Monday, April 11, 2011

ನನಸಾಗದ ಚಾರಣದ ಕನಸು (ಅಂತರಗಂಗೆ)

ಬೆಟ್ಟ ಹತ್ತುವ ಹುಚ್ಚು ಒಮ್ಮೆ ಹಿಡಿದರೆ ಮತ್ತೆ ಬಿಡುವುದು ಕಷ್ಟ ಎಂದು ನನ್ನ ಅನಿಸಿಕೆ. ಚಿಕ್ಕಂದಿನಲ್ಲಿ ಅಜ್ಜನ ಮನೆಯ ಬಳಿ ಇದ್ದ ಗುಡ್ಡಕ್ಕೆ ಏರಿ ಎತ್ತರದಿಂದ ಪುಟಾಣಿ ಬಸ್ ಗಳನ್ನು, ಪುಟಾಣಿ ಮನೆಗಳನ್ನು ಮತ್ತು ನೂರು ಕಿಲೋಮೀಟರು ದೂರದ ಸಮುದ್ರವನ್ನು ನೋಡುತ್ತಿದ್ದಾಗಲೇ ಗುಡ್ಡ ಹತ್ತುವ ಹುಚ್ಚು ಹಿಡಿದಿತ್ತು. ಅಜ್ಜನ ಮನೆಯಲ್ಲಿ ಚಿಕ್ಕಮ್ಮ-ದೊಡ್ಡಮ್ಮನ ಮಕ್ಕಳು ಸೇರಿದಾಗೆಲ್ಲ ಒಟ್ಟಾಗಿ ಹರಳುಕಲ್ಲುಗಳ ಗುಡ್ಡಕ್ಕೆ ಕಾಲು-ಕೈ ಉಪಯೋಗಿಸಿ ಜಾರುತ್ತಾ ಏರುತ್ತಿದ್ದ ನೆನಪು ಇನ್ನೂ ಹಸಿರು. ಬೆಳೆಯುತ್ತಾ ಹೋದಂತೆ ಅಜ್ಜನ ಮನೆಯಲ್ಲಿ cousins ಜೊತೆ ಸೇರುವುದು ಕಮ್ಮಿಯಾಯಿತು. ಬೆಟ್ಟ ಹತ್ತುವ ಅವಕಾಶಗಳೂ ಕಡಿಮೆಯಾದುವು. ಅಲ್ಲದೆ ಸಮಾನ ಆಸಕ್ತಿ ಹೊಂದಿದವರೂ ಸಿಗದಾದರು.

ವರುಷಗಳ ನಂತರ ಚಿತ್ರದುರ್ಗದ ಕಲ್ಲುಗಳಲ್ಲಿ ಅಲೆದಾಗ ಬೆಟ್ಟ ಹತ್ತುವ ಹುಚ್ಚು ಪುನಃ ಹತ್ತಲಾರಂಭಿಸಿತು. ಹಾಸನದ ಬಳಿ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಪುಟ್ಟ ಬಂಡೆಯನ್ನು ಹತ್ತಿ ಮೇಲಿಂದ ಕೆಳ ನೋಡಿದಾಗ ಹುಚ್ಚು ಇನ್ನಷ್ಟು ಹೆಚ್ಚಿತು. ಶಿವಗಂಗೆಯ ಚಾರಣವಂತೂ ಮರೆಯಲಾಗದ ಅನುಭವ ಎನಿಸಿತು. ಅದೇ ಗುಂಗಿನಲ್ಲಿ browsing ಮಾಡುತ್ತಾ ಅಂತರಗಂಗೆಗೆ ಹೋಗಿ ಬೆಟ್ಟ ಹತ್ತುವ ಯೋಜನೆ ಹಾಕಿಯೇ ಬಿಟ್ಟೆ.

ಕೋಲಾರದತ್ತ...


ಶನಿವಾರ 26 ಫೆಬ್ರವರಿಯಂದು ನಾವಿಬ್ಬರು ಕೋಲಾರಕ್ಕೆ ಹೊರಟೆವು. ಶುಕ್ರವಾರ ರಾತ್ರಿವರೆಗೆ ಎಲ್ಲಿಗೆ ಹೋಗುವುದು ಎಂಬ ನಿರ್ಧಾರವೇ ಆಗಿರಲಿಲ್ಲ. ಕೊನೆಗೆ ಅಂತರಗಂಗೆ ಎಂದು ನಿರ್ಧರಿಸಿ ಹೊರಟಿದ್ದೆವು. ಸುಮಾರು ಎಂಭತ್ತು ಕಿಲೋಮೀಟರು ಇದ್ದ ಅಂತರಗಂಗೆಗೆ ನಾವು ತಡವಾಗಿ ಹೊರಟಕಾರಣ ತಲುಪಿದಾಗ ಮಧ್ಯಾಹ್ನವಾಗಿತ್ತು. ದ್ವಾರದ ಬಳಿ ಒಂದೆರಡು ಗೂಡಂಗಡಿಗಳನ್ನು ಬಿಟ್ಟರೆ ಬೇರೆ ಯಾವುದೇ ಜನಸಂಚಾರ ಇದ್ದಂತೆ ಕಾಣಲಿಲ್ಲ. ದ್ವಾರದಿಂದ ಸುಮಾರು 200 ಮೀಟರ್ ನಡೆದಾಗ ಅಂತರಗಂಗೆಯ ಶಿವ ದೇವಸ್ಥಾನ ಕಂಡಿತು. ದಾರಿಯುದ್ದಕ್ಕೂ ಮಂಗಗಳ ಹಿಂಡು ನಮ್ಮ ಕೈಯಲ್ಲಿ ತಿನಿಸುಗಳಿವೆಯೇ ಎಂದು ನೋಡುವುದರಲ್ಲಿ ಮಗ್ನವಾಗಿತ್ತು. ಶಿವ ದೇವಸ್ಥಾನದ ಪಕ್ಕ ಬಂಡೆಯೊಳಗಿಂದ ಸಿಹಿನೀರಿನ ತೊರೆ ಚಿಮ್ಮಿ ಬರುತ್ತಿತ್ತು. ಅದರ ಕೆಳಗೆ ಕೆಲವರು ಸ್ನಾನ ಮಾಡುತ್ತಿದ್ದರು. ಹಲವು ಮಕ್ಕಳು ಅದರಿಂದ ಕ್ಯಾನುಗಳಲ್ಲಿ ನೀರುತುಂಬಿಕೊಳ್ಳುತ್ತಿದ್ದರು. ಆ ನೀರು ಹರಿದು ಬೀಳುತ್ತಿದ್ದ ಕೊಳವು ಕಸಕಡ್ಡಿ, ಹೂ, ಪಾಚಿಗಳಿಂದ ತುಂಬಿ ನೋಡಲು ಕೆಟ್ಟದಾಗಿ ಕಾಣುತ್ತಿತ್ತು. ಅಲ್ಲದೆ ಅದರ ಅಡಿಯಲ್ಲಿ ಜನರು ಸ್ನಾನ ಮಾಡುತ್ತಿದ್ದು, ನಾವು ನೀರು ಹಿಡಿಯಲು ಹೋದರೆ ಅವರ ತಲೆಗಿಂತ ಅರ್ಧ ಅಡಿ ಮೇಲೆಯಷ್ಟೇ ಕೈಯಿಡಬೇಕಿತ್ತು. ಹಾಗಾಗಿ ನನಗೇಕೋ ನೀರು ಹಿಡಿದುಕೊಳ್ಳುವುದರಲ್ಲಿ ಅಷ್ಟಾಗಿ ಆಸಕ್ತಿ ಉಂಟಾಗಲಿಲ್ಲ.

ಅಂತರಗಂಗೆ:


ಐದು ವರ್ಷ ಹಿಂದೆ ನಮ್ಮ ಮನೆ ಮಾಲೀಕರು ಬೆಟ್ಟ ಹತ್ತಿದ್ದರೆಂದೂ, ಆಗ ಅನೇಕರು ಹತ್ತುತ್ತಿದ್ದುದಲ್ಲದೆ, ಹಲವು ಮಕ್ಕಳು ಬೆಟ್ಟದ ಮೇಲೆ ಹತ್ತಿ ಅಲ್ಲಿಂದ can ಗಳಲ್ಲಿ ನೀರು ತುಂಬಿ ಕೆಳ ತಂದು, ತೀರ್ಥವೆಂದು ಮಾರುತ್ತಿದ್ದರೆಂದೂ, ಆಮೇಲೆ ತಿಳಿಯಿತು.

ನಾವು ಬೆಟ್ಟ ಹತ್ತುವ ಉತ್ಸಾಹದಿಂದ ಎರಡು ಲೀಟರ್ ನೀರು, ಟೊಪ್ಪಿ, ಕ್ಯಾಮರಾ ಹೊತ್ತು ತಂದಿದ್ದೆವು. ಬೆಟ್ಟ ಹತ್ತುವ ಕಡೆ ಜನಸಂಚಾರವೇ ಕಾಣುತ್ತಿರಲಿಲ್ಲ. ಅಲ್ಲದೆ ಇಂಟರ್ನೆಟ್ ನಲ್ಲಿ ಒಬ್ಬರು ಅಲ್ಲಿ ಕಳ್ಳಕಾಕರು ಇರಬಹುದೆಂಬ ಎಚ್ಚರಿಕೆ ಕೊಟ್ಟಿದ್ದರಿಂದ ನನಗೆ ಸ್ವಲ್ಪ ಇರುಸು-ಮುರುಸಾಗತೊಡಗಿತು. ಅಲ್ಲಿ ಚಿಕ್ಕ ಬಾಲಕನೊಬ್ಬ ಅತಿ ಉತ್ಸಾಹದಿಂದ ಮೇಲೆ ಕರೆದೊಯ್ಯುವೆನೆಂದು ಬಂದ. ಇನ್ನೂ ಏನು ಮಾಡುವುದೆಂದು ಯೋಚಿಸುತ್ತಿರಬೇಕಾದರೆ "ಚಿರತೆಗಳಿವೆ. ಯಾತ್ರಿಕರು ಬೆಟ್ಟ ಹತ್ತುವುದನ್ನು ನಿಷೇಧಿಸಲಾಗಿದೆ - ಪೋಲೀಸ್ ಇಲಾಖೆ" ಎಂಬ ಬೋರ್ಡು ದೃಷ್ಟಿಗಪ್ಪಳಿಸಿತು. ಇನ್ನು ಇಬ್ಬರಾಗಿ ಬೆಟ್ಟ ಹತ್ತುವ ಮಾತೇ ಇರಲಿಲ್ಲ. ಅದಲ್ಲದೆ ಬೇರೆ ಯಾರೂ ಹತ್ತುತ್ತಿರುವುದು ನಮಗೆ ಕಾಣಿಸಲಿಲ್ಲ. ನನಗೆ ನಿರಾಸೆಯಾಯಿತು. ಕೃಷ್ಣನಿಗೆ mood ಹೋಗಲಾರಂಭಿಸಿ, ಸಿಟ್ಟು ಬರತೊಡಗಿತು. "ಇನ್ನೇನು ಮಾಡುವುದು ಇಲ್ಲಿ ಕೂತು? ವಾಪಸ್ ಹೋಗೋಣ" ಎಂದು ತಿರುಗಿ ನಡೆದೇ ಬಿಟ್ಟರು.

ನಾನೂ ಇನ್ನೇನೆಂದು ಯೋಚಿಸುತ್ತಾ ಹಿಂಬಾಲಿಸಿದೆ. ಅಂತರಗಂಗೆಯ ದ್ವಾರದ ಸ್ವಲ್ಪ ದೂರದಲ್ಲಿ ಒಂದು ಬೋರ್ಡು ಹಾಕಿದ್ದು, ಅದರಲ್ಲಿ ನೋಡಲರ್ಹ ತಾಣಗಳ ಹಾಗೂ ಅಂತರಗಂಗೆಯಿಂದ ಅಲ್ಲಿಗೆ ಇರುವ ದೂರದ ಪಟ್ಟಿ ಇತ್ತು. ಅದರಲ್ಲಿ ಸುಮಾರು ನಲ್ವತ್ತು ಕಿಲೋಮೀಟರು ದೂರದಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನವೂ, ಅಲ್ಲಿಂದ ಮತ್ತೆ ಹತ್ತು ಕಿಲೋಮೀಟರು ದೂರದಲ್ಲಿ ಬಂಗಾರು ತಿರುಪತಿ ಇರುವುದೂ ತಿಳಿಯಿತು. ಎಪ್ಪತ್ತು-ಎಂಭತ್ತು ಕಿಲೋಮೀಟರು ಮೇಲೆ ಪ್ರಯಾಣಿಸಿ ಬಂದು ಸುಮ್ಮನೆ ತಿರುಗಿ ಹೋಗಲು ಮನಸಿರದ ಕಾರಣ ಈ ದೇವಸ್ಥಾನಗಳನ್ನು ನೋಡುವುದೆಂದು ನಿರ್ಧರಿಸಿದೆವು.

ಯೋಜನೆಗಳು ತಲೆಕೆಳಗಾದ ಕಾರಣ ಊಟ ಮಾಡಲು ವಿಷೇಶ ಉತ್ಸಾಹವೇನೂ ಇರಲಿಲ್ಲ. ಸುಮಾರು ಮೂರು ಗಂಟೆಯ ಹೊತ್ತಿಗೆ ಕೋಟಿಲಿಂಗೇಶ್ವರ ದೇವಸ್ಥಾನ ತಲುಪಿದೆವು. ಒಳ ಹೋಗಲು ತಲಾ ಇಪ್ಪತ್ತು ರೂಪಾಯಿಯ ಟಿಕೇಟು. ಕ್ಯಾಮೆರಾಗೆ ನೂರು. ಆ ಜಾಗದಲ್ಲಿ ಹೆಚ್ಚಿನ ನಿರೀಕ್ಷೆಗಳೇನೂ ಇದ್ದಿರದ ಕಾರಣ, ಕ್ಯಾಮೆರಾಗೆ ನೂರು ರೂಪಾಯಿ ಕೊಡಲಿಚ್ಛಿಸದೆ ಕಾರೊಳಗೆ ಇಟ್ಟು ಬಂದೆ. ಅನೇಕ ಲಿಂಗಗಳನ್ನು ಸಾಲು ಸಾಲಾಗಿ ಇಟ್ಟಿರುವ ದೇವಸ್ಥಾನದ ಹೊರಭಾಗ, ನೋಡಲು ಚೆನ್ನಾಗಿದ್ದರೂ ವಿಶೇಷವಾಗಿ ಏನೂ ಇರಲಿಲ್ಲ. ನೂರು ಅಡಿ ಮೀರಿದ ಎತ್ತರದ ಲಿಂಗ ಯಾವುದೇ ಕೆತ್ತನೆ, ತಿರುವುಗಳಿಲ್ಲದೆ ತೀರಾ ಸಾಮಾನ್ಯವೆನಿಸಿತು. ನಂದಿ ವಿಗ್ರಹವೂ ಬಹಳ ಸರಳವಾಗಿದ್ದು ನಂದಿಯ ತಲೆ ಅದರ ದೇಹಕ್ಕೆ ತುಂಬಾ ಚಿಕ್ಕದಾಗಿ (disproportionate) ಆಗಿತ್ತು. ಅಲ್ಲಿ ಕ್ಯಾಮೆರಾಗೆ ನೂರು ರೂಪಾಯಿ ತೆತ್ತು ಫೋಟೋ ತೆಗೆಯುವಂಥದ್ದೇನೂ ಕಾಣಿಸಲಿಲ್ಲ. ನನಗೆ ಮೊದಲಿಂದಲೂ ಬಣ್ಣ ಬಳಿದ, ಮಾರ್ಬಲ್, ಅಥವಾ ಟೈಲ್ಸ್ ಅಂಟಿಸಿದ ದೇವಸ್ಥಾನಗಳು ಅಷ್ಟೊಂದು ಇಷ್ಟವಾಗದ ಕಾರಣ, ಕೋಟಿಲಿಂಗೇಶ್ವರ ಮೂಲ ದೇವಸ್ಥಾನ ಬಿಟ್ಟರೆ ಬೇರೇನು ಭಕ್ತಿ ತರಿಸುವಂತೆ ಅನ್ನಿಸಲಿಲ್ಲ.

ಕೋಟಿಲಿಂಗೇಶ್ವರ:


ಬಂಗಾರು ತಿರುಪತಿ:


ಅಲ್ಲಿಂದ ಹೊರಟು ಬಂಗಾರು ತಿರುಪತಿ ತಲುಪಿದಾಗ ನಾಲ್ಕು ಗಂಟೆ ಮೀರಿತ್ತು. ಅಲ್ಲಿ ವಿಷ್ಣು ಮತ್ತು ಲಕ್ಷ್ಮೀ ದೇವಸ್ಥಾನ ನೋಡಿ ಮರಳಿ ಹೊರಟೆವು. ಅಂತರಗಂಗೆ, ಕೋಟಿಲಿಂಗೇಶ್ವರ, ಬಂಗಾರು ತಿರುಪತಿ ಬಗ್ಗೆ ಬರೆದು ನಮ್ಮನ್ನು ಹೋಗಲು ಹುರಿದುಂಬಿಸಿದ ಬ್ಲಾಗುಗಳ ಬಗ್ಗೆ ಮನಸ್ಸಿನೊಳಗೇ ಅಸಮಾಧಾನವೂ ಆಶ್ಚರ್ಯವೂ ಆಗುತ್ತಿತ್ತು. ಎಂಭತ್ತು ಕಿಲೋಮೀಟರು ಪ್ರಯಾಣ ಮಾಡಿ ಹೋಗಿ ನೋಡುವಂಥದ್ದೇನೂ ಅಲ್ಲಿ ಇರಲಿಲ್ಲ. ಅಂತರಗಂಗೆಯ ಬೆಟ್ಟ ಹತ್ತುತ್ತಿದ್ದರೆ ಬೇರೆ ಮಾತು. ಅಲ್ಲಿಂದ ಬರುತ್ತಾ ಸಿಕ್ಕಿದ ಬಹಳ ಒಳ್ಳೆಯ ವಿಷಯವೆಂದರೆ ದಾರಿ ಬದಿಯ ಮೂಲಂಗಿ, ಕ್ಯಾರೇಟ್ ಹೊಲಗಳು, ಮತ್ತು ಅವುಗಳ ಬಳಿ ರಾಶಿ ಹಾಕಿ ಮಾರಲ್ಲದುತ್ತಿದ್ದ ತಾಜಾ ತರಕಾರಿಗಳು. ಅನೇಕ ವಾಹನಗಳು ದಾರಿಬದಿಯಲ್ಲಿ ನಿಲ್ಲಿಸಿ ತರಕಾರಿ ತುಂಬಿಕೊಳ್ಳುತ್ತಿದ್ದವು. ನಾನು ಕೆಲವು ಸೊಪ್ಪು, ಮೆಣಸು ಮತ್ತು ಮುಳ್ಳುಸೌತೆ ಕೊಂಡೆ. ಒಂದು ಕಿಲೋ ಮುಳ್ಳುಸೌತೆಗೆ ಹತ್ತೇ ರುಪಾಯಿ! ಮನೆಯಲ್ಲಿ ತಂದು ತಿಂದಾಗ ಇನ್ನೊಂದೆರಡು ಕಿಲೋ ತರಬಹುದಿತ್ತು ಎನಿಸಿತು. ಅಷ್ಟು ರಸಭರಿತವಾಗಿತ್ತು. ಅದೇ ಜಾಗದಲ್ಲಿ ನಾನು ಕ್ಯಾರೇಟ್ ಹಾಗೂ ಮೂಲಂಗಿಯ ಹೊಲಗಳನ್ನು ಹತ್ತಿರದಿಂದ ನೋಡಿದೆ. ಹೊಲದ ತುಂಬ ಬೆಳೆದು ನಿಂತಿದ್ದ (ಅಲ್ಲ... ಹೂತಿದ್ದ) ಕ್ಯಾರೇಟ್ ಹಾಗೂ ಮೋಲಂಗಿಗಳು ಮನಸಿಗೆ ಬಹಳ ಉಲ್ಲಾಸ ನೀಡಿದವು.

ಕ್ಯಾರೇಟ್ ಹೊಲ:


ಮೂಲಂಗಿ ಹೊಲ:


ಆನಂತರ ಅಲ್ಲಿಂದ ಹೊರಟು ಮನೆಗೆ ಮರಳಿದೆವು. ಬರುತ್ತಾ ದಾರಿಯಲ್ಲೇ ಕಾಮತ್ ಹೋಟೆಲಿನಲ್ಲಿ ತಿಂಡಿತಿಂದೆವು. ನಮ್ಮ ಈ ಪ್ರಯಾಣ ನೆನಪಿಡುವಂತಹದ್ದೇನೂ ಆಗಿರಲಿಲ್ಲ. ಫೋಟೋ ತೆಗೆಯಲು ಹೆಚ್ಚಿನ ಅವಕಾಶಗಳೂ ಇರಲಿಲ್ಲ. ಅಲ್ಲದೆ ಇದರ ಬಗ್ಗೆ ಬರೆಯುವ ಉತ್ಸಾಹವೂ ಅಷ್ಟಾಗಿ ಇರಲಿಲ್ಲ. ಆದರೂ ಯಾರಾದರೂ ಬ್ಲಾಗು ಓದುಗರು ಇಷ್ಟು ದೂರದ ಪ್ರಯಾಣದ ಯೋಜನೆ ಹಾಕಿದ್ದರೆ ಅವರಿಗೆ ಮೊದಲೇ ಸ್ವಲ್ಪ ಎಚ್ಚರಿಕೆ ಕೊಡಬೇಕೆಂದು ಅನ್ನಿಸಿ ಇದನ್ನು ಬರೆದೆ. ನಮ್ಮ ಪ್ರಯಾಣವು ಆಸಕ್ತಿದಾಯಕವಾಗುವಂತೆ ಇನ್ನೇನಾದರೂ ನೋಡಬೇಕಿತ್ತೇ ಎಂದು ನಿಮಗೆ ತಿಳಿದಿದ್ದರೆ ತಿಳಿಸಿ.

ಸಂಜೆ...


(ಇದನ್ನು ಬರೆಯಲಾರಂಭಿಸಿದ್ದು ಫೆಬ್ರವರಿ 28ರಂದು. ಇಂದು ಮುಗಿಯಿತು!)
-

7 comments:

ಸಂದೀಪ್ ಕಾಮತ್ said...

" (ಇದನ್ನು ಬರೆಯಲಾರಂಭಿಸಿದ್ದು ಫೆಬ್ರವರಿ 28ರಂದು. ಇಂದು ಮುಗಿಯಿತು!) "
ಬೆಟ್ಟಾನೇ ಬೇಗ ಹತ್ತಿದ್ರಿ ;)

shivu.k said...

ಮೇಡಮ್,
ನಾನು ಹೋಗಿದ್ದೇನೆ..ತುಂಬಾ ಚೆನ್ನಾಗಿದೆ..

Chaithrika said...

ಹೌದಾ ಶಿವೂ ಅವರೇ? ಮತ್ತೆ ನಮಗೇಕೆ ಹಾಗನಿಸಿತೋ! ಬಹುಶಃ ಮಾಡಿದ ಯೋಜನೆ ನೆರವೇರಲಿಲ್ಲ ಎಂದು mood off ಆಯಿತೇನೋ. ನೀವು ಬೆಟ್ಟ ಹತ್ತಿದಿರೇ?

ದೀಪಸ್ಮಿತಾ said...

ಕ್ಯಾಮರಾಗೆ ಅತಿ ಹೆಚ್ಚು ಟಿಕೆಟ್ ಕೇಳುವುದು ಬಹುಶಃ ನಮ್ಮ ದೇಶದ ವಿಚಿತ್ರ ರೋಗ. ಛಾಯಾಗ್ರಹಣದ ಮೂಲಕ ಆ ಪ್ರದೇಶವನ್ನು ಹೆಚ್ಚಿನ ಜನರಿಗೆ ಪರಿಚಯಿಸಬಹುದು, ಇನ್ನೂ ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ಆದರೆ ನಮ್ಮಲ್ಲಿ ದುಬಾರಿ ಟಿಕೆಟ್ ಇಟ್ಟು ಫೋಟೋ ತೆಗೆಯದಂತೆ ಮಾಡಿಬಿಡುತ್ತಾರೆ. ಕೆಲವು ಕಡೆ, ಅಂದರೆ ದೇವಸ್ಥಾನ, ಪೂಜಾಸ್ಥಳ, ಆಶ್ರಮ, ಆಸ್ಪತ್ರೆ, ಹೀಗೆ ಒಂದಿಷ್ಟು ಜಾಗಗಳಲ್ಲಿ ಈ ನಿರ್ಬಂಧ ಇದ್ದರೆ ತಪ್ಪಿಲ್ಲ. ಜನ ಫೋಟೋ ತೆಗೆಯುತ್ತ ಆ ಜಾಗದ ಶಾಂತಿ, ಪಾವಿತ್ರ್ಯವನ್ನು ಭಂಗತರಬಹುದು ಎಂದು. ಆದರೆ ಎಲ್ಲಾ ಕಡೆ ಈ ನಿರ್ಬಂಧ/ದುಬಾರಿ ಟಿಕೆಟ್ ಸರಿಯಲ್ಲ

rukminimalanisarga.blogspot.com said...

ಪ್ರವಾಸ ಹೋಗುವುದು ಒಂದು ಸುಂದರ ಅನುಭೂತಿ. ಬೆಟ್ಟ ಹತ್ತಲು ಒಮ್ಮೆ ಹೊರಟರೆ ಅದು ನಮ್ಮನ್ನು ಬಿಡದೆ ಇರುವುದು ನಿಜ. ಬೆಟ್ಟ ಹತ್ತಲಾಗದಿದ್ದರೇನಂತೆ ಬೇರೆ ಊರು ಸ್ಥಳ ನೋಡಿದ ಅನುಭವ ಆಗಿದೆಯಲ್ಲ. ಅಷ್ಟು ಸಾಕು. ಎಲ್ಲೆ ಹೋದರೂ ಅದನ್ನು ಹೀಗೆ ಬರೆದು ಓದುಗರಿಗೆ ಹಂಚುವುದು ಒಳ್ಳೆಯ ಅಭ್ಯಾಸ. ಮುಂದೆ ತಂಡದೊಂದಿಗೆ ಹೋಗಿ ಅಂತರಗಂಗೆ ಹತ್ತಿ. ಟ್ರಕ್ಕಿಂಗ್ ಕರೆದೊಯ್ಯುವ ಸಂಸ್ಥೆ ಬೆಂಗಳೂರಲ್ಲಿ ಇದೆ. ನೆಟ್ ನಲ್ಲಿ ನೋಡು.

ವಿ.ರಾ.ಹೆ. said...

ನಿಮ್ಮ ಎಚ್ಚರಿಕೆಗೆ ಧನ್ಯವಾದಗಳು. ಪೆಟ್ರೋಲು & ಸಮಯ ಉಳಿಸಿದ್ದೀರಿ. ಕೆಲವೊಮ್ಮೆ ಎಲ್ಲಾದರೂ ಹೋದಾಗ ಏನೂ ನೋಡುಲು ಇರದೇ ಹೀಗೆ ಆಗುವುದಿದೆ. ಆಗ ಪ್ರಯಾಣವನ್ನೇ ಎಂಜಾಯ್ ಮಾಡಬೇಕಷ್ಟೆ :)

ಶಿವು ಅವರು ಹೋಗಿದ್ದಾರಂತೆ , ಚೆನ್ನಾಗಿದೆ ಅನ್ನುತ್ತಿದ್ದಾರೆ ಮತ್ತೆ?!

ವಿ.ರಾ.ಹೆ. said...

ಇಲ್ನೋಡಿ.

http://www.enidhi.net/2012/01/antaragange-kolar-cave-exploration.html