ನಿನ್ನೆ ಭಾನುವಾರ ನನ್ನ ಅತ್ತಿಗೆ(ನಾದಿನಿ)ಗೆ ಒಂದು ಪರೀಕ್ಷೆ ಬರೆಯಲಿದ್ದ ಕಾರಣ ಅವರು ಪತಿ ಸಮೇತರಾಗಿ ಶನಿವಾರ ಮನೆಗೆ ಬಂದಿದ್ದರು. ಎಂ. ಎಸ್. ರಾಮಯ್ಯ ಕಾಲೇಜಿನಲ್ಲಿ ಹನ್ನೊಂದು ಗಂಟೆಗೆ ನಡೆಯಲಿದ್ದ ಪರೀಕ್ಷೆಗೆ ನಾವು ಒಂಭತ್ತು ಗಂಟೆಯೊಳಗಾಗಿ ಮನೆ ಬಿಡಬೇಕಿತ್ತು. ಏನೂ ಎಡವಟ್ಟಾಗದಂತೆ ಆರೂವರೆಗೆ ಎದ್ದ ನಾನು ಇಡ್ಲಿ ಬೇಯಲು ಇಟ್ಟು, ಸಾಂಬಾರಿಗೆ ತರಕಾರಿ ಬೇಯಲು ಇಟ್ಟು ಸುಮ್ಮನೆ ಕೂತೆ. ನಿದ್ದೆಯ ಜೊಂಪು ಹತ್ತಿತು. 5... 10... 15... 20... 30 ನಿಮಿಷ ಕಳೆದಾಗ ಕೃಷ್ಣನನ್ನು(ನನ್ನ ಪತಿ) ಸುಟ್ಟ ವಾಸನೆ ಬಡಿದೆಬ್ಬಿಸಿರಬೇಕು. "ಏ ಒಲೆಮೇಲೆ ಎಂತದ್ದು?" ಎಂದರು. ನಾನು ದಡಬಡ ಎದ್ದು ಓಡಿ ನೋಡಿದರೆ ತರಕಾರಿ ಸೀದು ತಳಕ್ಕಂಟಿದ್ದಲ್ಲದೆ ಪಾತ್ರೆಯ ತಳದಲ್ಲಿ ನೇರಳೆ ಬಣ್ಣದ ಶಾಶ್ವತ ಉಂಗುರ ಮೂಡಿತ್ತು. ಅತ್ತಿಗೆ ಮಾಡಿದ ಪುಣ್ಯವಿರಬೇಕು. ಇಡ್ಲಿ ಸರಿ ಇತ್ತು. ಪುನಃ ಹೊಸದಾಗಿ ಸಾಂಬಾರು ಮಾಡಿ ತಿಂದು ಒಂಭತ್ತು ಗಂಟೆಗೆ ಮನೆ ಬಿಟ್ಟೆವು.
ಹತ್ತು ಗಂಟೆಗೆ ಎಂ. ಎಸ್. ರಾಮಯ್ಯ ಕಾಲೇಜು ತಲುಪಿಯಾಗಿತ್ತು. ಪರೀಕ್ಷಾ ಕೊಠಡಿ ಹುಡುಕಿ ಅದರ ಮುಂದೆ ಕುಳಿತಿರಬೇಕಾದರೆ ಅತ್ತಿಗೆ ಪುಸ್ತಕ ತೆರೆದರು. ನನಗೆ ಮಾಡಲು ಕೆಲಸವಿಲ್ಲ. ಜನರನ್ನು ನೋಡುತ್ತಾ ಕುಳಿತೆ. ಒಂದು ಮಹಿಳಾ ಗುಂಪು ತಮಗೆ ತೋಚಿದ ಪ್ರಶ್ನೋತ್ತರಗಳ ಕೊಡು-ಪಡೆಯುವಿಕೆ ನಡೆಸಿತ್ತು. ಇನ್ನೊಬ್ಬಳು ತಾನು ಉರುಹೊಡೆದುದನ್ನು ಪುನಃ ಹೇಳಿಕೊಳ್ಳುತ್ತಿರುವಂತಿತ್ತು. ಆಕೆ ಶೂನ್ಯ ದೃಷ್ಟಿಯಲ್ಲಿ ಮಾಡಿನ (ಛಾವಣಿ) ಮೂಲೆಯನ್ನು ನೋಡುತ್ತಾ ಉರುಹೊಡೆಯುತ್ತಿದ್ದರೆ ಅಲ್ಲೇ ಉತ್ತರಗಳು ಕಂಡಂತಿತ್ತು. ಮತ್ತೊಬ್ಬಳು ಲಿಪ್ ಸ್ಟಿಕ್ ಹಾಕಿ ಸಂಪೂರ್ಣ ಮೇಕಪ್ಪಿನೊಂದಿಗೆ ಪರೀಕ್ಷೆ ಬರೆಯಲು ಬಂದಿದ್ದಳು. ಒಬ್ಬರ ತಲೆಕೂದಲು ನೆಟ್ಟಗೆ ನಿಮಿರಿ ಕೆದರಿಕೊಂಡು ಚಾರ್ಜ್ ಆದ ಹಾಗೆ ಕಾಣುತ್ತಿದ್ದರು. ನನಗೆ ಪುನಃ ನಿದ್ದೆಯ ಜೊಂಪು ಹತ್ತುತ್ತಲಿತ್ತು. ಅಷ್ಟರಲ್ಲಿ ಪರೀಕ್ಷೆ ಆರಂಭವಾಗುವ ಗಂಟೆಯಾಯಿತು. ನಾವು ಮೂವರು ಅತ್ತಿಗೆಯನ್ನು ಬಿಟ್ಟು ಹೊರಬಂದೆವು.
ಎರಡು ಗಂಟೆ ಕಾಲಹರಣ ಮಾಡಬೇಕಿತ್ತು. ಎಲ್ಲಿ ಹೋಗುವುದು ಎಂದುಕೊಂಡಾಗ ಮಂತ್ರಿ ಸ್ಕ್ವೇರ್ ನೆನಪಾಯಿತು. ಅಲ್ಲಿಗೆ ಹೋದೆವು. ಏನೂ ಕಲ್ಪನೆ ಹೊತ್ತು ಮಂತ್ರಿ ಹೊಕ್ಕ ನನಗೆ ಅಷ್ಟೇನೂ ವಿಶೇಷತೆ ಗೋಚರಿಸಲಿಲ್ಲ. ದೊಡ್ಡ ಕಟ್ಟಡದಲ್ಲಿ ತುಂಬಿದ ಅನೇಕಾನೇಕ ಅಂಗಡಿಗಳಂತೆ ಕಂಡಿತು. ಮಾಲ್ ಹೊಕ್ಕರೆ ಬೇಡದ ವಸ್ತುಗಳೂ ಅಗತ್ಯವೆನಿಸುತ್ತವೆ. ಸಧ್ಯಕ್ಕೆ ಒಂದು ಪೆನ್ ಡ್ರೈವ್ ಅತ್ಯಗತ್ಯ ವಸ್ತುವೆನಿಸಿತು. ಅದನ್ನು ಕೊಂಡಾಗುವಾಗ ಹೊಟ್ಟೆಯೊಳಗೆ ಹಸಿವು ಕುಣಿತ ಆರಂಭಿಸಿತು. ಅಲ್ಲೇ ಪಾನೀಯದ ಅಂಗಡಿ ಕಂಡಿತು. ಬ್ಲೂ ಬೆರ್ರಿ, ಸ್ಟ್ರಾ ಬೆರ್ರಿ, ರಾಸ್ಪ್ ಬೆರ್ರಿ smoothie ಹೇಳಿದೆವು. ಲೋಟಗಳು ಬಂದಾಗ ಎಲ್ಲ ಒಂದೇ ಬಣ್ಣ. ಬರೀ contrast ವ್ಯತ್ಯಾಸ ಅಷ್ಟೇ. ರುಚಿ? ಹುಳಿ ವ್ಯತ್ಯಾಸ ಅಷ್ಟೇ. ಹಲ್ಲು ಮುರಿಯುವಷ್ಟು ತಂಪು. ಕಾಲು ಲೀಟರು ಇದ್ದಿರಬಹುದು. 280 ರೂಪಾಯಿ ತೆತ್ತ ಕರ್ಮಕ್ಕೆ ಮುಗಿಸಬೇಕಾಯಿತು. ಲೋಟ ಅರ್ಧ ತುಂಬಿದೆ ಎಂದರೆ ಧನಾತ್ಮಕ ಚಿಂತನೆಯಂತೆ. ನಮಗಂತೂ "ಇನ್ನೂ ಅರ್ಧ ಬಾಕಿ ಇದೆ" ಎಂಬುದು ಋಣಾತ್ಮಕವೇ ಆಗಿತ್ತು. ಈ ಪೇಯಗಳು ಕೆಲವರಿಗೆ ಇಷ್ಟವಾದೀತೇನೋ. ನಾನು ಈ ವಿಷಯದಲ್ಲಿ ಹಿಂದುಳಿದ ವರ್ಗಕ್ಕೆ (ಕಾಲಮಾನದ ಪ್ರಕಾರ) ಸೇರಿದ್ದೇನೆ.
ಸಮಯ ಮೀರಲಾರಂಭಿಸಿತ್ತು. ಪರೀಕ್ಷೆ ಮುಗಿಯುವ ಹೊತ್ತಿಗೆ ಎಂ. ಎಸ್. ರಾಮಯ್ಯ ತಲುಪಬೇಕಿತ್ತು. ಕೊನೆ ಮಹಡಿ ನೋಡಲಾಗಲಿಲ್ಲ. "ಮಂತ್ರಿ ಹೇಳುವಂಥಾ ವಿಶೇಷ ಕಾಣಲಿಲ್ಲ" ಎನ್ನುತ್ತಾ ನಾನು ಬರುತ್ತಿದ್ದರೆ parking area ದಲ್ಲಿ ಪೇಚಾಟಕ್ಕಿಟ್ಟುಕೊಂಡಿತು. parking ಚೀಟಿ ಕಾರಿನೊಳಗೇ ಉಳಿದಿತ್ತು. ನಿಲ್ಲಿಸಿದ ಜಾಗ ಎಷ್ಟು ಹುಡುಕಿದರೂ ಸಿಗದು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ನೋಡುತ್ತಿದ್ದರೆ ಕೃಷ್ಣ ನಾಪತ್ತೆ. ಅವನಿಗೆ ಫೋನ್ ಮಾಡಿದರೆ ನೆಟ್ ವರ್ಕ್ ಸಿಗದೆ call forward ಆಗಿ ನನ್ನ ಫೋನಿಗೇ ಬಂದು user busy ಎನ್ನುತ್ತಿತ್ತು. ಅಲ್ಲಿದ್ದ ಹಳದಿ ಸಮವಸ್ತ್ರಧಾರಿಯೊಬ್ಬನಲ್ಲಿ ಸಮಸ್ಯೆ ಹೇಳಿ ದಾರಿ ಕೇಳಿದೆವು. ಏನೋ ಒಂದು ಹೇಳಿ ಬೇರೆ ಕಡೆಗೆ ಹೋದ. ಅವನು ಹೇಳಿದ ಕಡೆ ಹೋದರೆ ಹೊರ ಹೋಗುವ ಮಾರ್ಗ ಕಂಡಿತು. ಸಿಟ್ಟು ಬಂದು ಬೈಯಬೇಕೆಸಿತು. ಆದರೆ ಅವನನ್ನೆಲ್ಲಿ ಹುಡುಕುವುದು? ಹತ್ತು ನಿಮಿಷ ಅಲೆದಾಡಿಯಾಗುವಾಗ ಕೃಷ್ಣ ನಡೆಯುತ್ತಿರುವುದು ಕಂಡಿತು. ಅತ್ತ ಓಡಿ ಇನ್ನೊಬ್ಬ ಹಳದಿ ಸಮವಸ್ತ್ರಧಾರಿಯನ್ನು ಸಹಾಯಮಾಡಲು ಕೇಳಿದೆವು. ಆತ ನಾವು ಬಂದ ಸಮಯ, ನಿಲ್ಲಿಸಿದ ಜಾಗದ ಅಕ್ಕ ಪಕ್ಕ ಏನಿತ್ತೆಂದು ಕೇಳಿ ಸರಿ ದಾರಿ ತೋರಿಸಿದ. ಸಧ್ಯ ಕಾರು ಸಿಕ್ಕಿತು. ಹೊರ ಬಂದಾಗ ಗಂಟೆ ಒಂದೂ ಕಾಲು ಆಗಿತ್ತು. ಎಂ. ಎಸ್. ರಾಮಯ್ಯ ತಲುಪಿದಾಗ ಅತ್ತಿಗೆ ಬಹಳ ಹೊತ್ತಿನಿಂದ ಕಾಯುತ್ತಿದ್ದರು. ಮಂತ್ರಿಯ parking areaದ ತಿರುಗಾಟದಲ್ಲಿ ಸಾಕು ಸಾಕಾಗಿತ್ತು. ಅತ್ತಿಗೆಯಲ್ಲಿ "ಮಂತ್ರಿ ಮಾಲ್ ಗೆ ಹೋಗಿದ್ದೆವು... parking lot ಸಿಕ್ಕಾಪಟ್ಟೆ ದೊಡ್ಡದಾಗಿದೆ" ಎಂದೆ.
ಅತ್ತಿಗೆ, ಅಣ್ಣ ಅಲ್ಲಿಂದಲೇ ತಮ್ಮ ಮನೆಗೆ ಹೊರಡಲನುವಾದರು. "ಸ್ವಲ್ಪ urgent ಇದೆ, ದಾರಿಯಲ್ಲಿ ಊಟ ಮಾಡಿಕೊಂಡು ಹೋಗುತ್ತೇವೆ" ಎಂದರು. ನಾನು ಪುನಃ ತರಕಾರಿ, ಪಾತ್ರೆ ಸುಟ್ಟು ಹಾಕುವುದು ಬೇಡವೆಂದೋ ಏನೋ; ಗೊತ್ತಾಗಲಿಲ್ಲ. ನಮಗೆ ನನ್ನ ದೊಡ್ಡಮ್ಮನ ಮನೆಗೆ ಸಾಮಾನೊಂದನ್ನು ತಲುಪಿಸುವ ಕೆಲಸವಿತ್ತು. ಅಲ್ಲೇ ಊಟಕ್ಕೆ ಆಹ್ವಾನವೂ ಇತ್ತು. ಗಡದ್ದಾಗಿ ಬರ್ಫಿ, ದೊಣ್ಣೆ ಮೆಣಸಿನ (capsicum) ಭಾತ್, ಚಪಾತಿ, ಅಲೂ ಮಟರ್, ಅನ್ನ, ಸಾರಿನ ಊಟ ಮಾಡಿ ಮನೆಗೆ ಮರಳಿದೆವು.
-
6 comments:
ಸುಮ್ನೆ ಬೇಕಿತ್ತಾ ಇದೆಲ್ಲಾ? :)
ಸ್ಯಾಂಕಿ ಕೆರೆಗೆ ಹೋಗಿದ್ರೆ ಆಗ್ತಿತ್ತು .
ಸಂಪಿಗೆ ರಸ್ತೆ ಪೂರ್ತಿ ಅಡ್ಡಾಡಿ ಏನ್ ಬೇಕೋ ಎಲ್ಲಾ ತಿನ್ಬೋದಿತ್ತು. :)
@ವಿ.ರಾ.ಹೆ.
ಮಂತ್ರಿ ನೋಡುವ ಹುಚ್ಚು. Hype ಗೆ ಮರುಳಾದದ್ದು.
Madam,
Kannada kadime, english jaasti maadi...
nanu kannada fail, difficult to read
:P
ಮೇಡಮ್,
ಪರೀಕ್ಷೆ ಕೊಟಡಿಯಲ್ಲಿ ನಡೆದ ವಿವರ ತುಂಬಾ ಚೆನ್ನಾಗಿದೆ. ನಾನು ಯಾವುದಾದರೂ ಪರೀಕ್ಷಾ ಹಾಲ್ಗೆ ಹೋಗಬೇಕೆನಿಸಿದೆ. ಪರೀಕ್ಷೆ ಬರೆಯಲಲ್ಲ..ಬರೆಯವವರ ಬಗ್ಗೆ ಬರೆಯುವುದಕ್ಕೆ. ಅಂತ ಐಡಿಯವನ್ನು ನಿಮ್ಮ ಲೇಖನ ಒದಗಿಸಿದೆ. ಅದಕ್ಕೆ ಥ್ಯಾಂಕ್ಸ್
wow!!!
Post a Comment