Thursday, September 16, 2010

"Ladies seat" ನಿಂದ ಚಿಂತನಾಲಹರಿ...

ದಿನವೂ ಬಸ್ಸಿನಲ್ಲಿ ಕನಿಷ್ಟ ಎರಡು ಗಂಟೆ ಪ್ರಯಾಣಿಸುವ ನನ್ನನ್ನು "ಮಹಿಳೆಯರಿಗೆ" ಎಂದು ಬರೆದ ಫಲಕ ಆಗಾಗ ಚಿಂತನೆಗೆ ಹಚ್ಚುತ್ತದೆ. ನಮ್ಮೂರ ಕಡೆ (ದಕ್ಷಿಣ ಕನ್ನಡ) ಖಾಸಗಿ ಬಸ್ಸುಗಳೇ ಹೆಚ್ಚಾಗಿದ್ದು ಅಲ್ಲಿ ಈ Ladies seat ಫಲಕ ಅಷ್ಟಾಗಿ ಪ್ರಾಮುಖ್ಯ ಪಡೆದಿಲ್ಲ. ಕತ್ತಲ ವೇಳೆ ಪ್ರಯಾಣಿಸುತ್ತಿದ್ದಲ್ಲಿ ಅಥವಾ ಬೆರಳೆಣಿಕೆಯಷ್ಟೇ ಮಹಿಳೆಯರಿದ್ದರೆ ಈ ಸೀಟನ್ನು "ಕೇಳಿ ಪಡೆಯುವ" ಪ್ರಯತ್ನ ನಡೆಯುತ್ತದೆ. ಬೆಂಗಳೂರಲ್ಲಿ ಇದಕ್ಕೆ ವಿರುದ್ಧವಾದ ಪದ್ಧತಿ ಇರುವುದರಿಂದ ಮೊದಮೊದಲು ನನಗೆ ವಿಚಿತ್ರವೆನಿಸಿದ್ದು ಸಹಜ.

ಬೆಂಗಳೂರಿನಲ್ಲಿ ನಾನು ನೋಡಿದಂತೆ ಈ ಮಹಿಳಾ ಸೀಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಇವನ್ನು ಅನೇಕ ಮಹಿಳೆಯರು "ಹಕ್ಕು" ಎಂದು ಭಾವಿಸುವುದು ವಿಚಿತ್ರವೆನಿಸುತ್ತದೆ. ಹಲವರು ಸ್ವಲ್ಪವೂ ಸೌಜನ್ಯವಿಲ್ಲದಂತೆ "ಎದ್ದೇಳ್ರೀ... ಲೇಡೀಸ್ ಸೀಟೂ" ಎಂದು ದೊಡ್ಡ ಸ್ವರದಲ್ಲಿ ಹೇಳುವುದನ್ನು ನಾನು ಕೇಳಿದ್ದೇನೆ. ಬೆಂಗಳೂರಿಗೆ ಹೊಸಬಳಾಗಿದ್ದಾಗ ಸೀಟು ಬಿಟ್ಟುಕೊಟ್ಟವರಿಗೆ thanks ಹೇಳಿ ಅಕ್ಕ ಪಕ್ಕದವರಿಂದ ವಿಚಿತ್ರವಾಗಿ ನೋಡಿಸಿಕೊಂಡಿದ್ದೇನೆ. ಎಷ್ಟೋ ಸಲ ವಯಸ್ಸಾದವರನ್ನು, ಮುದುಕರನ್ನು "ಎದ್ದೇಳಿ" ಎಂದು ಚಿಕ್ಕ ಪ್ರಾಯದ, ಕೈ-ಕಾಲು ಗಟ್ಟಿ ಇರುವ ಹೆಂಗಸರು ತಮ್ಮ ಆರಾಮಕ್ಕೋಸ್ಕರ ಎಬ್ಬಿಸುವುದನ್ನು ನೋಡಿ ಮುಜುಗರ ಪಟ್ಟಿದ್ದೇನೆ. ಮಗು ಎತ್ತಿಕೊಂಡವರಿಗೂ ಜಾಗ ಕೊಡದೆ, ಕೆಲವರು ಮಗುವನ್ನು ತಾವೇ ಕೂರಿಸಿಕೊಳ್ಳುವ ಧಾರಾಳತನ ತೋರಿದ್ದನ್ನು ನೋಡಿದ್ದೇನೆ. ಇಷ್ಟೆಲ್ಲ ಆದಮೇಲೆ ನಿಜವಾಗಿ Ladies seat ಮೀಸಲಿಟ್ಟ ಉದ್ದೇಶವೇನು ಎಂಬ ಪ್ರಶ್ನೆ ಆಗಾಗ ಕಾಡಿದೆ. ಇದೇ ಪ್ರಶ್ನೆ ಪುನಃ ಕೇಳಿಕೊಳ್ಳುವ ಪ್ರಸಂಗ ನಿನ್ನೆ ಒದಗಿತು.
ನಾನು ಕೂತಿದ್ದ ಮೀಸಲಾತಿ ಸೀಟಿನ ಹಿಂದೆ ಕುಳಿತ ಸುಮಾರು ಐವತ್ತು ವರ್ಷ ಪ್ರಾಯದ ವ್ಯಕ್ತಿ ನಮ್ಮ ಸೀಟಿನ ನಡುವೆ ಕೈ ತೂರಿಸುವಂತಹ ಕೀಳು ಮಟ್ಟದ ಚೇಷ್ಟೆ ಮಾಡುತ್ತಿದ್ದ. ಎರಡು ಬಾರಿ ಬೈಸಿಕೊಂಡರೂ ಹಲ್ಲು ಕಿರಿತವೇ ಅವನ ಉತ್ತರ! ಮರುಕಳಿಸುವ ಉಪಟಳ! conductor ಸೇರಿದಂತೆ ಒಂದು ನರಪಿಳ್ಳೆಯೂ ಆತನಿಗೆ ಏನೂ ಅನ್ನಲಿಲ್ಲ. Ladies seat ನಲ್ಲಿ ಕೂತರೆ ಹೆಚ್ಚಿನ safety ಅಂತಾರೆಯೇ?

"Ladies" ಬೋರ್ಡ್ ಕಂಡಾಗ ನನ್ನ ಹಳೆಯ ಸಹೋದ್ಯೋಗಿಯೊಡನೆ ನಡೆದ ವಾಗ್ವಾದ ನೆನಪಾಗುತ್ತದೆ. ನಾನು ಸ್ತ್ರೀ ಪುರುಷ ಸಮಾನತೆಯಂತಹ ವಿಷಯಗಳ ಬಗ್ಗೆ ಯಾವತ್ತೂ ಆಸಕ್ತಿ ತೋರಿದ್ದಿಲ್ಲ. ಎಲ್ಲರೂ ಮನುಷ್ಯರು. ಕೆಲವರು ಪ್ರತಿಭಾವಂತರು, ಕೆಲವರು ತೀಕ್ಷ್ಣಮತಿಗಳು. ಕೆಲವರು ಬೇಜವಾಬ್ದಾರರು. ಇನ್ನು ಕೆಲವರು ಬೇಕಾಬಿಟ್ಟಿ ಬದುಕುವವರು. ಈ ಗುಣವಿಶೇಷಣಗಳಿಗೆ ಸ್ತ್ರೀ ಪುರುಷ ಭೇದವಿಲ್ಲ. ಅವಕಾಶ ವಂಚಿತರು, ಶೋಷಿತರು, ಕೆಲಸದ ಹೊರೆ ಹೊತ್ತವರು ಎಲ್ಲರಲ್ಲಿ ಇದ್ದಾರೆ. ಭೇದ ಮಾಡಲು ಇವೇನು ಬೇರೆ ಬೇರೆ ಪಂಗಡಗಳಲ್ಲ. co-operation, co-ordination ನಿಂದ ಬದುಕಬೇಕಾದವರು. ಇದು ನನ್ನ ಅನಿಸಿಕೆ. ಸ್ತ್ರೀ ಪುರುಷರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಶ್ರೇಷ್ಠ ಎಂಬ ವಾದವನ್ನು ನನಗೆ ಕೇಳಿದರಾಗದು. ಇಂಥದ್ದರಲ್ಲಿ ನನ್ನ ಸಹೋದ್ಯೋಗಿಯೊಬ್ಬರು ವಾದಕ್ಕಿಳಿದರು.
"ಎಲ್ಲರೂ ಸಮಾನರೆಂದು ತಿಳಿಯುವುದಾದರೆ ಬಸ್ ಗಳಲ್ಲಿ Ladies seat ಇರುವುದಕ್ಕೆ ಯಾಕೆ ಪ್ರತಿಭಟಿಸುತ್ತಿಲ್ಲ?"
"ಇಲ್ಲಿ ಸಮಾನತೆಯ ಪ್ರಶ್ನೆಯಿಲ್ಲ. ಬಸ್ ಗಳಲ್ಲಿ ಅಸಭ್ಯವಾಗಿ ವರ್ತಿಸುವ ಕೆಲವು ಮಂದಿ ಇರುತ್ತಾರೆ. ಅದಲ್ಲದೆ ಹೆಚ್ಚಾಗಿ ಮಹಿಳೆಯರಿಗೂ ಪುರುಷರಿಗೂ ಗುಂಪಿನಲ್ಲಿ ನಿಲ್ಲಲು ಅನನುಕೂಲವೆನಿಸುತ್ತದೆ. ಇದು ಅವರವರ ಪ್ರಾಕೃತಿಕ ಸ್ವಭಾವವಿರಬಹುದು. ಅಂತಹ ಸಂದರ್ಭಗಳನ್ನು ಕಡಿಮೆ ಮಾಡಲು ಸೀಟುಗಳನ್ನು ಮೀಸಲಿಟ್ಟಿರಬೇಕು" ಎಂದೆ.
ಆತ ನನ್ನ ವಾದವನ್ನು ಒಪ್ಪಲೇ ಇಲ್ಲವೆನ್ನುವುದು ಬೇರೆ ವಿಚಾರ.
ಅದೇ ಸಹೋದ್ಯೋಗಿಗೆ ಬಸ್ ಗಳಲ್ಲಿ ನಡೆಯುವ ಅಸಭ್ಯ ವರ್ತನೆಗಳನ್ನು ಹೇಳಿದಾಗ "ಮೀಸಲಿಟ್ಟ ಸೀಟು ಬಿಟ್ಟು ಬೇರೆಡೆ ಕೂತರೆ ಇಂತಹವು ಅನಿವಾರ್ಯ" ಎಂಬ ಆಶ್ಚರ್ಯಕರ ಹೇಳಿಕೆಯನ್ನೂ ನೀಡಿದ್ದರು.

ಈ ರೀತಿಯ ಮೀಸಲಾತಿಗಳಿಗೂ ಸಮಾನತೆ ಯಾ ಏಳಿಗೆಗೂ ನನಗೆ ಯಾವ ಸಂಬಂಧವೂ ಕಂಡುಬರುತ್ತಿಲ್ಲ.
Ladies seat ಮೇಲೆ ಹಕ್ಕು ಚಲಾಯಿಸಿದಂತೆ ಇನ್ನೂ ಕೆಲವೆಡೆ ಕೆಲವು ಮಹಿಳೆಯರು advantage ತೆಗೆದುಕೊಳ್ಳುವುದನ್ನು ನಾನ ಕಂಡಿದ್ದೇನೆ. ಊಟಕ್ಕೆ ಕಾದು ನಿಂತ ದೊಡ್ಡ ಸಾಲಿನಲ್ಲಿ "Ladies first" ಎಂದು ನಗುತ್ತಾ ಮುಂದೆ ಸೇರಿಕೊಳ್ಳುವವರನ್ನು ನೋಡಿದ್ದೇನೆ. ಹಸಿವು ಎಲ್ಲರಿಗೂ ಒಂದೇ ಅಲ್ಲವೇ? ಇಂತಹ ಸಂದರ್ಭಗಳನ್ನು ನೋಡಿ ಅನೇಕರು ಈ ನಡತೆಗಳನ್ನು ಸಾರ್ವತ್ರಿಕ ಎಂದು ಪರಿಗಣಿಸುತ್ತಾರೆ. Generalise ಮಾಡುತ್ತಾರೆ. ರಾತ್ರಿ ತಡವಾಗಿ ಆಫೀಸು ಬಿಡಲು ಬಯಸದ ಮಹಿಳೆಯರನ್ನು, ಬಸ್ ಗಳಲ್ಲಿ ಕಿರುಕುಳ ಅನುಭವಿಸುವವರನ್ನು ಸಮಾನತೆ, ಮೀಸಲಾತಿಗಳ ನೆಲೆಯಲ್ಲಿ ಪ್ರಶ್ನಿಸುತ್ತಾರೆ. biological differences ಅನ್ನು, ಅದಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಸಮಾನತೆ ನಿರ್ಧರಿಸುವಲ್ಲಿ ಗಣನೆಗೆ ತೆಗೆದುಕೊಳ್ಳಬಾರದು. ಇಲ್ಲಿ ಬದಲಾಗಬೇಕಿರುವುದು ಜನರ (ಮಹಿಳೆಯರೂ ಸೇರಿದಂತೆ) ದೃಷ್ಟಿಕೋನ. ಅಲ್ಲಿವರೆಗೆ Ladies seat ಆಗಲೀ ಮೀಸಲಾತಿ ಇರುವ ಯಾವುದೇ ಕ್ಷೇತ್ರವಾಗಲೀ ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ.
-

6 comments:

shivu.k said...

ಎರಡೂ ಕಡೆ ನೀವು ಮಂಡಿಸಿರುವ ವಿಚಾರ ಸಮಂಜಸವೆನಿಸುತ್ತದೆ. ಅರ್ಥಗರ್ಭಿತವಾದ, ತೂಕವುಳ್ಳ ಪುಟ್ಟ ಲೇಖನವನ್ನು ಬರೆದಿದ್ದೀರಿ...ಥ್ಯಾಂಕ್ಸ್.

ಪ್ರಗತಿ ಹೆಗಡೆ said...

chaithrika avare... olleya lekhana...

Chaithrika said...

ಮೆಚ್ಚುಗೆಗೆ ಧನ್ಯವಾದ ಶಿವು ಹಾಗೂ ಪ್ರಗತಿ ಹೆಗಡೆ ಇಬ್ಬರಿಗೂ.

ಮನಸಿನಮನೆಯವನು said...

ಚೆನ್ನಾಗಿದೆ ಬಿಡಿ..

jithendra hindumane said...

ಸಮಾನತೆ ಬೇಕು ಅಂತಾದರೆ ರಿಸರ್ವೇಶನ್ ಅಪ್ರಸ್ತುತ ಅಲ್ಲವೇ?
ಆದರೆ ಬಸ್ಗಳಲ್ಲಿ ವಿಕೃತ ಜನ ಇದ್ದೇ ಇರುತ್ತಾರೆ.....

Ganesh Bhat said...

chennagide.