ್ಲೀಷ್ ಜ್ಞಾನ ಪರೀಕ್ಷೆಗೆ ಓದಲು ಹಾಗೂ ಬರೆಯಲು ಬೇಕಾಗುವಷ್ಟೇ ಇತ್ತು. ಮಾತನಾಡಲು ಬರುತ್ತಿರಲಿಲ್ಲ.

ಪಿ.ಯು.ಸಿ.ಯಲ್ಲೂ ಕನ್ನಡದಲ್ಲೇ ಮಾತು. ಪಾಠ ಮಾತ್ರವೇ ಇಂಗ್ಲೀಷ್ ನಲ್ಲಿ ಇದ್ದುದು! ಇಂಥ ನಮೂನೆ ಬೆಳೆದವಳಿಗೆ ಎಂಜಿನೀರಿಂಗ್ ಸೇರಿದಾಗ ಪೇಚಾಟಕ್ಕಿಟ್ಟುಕೊಂಡಿತು. ಕಾಲೇಜು ದಕ್ಷಿಣ ಕನ್ನಡದ್ದೇ ಆಗಿದ್ದರೂ ಅನೇಕರು ಕನ್ನಡ ಬರದವರೂ, ಕನ್ನಡ ಬರದಂತೆ ನಟಿಸುವವರೂ ಅಲ್ಲಿದ್ದರು. ಅದಲ್ಲದೆ ಮಲಯಾಳ ಮಾತನಾಡುತ್ತಿದ್ದ ನನ್ನ ರೂಂ ಮೇಟ್ ಜೊತೆ ಇಂಗ್ಲೀಷ್ ಅಲ್ಲದೆ ಬೇರೇನೂ ಭಾಷೆ ಮಾತನಾಡುವುದು ಸಾಧ್ಯವಿರಲಿಲ್ಲ. ಅವಳೊಡನೆ ಹೇಗೋ ಕಷ್ಟಪಟ್ಟು ಮಾತನಾಡುತ್ತಾ ನಿಧಾನಕ್ಕೆ ಭಾಷೆಯ ಮೇಲೆ ಹಿಡಿತ ಸಿಗಲ;ಾರಂಭಿಸಿತು. ಆದರೆ ಇತರೆ ಓದುವಿಕೆಯು ಕನ್ನಡದಲ್ಲೇ ಇದ್ದಕಾರಣ ಶಬ್ಧಗಳು ನಾಲಿಗೆ ಮೇಲೆ ಬೇಕಾದಂತೆ ಕುಣಿಯುತ್ತಿರಲಿಲ್ಲ. ಆದರೂ ಮಾತನಾಡಲು ಏನೂ ತೊಂದರೆಯಾಗಲಿಲ್ಲ.

ವರುಷಗಳ ನಂತರ ಮದುವೆಯಾಯಿತು. ನನ್ನ ಯಜಮಾನರು ಮರಾಠಿ ಮಾಧ್ಯಮದಲ್ಲಿ ಕಲಿತವರು! ಅವರಿಗೆ ಓದುವ ಹವ್ಯಾಸವೂ ಇಲ್ಲ. ಅವರ ಇಂಗ್ಲೀಷ್ ಕೂಡಾ ಒಮ್ಮೊಮ್ಮೆ ತಡವರಿಸುತ್ತಿತ್ತು. ಕೆಲವು ಕಡೆ ವ್ಯಾಕರಣ ತಪ್ಪುತ್ತಿತ್ತು. ನನಗೆ ಅದನ್ನು ಸರಿಪಡಿಸಬೇಕೆಂದು ಬಲವಾಗಿ ಅನಿಸಿತು. ಮನೆಗೆ ಇಂಗ್ಲೀಷ್ ಪೇಪರ್ ತರಿಸಿ ಓದಲು ಹೇಳಿದೆ. ಓದುವ ಹವ್ಯಾಸ ಇಲ್ಲದಿದ್ದರೂ ಅದು ಓದು, ಇದು ಓದು ಎಂದು ಕೊಡತೊಡಗಿದೆ. ಅದು ಅವರಿಗೆ ಅಷ್ಟೊಂದು ಇಷ್ಟವಾಗುತ್ತಿದ್ದಂದೆ ಕಾಣಲಿಲ್ಲ.

ಮತ್ತೊಂದು ದಿನ ಆಫೀಸಿನಲ್ಲಿ ಹೊರ ರಾಜ್ಯದವರೊಡನೆ ಮಾತನಾಡುವಾಗ ನನ್ನ ದೃಷ್ಟಿಕೋನವೇ ಬದಲಾಗುವಂಥ ಸಂದರ್ಭ ಬಂತು. ಆಫೀಸಿನಲ್ಲಿ ಕನ್ನಡಿಗರಲ್ಲದವರೊಬ್ಬರು ಕನ್ನಡದ ಒಂದೆರಡು ಶಬ್ದಗಳನ್ನು ವಾಕ್ಯಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರು. ನನಗೆ ಇದನ್ನು ಕಂಡು ಬಹಳ ಖುಷಿಯಾಗಿ ಅವರಿಗೆ ವಾಕ್ಯ ಪೂರ್ಣ ಮಾಡಲು ಹೇಳಿಕೊಟ್ಟೆ. ತಪ್ಪಿದ್ದರೆ ತೊಂದರೆಯಿಲ್ಲ, ನಮ್ಮ ಭಾಷೆ ಕಲಿಯಲು ಯತ್ನಿಸಿದ್ದಾರೆ ಎಂದು ಸಂತೋಷಗೊಂಡು ಇನ್ನಷ್ಟು ಪ್ರೋತ್ಸಾಹಿಸಿದೆ. ಆಗ "ನಮ್ಮ ಭಾಷೆ ಅರಿಯದವರು ಅದನ್ನು ಕಲಿತು ತೊದಲಿದರೂ ನಮಗೆ ಇಷ್ಟವಾಗುತ್ತದೆ, ಹೆಮ್ಮೆಯೆನಿಸುತ್ತದೆ, ಆದರೆ ಇಂಗ್ಲೀಷ್ ಭಾಷೆಯಲ್ಲಿ ತಡವರಿಸುವವರನ್ನು ಕಂಡರೆ ಹಾಗೇಕೆ ಅನ್ನಿಸುವುದಿಲ್ಲ" ಎಂದು ಆಶ್ಚರ್ಯ ಪಟ್ಟೆ.

ನಾನು ಅನೇಕರನ್ನು ನೋಡಿದ್ದೇನೆ. ಇಂಗ್ಲೀಷ್ ಮಾತನಾಡಲು ಬರುವವರು ಇಂಗ್ಲೀಷ್ ಬಾರದವರನ್ನು ಗೇಲಿ ಮಾಡುವುದನ್ನು ಕಂಡಿದ್ದೇನೆ. ಅಲ್ಲದೆ ನನ್ನ ಸಹಪಾಠಿಗಳಲ್ಲಿ ಹಲವರು ಕನ್ನಡ ಬರುತ್ತಿದ್ದರೂ "I don't know Kannada" ಎಂದು ಹೆಮ್ಮೆಯಿಂದ ಹೇಳುವುದನ್ನು ಕೇಳಿದ್ದೇನೆ. ಅಪರಿಚಿತರಲ್ಲಿ ಕನ್ನಡದಲ್ಲಿ ದಾರಿಕೇಳಿದಾಗ, ಅಂಗಡಿಗಳಲ್ಲಿ ಸಾಮಾನು ವಿಚಾರಿಸಿದಾಗ ಇಂಗ್ಲೀಷ್ ಮಾತನಾಡಲು ಬರದಿದ್ದರೂ ಕಷ್ಟ ಪಟ್ಟು ಏನೇನೋ ಉತ್ತರ ಕೊಡುವುದನ್ನು ನೋಡಿದ್ದೇನೆ. ನಾನೇ ಇಂಗ್ಲೀಷ್ ಮಾಧ್ಯಮಕ್ಕೆ ಸೇರಿದಾಗ ಹಲವು ಮಕ್ಕಳು ಇಂಗ್ಲೀಷ್ ಮಾತನಾಡುವುದನ್ನು ನೋಡಿ ಕೀಳರಿಮೆಗೊಳಗಾಗಿದ್ದೇನೆ. ಈಗ ನೆನಪಿಸಿಕೊಂಡರೆ ಅಂದು ಹೆಚ್ಚಿನ ಮಕ್ಕಳು ಕನ್ನಡವನ್ನು ನೇರ ಇಂಗ್ಲೀಷ್ ಗೆ ತರ್ಜುಮೆ ಮಾಡಿ ಮಾತನಾಡಿಕೊಳ್ಳುತ್ತಿದ್ದುದು ಎಂದು ಗೊತ್ತಾಗಿ ನಗು ಬರುತ್ತದೆ. ಕೇವಲ ಇಂಗ್ಲೀಷ್ ಗೆ ಹೀಗೇಕೆ ಎಂದು ಬಹಳ ವಿಚಿತ್ರವೆನಿಸುತ್ತದೆ.

ಬಹುಶಃ ನಾವು ಇಂಗ್ಲೀಷ್ ಅನ್ನು ಒಂದು ಭಾಷೆಯ ರೂಪದಲ್ಲಿ ನೋಡುತ್ತಲೇ ಇಲ್ಲ. ಅದರ ಜೊತೆ ನಮ್ಮ prestige, pride ಅನ್ನು ಅಂಟಿಸಿಕೊಳ್ಳುತ್ತೇವೆ. ಯಾವುದೇ ರಾಜ್ಯದವರಾಗಲೀ ನಾವು ಅವರ ಭಾಷೆ ಮಾತನಾಡಲು ಯತ್ನಿಸಿದರೆ ಸಂತೋಷ ಪಡುತ್ತಾರೆ. ಇದನು್ನ ಭಾಷಾಭಿಮಾನ ಎನ್ನೋಣವೇ? ಹಾಗಾದರೆ ಇಂಗ್ಲೀಷ್ ಬಗ್ಗೆ ಯಾರಿಗೂ ಅಭಿಮಾನವೇ ಇಲ್ಲ ಎಂದಹಾಗಾಯಿತಲ್ಲ! ಇಂಗ್ಲೀಷ್ ಅನ್ನು ಇತರ ಭಾಷೆಗಳಂತೆ ಒಂದು communication ನ ಮಾಧ್ಯಮವಾಗಿ ನೋಡಿದರೆ ಏನೂ ಸಮಸ್ಯೆಯೇ ಇರಲಿಕ್ಕಿಲ್ಲ ಅಲ್ಲವೇ?

ನನ್ನ ಸಹೋದ್ಯೋಗಿಯ ಆ ಸಣ್ಣ ಪ್ರಯತ್ನ ಇಂಗ್ಲೀಷ್ ಭಾಷೆಯನ್ನು ನೋಡುವ ದೃಷ್ಟಿಯನ್ನೇ ಬದಲಿಸಿತು. ಈಗ ನಾನು ಯಜಮಾನರ ಇಂಗ್ಲೀಷ್ ಭಾಷಾಜ್ಞಾನದ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ದಿನವೂ ಪೇಪರ್ ಓದುವ ಅಭ್ಯಾಸ ಅವರಿಗೆ ಹಿಡಿದಿರುವುದರಿಂದ ಶಬ್ದ ಭಂಡಾರವೂ ನಿಧಾನಕ್ಕೆ ಉತ್ತಮಗೊಳ್ಳುತ್ತದೆ. ನಾವು ಹೇಳಿದ್ದು ಎದುರಿನ ವ್ಯಕ್ತಿಗೆ ಸರಿಯಾಗಿ ಅರ್ಥವಾಗುತ್ತಿದ್ದರೆ ಅದರಲ್ಲಿ ಇನ್ನೇನು ತೊಂದರೆಯಿದೆ? ಈಗ ಇಂಗ್ಲೀಷ್ ನನಗೆ ಕೇವಲ ಒಂದು ಭಾಷೆ. ಹೊಸ ಶಬ್ದಗಳನ್ನು ಕಲಿಯುತ್ತೇನೆ, ವ್ಯಾಕರಣ ಸರಿಪಡಿಸಿಕೊಳ್ಳುತ್ತೇನೆ, ಇತರ ಭಾಷೆಗಳಂತೆ ಪ್ರೀತಿಸುತ್ತೇನೆ (ಕನ್ನಡದಷ್ಟು ಅಲ್ಲ) ಮತ್ತು ಯಾವತ್ತಾದರೂ ತಪ್ಪುಗಳಾದರೆ ಕೀಳರಿಮೆ ಹಚ್ಚಿಕೊಳ್ಳುವುದಿಲ್ಲ :-)
-

Monday, April 11, 2011

ನನಸಾಗದ ಚಾರಣದ ಕನಸು (ಅಂತರಗಂಗೆ)

ಬೆಟ್ಟ ಹತ್ತುವ ಹುಚ್ಚು ಒಮ್ಮೆ ಹಿಡಿದರೆ ಮತ್ತೆ ಬಿಡುವುದು ಕಷ್ಟ ಎಂದು ನನ್ನ ಅನಿಸಿಕೆ. ಚಿಕ್ಕಂದಿನಲ್ಲಿ ಅಜ್ಜನ ಮನೆಯ ಬಳಿ ಇದ್ದ ಗುಡ್ಡಕ್ಕೆ ಏರಿ ಎತ್ತರದಿಂದ ಪುಟಾಣಿ ಬಸ್ ಗಳನ್ನು, ಪುಟಾಣಿ ಮನೆಗಳನ್ನು ಮತ್ತು ನೂರು ಕಿಲೋಮೀಟರು ದೂರದ ಸಮುದ್ರವನ್ನು ನೋಡುತ್ತಿದ್ದಾಗಲೇ ಗುಡ್ಡ ಹತ್ತುವ ಹುಚ್ಚು ಹಿಡಿದಿತ್ತು. ಅಜ್ಜನ ಮನೆಯಲ್ಲಿ ಚಿಕ್ಕಮ್ಮ-ದೊಡ್ಡಮ್ಮನ ಮಕ್ಕಳು ಸೇರಿದಾಗೆಲ್ಲ ಒಟ್ಟಾಗಿ ಹರಳುಕಲ್ಲುಗಳ ಗುಡ್ಡಕ್ಕೆ ಕಾಲು-ಕೈ ಉಪಯೋಗಿಸಿ ಜಾರುತ್ತಾ ಏರುತ್ತಿದ್ದ ನೆನಪು ಇನ್ನೂ ಹಸಿರು. ಬೆಳೆಯುತ್ತಾ ಹೋದಂತೆ ಅಜ್ಜನ ಮನೆಯಲ್ಲಿ cousins ಜೊತೆ ಸೇರುವುದು ಕಮ್ಮಿಯಾಯಿತು. ಬೆಟ್ಟ ಹತ್ತುವ ಅವಕಾಶಗಳೂ ಕಡಿಮೆಯಾದುವು. ಅಲ್ಲದೆ ಸಮಾನ ಆಸಕ್ತಿ ಹೊಂದಿದವರೂ ಸಿಗದಾದರು.

ವರುಷಗಳ ನಂತರ ಚಿತ್ರದುರ್ಗದ ಕಲ್ಲುಗಳಲ್ಲಿ ಅಲೆದಾಗ ಬೆಟ್ಟ ಹತ್ತುವ ಹುಚ್ಚು ಪುನಃ ಹತ್ತಲಾರಂಭಿಸಿತು. ಹಾಸನದ ಬಳಿ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಪುಟ್ಟ ಬಂಡೆಯನ್ನು ಹತ್ತಿ ಮೇಲಿಂದ ಕೆಳ ನೋಡಿದಾಗ ಹುಚ್ಚು ಇನ್ನಷ್ಟು ಹೆಚ್ಚಿತು. ಶಿವಗಂಗೆಯ ಚಾರಣವಂತೂ ಮರೆಯಲಾಗದ ಅನುಭವ ಎನಿಸಿತು. ಅದೇ ಗುಂಗಿನಲ್ಲಿ browsing ಮಾಡುತ್ತಾ ಅಂತರಗಂಗೆಗೆ ಹೋಗಿ ಬೆಟ್ಟ ಹತ್ತುವ ಯೋಜನೆ ಹಾಕಿಯೇ ಬಿಟ್ಟೆ.

ಕೋಲಾರದತ್ತ...


ಶನಿವಾರ 26 ಫೆಬ್ರವರಿಯಂದು ನಾವಿಬ್ಬರು ಕೋಲಾರಕ್ಕೆ ಹೊರಟೆವು. ಶುಕ್ರವಾರ ರಾತ್ರಿವರೆಗೆ ಎಲ್ಲಿಗೆ ಹೋಗುವುದು ಎಂಬ ನಿರ್ಧಾರವೇ ಆಗಿರಲಿಲ್ಲ. ಕೊನೆಗೆ ಅಂತರಗಂಗೆ ಎಂದು ನಿರ್ಧರಿಸಿ ಹೊರಟಿದ್ದೆವು. ಸುಮಾರು ಎಂಭತ್ತು ಕಿಲೋಮೀಟರು ಇದ್ದ ಅಂತರಗಂಗೆಗೆ ನಾವು ತಡವಾಗಿ ಹೊರಟಕಾರಣ ತಲುಪಿದಾಗ ಮಧ್ಯಾಹ್ನವಾಗಿತ್ತು. ದ್ವಾರದ ಬಳಿ ಒಂದೆರಡು ಗೂಡಂಗಡಿಗಳನ್ನು ಬಿಟ್ಟರೆ ಬೇರೆ ಯಾವುದೇ ಜನಸಂಚಾರ ಇದ್ದಂತೆ ಕಾಣಲಿಲ್ಲ. ದ್ವಾರದಿಂದ ಸುಮಾರು 200 ಮೀಟರ್ ನಡೆದಾಗ ಅಂತರಗಂಗೆಯ ಶಿವ ದೇವಸ್ಥಾನ ಕಂಡಿತು. ದಾರಿಯುದ್ದಕ್ಕೂ ಮಂಗಗಳ ಹಿಂಡು ನಮ್ಮ ಕೈಯಲ್ಲಿ ತಿನಿಸುಗಳಿವೆಯೇ ಎಂದು ನೋಡುವುದರಲ್ಲಿ ಮಗ್ನವಾಗಿತ್ತು. ಶಿವ ದೇವಸ್ಥಾನದ ಪಕ್ಕ ಬಂಡೆಯೊಳಗಿಂದ ಸಿಹಿನೀರಿನ ತೊರೆ ಚಿಮ್ಮಿ ಬರುತ್ತಿತ್ತು. ಅದರ ಕೆಳಗೆ ಕೆಲವರು ಸ್ನಾನ ಮಾಡುತ್ತಿದ್ದರು. ಹಲವು ಮಕ್ಕಳು ಅದರಿಂದ ಕ್ಯಾನುಗಳಲ್ಲಿ ನೀರುತುಂಬಿಕೊಳ್ಳುತ್ತಿದ್ದರು. ಆ ನೀರು ಹರಿದು ಬೀಳುತ್ತಿದ್ದ ಕೊಳವು ಕಸಕಡ್ಡಿ, ಹೂ, ಪಾಚಿಗಳಿಂದ ತುಂಬಿ ನೋಡಲು ಕೆಟ್ಟದಾಗಿ ಕಾಣುತ್ತಿತ್ತು. ಅಲ್ಲದೆ ಅದರ ಅಡಿಯಲ್ಲಿ ಜನರು ಸ್ನಾನ ಮಾಡುತ್ತಿದ್ದು, ನಾವು ನೀರು ಹಿಡಿಯಲು ಹೋದರೆ ಅವರ ತಲೆಗಿಂತ ಅರ್ಧ ಅಡಿ ಮೇಲೆಯಷ್ಟೇ ಕೈಯಿಡಬೇಕಿತ್ತು. ಹಾಗಾಗಿ ನನಗೇಕೋ ನೀರು ಹಿಡಿದುಕೊಳ್ಳುವುದರಲ್ಲಿ ಅಷ್ಟಾಗಿ ಆಸಕ್ತಿ ಉಂಟಾಗಲಿಲ್ಲ.

ಅಂತರಗಂಗೆ:


ಐದು ವರ್ಷ ಹಿಂದೆ ನಮ್ಮ ಮನೆ ಮಾಲೀಕರು ಬೆಟ್ಟ ಹತ್ತಿದ್ದರೆಂದೂ, ಆಗ ಅನೇಕರು ಹತ್ತುತ್ತಿದ್ದುದಲ್ಲದೆ, ಹಲವು ಮಕ್ಕಳು ಬೆಟ್ಟದ ಮೇಲೆ ಹತ್ತಿ ಅಲ್ಲಿಂದ can ಗಳಲ್ಲಿ ನೀರು ತುಂಬಿ ಕೆಳ ತಂದು, ತೀರ್ಥವೆಂದು ಮಾರುತ್ತಿದ್ದರೆಂದೂ, ಆಮೇಲೆ ತಿಳಿಯಿತು.

ನಾವು ಬೆಟ್ಟ ಹತ್ತುವ ಉತ್ಸಾಹದಿಂದ ಎರಡು ಲೀಟರ್ ನೀರು, ಟೊಪ್ಪಿ, ಕ್ಯಾಮರಾ ಹೊತ್ತು ತಂದಿದ್ದೆವು. ಬೆಟ್ಟ ಹತ್ತುವ ಕಡೆ ಜನಸಂಚಾರವೇ ಕಾಣುತ್ತಿರಲಿಲ್ಲ. ಅಲ್ಲದೆ ಇಂಟರ್ನೆಟ್ ನಲ್ಲಿ ಒಬ್ಬರು ಅಲ್ಲಿ ಕಳ್ಳಕಾಕರು ಇರಬಹುದೆಂಬ ಎಚ್ಚರಿಕೆ ಕೊಟ್ಟಿದ್ದರಿಂದ ನನಗೆ ಸ್ವಲ್ಪ ಇರುಸು-ಮುರುಸಾಗತೊಡಗಿತು. ಅಲ್ಲಿ ಚಿಕ್ಕ ಬಾಲಕನೊಬ್ಬ ಅತಿ ಉತ್ಸಾಹದಿಂದ ಮೇಲೆ ಕರೆದೊಯ್ಯುವೆನೆಂದು ಬಂದ. ಇನ್ನೂ ಏನು ಮಾಡುವುದೆಂದು ಯೋಚಿಸುತ್ತಿರಬೇಕಾದರೆ "ಚಿರತೆಗಳಿವೆ. ಯಾತ್ರಿಕರು ಬೆಟ್ಟ ಹತ್ತುವುದನ್ನು ನಿಷೇಧಿಸಲಾಗಿದೆ - ಪೋಲೀಸ್ ಇಲಾಖೆ" ಎಂಬ ಬೋರ್ಡು ದೃಷ್ಟಿಗಪ್ಪಳಿಸಿತು. ಇನ್ನು ಇಬ್ಬರಾಗಿ ಬೆಟ್ಟ ಹತ್ತುವ ಮಾತೇ ಇರಲಿಲ್ಲ. ಅದಲ್ಲದೆ ಬೇರೆ ಯಾರೂ ಹತ್ತುತ್ತಿರುವುದು ನಮಗೆ ಕಾಣಿಸಲಿಲ್ಲ. ನನಗೆ ನಿರಾಸೆಯಾಯಿತು. ಕೃಷ್ಣನಿಗೆ mood ಹೋಗಲಾರಂಭಿಸಿ, ಸಿಟ್ಟು ಬರತೊಡಗಿತು. "ಇನ್ನೇನು ಮಾಡುವುದು ಇಲ್ಲಿ ಕೂತು? ವಾಪಸ್ ಹೋಗೋಣ" ಎಂದು ತಿರುಗಿ ನಡೆದೇ ಬಿಟ್ಟರು.

ನಾನೂ ಇನ್ನೇನೆಂದು ಯೋಚಿಸುತ್ತಾ ಹಿಂಬಾಲಿಸಿದೆ. ಅಂತರಗಂಗೆಯ ದ್ವಾರದ ಸ್ವಲ್ಪ ದೂರದಲ್ಲಿ ಒಂದು ಬೋರ್ಡು ಹಾಕಿದ್ದು, ಅದರಲ್ಲಿ ನೋಡಲರ್ಹ ತಾಣಗಳ ಹಾಗೂ ಅಂತರಗಂಗೆಯಿಂದ ಅಲ್ಲಿಗೆ ಇರುವ ದೂರದ ಪಟ್ಟಿ ಇತ್ತು. ಅದರಲ್ಲಿ ಸುಮಾರು ನಲ್ವತ್ತು ಕಿಲೋಮೀಟರು ದೂರದಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನವೂ, ಅಲ್ಲಿಂದ ಮತ್ತೆ ಹತ್ತು ಕಿಲೋಮೀಟರು ದೂರದಲ್ಲಿ ಬಂಗಾರು ತಿರುಪತಿ ಇರುವುದೂ ತಿಳಿಯಿತು. ಎಪ್ಪತ್ತು-ಎಂಭತ್ತು ಕಿಲೋಮೀಟರು ಮೇಲೆ ಪ್ರಯಾಣಿಸಿ ಬಂದು ಸುಮ್ಮನೆ ತಿರುಗಿ ಹೋಗಲು ಮನಸಿರದ ಕಾರಣ ಈ ದೇವಸ್ಥಾನಗಳನ್ನು ನೋಡುವುದೆಂದು ನಿರ್ಧರಿಸಿದೆವು.

ಯೋಜನೆಗಳು ತಲೆಕೆಳಗಾದ ಕಾರಣ ಊಟ ಮಾಡಲು ವಿಷೇಶ ಉತ್ಸಾಹವೇನೂ ಇರಲಿಲ್ಲ. ಸುಮಾರು ಮೂರು ಗಂಟೆಯ ಹೊತ್ತಿಗೆ ಕೋಟಿಲಿಂಗೇಶ್ವರ ದೇವಸ್ಥಾನ ತಲುಪಿದೆವು. ಒಳ ಹೋಗಲು ತಲಾ ಇಪ್ಪತ್ತು ರೂಪಾಯಿಯ ಟಿಕೇಟು. ಕ್ಯಾಮೆರಾಗೆ ನೂರು. ಆ ಜಾಗದಲ್ಲಿ ಹೆಚ್ಚಿನ ನಿರೀಕ್ಷೆಗಳೇನೂ ಇದ್ದಿರದ ಕಾರಣ, ಕ್ಯಾಮೆರಾಗೆ ನೂರು ರೂಪಾಯಿ ಕೊಡಲಿಚ್ಛಿಸದೆ ಕಾರೊಳಗೆ ಇಟ್ಟು ಬಂದೆ. ಅನೇಕ ಲಿಂಗಗಳನ್ನು ಸಾಲು ಸಾಲಾಗಿ ಇಟ್ಟಿರುವ ದೇವಸ್ಥಾನದ ಹೊರಭಾಗ, ನೋಡಲು ಚೆನ್ನಾಗಿದ್ದರೂ ವಿಶೇಷವಾಗಿ ಏನೂ ಇರಲಿಲ್ಲ. ನೂರು ಅಡಿ ಮೀರಿದ ಎತ್ತರದ ಲಿಂಗ ಯಾವುದೇ ಕೆತ್ತನೆ, ತಿರುವುಗಳಿಲ್ಲದೆ ತೀರಾ ಸಾಮಾನ್ಯವೆನಿಸಿತು. ನಂದಿ ವಿಗ್ರಹವೂ ಬಹಳ ಸರಳವಾಗಿದ್ದು ನಂದಿಯ ತಲೆ ಅದರ ದೇಹಕ್ಕೆ ತುಂಬಾ ಚಿಕ್ಕದಾಗಿ (disproportionate) ಆಗಿತ್ತು. ಅಲ್ಲಿ ಕ್ಯಾಮೆರಾಗೆ ನೂರು ರೂಪಾಯಿ ತೆತ್ತು ಫೋಟೋ ತೆಗೆಯುವಂಥದ್ದೇನೂ ಕಾಣಿಸಲಿಲ್ಲ. ನನಗೆ ಮೊದಲಿಂದಲೂ ಬಣ್ಣ ಬಳಿದ, ಮಾರ್ಬಲ್, ಅಥವಾ ಟೈಲ್ಸ್ ಅಂಟಿಸಿದ ದೇವಸ್ಥಾನಗಳು ಅಷ್ಟೊಂದು ಇಷ್ಟವಾಗದ ಕಾರಣ, ಕೋಟಿಲಿಂಗೇಶ್ವರ ಮೂಲ ದೇವಸ್ಥಾನ ಬಿಟ್ಟರೆ ಬೇರೇನು ಭಕ್ತಿ ತರಿಸುವಂತೆ ಅನ್ನಿಸಲಿಲ್ಲ.

ಕೋಟಿಲಿಂಗೇಶ್ವರ:


ಬಂಗಾರು ತಿರುಪತಿ:


ಅಲ್ಲಿಂದ ಹೊರಟು ಬಂಗಾರು ತಿರುಪತಿ ತಲುಪಿದಾಗ ನಾಲ್ಕು ಗಂಟೆ ಮೀರಿತ್ತು. ಅಲ್ಲಿ ವಿಷ್ಣು ಮತ್ತು ಲಕ್ಷ್ಮೀ ದೇವಸ್ಥಾನ ನೋಡಿ ಮರಳಿ ಹೊರಟೆವು. ಅಂತರಗಂಗೆ, ಕೋಟಿಲಿಂಗೇಶ್ವರ, ಬಂಗಾರು ತಿರುಪತಿ ಬಗ್ಗೆ ಬರೆದು ನಮ್ಮನ್ನು ಹೋಗಲು ಹುರಿದುಂಬಿಸಿದ ಬ್ಲಾಗುಗಳ ಬಗ್ಗೆ ಮನಸ್ಸಿನೊಳಗೇ ಅಸಮಾಧಾನವೂ ಆಶ್ಚರ್ಯವೂ ಆಗುತ್ತಿತ್ತು. ಎಂಭತ್ತು ಕಿಲೋಮೀಟರು ಪ್ರಯಾಣ ಮಾಡಿ ಹೋಗಿ ನೋಡುವಂಥದ್ದೇನೂ ಅಲ್ಲಿ ಇರಲಿಲ್ಲ. ಅಂತರಗಂಗೆಯ ಬೆಟ್ಟ ಹತ್ತುತ್ತಿದ್ದರೆ ಬೇರೆ ಮಾತು. ಅಲ್ಲಿಂದ ಬರುತ್ತಾ ಸಿಕ್ಕಿದ ಬಹಳ ಒಳ್ಳೆಯ ವಿಷಯವೆಂದರೆ ದಾರಿ ಬದಿಯ ಮೂಲಂಗಿ, ಕ್ಯಾರೇಟ್ ಹೊಲಗಳು, ಮತ್ತು ಅವುಗಳ ಬಳಿ ರಾಶಿ ಹಾಕಿ ಮಾರಲ್ಲದುತ್ತಿದ್ದ ತಾಜಾ ತರಕಾರಿಗಳು. ಅನೇಕ ವಾಹನಗಳು ದಾರಿಬದಿಯಲ್ಲಿ ನಿಲ್ಲಿಸಿ ತರಕಾರಿ ತುಂಬಿಕೊಳ್ಳುತ್ತಿದ್ದವು. ನಾನು ಕೆಲವು ಸೊಪ್ಪು, ಮೆಣಸು ಮತ್ತು ಮುಳ್ಳುಸೌತೆ ಕೊಂಡೆ. ಒಂದು ಕಿಲೋ ಮುಳ್ಳುಸೌತೆಗೆ ಹತ್ತೇ ರುಪಾಯಿ! ಮನೆಯಲ್ಲಿ ತಂದು ತಿಂದಾಗ ಇನ್ನೊಂದೆರಡು ಕಿಲೋ ತರಬಹುದಿತ್ತು ಎನಿಸಿತು. ಅಷ್ಟು ರಸಭರಿತವಾಗಿತ್ತು. ಅದೇ ಜಾಗದಲ್ಲಿ ನಾನು ಕ್ಯಾರೇಟ್ ಹಾಗೂ ಮೂಲಂಗಿಯ ಹೊಲಗಳನ್ನು ಹತ್ತಿರದಿಂದ ನೋಡಿದೆ. ಹೊಲದ ತುಂಬ ಬೆಳೆದು ನಿಂತಿದ್ದ (ಅಲ್ಲ... ಹೂತಿದ್ದ) ಕ್ಯಾರೇಟ್ ಹಾಗೂ ಮೋಲಂಗಿಗಳು ಮನಸಿಗೆ ಬಹಳ ಉಲ್ಲಾಸ ನೀಡಿದವು.

ಕ್ಯಾರೇಟ್ ಹೊಲ:


ಮೂಲಂಗಿ ಹೊಲ:


ಆನಂತರ ಅಲ್ಲಿಂದ ಹೊರಟು ಮನೆಗೆ ಮರಳಿದೆವು. ಬರುತ್ತಾ ದಾರಿಯಲ್ಲೇ ಕಾಮತ್ ಹೋಟೆಲಿನಲ್ಲಿ ತಿಂಡಿತಿಂದೆವು. ನಮ್ಮ ಈ ಪ್ರಯಾಣ ನೆನಪಿಡುವಂತಹದ್ದೇನೂ ಆಗಿರಲಿಲ್ಲ. ಫೋಟೋ ತೆಗೆಯಲು ಹೆಚ್ಚಿನ ಅವಕಾಶಗಳೂ ಇರಲಿಲ್ಲ. ಅಲ್ಲದೆ ಇದರ ಬಗ್ಗೆ ಬರೆಯುವ ಉತ್ಸಾಹವೂ ಅಷ್ಟಾಗಿ ಇರಲಿಲ್ಲ. ಆದರೂ ಯಾರಾದರೂ ಬ್ಲಾಗು ಓದುಗರು ಇಷ್ಟು ದೂರದ ಪ್ರಯಾಣದ ಯೋಜನೆ ಹಾಕಿದ್ದರೆ ಅವರಿಗೆ ಮೊದಲೇ ಸ್ವಲ್ಪ ಎಚ್ಚರಿಕೆ ಕೊಡಬೇಕೆಂದು ಅನ್ನಿಸಿ ಇದನ್ನು ಬರೆದೆ. ನಮ್ಮ ಪ್ರಯಾಣವು ಆಸಕ್ತಿದಾಯಕವಾಗುವಂತೆ ಇನ್ನೇನಾದರೂ ನೋಡಬೇಕಿತ್ತೇ ಎಂದು ನಿಮಗೆ ತಿಳಿದಿದ್ದರೆ ತಿಳಿಸಿ.

ಸಂಜೆ...


(ಇದನ್ನು ಬರೆಯಲಾರಂಭಿಸಿದ್ದು ಫೆಬ್ರವರಿ 28ರಂದು. ಇಂದು ಮುಗಿಯಿತು!)
-

Monday, February 7, 2011

"Sorry" ಮತ್ತು "Thank you"? ನಾನು ಹೇಳಲ್ಲ ಬಿಡಿ.

ಶುಕ್ರವಾರವೆಂದರೆ ಮೆಜೆಸ್ಟಿಕ್ ಹೋಗುವ ಬಸ್ ಗಳೆಲ್ಲ ಊರಿಗೆ ಹೊರಟ ಜನರು ಹಾಗೂ ಅವರ ಬ್ಯಾಗುಗಳಿಂದ ತುಂಬಿರುತ್ತವೆ. ಸೀಟು ಬಿಡಿ, ನಿಲ್ಲಲು ಜಾಗ ಸಿಕ್ಕಿದರೆ ಸಾಕು ಎಂಬ ಪರಿಸ್ಥಿತಿ ಇರುತ್ತದೆ. ಕಳೆದ ಶುಕ್ರವಾರ ತಡವಾಗಿ ಆಫೀಸ್ ಬಿಟ್ಟ ನಾನು ಇಂಥದ್ದೇ ಒಂದು ಕಿಕ್ಕಿರಿದ ವಜ್ರದಲ್ಲಿ (ವೋಲ್ವೋ ಬಸ್) ಆಫೀಸ್ ನ ಭಾರದ ಬ್ಯಾಗ್ ಹೊತ್ತು ನಿಂತು ಸಾಗಿದ್ದೆ. ಹಸಿವೆಯಿಂದ ಹೊಟ್ಟೆ ಖಾಲಿಯಾಗಿ ತೊಳಸಿದಂತಾಗುತ್ತಿತ್ತು. ಅಂತೂ ಅರ್ಧ ಗಂಟೆಯ ಒದ್ದಾಟದ ನಂತರ ಇಳಿಯುವ ಜಾಗ ಬಂತು. ಅಲ್ಲಿಂದ ಬೇರೆ ಬಸ್. ಹತ್ತು ನಿಮಿಷ ಕಾದಾಗ ಕಿಕ್ಕಿರಿದ ಬಸ್ ಬಂತು. ಮೆಜೆಸ್ಟಿಕ್ ನಿಂದ ಹೊರಬರುವ ಬಸ್ಸೂ ಹೀಗೆ ಜನರಿಂದ ತುಂಬಿರುವುದೇಕೆ ಎಂದು ಒಂದೆಡೆ ಆಶ್ಚರ್ಯವಾದರೆ, ಇನ್ನೊಂದೆಡೆ ಪುನಃ ನಿಂತೇ ಪ್ರಯಾಣಿಸಬೇಕಾದ ಕಷ್ಟವನ್ನು ಯೋಚಿಸಿ ಬೇಸರದಿಂದ ಬಸ್ ಹತ್ತಿದೆ.

ಹತ್ತು ನಿಮಿಷ ಕಳೆದಾಗ ಸೀಟು ಸಿಕ್ಕಿತು. ಪಕ್ಕದಲ್ಲಿ ಮುದುಕರೊಬ್ಬರು ಕುಳಿತಿದ್ದರು. ನಾನು ಆದಿನ ಕಷ್ಟಪಡಬೇಕೆಂಬುದು ಹಣೆಬರಹವಾಗಿತ್ತೋ ಎಂಬಂತೆ ಸ್ವಲ್ಪ ಹೊತ್ತಿನಲ್ಲೇ ಪುಟ್ಟ ಮಗುವೊಂದನ್ನು ಎತ್ತಿಕೊಂಡು ಸಭ್ಯರಂತೆ ಕಾಣುತ್ತಿದ್ದ ಹೆಂಗಸರಿಬ್ಬರು ಹತ್ತಿದರು. ಅಷ್ಟಲ್ಲದೆ "ಸೀಟು ಕೊಡ್ರೀ, ಸೀಟು ಕೊಡ್ರೀ" ಎಂದು ಆಚೆ ಈಚೆ ಬೊಬ್ಬಿಡತೊಡಗಿದರು. ಮುದುಕರನ್ನು ಏಕೆ ಏಳಿಸಬೇಕು ಎಂದು ನಾನೇ ಸೀಟು ಕೊಟ್ಟೆ. "Thanks" ಹೇಳದಿದ್ದರೆ ಪರವಾಗಿಲ್ಲ, ಆದರೆ ಆ ಹೆಂಗಸು ನನ್ನನ್ನು, ತನ್ನ ಹಕ್ಕಿನ ಸೀಟು ಕಸಿದಿರುವವಳಂತೆ ದುರುಗುಟ್ಟಿ ನೋಡಿ ಕುಳಿತಳು. ಬಸ್ ಆಮೆಯಂತೆ ಸಾಗುತ್ತಿತ್ತು. ನನಗೆ ಹಸಿವು ಜೋರಾಗಿ ತಲೆನೋಯುತ್ತಿತ್ತು. ಕಾಲು ಗಂಟೆ ಕಳೆದಿರಬೇಕು. ನನ್ನ ಪಕ್ಕದಲ್ಲಿ ಕುಳಿತಿದ್ದ ಮುದುಕರು ಎದ್ದು ಹೋದರು. ನಾನು ಆ ಸೀಟಿನಲ್ಲಿ ಕೂರಬೇಕೆನ್ನುವಷ್ಟರಲ್ಲಿ ಆ ಹೆಂಗಸು ತನ್ನೊಂದಿಗಿದ್ದ ಇನ್ನೊಬ್ಬ ಹೆಂಗಸನ್ನು ಕರೆದು ಅಲ್ಲಿ ಕೂರಿಸಿದರು! ನನಗೆ ದಿಗಿಲಾಯಿತು. ಇವರಿಗೆ ಯಾಕೆ ಸೀಟು ಕೊಡಬೇಕಿತ್ತೋ ಎಂದು ಬೇಸರವಾಯಿತು.

ಡಿಸೆಂಬರಿನಲ್ಲಿ ನಾನು ನೆಂಟರ ಮನೆಗೆ ಉಪನಯನವೊಂದಕ್ಕೆ ಹೋಗಿದ್ದೆ. ಅಲ್ಲಿ ನನ್ನ cousin ನ ನಾಲ್ಕು ವರ್ಷದ ಮಗಳು ಬಂದಿದ್ದಳು. ದಕ್ಷಿಣ ಅಮೇರಿಕಾದಲ್ಲಿ ಇರುವ ಅವಳಿಗೆ ಹಸು ಎಂದರೆ ಪಂಚಪ್ರಾಣ. ಇಡೀ ದಿನ ಹಟ್ಟಿಯಲ್ಲಿ ಹಸುಗಳನ್ನು ನೋಡುತ್ತಾ, ಅವಕ್ಕೆ ಹುಲ್ಲು ಹಾಕುತ್ತಾ ನಿಂತಿರುತ್ತಿದ್ದಳು. ನಾನು ಅವಳತ್ತ ಹೋದಾಗೆಲ್ಲ ಸ್ವಲ್ಪ ಹುಲ್ಲು ತಂದು ಕೊಡಲು ಹೇಳುತ್ತಿದ್ದಳು. ನಾನು ಪ್ರತಿ ಬಾರಿ ಹುಲ್ಲು ತೆಗೆದು ಕೊಟ್ಟಾಗಲೂ "Thank you" ಎನ್ನುತ್ತಿದ್ದಳು. ಸಂಜೆ ಆಟವಾಡುತ್ತಾ ನನ್ನ ಕೈಗೆ ಏನೋ ಕೊಟ್ಟಳು. ನಾನು ಅದನ್ನು ನೋಡುತ್ತಿರಬೇಕಾದರೆ "Say thank you" ಎಂದಳು. ಅವಳು ಕಲಿಯುತ್ತಿರುವ ಶಾಲೆಯಲ್ಲಿ ಎಷ್ಟು ಚಿಕ್ಕಂದಿನಲ್ಲೇ "Thanks" ಮತ್ತು "Sorry" ಗಳನ್ನು ಕಲಿಸುತ್ತಾರೆ ಎಂದು ತಿಳಿದು ಆಶ್ಚರ್ಯವೂ, ಸಂತೋಷವೂ ಆಯಿತು.

ಒಮ್ಮೆ ಬಸ್ ನಲ್ಲಿ conductor ಭರ್ತಿ ಮೂರು ಬಾರಿ ಕಾಲು ತುಳಿದು "ರಶ್ ಇದೆ ಅಡ್ಜಸ್ಟ ಮಾಡಿಕೊಳ್ಳಿ" ಎಂದು ನನಗೇ ಬೈದುದಿದೆ. ಬೆಂಗಳೂರಿನ ಪ್ರತಿಷ್ಠಿತ ಎನಿಸಿರುವ ಬಿಷಪ್ ಕಾಟನ್ ಶಾಲೆಯ ಮಕ್ಕಳೂ ಬಸ್ ನಲ್ಲಿ ಕಾಲು ತುಳಿದಾಗ "Sorry" ಎನ್ನುವ ಸೌಜನ್ಯ ತೋರಿಸದಿರುವುದನ್ನು ಕಂಡು ನಾನು ಬೆರಗಾಗಿದ್ದೇನೆ. ನನ್ನ ಸಹೋದ್ಯೋಗಿಯೊಬ್ಬಳು "ನಾವು ತಪ್ಪು ಮಾಡಿದ್ದರೂ ಬೇರೆಯವರಿಗೆ ತಪ್ಪಿತಸ್ಥರು ಯಾರೆಂದು ಗೊತ್ತಾಗದಿದ್ದರೆ "Sorry" ಹೇಳಿ ಸಣ್ಣವರೇಕೆ ಆಗಬೇಕು?" ಎಂದು ವಾಗ್ವಾದಕ್ಕಿಳಿದದ್ದು ನೋಡಿದ್ದೇನೆ. ಹಲವು ದೇಶಗಳಲ್ಲಿ ವಾಹನ over take ಮಾಡುವಾಗ ಬದಿಗೆ ಸರಿದ ಚಾಲಕನಿಗೆ "Thank you" ಹೇಳುವ ಕ್ರಮವಿದೆಯಂತೆ. ನಮ್ಮ ಸಂಸ್ಕೃತಿಯ ಶ್ರೇಷ್ಠತೆಯನ್ನು ಕೊಂಡಾಡುತ್ತಾ ಇತರ ಸಂಸ್ಕೃತಿಗಳನ್ನು ತುಚ್ಛವೆಂದು ಭಾವಿಸುವವರಿಗೆ ಕ್ಷಮೆ ಹಾಗೂ ಧನ್ಯವಾದಕ್ಕೆ ಹಿಂಜರಿಯುವ ಮನಸ್ಥಿತಿಯ ಬಗ್ಗೆ ಹೇಗೆ ಅನ್ನಿಸುತ್ತದೆ ಎಂದು ಕೇಳಬೇಕೆನಿಸುತ್ತದೆ. ನಾವೆಷ್ಟೇ ಸಂಸ್ಕಾರವಂತರೆಂದರೂ ಕಲಿಯಲೇ ಬೇಕಾದ ಚಿಕ್ಕ ಪುಟ್ಟ ವಿಚಾರಗಳು ಅನೇಕವಿವೆ. ಬೇರೆ ಸಂಸ್ಕೃತಿಗಳನ್ನು ನೋಡುವಾಗ ಬರೇ "ಮಕ್ಕಳು ಅಪ್ಪ ಅಮ್ಮನನ್ನು ವೃದ್ಧಾಶ್ರಮದಲ್ಲಿ ಬಿಡುತ್ತಾರೆ. ಮದುವೆಯಾದ ಕೆಲ ವರ್ಷಗಳಲ್ಲಿ ಬೇರೆೆಯಾಗುತ್ತಾರೆ" ಎಂದಷ್ಟೇ ನೋಡದೆ ಒಳ್ಳೆಯ ಅಂಶಗಳನ್ನೂ ನೋಡಬೇಕಿದೆ. ಹುಡುಕಿದರೆ ನಮ್ಮ ಸಂಸ್ಕೃತಿಯಲ್ಲೂ ಹುಳುಕು ಸಿಗದೆ ಇದ್ದೀತೇ?
-

Thursday, January 27, 2011

ಸರ್ವವೂ ಎಣ್ಣೆಮಯ

ಭಾನುವಾರವೆಂದರೆ ಅನೇಕರಿಗೆ ತಲೆಗೆ ಎಣ್ಣೆ ಹಚ್ಚಿ ಸ್ನಾನಮಾಡುವ ದಿನ. ನಾನೂ ಇದಕ್ಕೆ ಹೊರತಲ್ಲ. ಅದೇನೋ ಮಿಶ್ರ ಸೊಪ್ಪುಗಳ ಒಣಗಿಸಿ ಹುರಿದು ಕಾಯಿಸಿ ಮಾಡಿದ ಎಣ್ಣೆಯಿರಬಹುದು, ಅದೇ ಸತ್ವಗಳ ಮಾರುಕಟ್ಟೆಯಿಂದ ತಂದ ಎಣ್ಣೆಯಿರಬಹುದು ಅಥವಾ ಕೊಬ್ಬರಿ ಎಣ್ಣೆಯಿರಬಹುದು, ಲೀಟರಿನಷ್ಟು ತಲೆಗೆ ಸುರಿದು "ಫಿಂಗರ್ ಟಿಪ್ಸ್"ನಿಂದ ತಿಕ್ಕಿ, ಬಾಚಿ ಎಳೆದು ಕಟ್ಟಿ ತಣ್ಣಗಿನ ಅನುಭವ ಪಡೆಯುವುದೆಂದರೆ ಏನೋ ಖುಷಿ. ಆರೇಳು ವರ್ಷ ಹಿಂದೆ ನಾವು ಹಾಸ್ಟೆಲ್ಲಿನಲ್ಲಿದ್ದಾಗ ಶನಿವಾರ ಬಂದರೆ ಏನೋ ಸಂಭ್ರಮ. ಹೆಚ್ಚಿನವರು ಬೇರೆ ಬೇರೆ (ಸು)ವಾಸನೆಯ ಎಣ್ಣೆಗಳನ್ನು ತಲೆಗೆ ತಿಕ್ಕಿ, ದಿಂಬಿನ ಮೇಲೆ ದಿನ ಪತ್ರಿಕೆ ಹಾಸಿ, ರಾತ್ರಿ ಪೂರ್ತಿ ತಲೆ ತಂಪಾಗಿಸುತ್ತಿದ್ದರು. ಎಷ್ಟೋ ಮಂದಿ ಮಾತನಾಡುತ್ತಾ ಎಣ್ಣೆ ಸುರಿದುಕೊಂಡು ಅದು ಕಿವಿಯ ಹಿಂದೆ ತಣ್ಣನೆ ಇಳಿದಾಗ ಏನೋ ಹುಳ ಹರಿದಾಡುತ್ತಿದ್ದಂತೆ ಬೆಚ್ಚಿ ಬೊಬ್ಬಿಡುತ್ತಿದ್ದರು. ತಮ್ಮ ಎಣ್ಣೆಗಳು ಮುಗಿದಿದ್ದರೆ ಬೇರೆಯವರ ರೂಂ ಬಾಗಿಲು ತಟ್ಟಿ ಎಣ್ಣೆ ಸಾಲಕ್ಕೆ ಪಡೆಯುತ್ತಿದ್ದರು. (ಮತ್ತೆ ಆ ಪ್ರಮಾಣದಲ್ಲಿ ಎಣ್ಣೆ ಉಚಿತ ಕೊಡಲು ಸಾಧ್ಯವೇ?). ಭಾನುವಾರ ಬೆಳಗಾದರೆ ಬಚ್ಚಲಿನ ಮುಂದೆ ಬಕೇಟುಗಳ ಸಾಲು. ಬಕೇಟಿನ ಮಾಲೀಕರ ಪತ್ತೆ ಇಲ್ಲದೆ ಬೇರೊಬ್ಬರು ಒಳ ನುಗ್ಗಿದರೆ ಅಲ್ಲೊಂದು ಸಣ್ಣ ಜಗಳ ಖಾತರಿಯಾಗಿತ್ತು. ಸೌರ ಶಕ್ತಿ ನೀರಿನ ಒಲೆಯಲ್ಲಿ ಬಿಸಿನೀರು ಮುಗಿದು ವಿದ್ಯುತ್ ಹೀಟರು ಆನ್ ಮಾಡುವಂತೆ ವಾಚ್ ಮಾ್ಯನ್ ಬಳಿ ದಂಬಾಲು ಬೀಳಬೇಕಾಗುತ್ತಿತ್ತು. ಆದರೆ ಅದಕ್ಕಿಂತ ಕಷ್ಟ ಕೊನೆಯಲ್ಲಿ ಸ್ನಾನಕ್ಕೆ ಹೋಗುವುದು. ಬಚ್ಚಲೆಲ್ಲ ಎಣ್ಣೆಮಯವಾಗಿ ಕಾಲಿಟ್ಟಲ್ಲಿ ಜಾರಿಬೀಳುವ ಸಂಭವವಿತ್ತು. ಎಷ್ಟೋ ಬಾರಿ ನೆಲಕ್ಕೆ ಸೋಪಿನ ಪುಡಿ ಸಿಂಪಡಿಸಿ ಎಣ್ಣೆಯನ್ನು ಹೊರ ಸಾಗಿಸಿ ಸ್ನಾನ ಮಾಡುವ ಪರಿಸ್ಥಿತಿ ಬಂದಿತ್ತು. ಬಚ್ಚಲಿನ ನೀರಿಂದ ಎಣ್ಣೆ ಹೊರತೆಗೆಯುವ ವಿಧಾನವಿದ್ದರೆ ನೂರಾರು ಬಾಟಲಿ ತುಂಬುತ್ತಿತ್ತೇನೋ.

ಹಾಸ್ಟೆಲ್ಲಿನಲ್ಲಿದ್ದಾಗ ನನ್ನ ಪ್ರಯೋಗ ಪ್ರಿಯ ಗೆಳತಿಯೊಬ್ಬಳು ಹರಳೆಣ್ಣೆ ತಲೆಗೆ ಸುರಿದು ಗಾಢ ನಿದ್ದೆ ಮಾಡಿದ್ದು ಇಲ್ಲಿ ನೆನಪಾಗುತ್ತದೆ. ಮರುದಿನ ಹರಳೆಣ್ಣೆಯ ಅಂಟಿನಿಂದ ಕೂದಲನ್ನು ಬಿಡಿಸು ಹೋಗಿ ಒಂದು ಗಂಟೆಗೂ ಮೀರಿದ ಸುದೀರ್ಘ ಸ್ನಾನ ಮಾಡಿದ್ದು ಬೇರೆ ವಿಚಾರ.

ಎಣ್ಣೆ ತಿಕ್ಕುವುದರಲ್ಲಿ ಬ್ಯೂಟಿ ಪಾರ್ಲರುಗಳೂ ಕಮ್ಮಿ ಇಲ್ಲ. ಪುರುಷರ ಕೂದಲು ಕತ್ತರಿಸುವ ಸಲೂನುಗಳಲ್ಲಿ ಹೆಚ್ಚಾಗಿ ಕಂಡುಬರುವುದು ನವರತ್ನ ತೈಲ. ಪ್ರತಿ ಬಾರಿ ಕೂದಲು ಕತ್ತರಿಸಲು ಹೋದಾಗಲೂ ನನ್ನ ಯಜಮಾನರು ನೂರು ರೂಪಾಯಿಗೆ (ಬೆಂಗಳೂರಿನಲ್ಲಿ) ಆಯಿಲ್ ಮಸಾಜ್ ಎಂದು ತಲೆಗೆ ನವರತ್ನ ಸುರಿಸಿ ಪಟಪಟ ಹೊಡೆಸಿ, ಕುತ್ತಿಗೆ ತಿರುವಿ ಟಕ್ ಎನಿಸಿಕೊಂಡು ಎಣ್ಣೆಮಯ ಮುಖ ಹೊತ್ತು ಮನೆಗೆ ಬರುತ್ತಾರೆ. ಹೀಗೇ ಒಮ್ಮೆ ನನ್ನ ತಂದೆ ಆಯಿಲ್ ಮಸಾಜ್ ಮಾಡಿಸಿ ಕುತ್ತಿಗೆ ಟಕ್ ಎನಿಸಿದಾಗ ಅಲ್ಪಕಾಲದಿಂದ ಬಾಧಿಸಿದ ಹೆಗಲು ನೋವು ಮಾಯವಾಯಿತಂತೆ!

ಸರ್ವ ವ್ಯಾಪಿ ಎಣ್ಣೆಯ ಇನ್ನೊಂದು ರೂಪ ಬಸ್ ಗಳಲ್ಲಿ ಕಾಣಸಿಗುತ್ತದೆ. ಅದು ಬಸ್ ಗಳ ಕಿಟಕಿ ಗಾಜುಗಳ ಮೇಲೆ ಯಾವತ್ತೂ ಮೂಡಿರುವ ಎಣ್ಣೆ ವೃತ್ತಗಳು. ಕಿಟಕಿ ಗಾಜಿಗೆ ಆತು ತೂಕಡಿಸಿದವರ ತಲೆಯ ಪರಿಧಿಯ ಮೇಲೆ ಈ ಎಣ್ಣೆಯ ವೃತ್ತಗಳ ಆಕಾರ ವ್ಯತ್ಯಾಸವಾಗುತ್ತದೆ. ಆ ಸೀಟಿನಲ್ಲಿ ಕುಳಿತ ಬೇರೆ ಬೇರೆ ಜನರೂ ಅದೇ ವೃತ್ತಗಳ ಮೇಲೆ ತಮ್ಮ ತಲೆಯಿಂದ ಇನ್ನಷ್ಟು ಎಣ್ಣೆ ತುಂಬಿಸಿ ಹೋಗುತ್ತಾರೆ. ದಿನದ ಮೊದಲ ಟ್ರಿಪ್ ನಲ್ಲಿ ಹೋದರೂ ಎಣ್ಣೆ ವೃತ್ತ ಇದ್ದೇ ಇರುತ್ತದೆ. ಇವು ಹಿಂದಿನ ದಿನಗಳವು ಇರಬೇಕು ಎಂದುಕೊಂಡಿದ್ದೇನೆ. ಎಷ್ಟೋ ಬಾರಿ ಕಿಕ್ಕಿರಿದ ಬಸ್ ಗಳಲ್ಲಿ ಎಣ್ಣೆ ಹಚ್ಚಿ, ಹೂವು ಮುಡಿದ ಹೆಂಗಸರು ನಿಂತಿರುತ್ತಾರೆ. ಅವರು ನಮಗಿಂತ ಕುಳ್ಳಗಿದ್ದು ನಮ್ಮ ಪಕ್ಕವೇನಾದರೂ ನಿಂತಿದ್ದರೆ ನಮಗೂ ಎಣ್ಣೆ ಲೇಪ ಗ್ಯಾರಂಟಿ. ಅವರು ಅತ್ತಿತ್ತ ಅಲುಗುತ್ತಾ ತಲೆಯ ಎಣ್ಣೆಯನ್ನು ನಮ್ಮ ಮುಖ ಮೂತಿಗೆ, ಕಂಬಿ ಹಿಡಿದುಕೊಂಡ ಕೈಗೆ ಲೇಪಿಸುತ್ತಿದ್ದರೆ ಏನೋ ಸಂಕಟ. ಎಣ್ಣೆ, ಹೂವು (ಬೇಕಿದ್ದರೆ ಬೆವರು) ಸೇರಿ ಮಿಶ್ರ ವಾಸನೆಯೊಂದನ್ನು ಬೀರುತ್ತಿದ್ದರೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ.

ಇದೇ ಸಂದರ್ಭ ನನಗೊಂದು ಮೋಜಿನ ಸಂಗತಿ ನೆನಪಾಗುತ್ತದೆ. ಕೆಲವು ವರ್ಷಗಳ ಹಿಂದೆ ನನ್ನ ಸಂಬಂಧಿಯೊಬ್ಬರು ತಮ್ಮ ಮಗನನ್ನು ಅಂಗನವಾಡಿಗೆ ಸೇರಿಸಿದರು. ಅದು ಹಳ್ಳಿ ಪ್ರದೇಶ. ಅಲ್ಲಿಗೆ ಬರುತ್ತಿದ್ದ ಮಕ್ಕಳೆಲ್ಲಾ ತಲೆಗೆ ರಾಶಿ ಎಣ್ಣೆ ಸುರಿದುಕೊಂಡಿರುತ್ತಿದ್ದರು. ಆ ಮಕ್ಕಳು ಒಂದು ಹೊಸದಾದ ಆಟ ಕಂಡುಕೊಂಡಿದ್ದರಂತೆ. ಅಂಗಾತ ಮಲಗಿ ಕಾಲುಗಳಿಂದ ನೆಲವನ್ನು ದೂಡುತ್ತಾ ತಲೆಯ ಹಿಂಭಾಗದ ಎಣ್ಣೆಯ ಜಿಡ್ಡಿನಲ್ಲಿ ಸುಲಭವಾಗಿ ಜಾರುತ್ತಾ ಇಡೀ ತರಗತಿ ಸುತ್ತುತ್ತಿದ್ದರಂತೆ. ನಮ್ಮ ಸಂಬಂಧಿ ಅಲ್ಲಿ ಹೋದಾಗ ಈ "ಹಿಂದಲೆಯಲ್ಲಿ ಜಾರುವ" ಮಕ್ಕಳ ಹಿಂದೆ ಶಿಕ್ಷಕಿ ಬೆತ್ತ ತೋರಿಸಿ ಗದರಿಸುತ್ತಾ ಓಡಾಡುತ್ತಿದ್ದರಂತೆ. ನನಗಂತೂ ಈ ಅಂಗನವಾಡಿ ಚಪ್ಪಟೆ ತಲೆಯ ಮಕ್ಕಳನ್ನು ಸೃಷ್ಟಿಸುವ ಕೇಂದ್ರದಂತೆ ಭಾಸವಾಯಿತು.

ಎಣ್ಣೆ ಹಚ್ಚುವಿಕೆ ಬರಿಯ ತಲೆಗಷ್ಟೇ ಸೀಮಿತವಾಗಿಲ್ಲ. ಚರ್ಮದ ಕಾಂತಿಗೆ, ಯೌವನಕ್ಕೆ, ಚಳಿಗಾಲದ ಬಿರುಕಿಗೆ ಎಂದು ಮೈಗೆಲ್ಲ ಎಣ್ಣೆ ಹಚ್ಚಿಕೊಳ್ಳಬಹುದು. ದೀಪಾವಳಿ ಬಂತೆಂದರೆ ಮೈಗೆ ಎಣ್ಣೆ ತಿಕ್ಕಿಸಿಕೊಳ್ಳಲು ನೆಪ ಸಿಕ್ಕಂತಾಗುತ್ತದೆ. ಕೆಲವರು ಇಡೀ ಮೈಗೆ ಹಚ್ಚಿಕೊಳ್ಳದಿದ್ದರೂ "ಶಾಸ್ತ್ರ" ಎಂದು ಕೈ-ಕಾಲಿಗೆ ಮಾತ್ರ ಹಚ್ಚಿ ಸ್ನಾನಮಾಡುವುದಿದೆ. ನರಕಾಸುರ ಹತನಾದರೆ ನಾವೇಕೆ ಎಣ್ಣೆ ತಿಕ್ಕಿಕೊಳ್ಳಬೇಕೋ ಗೊತ್ತಿಲ್ಲ. ಇನ್ನು ಹಸುಳೆಗಳನ್ನಂತೂ ಕೇಳಲೇ ಬೇಡಿ. ದಿನವೂ ಸ್ನಾನಕ್ಕೆ ಮೊದಲು ಪರಿಣತರಿಂದ ಎಣ್ಣೆ ತಿಕ್ಕಿಸಿ ವ್ಯಾಯಾಮ ಮಾಡಿಸಿಕೊಳ್ಳುತ್ತವೆ. ಕೆಲವು ಹಸುಳೆಗಳಿಗೆ ತುಪ್ಪ, ಇನ್ನು ಕೆಲವಕ್ಕೆ ಕೊಬ್ಬರಿ ಎಣ್ಣೆ, ಶೀತ ಪ್ರಕೃತಿಗಳವರಿಗೆ ಆಲೀವ್ ಎಣ್ಣೆೆ, ಜಾನ್ಸನ್ನನ ಮಕ್ಕಳಿಗೆ ಇನ್ನೇನೋ ಎಣ್ಣೆ! (ಕೆಲವರಲ್ಲಿ ಮಗುವಿಗೆ ಯಾವ ಎಣ್ಣೆ ಹಚ್ಚುವುದೆಂದು ಎಂದು ಪ್ರಶ್ನಿಸಿದಾಗ "ನಮ್ಮದು ಜಾನ್ಸನ್ಸ್ ಬೇಬಿ" ಎಂದಿದ್ದಾರೆ).

ಕಳ್ಳರಿಗೂ ಮೈ ಪೂರ್ತಿ ಎಣ್ಣೆ ಹಚ್ಚಿಕೊಳ್ಳುವ ಅಭ್ಯಾಸವಿದೆ ಎಂದು ಇತ್ತೀಚೆಗಷ್ಟೇ ತಿಳಿಯಿತು. ಕದಿಯುತ್ತಿರುವಾಗ ಯಾರಾದರೂ ಹಿಡಿಯಲು ಬಂದರೆ ಅಕ್ಷರಶಃ "ಜಾರಿಕೊಳ್ಳಲು" ಎಣ್ಣೆಗಿಂತ ಇನ್ನೇನು ಸಹಕಾರಿಯಾದೀತು? ಹಿಂದೊಮ್ಮೆ ರೈಲಿನಲ್ಲಿದ್ದ ನನ್ನತ್ತೆಯವರ ಕೊರಳ ಸರವನ್ನು ಕಿಟಕಿ ಹೊರಗಿನಿಂದ ಎಳೆಯ ಹೊರಟಿದ್ದ ಕಳ್ಳನನ್ನು ಹಿಡಿಯಲು ಹೋದಾಗ ಎಣ್ಣೆ ಮೆತ್ತಿದ ಕೈಯಿಂದಾಗಿ ಜಾರಿಕೊಂಡನಂತೆ.

ಎಣ್ಣೆಯ ಕಾರುಭಾರು ಇಷ್ಟಕ್ಕೇ ನಿಂತಿಲ್ಲ. ಬಹಳಷ್ಟು ಜನರಿಗೆ ಎಣ್ಣೆಯಲ್ಲಿ ಕರಿದ ತಿಂಡಿಗಳೆಂದರೆ ಅದ್ಭುತ ರುಚಿಯ ತಿಂಡಿಗಳು ಎಂದರ್ಥ. ನನಗೆ ಎಣ್ಣೆ ತಿಂಡಿ ಎಂದರೆ ಅಷ್ಟಕ್ಕಷ್ಟೆ. ನಾನು ಎಣ್ಣೆ ತಿಂಡಿ ಮಾಡುವುದರಲ್ಲಿ ಬಲು ಹಿಂದೆ. ಎಷ್ಟೋ ಬಾರಿ ಎಣ್ಣೆಯಲ್ಲಿ ಕರಿಯಲು ಹೊರಟು ಏನೇನೋ ಅವಾಂತರಗಳಾಗಿ "ಇದು ನನ್ನ ಡಿಪಾರ್ಟಮೆಂಟ್ ಅಲ್ಲ" ಎಂದು ಬಿಟ್ಟು ಬಿಟ್ಟಿದ್ದೇನೆ. ಇದನ್ನು ಅರಿತ ನನ್ನ ಮಿತ್ರರು "ನೀನು ಎಷ್ಟೇ ಒಳ್ಳೆಯ ಅಡುಗೆ ಮಾಡು, ಎಣ್ಣೆಯಲ್ಲಿ ಕಾಯಿಸಲು ಬರಲಿಲ್ಲ ಎಂದರೆ ನೀನು ಉತ್ತಮ ಅಡುಗೆಯವಳೆಂದು ಕರೆಸಿಕೊಳ್ಳಲು ಯೋಗ್ಯಳೇ ಅಲ್ಲ" ಎಂದಿದ್ದರು. ಆ ಮಟ್ಟಿಗಿದೆ ಎಣ್ಣೆಯ ಶ್ರೇಷ್ಠತೆ. ಎಣ್ಣೆಯಲ್ಲಿ ಕರಿಯುವುದು ಬಿಡಿ ಎಣ್ಣೆಯನ್ನು ಹಾಗೇ ಕುಡಿದ ಉದಾಹರಣೆಗಳಿವೆ. "ಹರಳೆಣ್ಣೆ ಕುಡಿದವನಂತೆ ಮುಖಮಾಡಿಕೊಂಡು..." ಎಂಬ ಮಾತಿನಿಂದ ಎಣ್ಣೆಯನ್ನು ಯಾರೋ ಕುಡಿದಿರುವುದು ಸಾಬೀತಾಗುತ್ತದೆ. ಅದೇಕೆ ಹರಳೆಣ್ಣೆ ಕುಡಿದರೋ, ಕುಡಿದ ನಂತರ ಮುಖ ಹೇಗೆ ಆಯಿತೋ? ನನಗಂತೂ ಗೊತ್ತಿಲ್ಲ. ಸಧ್ಯಕ್ಕೆ ಹರಳೆಣ್ಣೆ ಕುಡಿದವರಾರೂ ಗೊತ್ತಿಲ್ಲದಿದ್ದರೂ ಆ ಮಾತು ಇನ್ನೂ ಚಾಲ್ತಿಯಲ್ಲಿರುವುದರಿಂದ ಆ ಮುಖಭಾವ ಏನೋ ವಿಶೇಷ ಸ್ಟಾ್ಯಂಡರ್ಡ್ ಇರಬೇಕೆಂದು ಭಾವಿಸಿದ್ದೇನೆ. ಕೆಲವು ಎಣ್ಣೆಗಳು ಕುಡಿಯಲು ಇಷ್ಟವಾಗುತ್ತಲೂ ಇರಬಹುದು. ಇಲ್ಲದಿದ್ದರೆ ಮದ್ಯ ಕುಡಿಯುವಿಕೆಗೆ "ಎಣ್ಣೆ ಹಾಕಿಕೊಳ್ಳುವುದು" ಎನ್ನಬಹುದೆಂದು ನನಗನ್ನಿಸುವುದಿಲ್ಲ. ನಿದ್ದೆ ಓಡಿಸಲೂ ಎಣ್ಣೆ ಉಪಯೋಗವಾಗುತ್ತದೆ. "ಕಣ್ಣಿಗೆ ಎಣ್ಣೆ ಬಿಟ್ಟು" ರಾತ್ರಿಯಿಡೀ ಕಾಯುವುದೋ, ಓದುವುದೋ ಮಾಡುತ್ತಾರೆಂದರೆ ಎಣ್ಣೆ ಏನೆಲ್ಲ ಮಾಡಲು ಶಕ್ತವಾಗಿದೆ ಎಂದು ಗೊತ್ತಾಗುತ್ತದೆ.

ಎಣ್ಣೆ ಬಳಕೆಯಾಗದ ಜಾಗವೆಲ್ಲಿದೆ ಹೇಳಿ. ಅಡುಗೆಯಿಂದ ಹಿಡಿದು ನೋವು ನಿವಾರಕದವರೆಗೆ, ಕಿರ್ರೆನ್ನುವ ಲೋಹದ ಕೀಲುಗಳಿಂದ ಹಿಡಿದು ಎಣ್ಣೆಕಂಬದಂತಹ ಸಾಂಪ್ರದಾಯಿಕ ಆಟಗಳವರೆಗೆ, ಕೇಶ ಚರ್ಮಗಳ ಸೌಂದರ್ಯವರ್ಧನೆಯಿಂದ ಹಿಡಿದು ಜಾರಿಕೊಳ್ಳುವ ಕಳ್ಳರವರೆಗೆ ಎಲ್ಲವೂ ಎಣ್ಣೆಮಯ. ಇದೂ ಸಾಕಾಗಲಿಲ್ಲವೆಂದು ನಮ್ಮೂರ ಕಡೆ ಒಂದು ಹೊಳೆಗೂ "ಎಣ್ಣೆ ಹೊಳೆ" ಎಂದು ಹೆಸರಿಟ್ಟಿದ್ದಾರೆ. ಕಾರಣ ಕೇಳಿದರೆ "ನೀರು ಎಣ್ಣೆಯಂತಿದೆ" ಎನ್ನುತ್ತಾರೆ! ಹೀಗೇ ಕಳೆದ ಭಾನುವಾರ ಯಜಮಾನರ ತಲೆಗೆ ಎಣ್ಣೆ ಮಾಲೀಶು ಮಾಡುತ್ತಾ ಒಂದು ತರಲೆ ಪ್ರಶ್ನೆ ಎಸೆದೆ. "ಅದೇಕೆ ಜನರು ಸೆಲೂನುಗಳಲ್ಲಿ ಆಯಿಲ್ ಮಸಾಜ್ ಮಾಡಿಸಿಕೊಳ್ಳುತ್ತಾರೆ?". ತೂಕಡಿಸುತ್ತಾ ಕೂತ ಅವರಿಗೆ ನನ್ನ ಪ್ರಶ್ನೆ ನಿದ್ರಾಭಂಗ ಮಾಡಿರಬೇಕು. "ಮದುವೆಯಾದ ಮೇಲೆ ನೂರೆಂಟು ಯೋಚನೆಗಳು, ತಲೆಬಿಸಿಗಳು ಇರುತ್ತವೆ. ಸಲೂನಿಗೆ ಹೋಗಿ ಎಣ್ಣೆ ಮಾಲೀಶು ಮಾಡಿಸಿಕೊಂಡರೆ ತಲೆ ತಣ್ಣಗಾಗುತ್ತದೆ. ಅಲ್ಲಿ ಹೆಂಡತಿಯ ಕಿರಿಕಿರಿಯೂ ಇರುವುದಿಲ್ಲ" ಎಂದು ಆರಾಮವಾಗಿ ಅವರು ಹೇಳಿದಾಗ ಪೆಚ್ಚಾಗುವ ಸರದಿ ನನ್ನದಾಗಿತ್ತು.
-

Thursday, January 6, 2011

ಶಿವಗಂಗಾ ಚಾರಣ

ಎಷ್ಟೋ ತಿಂಗಳು ಎಲ್ಲೂ ತಿರುಗಾಡಲು ಹೋಗಲು ಅವಕಾಶ ಸಿಕ್ಕಿರಲಿಲ್ಲ. ಹೆಚ್ಚಿನ ಸಮಯ ಮಳೆ, ಇನ್ನು ಕೆಲವೊಮ್ಮೆ ಅಗತ್ಯ ಕೆಲಸಗಳು, ಊರಿಗೆ ಪ್ರಯಾಣ ಇತ್ಯಾದಿ ಕಾರಣಗಳಿಂದ ಜೀವನವೇ ನೀರಸವಾದಂತಿತ್ತು. ಕೊನೆಗೆ ನವಂಬರದ ಕೊನೆಯ ಶುಕ್ರವಾರ "ನಾಳೆ ಶಿವಗಂಗೆಗೆ ಹೋಗೋಣ" ಎಂದು ಧತ್ತನೆ ನಿರ್ಧಾರ ಮಾಡಿದೆವು. ಶಿವಗಂಗೆ ನಮ್ಮ ನೋಡಬೇಕಾದ ಜಾಗಗಳ ಪಟ್ಟಿಯಲ್ಲಿ ಮೊದಲೇ ಇತ್ತು. ಕಳೆದ ಬಾರಿ ದೇವರಾಯನ ದುರ್ಗಕ್ಕೆ ಹೋಗಿದ್ದಾಗ ಇನ್ನೊಮ್ಮೆ ಶಿವಗಂಗಾಗೆ ಬರಬೇಕು ಎಂದು ನಿರ್ಧರಿಸಿ ಹೋಗುವ ಯೋಜನೆಯನ್ನೂ ಹಾಕಿಯಾಗಿತ್ತು. ಶನಿವಾರ ಬೆಳಗ್ಗೆ 7 ಗಂಟೆ ಹೊರಡೋಣ ಎಂದು ಯೋಚಿಸಿ ನಿದ್ರಿಸಿದರೆ ಎದ್ದಾಗ ಗಂಟೆ ಎಂಟೂ ವರೆ ಆಗಿತ್ತು! ಏನು ಮಾಡುವುದು? ಶುಕ್ರವಾರದವರೆಗೆ ಕೆಲಸಮಾಡಿ ಶನಿವಾರ ಬೇಗ ಏಳು ಎಂದರೆ ದೇಹ ಕೇಳುತ್ತದೆಯೇ? ಬೇಗ ಬೇಗನೆ ಹಲ್ಲುಜ್ಜಿ, ಸ್ನಾನ ಮಾಡಿ, corn flakes ಮುಕ್ಕಿ ಹೊರಟಾಗ ಗಂಟೆ ಹತ್ತಾಗಿರಬೇಕು. ಬೇಗನೆ ತಲುಪುವ ಸಲುವಾಗಿ 82 ರೂಪಾಯಿ ತೆತ್ತು NICE ರಸ್ತೆ ಹಿಡಿದೆವು. ಖಾಲಿ ರಸ್ತೆಯಲ್ಲಿ ಕಾರು ವೇಗವಾಗಿ ಸಾಗಿತು. ಅರ್ಧಗಂಟೆಯೊಳಗೆ ನೆಲಮಂಗಲ ಬಂದಿತ್ತು. 12:15 ಗೆ ನಾವು ಶಿವಗಂಗೆ ತಲುಪಿದ್ದೆವು.



ಶಿವಗಂಗೆಯ ಬೆಟ್ಟದ ತಪ್ಪಲಲ್ಲಿ ಬಂಡೆಯೊಳಗೆ ಕೊರೆದಂತಿರುವ ಸ್ವರ್ಣಾಂಬಾ ದೇವಿ ದೇವಸ್ಥಾನ ಮತ್ತು ಗಂಗಾಧರೇಶ್ವರ ದೇವಸ್ಥಾನ ನೋಡಿ ನಾವು ಮೇಲಕ್ಕೆ ಹತ್ತಲನುವಾದೆವು. ಆರಂಭದಲ್ಲಿ ಅತ್ಯಂತ ಉತ್ಸಾಹದಲ್ಲಿ ಏರುತ್ತಿದ್ದ ನನಗೆ ಇದು ಸಾಮಾನ್ಯಕ್ಕೆ ತಲುಪುವ ತುದಿಯಲ್ಲ ಎಂದು ಅರಿವಾಗಲು ಬಹಳ ಹೊತ್ತು ಬೇಕಾಗಲಿಲ್ಲ. ಏರುತ್ತಿರುವಾಗ ಮೊದಲಿಗೆ ಬಂಡೆಯಲ್ಲೇ ಮೆಟ್ಟಿಲ ಆಕಾರ ಕೊರೆದು ಕಬ್ಬಿಣದ ಸ್ತಂಭ ಊರಿ ಸರಳು ಬಿಗಿದಿರುವುದರಿಂದ ಹತ್ತುವಿಕೆ ಸುಲಭವೆನಿಸುತ್ತಿತ್ತು. ಹಾಗೇ ಮುಂದುವರಿದಾಗ ಒಳಕಲ್ಲು ತೀರ್ಥ ಎಂಬ ಜಾಗ ಎದುರಾಯಿತು. ಇಲ್ಲಿ ಬಂಡೆಯಲ್ಲಿ ಸುಮಾರು 20ಅಡಿ ಒಳಗೆ ಗಣಪತಿ ಮತ್ತು ಈಶ್ವರನ ದೇವಸ್ಥಾನವಿದೆ. ವಿದ್ಯುತ್ ಇಲ್ಲದ ಕಾರಣ ಕತ್ತಲೆ ಇರುವುದರಿಂದ ಆಗ ಯಾರನ್ನೂ ಒಳಗಡೆ ಬಿಡುತ್ತಿರಲಿಲ್ಲ. ಬರುತ್ತಾ ನೋಡೋಣ ಎಂದು ನಾವು ಮುಂದುವರಿದೆವು.

ಇಲ್ಲಿಂದ ನಂತರ ಸುಮಾರು ಎತ್ತರದ ವರೆಗೆ ಕಬ್ಬಿಣದ railಗಳಿಲ್ಲ. ಇಲ್ಲಿ ಮೆಟ್ಟಿಲುಗಳಂತೆ ದೊಡ್ಡ ದೊಡ್ಡ ಕಲ್ಲುಗಳಿದ್ದು ಹತ್ತಲು railಗಳ ಅಗತ್ಯವೂ ಇಲ್ಲ. ಆದರೆ ಇಲ್ಲಿ ಹತ್ತುತ್ತಾ ನಮಗೆ ಕಾಲು ನೋವು ಬರಲಾರಂಭಿಸಿತು. ಏದುಸಿರು ತಗ್ಗಿಸಲು ಅಲ್ಲಲ್ಲಿ ನಿಲ್ಲಬೇಕಾಯಿತು. ಈ ಹಾದಿಯ ಕೊನೆಯಲ್ಲಿ ಶಿವ ಪಾರ್ವತಿಯರ 8-10 ಅಡಿ ಎತ್ತರದ ವಿಗ್ರಹ ರಚನೆಯಾಗುತ್ತಿತ್ತು. ಅದಕ್ಕಾಗಿ ಕೆಲಸಗಾರರು ಸಿಮೆಂಟು ಗೋಣಿಚೀಲಗಳನ್ನು ಕೆಳಗಿಂದ ಹೊತ್ತು ತರುತ್ತಿದ್ದರು! ನನಗೆ ಅವರನ್ನು ಕಂಡು ಬೇಸರವಾಯಿತು. ಆದರೇನು ಮಾಡುವುದು? ಹೊಟ್ಟೆಗೆ ಹಸಿವೆಯೆಂಬುದೊಂದು ಇದೆಯಲ್ಲವೇ ಎಂದುಕೊಂಡು ಸುಮ್ಮನಾದೆ. ಶಿವಪಾರ್ವತಿ ವಿಗ್ರಹದವರೆಗೆ ಅನೇಕ ಚಿಕ್ಕ ಅಂಗಡಿಗಳು ಚರುಮುರಿ, ಮಜ್ಜಿಗೆ, ಮುಳ್ಳು ಸೌತೆ, ಅನಾನಸು, ನೀರು ಮಾರಾಟ ಮಾಡುತ್ತಿದ್ದವು. ಇಲ್ಲಿಯವರೆಗೆ ನಮಗೆ ಯಾವುದೇ ಮಂಗಗಳೂ ಎದುರಾಗಲಿಲ್ಲ.



ಶಿವಗಂಗೆಗೆ ಹೊರಡುವ ಮೊದಲು ನಾನು ಅಲ್ಲಿಯ ಮಂಗಗಳ ಬಗ್ಗೆ ಸಾಕಷ್ಟು ಕೇಳಿದ್ದೆ. collegeಗೆ ಹಾಕುವಂತಹಾ ಬೆನ್ನಿನ ಚೀಲ ಕೊಂಡೊಯ್ಯುವುದು ಒಳಿತೆಂದು ತಿಳಿದಿದ್ದೆ. ಆದರೂ ಅನೇಕರು ತಮ್ಮ ಅನುಭವ ವಿವರಿಸಿ ಮಂಗಗಳ ಬಗ್ಗೆ ನನ್ನಲ್ಲಿ ಹೆದರಿಕೆ ಹುಟ್ಟಿಸಿದ್ದರು. ಕೆಲವರು ಮಂಗಗಳು ಬೆನ್ನಿನ ಚೀಲವನ್ನು ಹಿಂದಿಂದ ಎಳೆಯುತ್ತವೆ, ಕೊಡದಿದ್ದರೆ ಪರಚುತ್ತವೆ ಎಂದೂ, ಇನ್ನು ಕೆಲವರು, ಜಿಪ್ ತೆರೆದು ಹುಡುಕಾಡುತ್ತವೆ ಎಂದೂ ಹೇಳಿದ್ದರಿಂದ ನಾವು ನೀರು ಬಿಟ್ಟರೆ ಬೇರೇನೂ ತೆಗೆದುಕೊಂಡು ಹೋಗಿರಲಿಲ್ಲ. ಮಂಗಗಳು ಹೆಂಗಸರಿಗೆ ಜಾಸ್ತಿ ಉಪಟಳ ಕೊಡುತ್ತವೆ ಎಂದು ಕೇಳಿದ್ದ ನಾನು ಬ್ಯಾಗನ್ನು ಕೃಷ್ಣನಿಗೆ ತೊಡಿಸಿದ್ದೆ.
ಸದ್ಯಕ್ಕೆ ಮಂಗಗಳು ಎದುರಾಗದ್ದು ನೋಡಿ ನನಗೆ ಧೈರ್ಯ ಬಂತು. ಕೃಷ್ಣನಿಗೆ ಆಯಾಸ ಕಡಿಮೆ ಮಾಡಿಕೋ ಎಂದು ಬ್ಯಾಗನ್ನು ನಾನೇ ಎತ್ತಿಕೊಂಡೆ. ಹತ್ತು ಹೆಜ್ಜೆ ನಡೆಯುವುದರೊಳಗಾಗಿ ಮಂಗಗಳ ಹಿಂಡು ಕಂಡಿತು. "ಇಕೋ ಬ್ಯಾಗ್" ಎಂದು ಕೃಷ್ಣನತ್ತ ಬ್ಯಾಗ್ ಎಸೆದು ಕೋಲಿಗಾಗಿ ತಡಕಾಡಿದೆ. ಒಂದು ಧೈರ್ಯಕ್ಕೆ ಸಾಕಾಗುವಷ್ಟು ದೊಡ್ಡ ಕೋಲು ಸಿಕ್ಕಿತು. ಆದರೆ ಸ್ವಲ್ಪದರಲ್ಲೇ ಅದನ್ನು ಹಿಡಿದು ಹತ್ತುವುದು ಕಷ್ಟವಾಗಿ ಕೋಲೂ ಕೃಷ್ಣನ ಕೈ ಸೇರಿತು.

ಶಿವಪಾರ್ವತಿ ವಿಗ್ರಹದ ನಂತರ ಸಿಗುವುದು ಬಂಡೆಯ ತುದಿಗೆ ಹತ್ತುವ ಹಾದಿ. ಇದು ಬಹಳ ಇಳಿಜಾರಾಗಿದ್ದು ಹತ್ತಲು ಕಷ್ಟವಾಗುತ್ತದೆ. ಇಲ್ಲಿ ಬಂಡೆಯನ್ನು ಸುಮಾರಾಗಿ ಮೆಟ್ಟಿಲ ಆಕಾರಕ್ಕೆ ಕೊರೆದು ಎರಡೂ ಪಕ್ಕದಲ್ಲಿ railಗಳನ್ನು ಊರಿದ್ದಾರೆ. ಈ ಸರಳುಗಳಿಲ್ಲದಿದ್ದರೆ ಹತ್ತುವುದು ಬಹು ಕಷ್ಟವೇ ಸರಿ. ಅದಲ್ಲದೆ ಈ ಹಾದಿಯುದ್ದಕ್ಕೂ ಮಂಗಗಳು ಕುಳಿತಿರುತ್ತವೆ. ನಮ್ಮ ಅದೃಷ್ಟಕ್ಕೆ ಹಲವಾರು ಜನರಿಗೆ ಉಪದ್ರ ಕೊಡುತ್ತಿದ್ದ ಮಂಗಗಳು ನಮ್ಮ ಹತ್ತಿರವೂ ಸುಳಿಯಲಿಲ್ಲ. ಹೇಗೋ ಕಷ್ಟಪಡುತ್ತಾ ಮೇಲಕ್ಕೆ ಏರುತ್ತಾ ಹೋದೆವು. ಅಷ್ಟೆತ್ತರದಲ್ಲೂ ಮೇಕೆಗಳು ಬಂಡೆ ಮೇಲೆ ನಿಂತು ಮೇಯುತ್ತಿದ್ದುದನ್ನು ನೋಡಿ ಆಶ್ಚರ್ಯವಾಯಿತು. ತುದಿತಲುಪುತ್ತಾ ಮೊದಲಿಗೆ ಸಿಕ್ಕಿದ್ದು ನಂದಿ. ನಂದಿಯು ಸುಮಾರು ಹನ್ನೆರಡು ಅಡಿ ಎತ್ತರದ ಬಂಡೆಯ ಮೇಲೆ ಇದೆ. ಅಲ್ಲಿಗೆ ಹತ್ತಲೂ, ನಂದಿಯ ಸುತ್ತಲೂ ಕಬ್ಬಿಣದ ಸರಳು ಹಾಕಿದ್ದು, ಎಲ್ಲರಿಗೂ ಹತ್ತಲು ಅನುಕೂಲವಾಗುವಂತಿದೆ. ಆ ಸರಳುಗಳಿಲ್ಲದಿದ್ದರೆ ನನಗಂತೂ ಹತ್ತುವುದು ಅಸಾಧ್ಯವಾಗಿತ್ತು. ಅಲ್ಲಿಂದ ಅನತಿ ದೂರದಲ್ಲಿ ಬಂಡೆಯ ತುದಿಯೂ, ಅಲ್ಲಿ ಗಿರಿಗಂಗಾಧರೇಶ್ವರ ದೇವಸ್ಥಾನವೂ ಕಂಡಿತು.



ಅದರ ಎದುರಲ್ಲಿ ಒಬ್ಬ ಚರುಮುರಿ, ಮುಳ್ಳು ಸೌತೆ, ಮಜ್ಜಿಗೆ ನೀರು ಇತ್ಯಾದಿ ಮಾರುತ್ತಿದ್ದ. ಆತ ದಿನವೂ ಇಷ್ಟೆತ್ತರ ಹತ್ತಿ ಇವನ್ನೆಲ್ಲ ತರುತ್ತಿರಬಹುದೇ ಎಂದು ಯೋಚಿಸಿ ಅಚ್ಚರಿಯಾಯಿತು. ಇಲ್ಲೂ ಮಂಗಗಳಿಗೆ ಕೊರತೆಯಿರಲಿಲ್ಲ. ದೇವಸ್ಥಾನದ ಬಳಿ ಬಂದು ಉಪಟಳ ಕೊಡುವ ಮಂಗಗಳನ್ನು ಓಡಿಸಲು ಒಂದು ವಿಶಿಷ್ಟ ವಿಧಾನ ಉಪಯೋಗಿಸುತ್ತಿದ್ದುದನ್ನು ಇಲ್ಲಿ ನೋಡಿದೆ. ಒಂದು ಚಿರತೆಯ ಬೊಂಬೆಯನ್ನು ಒಬ್ಬ ಆಗಾಗ ದೇವಸ್ಥಾನದೊಳಗೊಂದ ತಂದು ಹೊರ ಭಾಗದಲ್ಲಿ ಇಡುತ್ತಿದ್ದ. ಅದನ್ನು ಕಂಡಾಕ್ಷಣ ಮಂಗಗಳು ಬಹು ದೂರ ಓಡಿ ಹೋಗುತ್ತಿದ್ದವು. ಮತ್ತೆ ಆತ ಅದನ್ನು ಒಳಗಿಟ್ಟು ಮಂಗಗಳು ಪುನಃ ಗುಂಪುಗೂಡಿದಾಗ ಹೊರತರುತ್ತಿದ್ದ. ಮಂಗಗಳನ್ನು ಓಡಿಸುವ ಮನುಷ್ಯನ ಮಂಗಬುದ್ಧಿ ನನಗೆ ತಮಾಷೆಯೆನಿಸಿತು.


(ಚಿರತೆ ಬೊಂಬೆಯನ್ನು ಒಳಗೆ ಒಯ್ಯುತ್ತಿರುವುದು)

ಬಂಡೆಯ ಮೇಲೆ ನಾವು ತಲುಪಿದಾಗ ಗಂಟೆ ಎರಡಕ್ಕೆ ಹತ್ತಿರವಾಗಿತ್ತು. ಆ ದಿನ ನಮ್ಮ ಅದೃಷ್ಟಕ್ಕೆ ಮೋಡ ಕವಿದಿದ್ದು ಬಿಸಿಲೇ ಇರಲಿಲ್ಲ. ಬಂಡೆಯ ಮೇಲೆ ice-cold ಗಾಳಿ ಜೋರಾಗಿ ಬೀಸುತ್ತಿತ್ತು. ಅಲ್ಲೇ ಕುಳಿತು ನಾವು ಹಲವಾರು ಫೋಟೋ ತೆಗೆದೆವು. ಮಂಗಗಳಿಗೆ ಹೆದರಿ ಆಹಾರ ತಾರದ ಕಾರಣ ಅಲ್ಲೇ ಚರುಮುರಿ ಕೊಂಡು ತಿನ್ನಬೇಕಾಯಿತು. ಎರಡು ಮೂರು ಲೋಟ ಮಜ್ಜಿಗೆ ನೀರೂ ಕುಡಿದೆವು. ಸಮಯ ಹೋಗಬೇಕೆಂದು ಸೂಚನೆ ಕೊಡುತ್ತಿದ್ದರೂ ಮನಸು ಕೇಳುತ್ತಲೇ ಇರಲಿಲ್ಲ. ಇನ್ನೊಂದು ಸ್ವಲ್ಪ ಹೊತ್ತು ಕೂತಿರಬೇಕು ಎನಿಸುತ್ತಿತ್ತು. ಬಂಡೆಯ ಮೇಲಿಂದ ಸುಮ್ಮನೇ ಕೆಳಗೆ ನೋಡುತ್ತ ಕುಳಿತುಕೊಳ್ಳುವುದು ಬಹಳ ಆನಂದ ನೀಡುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಮನಸನ್ನು ಇನ್ನು ಮರಳುವುದು ಒಳಿತು ಎಂದು ಸಮಾಧಾನಪಡಿಸಿ ಇಳಿಯಲು ಆರಂಭಿಸಿದೆವು.

ಇಳಿಯುವಿಕೆ ನಾವು ಯೋಚಿಸಿದಷ್ಟು ಸುಲಭವಾಗಿರಲಿಲ್ಲ. ನಾನು ಹಾಕಿದ ಸಾದಾ ಚಪ್ಪಲಿ ಹತ್ತುವಾಗ ಏನೂ ತೊಂದರೆ ಕೊಡದಿದ್ದರೂ ಇಳಿಯುವಾಗ ಬಹುವಾಗಿ ಕಾಡಿತು. ಇಳಿಜಾರಿನಲ್ಲಿ ಇಳಿಯುವಾಗ ಕಾಲು ಜಾರುವುದರಿಂದ ಚಪ್ಪಲಿಯ ಎದುರಿನ ಪಟ್ಟಿ ಮೊದಲ ಎರಡು ಬೆರಳುಗಳ ನಡುವೆ ನೋಯುವಷ್ಟು ಒತ್ತಡ ಹಾಕುತ್ತಿತ್ತು. ಅದಲ್ಲದೆ ಇಳಿಯುವಾಗ ಪಾದಗಳು ನಡುಗುತ್ತಿದ್ದವು. ನಡುಗುತ್ತಿರುವ ಪದಗಳಲ್ಲಿ ಹಿಡಿತವಿಲ್ಲದ ಚಪ್ಪಲಿ ಹಿಡಿಯುವುದು ಬಹಳ ತ್ರಾಸದಾಯಕವಾಗಿತ್ತು. ಇಳಿಯುತ್ತಾ ಪುನಃ ಒಳಕಲ್ಲು ತೀರ್ಥಎದುರಾಯಿತು. ಅಲ್ಲಿ ಈಗ ಲೈಟ್ ಹಾಕಿದ್ದರು. ತಲೆಗೆ ನಾಲ್ಕು ರೂಪಾಯಿಯಂತೆ ಕೊಟ್ಟು ಗುಹೆಯಂತಿದ್ದ ಬಂಡೆಯ ಒಳ ಹೊಕ್ಕೆವು. ಸುಮಾರು ಹತ್ತು ಅಡಿ ದೂರದ ವರೆಗೆ ಒಂದಡಿ ನೀರು ತುಂಬಿದ್ದ ಹಾದಿಯಲ್ಲಿ ನಡೆದಾಗ ದೇವರ ಎರಡು ಮೂರ್ತಿಗಳು ಕಂಡವು. ಮೂರ್ತಿಗಳ ಹಿಂದೆ ಎಡಕ್ಕೆ ಬಂಡೆಯಲ್ಲಿ ಒಂದು ಕೊಳವೆಯಂತಹ ಆಳದ ತೂತು ಇದ್ದು ಅದರೊಳಗೆ ಅನೇಕರು ಕೈ ಹಾಕುತ್ತಿದ್ದರು. ನಾನು ಅದರತ್ತ ಗಮನ ಕೊಡದೆ ಮುಂದುವರಿದೆ. ಕೃಷ್ಣನಿಗೆ ಅದರೊಳಗೆ ಕೈ ಹಾಕಿದಾಗ ನೀರು ಸಿಕ್ಕಿತಂತೆ. ಅಲ್ಲಿಂದ ಬಂದ ಮೇಲೆ ಬಂಡೆಯೊಳಗೆ ತೀರ್ಥ ಸಿಗುವುದು ಶುಭವೆಂದೂ, ನೀರನ್ನು ಮುಟ್ಟಿದವರು ಅದೃಷ್ಟವಂತರೆಂದೂ ನಂಬಿಕೆಗಳಿವೆ ಎಂದು ಒಬ್ಬರು ಹೇಳಿದರು. ನಾನೂ ಪ್ರಯತ್ನಿಸಬಹುದಿತ್ತು ಎಂದು ಆಗ ಬಹುವಾಗಿ ಅನಿಸಿತು.

ಗುಡ್ಡದ ಮೇಲಿಂದ ತಳ ತಲುಪಲು ನಮಗೆ ಒಂದು ಗಂಟೆ ಹಿಡಿಯಿತು. ಬಂಡೆಯನ್ನು ಹತ್ತುತ್ತಾ ಇಳಿಯುತ್ತಾ ಅನೇಕ ಸ್ಥಳೀಯರು ಸಿಗುತ್ತಿದ್ದರು. ಇವರು ಏನೂ ಮುಜುಗರವಿಲ್ಲದೆ ದುಡ್ಡು ಕೇಳುತ್ತಿದ್ದರು. ನಾವು ಹೀಗೇ ಅಲ್ಲಲ್ಲಿ ದುಡ್ಡು ಕೇಳಿದವರಿಗೆ ಒಂದೈದು ರುಪಾಯಿ ಕೊಡುತ್ತಾ ಕೆಳ ಬಂದಾಗ ಮೂವತ್ತೈದು ರೂಪಾಯಿ ಖಾಲಿಯಾಗಿತ್ತು!

ಅಲ್ಲಿಂದ ಹತ್ತು ಹೆಜ್ಜೆ ದೂರದಲ್ಲಿ ಕೊಳವೊಂದಿತ್ತು. ಅದರ ಹತ್ತಿರ ಹೋಗಿ ನೋಡಿದರೆ ದೂರದಿಂದ ಕಂಡ ಸೌಂದರ್ಯವೇ ಇರಲಿಲ್ಲ. ಕೊಳದ ಮೂಲೆಗಳಲ್ಲಿ ಪ್ಲಾಸ್ಟಿಕ್ ಮತ್ತು ಕಸ ಜಮೆಯಾಗಿತ್ತು. ಬೆಟ್ಟ ಹತ್ತುವಾಗಲೂ ಕಸಕ್ಕೆ, ಪ್ಲಾಸ್ಟಿಕ್ ಬಾಟಲಿಗಳಿಗೆ ಕೊರತೆಯಿರಲಿಲ್ಲ. ಎಲ್ಲೆಲ್ಲಿ ಕಸ ಎಸೆಯಬಾರದೆಂಬ ಬೋರ್ಡ ಇತ್ತೋ ಅವನ್ನು ಅಣಕಿಸುವಂತೆ ಅಲ್ಲೇ ಕಸ ರಾಶಿ ಬಿದ್ದಿತ್ತು. ಜನರಿಗೆ ಯಾವಾಗ ಬುದ್ಧಿ ಬರುವುದೋ ಎಂದು ಬೇಸರಿಸಿಕೊಂಡೆ. ನಾವು ಸ್ವಲ್ಪ ಹೊತ್ತು ಅಲ್ಲೇ ಅತ್ತಿತ್ತ ಅಡ್ಡಾಡಿದೆವು. ಹತ್ತಿರದಲ್ಲಿ ಕೆಲವು ಹೊಲಗಳಿದ್ದವು. ನಾನು ಮೊದಲ ಬಾರಿಗೆ ಕ್ಯಾಬೇಜಿನ ಹೊಲ ನೋಡಿದೆ. ಅನತಿ ದೂರದಲ್ಲಿ ಪ್ರವಾಸಿಗಳ ಉಪಯೋಗಕ್ಕೆ pay and use toilets ಇರುವುದು ಕಂಡಿತು. ನಮಗೆ ಹಸಿವೆಯಾಗಲಾರಂಭಿಸಿತ್ತು. ಚಿಕ್ಕ ಹಳ್ಳಿಯಂತಿದ್ದ ಆ ಜಾಗದಲ್ಲಿ ಊಟಕ್ಕೆ ಸರಿಯಾದ ವ್ಯವಸ್ಥೆಯೇನೂ ಕಾಣಿಸಲಿಲ್ಲ. ಡಾಬಸ್ ಪೇಟೆಯ ಕಾಮತ್ ಉಪಚಾರವೇ ಗತಿ ಎಂದು ಅನ್ನಿಸಿತು. ಹಾಗೇ ಗುಡ್ಡವನ್ನು ನೋಡುತ್ತಾ ಮರಳಿ ಹೊರಟೆವು.









ಡಾಬಸ್ ಪೇಟೆಯ ಕಾಮತ್ ಉಪಚಾರದ ಬಳಿ ಬಂದಾಗ ನಾಲ್ಕು ಗಂಟೆಯಾಗಿತ್ತು. ಅಲ್ಲಿ ದೋಸೆಗಳು ಮತ್ತು ಇಡ್ಲಿ-ವಡೆ ಮಾತ್ರ ಇತ್ತು. ಊರ ಹೊರಗಿನ ಹೋಟೆಲು, ಪ್ರವಾಸಿಗಳಿಂದ ಮಾತ್ರ ನಡೆಯ ಬೇಕಿದ್ದಂತೆ ಕಾಣುತ್ತಿದ್ದ ಕಾಮತ್ ಉಪಚಾರದಿಂದ ನಮಗೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಇಷ್ಟರವರೆಗೆ ರಾಗಿ ದೋಸೆ ತಿಂದಿರದ ನಮಗೆ ಅದರ ರುಚಿ ನೋಡೋಣ ಎನಿಸಿತು. ರವಾ ದೋಸೆಯಂತೆ ತಯಾರಿಸಿದ್ದ ರಾಗಿ ದೋಸೆ ನಿರೀಕ್ಷೆಯನ್ನು ಮೀರಿ ಚೆನ್ನಾಗಿತ್ತು. (ಆ ನಂತರ ನಾನು ಬೇರೆ ಕಡೆ ರಾಗಿ ದೋಸೆ ತಿಂದಿದ್ದರೂ ರುಚಿ ಅಂಥಾ ಅದ್ಭುತವಿರಲಿಲ್ಲ). ಅದರ ನಂತರ ಮಸಾಲೆ ದೋಸೆ ತರಹೇಳಿ, ಅದು ಬಲು ಉಪ್ಪಾಗಿದ್ದು, ಏಕೆ order ಮಾಡಿದೆನೋ ಎಂದುಕೊಂಡು ತಿಂದದ್ದು ಬೇರೆ ವಿಚಾರ.

ಅಲ್ಲಿಂದ ಮತ್ತೊಮ್ಮೆ NICE road ಹಿಡಿದು ವೇಗವಾಗಿ ಮನೆಯತ್ತ ಸಾಗಿದೆವು. ಸೂರ್ಯ ಕಂತಿ, ದೂರದಿಂದ ಕಾಣುತ್ತಿದ್ದ ಬೆಂಗಳೂರಿನ ಒಂದು ಪಾರ್ಶ್ವದಲ್ಲಿ ದೀಪಗಳು ಉರಿಯಲಾರಂಭಿಸಿದವು. ಒಂದು ಸುಂದರ ಪ್ರಯಾಣ ಕೊನೆಮುಟ್ಟುತ್ತಲಿತ್ತು. ಶಿವಗಂಗೆ ಹಾಗೂ ಅಂತಹಾ ಸ್ಥಳಗಳಿಗೆ ಆಗಾಗ ಹೋಗುತ್ತಾ ಇರಬೇಕು ಎನಿಸುತ್ತಿತ್ತು. ಹಾಗೇ ದಿನವನ್ನು ಮೆಲುಕು ಹಾಕುತ್ತಾ ಸೀಟಿಗೆ ಒರಗಿದೆ. ಮನೆಯಲ್ಲಿ ಮಾಡಲಿದ್ದ ಕೆಲಸಗಳು ನೆನಪಾಗತೊಡಗಿದವು. ಮರುದಿನ ಬರಲಿದ್ದ ನನ್ನ ಸಂಬಂಧಿಯೊಬ್ಬಳಿಗೆ ಏನು ಅಡುಗೆ ತಯಾರಿಸುವುದು ಎಂದು ಯೋಚಿಸುತ್ತಾ ಗಾಳಿಗೆ ಮುಖವೊಡ್ಡಿ ಕೂತೆ.
-