ಮುಂಜಾನೆ (ನನಗೆ ಮುಂಜಾನೆಯೆಂದರೆ ಬೆಳಗ್ಗಿನ ಏಳು ಗಂಟೆ) ಬಿಸಿಲು ನೋಡುವುದೆಂದರೆ ನನಗೆ ಒಂದು ರೀತಿಯ ಖುಷಿ. ಬೇರೆ ಬೇರೆ ಊರುಗಳಲ್ಲಿ ಬಿಸಿಲು ಬೇರೆ ಬೇರೆ ರೀತಿಯಲ್ಲಿರುತ್ತದೆ ಎಂದು ನನ್ನ ಅನಿಸಿಕೆ.
ನಾನು ಮೂಡುಬಿದಿರೆಯಲ್ಲಿದ್ದಾಗ (ದಕ್ಷಿಣ ಕನ್ನಡ) ಒಂದು ರೀತಿಯ ಬಿಸಿಲಿತ್ತು. ನಾನು ಆಗ ಒಂಭತ್ತು ಗಂಟೆ ನಂತರ ಏಳುತ್ತಿದ್ದ ಕಾರಣ ಈ characteristic ಬಿಸಿಲು ಕಾಣಸಿಗುತ್ತಿದ್ದುದು ಕಡಿಮೆ. ಆದರೂ ಮನೆಯ ಅಂಗಳದಲ್ಲಿ ಕೂತು ಅಮ್ಮ ಮಾಡಿದ ರುಚಿ ಚಹಾ ಕುಡಿಯುತ್ತಾ ಬಿಸಿಲನ್ನು ನೋಡುವುದು ಖುಷಿ ಕೊಡುತ್ತಿತ್ತು. ಮನೆಯ ಸುತ್ತುಮುತ್ತಲಿದ್ದ ತೆಂಗು, ಪೇರಳೆ(ಸೀಬೆ), ಚಿಕ್ಕಿನ ಮರ(ಸಪೋಟ)ಗಳ ನಡುವಿಂದ ಇಳಿದ ಉದ್ದುದ್ದನೆಯ ಬಿಸಿಲ ಕೋಲುಗಳು, ಅವುಗಳಲ್ಲಿ ಮಿಣಮಿಣ ಹೊಳೆಯುತ್ತ ತೇಲುವ ಧೂಳ ಕಣಗಳು.
ಉಡುಪಿಯಲ್ಲಿ ಬೇರೆ ರೀತಿಯ ಬಿಸಿಲು. ಎಳೆಬಿಸಿಲಲ್ಲಿ ನನ್ನ room mate (ನಾವು paying guest ಆಗಿ ಮನೆಯವರೊಂದಿಗೇ ಇರುತ್ತಿದ್ದುದು) ಮನೆಯ ದೇವರ ಕೋಣೆ ಅಲಂಕರಿಸಲು ಹೂವು ಕೊಯ್ಯುತ್ತಿದ್ದಳು. ಆ ಬಿಸಿಲು ಏರಲು ಶುರುವಾಗುವಾಗಲೇ ನಾವು ಆಫೀಸಿಗೆ ನಡೆದು ಹೋಗುತ್ತಿದ್ದುದು. ಮಳೆಗಾಲದಲ್ಲಿ ಆ ದಾರಿಯ ಬದಿಯಲ್ಲಿದ್ದ ಗದ್ದೆಯೊಂದರಲ್ಲಿ (ಅಲ್ಲಿ ಬೆಳೆ ಬೆಳೆದ ನೆನಪಿಲ್ಲ) ಪಕ್ಕದ ಹೊಳೆಯಿಂದ ಹರಿದ ನೀರು ತುಂಬಿರುತ್ತಿತ್ತು. ಅದರಲ್ಲಿ ತಾವರೆ, ನೈದಿಲೆ ಬೆಳೆದು ಬಿಸಿಲಿಗೆ ಅರಳುತ್ತಿದ್ದವು. ಮಳೆಗಾಲ ಮುಗಿದ ಮೇಲೂ ಕೆಲವು ತಿಂಗಳು ನೀರು ತುಂಬಿರುತ್ತಿತ್ತು. ಬೆಳಗ್ಗಿನ ನಸು ಬಿಸಿಲಲ್ಲಿ ಕೆಲವರು ತಾವರೆ ಕೊಯ್ಯುತ್ತಿದ್ದರು.
ಮೈಸೂರಿನಲ್ಲಿ ಬಹಳ ಎಳೆಯ ನಾಜೂಕಾದ ಬಿಸಿಲು. ಮೈಸೂರನ್ನು ಮುಂಜಾನೆ ನೋಡಿದರೆ ಬಹಳ ಸುಂದರ ಊರು ಅನ್ನಿಸುವುದು. ಎಲ್ಲ ಮೌನ, ಶಾಂತ. ನನ್ನ ಮಾವನವರು ಅತಿ ಇಷ್ಟಪಟ್ಟು ಬೆಳೆಸಿ ಸಾಕುತ್ತಿರುವ ಹೂದೋಟದ ತುಂಬಾ ಚಿಲಿಪಿಲಿಗುಟ್ಟುವ ಹಕ್ಕಿಗಳು. ಎಲೆಗಳ ಮೇಲೆ, ಹೂವುಗಳ ದಳಗಳ ಅಂಚಿನಲ್ಲಿ ಬಿಸಿಲಿಗೆ ಹೊಳೆಯುವ ನೀರ ಹನಿಗಳು. (ಇಬ್ಬನಿಯೋ, ಮಾವನವರು ಹಾಕಿದ ನೀರೋ ಗೊತ್ತಿಲ್ಲ)
ಬೆಂಗಳೂರಿನ characteristic ಬಿಸಿಲು? ಎರಡು ವರ್ಷವಾಯಿತು. ಇನ್ನೂ ಕಂಡಿಲ್ಲ. ದಿನವೂ ಬೆಳಗ್ಗೆ ಅಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಬಿಸಿಲಿನ analysis ಮಾಡಲು ಪುರುಸೊತ್ತಿಲ್ಲ. ವಾರಾಂತ್ಯದಲ್ಲಿ ಬಿಸಿಲೇರುವವರೆಗೆ ನಿದ್ದೆ!
ಕೆಲವೊಮ್ಮೆ ಒಂದು ಜಾಗದ ಬಿಸಿಲು ಇನ್ನೊಂದೆಡೆ ಕಾಣಸಿಗುತ್ತದೆ. ಮೂಡುಬಿದಿರೆಯ ಚಳಿಗಾಲದಲ್ಲಿ ಕೆಲವೊಮ್ಮೆ ಬೀಳುವ ಬಿಸಿಲು ಮೈಸೂರನ್ನು ನೆನಪಿಸುತ್ತದೆ. ಮೊನ್ನೆ ಬೆಂಗಳೂರಲ್ಲಿ ಮಳೆ ಬಂದು ಹತ್ತು ಗಂಟೆಗೆ ಮೂಡಿದ ಬಿಸಿಲು ಉಡುಪಿಯನ್ನು ನೆನಪಿಸಿತು. "ಇಂದು ಬೆಂಗಳೂರಲ್ಲಿ ಉಡುಪಿಯ ಬಿಸಿಲು" ಎಂದಿದ್ದೆ ನಾನು. ಸಂಜೆಯ ಬಿಸಿಲಲ್ಲಿ ನನಗೆ ಈವರೆಗೆ ಬೆಳಗಿನ ಬಿಸಿಲಂತಹ ವ್ಯತ್ಯಾಸ ಕಂಡಿಲ್ಲ. ಅಥವಾ ಬೆಳಗಿನ ಬಿಸಿಲಿನ ಈ ವಿಶೇಷಣಗಳೂ ನನ್ನ ಭ್ರಮೆಯೇನೋ. ಏನೇ ಇರಲಿ ಹೊಂಬಿಸಿಲು ಸಿಹಿ ನೆನಪುಗಳನ್ನು ಮೂಡಿಸುವುದು ನನಗೆ ಖುಷಿ ಕೊಡುತ್ತಿದೆ.
4 comments:
ಓ.. ಬಿಸಿಲಿನ ಬಗ್ಗೆ ಒಳ್ಳೆ ಚೆನ್ನಾಗಿ ಬರೆದಿದ್ದೀರ.. ಹೊ೦ಬಿಸಿಲು ನೋಡಲಿಕ್ಕೆ ನನಗೂ ಖುಶಿ.ನನ್ನ ಮಗಳು ಏಳು ಗ೦ಟೆಗೆ ಶಾಲೆಗೆ ಹೊರಡುತ್ತಾಳೆ..ಆವಳ ವ್ಯಾನ್ ಬರುವವರೆಗೆ ನಾನು ಕಿಟಕಿ ಬಳಿ ನಿ೦ತಿರುತ್ತೇನೆ.ಹಾಗಾಗಿ ಪ್ರತಿ ದಿನ ಕಿಟಕಿಯಿ೦ದ ಹೊ೦ಬಿಸಿಲಿನ ಚೆ೦ದ ಕಾಣಸಿಗುತ್ತದೆ.
ಮೇಡಮ್,
ವಿಭಿನ್ನ ಜಾಗಗಳಲ್ಲಿನ ಬಿಸಿಲಿನ ಅನುಭವವನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ. ನಮ್ಮ ಫೋಟೊಗ್ರಫಿಗೂ ಬೆಳಗಿನ ಮತ್ತು ಸಂಜೆಯ ಬಿಸಿಲು ತುಂಬಾ ಮುಖ್ಯ. ಚಳಿಗಾಲದಲ್ಲಿ ಹಳ್ಳಿಗಳಲ್ಲಿ ಅದರಲ್ಲೂ ಡಿಸೆಂಬರ್-ಜನವರಿ ತಿಂಗಳ ನವಿರು ಮತ್ತು ಇಳಿಸಂಜೆ ಬಿಸಿಲು ಬೆಳಕು ನಮ್ಮ ಫೋಟೊಗ್ರಫಿಗೆ ಬೇರೆಯದೇ ಆಯಾಮವನ್ನು ಕೊಡುವುದರಿಂದ ಅದು ತುಂಬಾ ಇಷ್ಟ.
bisila nenapu odi kushi atu. eshto dinada matte baraha kandu santosha ayitu.
ಹೊಂಬಿಸಿಲ ಚೆಲುವನ್ನು ನವಿರಾಗಿ ನಿರೂಪಿಸಿದ್ದೀರಿ :-)
ಸುಂದರ ಬರಹ
Post a Comment