Thursday, January 27, 2011

ಸರ್ವವೂ ಎಣ್ಣೆಮಯ

ಭಾನುವಾರವೆಂದರೆ ಅನೇಕರಿಗೆ ತಲೆಗೆ ಎಣ್ಣೆ ಹಚ್ಚಿ ಸ್ನಾನಮಾಡುವ ದಿನ. ನಾನೂ ಇದಕ್ಕೆ ಹೊರತಲ್ಲ. ಅದೇನೋ ಮಿಶ್ರ ಸೊಪ್ಪುಗಳ ಒಣಗಿಸಿ ಹುರಿದು ಕಾಯಿಸಿ ಮಾಡಿದ ಎಣ್ಣೆಯಿರಬಹುದು, ಅದೇ ಸತ್ವಗಳ ಮಾರುಕಟ್ಟೆಯಿಂದ ತಂದ ಎಣ್ಣೆಯಿರಬಹುದು ಅಥವಾ ಕೊಬ್ಬರಿ ಎಣ್ಣೆಯಿರಬಹುದು, ಲೀಟರಿನಷ್ಟು ತಲೆಗೆ ಸುರಿದು "ಫಿಂಗರ್ ಟಿಪ್ಸ್"ನಿಂದ ತಿಕ್ಕಿ, ಬಾಚಿ ಎಳೆದು ಕಟ್ಟಿ ತಣ್ಣಗಿನ ಅನುಭವ ಪಡೆಯುವುದೆಂದರೆ ಏನೋ ಖುಷಿ. ಆರೇಳು ವರ್ಷ ಹಿಂದೆ ನಾವು ಹಾಸ್ಟೆಲ್ಲಿನಲ್ಲಿದ್ದಾಗ ಶನಿವಾರ ಬಂದರೆ ಏನೋ ಸಂಭ್ರಮ. ಹೆಚ್ಚಿನವರು ಬೇರೆ ಬೇರೆ (ಸು)ವಾಸನೆಯ ಎಣ್ಣೆಗಳನ್ನು ತಲೆಗೆ ತಿಕ್ಕಿ, ದಿಂಬಿನ ಮೇಲೆ ದಿನ ಪತ್ರಿಕೆ ಹಾಸಿ, ರಾತ್ರಿ ಪೂರ್ತಿ ತಲೆ ತಂಪಾಗಿಸುತ್ತಿದ್ದರು. ಎಷ್ಟೋ ಮಂದಿ ಮಾತನಾಡುತ್ತಾ ಎಣ್ಣೆ ಸುರಿದುಕೊಂಡು ಅದು ಕಿವಿಯ ಹಿಂದೆ ತಣ್ಣನೆ ಇಳಿದಾಗ ಏನೋ ಹುಳ ಹರಿದಾಡುತ್ತಿದ್ದಂತೆ ಬೆಚ್ಚಿ ಬೊಬ್ಬಿಡುತ್ತಿದ್ದರು. ತಮ್ಮ ಎಣ್ಣೆಗಳು ಮುಗಿದಿದ್ದರೆ ಬೇರೆಯವರ ರೂಂ ಬಾಗಿಲು ತಟ್ಟಿ ಎಣ್ಣೆ ಸಾಲಕ್ಕೆ ಪಡೆಯುತ್ತಿದ್ದರು. (ಮತ್ತೆ ಆ ಪ್ರಮಾಣದಲ್ಲಿ ಎಣ್ಣೆ ಉಚಿತ ಕೊಡಲು ಸಾಧ್ಯವೇ?). ಭಾನುವಾರ ಬೆಳಗಾದರೆ ಬಚ್ಚಲಿನ ಮುಂದೆ ಬಕೇಟುಗಳ ಸಾಲು. ಬಕೇಟಿನ ಮಾಲೀಕರ ಪತ್ತೆ ಇಲ್ಲದೆ ಬೇರೊಬ್ಬರು ಒಳ ನುಗ್ಗಿದರೆ ಅಲ್ಲೊಂದು ಸಣ್ಣ ಜಗಳ ಖಾತರಿಯಾಗಿತ್ತು. ಸೌರ ಶಕ್ತಿ ನೀರಿನ ಒಲೆಯಲ್ಲಿ ಬಿಸಿನೀರು ಮುಗಿದು ವಿದ್ಯುತ್ ಹೀಟರು ಆನ್ ಮಾಡುವಂತೆ ವಾಚ್ ಮಾ್ಯನ್ ಬಳಿ ದಂಬಾಲು ಬೀಳಬೇಕಾಗುತ್ತಿತ್ತು. ಆದರೆ ಅದಕ್ಕಿಂತ ಕಷ್ಟ ಕೊನೆಯಲ್ಲಿ ಸ್ನಾನಕ್ಕೆ ಹೋಗುವುದು. ಬಚ್ಚಲೆಲ್ಲ ಎಣ್ಣೆಮಯವಾಗಿ ಕಾಲಿಟ್ಟಲ್ಲಿ ಜಾರಿಬೀಳುವ ಸಂಭವವಿತ್ತು. ಎಷ್ಟೋ ಬಾರಿ ನೆಲಕ್ಕೆ ಸೋಪಿನ ಪುಡಿ ಸಿಂಪಡಿಸಿ ಎಣ್ಣೆಯನ್ನು ಹೊರ ಸಾಗಿಸಿ ಸ್ನಾನ ಮಾಡುವ ಪರಿಸ್ಥಿತಿ ಬಂದಿತ್ತು. ಬಚ್ಚಲಿನ ನೀರಿಂದ ಎಣ್ಣೆ ಹೊರತೆಗೆಯುವ ವಿಧಾನವಿದ್ದರೆ ನೂರಾರು ಬಾಟಲಿ ತುಂಬುತ್ತಿತ್ತೇನೋ.

ಹಾಸ್ಟೆಲ್ಲಿನಲ್ಲಿದ್ದಾಗ ನನ್ನ ಪ್ರಯೋಗ ಪ್ರಿಯ ಗೆಳತಿಯೊಬ್ಬಳು ಹರಳೆಣ್ಣೆ ತಲೆಗೆ ಸುರಿದು ಗಾಢ ನಿದ್ದೆ ಮಾಡಿದ್ದು ಇಲ್ಲಿ ನೆನಪಾಗುತ್ತದೆ. ಮರುದಿನ ಹರಳೆಣ್ಣೆಯ ಅಂಟಿನಿಂದ ಕೂದಲನ್ನು ಬಿಡಿಸು ಹೋಗಿ ಒಂದು ಗಂಟೆಗೂ ಮೀರಿದ ಸುದೀರ್ಘ ಸ್ನಾನ ಮಾಡಿದ್ದು ಬೇರೆ ವಿಚಾರ.

ಎಣ್ಣೆ ತಿಕ್ಕುವುದರಲ್ಲಿ ಬ್ಯೂಟಿ ಪಾರ್ಲರುಗಳೂ ಕಮ್ಮಿ ಇಲ್ಲ. ಪುರುಷರ ಕೂದಲು ಕತ್ತರಿಸುವ ಸಲೂನುಗಳಲ್ಲಿ ಹೆಚ್ಚಾಗಿ ಕಂಡುಬರುವುದು ನವರತ್ನ ತೈಲ. ಪ್ರತಿ ಬಾರಿ ಕೂದಲು ಕತ್ತರಿಸಲು ಹೋದಾಗಲೂ ನನ್ನ ಯಜಮಾನರು ನೂರು ರೂಪಾಯಿಗೆ (ಬೆಂಗಳೂರಿನಲ್ಲಿ) ಆಯಿಲ್ ಮಸಾಜ್ ಎಂದು ತಲೆಗೆ ನವರತ್ನ ಸುರಿಸಿ ಪಟಪಟ ಹೊಡೆಸಿ, ಕುತ್ತಿಗೆ ತಿರುವಿ ಟಕ್ ಎನಿಸಿಕೊಂಡು ಎಣ್ಣೆಮಯ ಮುಖ ಹೊತ್ತು ಮನೆಗೆ ಬರುತ್ತಾರೆ. ಹೀಗೇ ಒಮ್ಮೆ ನನ್ನ ತಂದೆ ಆಯಿಲ್ ಮಸಾಜ್ ಮಾಡಿಸಿ ಕುತ್ತಿಗೆ ಟಕ್ ಎನಿಸಿದಾಗ ಅಲ್ಪಕಾಲದಿಂದ ಬಾಧಿಸಿದ ಹೆಗಲು ನೋವು ಮಾಯವಾಯಿತಂತೆ!

ಸರ್ವ ವ್ಯಾಪಿ ಎಣ್ಣೆಯ ಇನ್ನೊಂದು ರೂಪ ಬಸ್ ಗಳಲ್ಲಿ ಕಾಣಸಿಗುತ್ತದೆ. ಅದು ಬಸ್ ಗಳ ಕಿಟಕಿ ಗಾಜುಗಳ ಮೇಲೆ ಯಾವತ್ತೂ ಮೂಡಿರುವ ಎಣ್ಣೆ ವೃತ್ತಗಳು. ಕಿಟಕಿ ಗಾಜಿಗೆ ಆತು ತೂಕಡಿಸಿದವರ ತಲೆಯ ಪರಿಧಿಯ ಮೇಲೆ ಈ ಎಣ್ಣೆಯ ವೃತ್ತಗಳ ಆಕಾರ ವ್ಯತ್ಯಾಸವಾಗುತ್ತದೆ. ಆ ಸೀಟಿನಲ್ಲಿ ಕುಳಿತ ಬೇರೆ ಬೇರೆ ಜನರೂ ಅದೇ ವೃತ್ತಗಳ ಮೇಲೆ ತಮ್ಮ ತಲೆಯಿಂದ ಇನ್ನಷ್ಟು ಎಣ್ಣೆ ತುಂಬಿಸಿ ಹೋಗುತ್ತಾರೆ. ದಿನದ ಮೊದಲ ಟ್ರಿಪ್ ನಲ್ಲಿ ಹೋದರೂ ಎಣ್ಣೆ ವೃತ್ತ ಇದ್ದೇ ಇರುತ್ತದೆ. ಇವು ಹಿಂದಿನ ದಿನಗಳವು ಇರಬೇಕು ಎಂದುಕೊಂಡಿದ್ದೇನೆ. ಎಷ್ಟೋ ಬಾರಿ ಕಿಕ್ಕಿರಿದ ಬಸ್ ಗಳಲ್ಲಿ ಎಣ್ಣೆ ಹಚ್ಚಿ, ಹೂವು ಮುಡಿದ ಹೆಂಗಸರು ನಿಂತಿರುತ್ತಾರೆ. ಅವರು ನಮಗಿಂತ ಕುಳ್ಳಗಿದ್ದು ನಮ್ಮ ಪಕ್ಕವೇನಾದರೂ ನಿಂತಿದ್ದರೆ ನಮಗೂ ಎಣ್ಣೆ ಲೇಪ ಗ್ಯಾರಂಟಿ. ಅವರು ಅತ್ತಿತ್ತ ಅಲುಗುತ್ತಾ ತಲೆಯ ಎಣ್ಣೆಯನ್ನು ನಮ್ಮ ಮುಖ ಮೂತಿಗೆ, ಕಂಬಿ ಹಿಡಿದುಕೊಂಡ ಕೈಗೆ ಲೇಪಿಸುತ್ತಿದ್ದರೆ ಏನೋ ಸಂಕಟ. ಎಣ್ಣೆ, ಹೂವು (ಬೇಕಿದ್ದರೆ ಬೆವರು) ಸೇರಿ ಮಿಶ್ರ ವಾಸನೆಯೊಂದನ್ನು ಬೀರುತ್ತಿದ್ದರೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ.

ಇದೇ ಸಂದರ್ಭ ನನಗೊಂದು ಮೋಜಿನ ಸಂಗತಿ ನೆನಪಾಗುತ್ತದೆ. ಕೆಲವು ವರ್ಷಗಳ ಹಿಂದೆ ನನ್ನ ಸಂಬಂಧಿಯೊಬ್ಬರು ತಮ್ಮ ಮಗನನ್ನು ಅಂಗನವಾಡಿಗೆ ಸೇರಿಸಿದರು. ಅದು ಹಳ್ಳಿ ಪ್ರದೇಶ. ಅಲ್ಲಿಗೆ ಬರುತ್ತಿದ್ದ ಮಕ್ಕಳೆಲ್ಲಾ ತಲೆಗೆ ರಾಶಿ ಎಣ್ಣೆ ಸುರಿದುಕೊಂಡಿರುತ್ತಿದ್ದರು. ಆ ಮಕ್ಕಳು ಒಂದು ಹೊಸದಾದ ಆಟ ಕಂಡುಕೊಂಡಿದ್ದರಂತೆ. ಅಂಗಾತ ಮಲಗಿ ಕಾಲುಗಳಿಂದ ನೆಲವನ್ನು ದೂಡುತ್ತಾ ತಲೆಯ ಹಿಂಭಾಗದ ಎಣ್ಣೆಯ ಜಿಡ್ಡಿನಲ್ಲಿ ಸುಲಭವಾಗಿ ಜಾರುತ್ತಾ ಇಡೀ ತರಗತಿ ಸುತ್ತುತ್ತಿದ್ದರಂತೆ. ನಮ್ಮ ಸಂಬಂಧಿ ಅಲ್ಲಿ ಹೋದಾಗ ಈ "ಹಿಂದಲೆಯಲ್ಲಿ ಜಾರುವ" ಮಕ್ಕಳ ಹಿಂದೆ ಶಿಕ್ಷಕಿ ಬೆತ್ತ ತೋರಿಸಿ ಗದರಿಸುತ್ತಾ ಓಡಾಡುತ್ತಿದ್ದರಂತೆ. ನನಗಂತೂ ಈ ಅಂಗನವಾಡಿ ಚಪ್ಪಟೆ ತಲೆಯ ಮಕ್ಕಳನ್ನು ಸೃಷ್ಟಿಸುವ ಕೇಂದ್ರದಂತೆ ಭಾಸವಾಯಿತು.

ಎಣ್ಣೆ ಹಚ್ಚುವಿಕೆ ಬರಿಯ ತಲೆಗಷ್ಟೇ ಸೀಮಿತವಾಗಿಲ್ಲ. ಚರ್ಮದ ಕಾಂತಿಗೆ, ಯೌವನಕ್ಕೆ, ಚಳಿಗಾಲದ ಬಿರುಕಿಗೆ ಎಂದು ಮೈಗೆಲ್ಲ ಎಣ್ಣೆ ಹಚ್ಚಿಕೊಳ್ಳಬಹುದು. ದೀಪಾವಳಿ ಬಂತೆಂದರೆ ಮೈಗೆ ಎಣ್ಣೆ ತಿಕ್ಕಿಸಿಕೊಳ್ಳಲು ನೆಪ ಸಿಕ್ಕಂತಾಗುತ್ತದೆ. ಕೆಲವರು ಇಡೀ ಮೈಗೆ ಹಚ್ಚಿಕೊಳ್ಳದಿದ್ದರೂ "ಶಾಸ್ತ್ರ" ಎಂದು ಕೈ-ಕಾಲಿಗೆ ಮಾತ್ರ ಹಚ್ಚಿ ಸ್ನಾನಮಾಡುವುದಿದೆ. ನರಕಾಸುರ ಹತನಾದರೆ ನಾವೇಕೆ ಎಣ್ಣೆ ತಿಕ್ಕಿಕೊಳ್ಳಬೇಕೋ ಗೊತ್ತಿಲ್ಲ. ಇನ್ನು ಹಸುಳೆಗಳನ್ನಂತೂ ಕೇಳಲೇ ಬೇಡಿ. ದಿನವೂ ಸ್ನಾನಕ್ಕೆ ಮೊದಲು ಪರಿಣತರಿಂದ ಎಣ್ಣೆ ತಿಕ್ಕಿಸಿ ವ್ಯಾಯಾಮ ಮಾಡಿಸಿಕೊಳ್ಳುತ್ತವೆ. ಕೆಲವು ಹಸುಳೆಗಳಿಗೆ ತುಪ್ಪ, ಇನ್ನು ಕೆಲವಕ್ಕೆ ಕೊಬ್ಬರಿ ಎಣ್ಣೆ, ಶೀತ ಪ್ರಕೃತಿಗಳವರಿಗೆ ಆಲೀವ್ ಎಣ್ಣೆೆ, ಜಾನ್ಸನ್ನನ ಮಕ್ಕಳಿಗೆ ಇನ್ನೇನೋ ಎಣ್ಣೆ! (ಕೆಲವರಲ್ಲಿ ಮಗುವಿಗೆ ಯಾವ ಎಣ್ಣೆ ಹಚ್ಚುವುದೆಂದು ಎಂದು ಪ್ರಶ್ನಿಸಿದಾಗ "ನಮ್ಮದು ಜಾನ್ಸನ್ಸ್ ಬೇಬಿ" ಎಂದಿದ್ದಾರೆ).

ಕಳ್ಳರಿಗೂ ಮೈ ಪೂರ್ತಿ ಎಣ್ಣೆ ಹಚ್ಚಿಕೊಳ್ಳುವ ಅಭ್ಯಾಸವಿದೆ ಎಂದು ಇತ್ತೀಚೆಗಷ್ಟೇ ತಿಳಿಯಿತು. ಕದಿಯುತ್ತಿರುವಾಗ ಯಾರಾದರೂ ಹಿಡಿಯಲು ಬಂದರೆ ಅಕ್ಷರಶಃ "ಜಾರಿಕೊಳ್ಳಲು" ಎಣ್ಣೆಗಿಂತ ಇನ್ನೇನು ಸಹಕಾರಿಯಾದೀತು? ಹಿಂದೊಮ್ಮೆ ರೈಲಿನಲ್ಲಿದ್ದ ನನ್ನತ್ತೆಯವರ ಕೊರಳ ಸರವನ್ನು ಕಿಟಕಿ ಹೊರಗಿನಿಂದ ಎಳೆಯ ಹೊರಟಿದ್ದ ಕಳ್ಳನನ್ನು ಹಿಡಿಯಲು ಹೋದಾಗ ಎಣ್ಣೆ ಮೆತ್ತಿದ ಕೈಯಿಂದಾಗಿ ಜಾರಿಕೊಂಡನಂತೆ.

ಎಣ್ಣೆಯ ಕಾರುಭಾರು ಇಷ್ಟಕ್ಕೇ ನಿಂತಿಲ್ಲ. ಬಹಳಷ್ಟು ಜನರಿಗೆ ಎಣ್ಣೆಯಲ್ಲಿ ಕರಿದ ತಿಂಡಿಗಳೆಂದರೆ ಅದ್ಭುತ ರುಚಿಯ ತಿಂಡಿಗಳು ಎಂದರ್ಥ. ನನಗೆ ಎಣ್ಣೆ ತಿಂಡಿ ಎಂದರೆ ಅಷ್ಟಕ್ಕಷ್ಟೆ. ನಾನು ಎಣ್ಣೆ ತಿಂಡಿ ಮಾಡುವುದರಲ್ಲಿ ಬಲು ಹಿಂದೆ. ಎಷ್ಟೋ ಬಾರಿ ಎಣ್ಣೆಯಲ್ಲಿ ಕರಿಯಲು ಹೊರಟು ಏನೇನೋ ಅವಾಂತರಗಳಾಗಿ "ಇದು ನನ್ನ ಡಿಪಾರ್ಟಮೆಂಟ್ ಅಲ್ಲ" ಎಂದು ಬಿಟ್ಟು ಬಿಟ್ಟಿದ್ದೇನೆ. ಇದನ್ನು ಅರಿತ ನನ್ನ ಮಿತ್ರರು "ನೀನು ಎಷ್ಟೇ ಒಳ್ಳೆಯ ಅಡುಗೆ ಮಾಡು, ಎಣ್ಣೆಯಲ್ಲಿ ಕಾಯಿಸಲು ಬರಲಿಲ್ಲ ಎಂದರೆ ನೀನು ಉತ್ತಮ ಅಡುಗೆಯವಳೆಂದು ಕರೆಸಿಕೊಳ್ಳಲು ಯೋಗ್ಯಳೇ ಅಲ್ಲ" ಎಂದಿದ್ದರು. ಆ ಮಟ್ಟಿಗಿದೆ ಎಣ್ಣೆಯ ಶ್ರೇಷ್ಠತೆ. ಎಣ್ಣೆಯಲ್ಲಿ ಕರಿಯುವುದು ಬಿಡಿ ಎಣ್ಣೆಯನ್ನು ಹಾಗೇ ಕುಡಿದ ಉದಾಹರಣೆಗಳಿವೆ. "ಹರಳೆಣ್ಣೆ ಕುಡಿದವನಂತೆ ಮುಖಮಾಡಿಕೊಂಡು..." ಎಂಬ ಮಾತಿನಿಂದ ಎಣ್ಣೆಯನ್ನು ಯಾರೋ ಕುಡಿದಿರುವುದು ಸಾಬೀತಾಗುತ್ತದೆ. ಅದೇಕೆ ಹರಳೆಣ್ಣೆ ಕುಡಿದರೋ, ಕುಡಿದ ನಂತರ ಮುಖ ಹೇಗೆ ಆಯಿತೋ? ನನಗಂತೂ ಗೊತ್ತಿಲ್ಲ. ಸಧ್ಯಕ್ಕೆ ಹರಳೆಣ್ಣೆ ಕುಡಿದವರಾರೂ ಗೊತ್ತಿಲ್ಲದಿದ್ದರೂ ಆ ಮಾತು ಇನ್ನೂ ಚಾಲ್ತಿಯಲ್ಲಿರುವುದರಿಂದ ಆ ಮುಖಭಾವ ಏನೋ ವಿಶೇಷ ಸ್ಟಾ್ಯಂಡರ್ಡ್ ಇರಬೇಕೆಂದು ಭಾವಿಸಿದ್ದೇನೆ. ಕೆಲವು ಎಣ್ಣೆಗಳು ಕುಡಿಯಲು ಇಷ್ಟವಾಗುತ್ತಲೂ ಇರಬಹುದು. ಇಲ್ಲದಿದ್ದರೆ ಮದ್ಯ ಕುಡಿಯುವಿಕೆಗೆ "ಎಣ್ಣೆ ಹಾಕಿಕೊಳ್ಳುವುದು" ಎನ್ನಬಹುದೆಂದು ನನಗನ್ನಿಸುವುದಿಲ್ಲ. ನಿದ್ದೆ ಓಡಿಸಲೂ ಎಣ್ಣೆ ಉಪಯೋಗವಾಗುತ್ತದೆ. "ಕಣ್ಣಿಗೆ ಎಣ್ಣೆ ಬಿಟ್ಟು" ರಾತ್ರಿಯಿಡೀ ಕಾಯುವುದೋ, ಓದುವುದೋ ಮಾಡುತ್ತಾರೆಂದರೆ ಎಣ್ಣೆ ಏನೆಲ್ಲ ಮಾಡಲು ಶಕ್ತವಾಗಿದೆ ಎಂದು ಗೊತ್ತಾಗುತ್ತದೆ.

ಎಣ್ಣೆ ಬಳಕೆಯಾಗದ ಜಾಗವೆಲ್ಲಿದೆ ಹೇಳಿ. ಅಡುಗೆಯಿಂದ ಹಿಡಿದು ನೋವು ನಿವಾರಕದವರೆಗೆ, ಕಿರ್ರೆನ್ನುವ ಲೋಹದ ಕೀಲುಗಳಿಂದ ಹಿಡಿದು ಎಣ್ಣೆಕಂಬದಂತಹ ಸಾಂಪ್ರದಾಯಿಕ ಆಟಗಳವರೆಗೆ, ಕೇಶ ಚರ್ಮಗಳ ಸೌಂದರ್ಯವರ್ಧನೆಯಿಂದ ಹಿಡಿದು ಜಾರಿಕೊಳ್ಳುವ ಕಳ್ಳರವರೆಗೆ ಎಲ್ಲವೂ ಎಣ್ಣೆಮಯ. ಇದೂ ಸಾಕಾಗಲಿಲ್ಲವೆಂದು ನಮ್ಮೂರ ಕಡೆ ಒಂದು ಹೊಳೆಗೂ "ಎಣ್ಣೆ ಹೊಳೆ" ಎಂದು ಹೆಸರಿಟ್ಟಿದ್ದಾರೆ. ಕಾರಣ ಕೇಳಿದರೆ "ನೀರು ಎಣ್ಣೆಯಂತಿದೆ" ಎನ್ನುತ್ತಾರೆ! ಹೀಗೇ ಕಳೆದ ಭಾನುವಾರ ಯಜಮಾನರ ತಲೆಗೆ ಎಣ್ಣೆ ಮಾಲೀಶು ಮಾಡುತ್ತಾ ಒಂದು ತರಲೆ ಪ್ರಶ್ನೆ ಎಸೆದೆ. "ಅದೇಕೆ ಜನರು ಸೆಲೂನುಗಳಲ್ಲಿ ಆಯಿಲ್ ಮಸಾಜ್ ಮಾಡಿಸಿಕೊಳ್ಳುತ್ತಾರೆ?". ತೂಕಡಿಸುತ್ತಾ ಕೂತ ಅವರಿಗೆ ನನ್ನ ಪ್ರಶ್ನೆ ನಿದ್ರಾಭಂಗ ಮಾಡಿರಬೇಕು. "ಮದುವೆಯಾದ ಮೇಲೆ ನೂರೆಂಟು ಯೋಚನೆಗಳು, ತಲೆಬಿಸಿಗಳು ಇರುತ್ತವೆ. ಸಲೂನಿಗೆ ಹೋಗಿ ಎಣ್ಣೆ ಮಾಲೀಶು ಮಾಡಿಸಿಕೊಂಡರೆ ತಲೆ ತಣ್ಣಗಾಗುತ್ತದೆ. ಅಲ್ಲಿ ಹೆಂಡತಿಯ ಕಿರಿಕಿರಿಯೂ ಇರುವುದಿಲ್ಲ" ಎಂದು ಆರಾಮವಾಗಿ ಅವರು ಹೇಳಿದಾಗ ಪೆಚ್ಚಾಗುವ ಸರದಿ ನನ್ನದಾಗಿತ್ತು.
-

8 comments:

shivu.k said...

ಮೇಡಮ್,
ನಿಮ್ಮ ಎಣ್ಣೆಯ ಲೇಖನವನ್ನು ನನ್ನಾಕೆಯ ಜೊತೆ ಓದಿದಾಗ ಅವಳಂತೂ ತುಂಬಾ ಇಷ್ಟಪಟ್ಟಳು. ಕಾರಣ ಅವಳು ಎಣ್ಣೆಪ್ರಿಯಳು. ಆದ್ಯಾಕೋ ನಾನು ಎಣ್ಣೆಯನ್ನು ತಲೆಗೂ ಹಾಕಿಕೊಳ್ಳುವುದಿಲ್ಲ ಸಲೂನಿನಲ್ಲೂ ನವರತ್ನ ತೈಲ ಬಡಿಸಿಕೊಳ್ಳುವುದಿಲ್ಲ. ಲೇಖನ ಓದುವ ನಡುವೆಯೇ ಅವಳಿಗೆ ನನ್ನ ಬಲಕಣ್ಣಿನ ಹುಬ್ಬಿನ ಒಂದು ಕೂದಲಿನ ಮೇಲೆ ಕಣ್ಣುಬಿದ್ದು ಅದ್ಯಾಕೋ ಅದನ್ನು ಅಳತೆ ಮಾಡಿಬಿಟ್ಟಳು. ಅದು ಒಂದುವರೆಇಂಚು ಇದ್ದದ್ದು ನೋಡಿ "ಅದ್ಯಾವ ಎಣ್ಣೆಯನ್ನು ಉಪಯೋಗಿಸುತ್ತೀರಿ ಹೆಂಗಸರಿಗಿಂತ ಚೆನ್ನಾಗಿ ಬರುವ ಈ ಹುಬ್ಬು ಕೂದಲಿಗೆ" ಎನ್ನಬೇಕೆ? ನಾನ್ಯಾವ ಎಣ್ಣೆಯನ್ನು ಉಪಯೋಗಿಸದಿದ್ದರೂ ನಿಮ್ಮ ಎಣ್ಣೆಮಯ ಲೇಖನ ಸಕತ್ ಇಷ್ಟವಾಯಿತು.

Chaithrika said...

ಹ್ಹ ಹ್ಹಾ... ನಿಮ್ಮ ಕಥೆ ಚೆನ್ನಾಗಿದೆ ಶಿವೂ ಅವರೇ. ಲೇಖನಕ್ಕೆ ಮೆಚ್ಚುಗೆ ಸೂಚಿಸಿದ್ದಕ್ಕೂ, ಮೊದಲ ಕಮೆಂಟ್ ಬರೆದದ್ದಕ್ಕೂ ನಿಮಗಿಬ್ಬರಿಗೂ ಧನ್ಯವಾದಗಳು!

ಮಾಲಾ said...

ಎಣ್ಣೆ ಇಲ್ಲದೆ ಜೀವನವಿಲ್ಲ. ಎಣ್ಣೆ ತಿಂಡಿ ಬಲು ರುಚಿ. ಬಿಸಿಬಿಸಿ ಬೋಂಡದ ರುಚಿಯ ಸವಿದವರೇ ಬಲ್ಲರು!
ಹಬ್ಬದ ದಿನ ವರ್ಷಕ್ಕೊಮ್ಮೆಯಾದರೂ ಜನ ಸೋಮಾರಿತನ ಬಿಟ್ಟು ಎಣ್ಣೆ ಹಚ್ಚಿಕೊಳ್ಳಲಿ ಅದರಿಂದ ಚರ್ಮಕ್ಕೆ ಒಳ್ಳೆಯದು ಎಂದು ಆದಿನ ಎಣ್ಣೆ ಹಚ್ಚಿ ಸ್ನಾನ ಮಾಡುವ ದಿನವೆಂದು ಘೋಶಿಸಿರಬಹುದು.
ಎಣ್ಣೆ ಲೇಖನ ಓದಿ ಮೆಚ್ಚಿದೆನಾ ಎಣ್ಣೆಯೆ ಏನು ನಿನ್ನ ಮಹಿಮೆಯದು.

ಸಾಗರದಾಚೆಯ ಇಂಚರ said...

ಚೈತ್ರಿಕಾ
ಸುಂದರ ಎಣ್ಣೆ ಪುರಾಣ
ಇಷ್ಟವಾಯಿತು
ನೀವು ದಕ್ಷಿಣ ಕನ್ನಡ ಎಂದು ತಿಳಿದು ಸಂತೋಷ ಆಯ್ತು
ನಾನು ನನ್ನ ಶಿಕ್ಷಣ ಎಲ್ಲ ದಕ್ಷಿಣ ಕನ್ನಡ ದಲ್ಲೇ ಮಾಡಿದ್ದು
ನನ್ನ ಬ್ಲಾಗ್ ಗೆ ಬಂದು ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದಗಳು
nanna mail id
murthyhegde@gmail.com
keep in touch

Nanda Kishor B said...

ಚೆನಾಗಿ ಬರೆದಿದ್ದೀರಿ.
http://oppanna.com/arogya/%E0%B2%85%E0%B2%AD%E0%B3%8D%E0%B2%AF%E0%B2%82%E0%B2%97%E0%B2%AE%E0%B2%BE%E0%B2%9A%E0%B2%B0%E0%B3%87%E0%B2%A8%E0%B3%8D%E0%B2%A8%E0%B2%BF%E0%B2%A4%E0%B3%8D%E0%B2%AF%E0%B2%82%E2%80%A6
ಇದನ್ನೂ ಓದಿ.

Shivanand PB said...

very well written !!
you did not write about crude oil, you don't like it ? :P

ವಾಣಿಶ್ರೀ ಭಟ್ said...

nanage nimma lekhana odi nanna hostel dinagalu nenapadavu..

biduviddaga nanna blog omme banni

aparna said...

enne storyannu kannige enne bittu konde odide..oduvaga nanna balyada nenapayitu..
omme constipation adaga..vakarisikondu haralenne kudidaddu!! deepavalige enne seegekayi snana..roadsidena ennetindigalu.. nantara maduveya modala varshada deepavali enne snana!!...enne tindi madalu kalita yashogathe..tindu overweight adaga slim agalu enne tindi bidalu agada vyathe ...heege sagutta collegenalli oil yeiding plants and its uses,extraction,importance ivellavannu explain madutta:) ..SARVAM ..ENNE...MAYAM...