Thursday, January 6, 2011

ಶಿವಗಂಗಾ ಚಾರಣ

ಎಷ್ಟೋ ತಿಂಗಳು ಎಲ್ಲೂ ತಿರುಗಾಡಲು ಹೋಗಲು ಅವಕಾಶ ಸಿಕ್ಕಿರಲಿಲ್ಲ. ಹೆಚ್ಚಿನ ಸಮಯ ಮಳೆ, ಇನ್ನು ಕೆಲವೊಮ್ಮೆ ಅಗತ್ಯ ಕೆಲಸಗಳು, ಊರಿಗೆ ಪ್ರಯಾಣ ಇತ್ಯಾದಿ ಕಾರಣಗಳಿಂದ ಜೀವನವೇ ನೀರಸವಾದಂತಿತ್ತು. ಕೊನೆಗೆ ನವಂಬರದ ಕೊನೆಯ ಶುಕ್ರವಾರ "ನಾಳೆ ಶಿವಗಂಗೆಗೆ ಹೋಗೋಣ" ಎಂದು ಧತ್ತನೆ ನಿರ್ಧಾರ ಮಾಡಿದೆವು. ಶಿವಗಂಗೆ ನಮ್ಮ ನೋಡಬೇಕಾದ ಜಾಗಗಳ ಪಟ್ಟಿಯಲ್ಲಿ ಮೊದಲೇ ಇತ್ತು. ಕಳೆದ ಬಾರಿ ದೇವರಾಯನ ದುರ್ಗಕ್ಕೆ ಹೋಗಿದ್ದಾಗ ಇನ್ನೊಮ್ಮೆ ಶಿವಗಂಗಾಗೆ ಬರಬೇಕು ಎಂದು ನಿರ್ಧರಿಸಿ ಹೋಗುವ ಯೋಜನೆಯನ್ನೂ ಹಾಕಿಯಾಗಿತ್ತು. ಶನಿವಾರ ಬೆಳಗ್ಗೆ 7 ಗಂಟೆ ಹೊರಡೋಣ ಎಂದು ಯೋಚಿಸಿ ನಿದ್ರಿಸಿದರೆ ಎದ್ದಾಗ ಗಂಟೆ ಎಂಟೂ ವರೆ ಆಗಿತ್ತು! ಏನು ಮಾಡುವುದು? ಶುಕ್ರವಾರದವರೆಗೆ ಕೆಲಸಮಾಡಿ ಶನಿವಾರ ಬೇಗ ಏಳು ಎಂದರೆ ದೇಹ ಕೇಳುತ್ತದೆಯೇ? ಬೇಗ ಬೇಗನೆ ಹಲ್ಲುಜ್ಜಿ, ಸ್ನಾನ ಮಾಡಿ, corn flakes ಮುಕ್ಕಿ ಹೊರಟಾಗ ಗಂಟೆ ಹತ್ತಾಗಿರಬೇಕು. ಬೇಗನೆ ತಲುಪುವ ಸಲುವಾಗಿ 82 ರೂಪಾಯಿ ತೆತ್ತು NICE ರಸ್ತೆ ಹಿಡಿದೆವು. ಖಾಲಿ ರಸ್ತೆಯಲ್ಲಿ ಕಾರು ವೇಗವಾಗಿ ಸಾಗಿತು. ಅರ್ಧಗಂಟೆಯೊಳಗೆ ನೆಲಮಂಗಲ ಬಂದಿತ್ತು. 12:15 ಗೆ ನಾವು ಶಿವಗಂಗೆ ತಲುಪಿದ್ದೆವು.



ಶಿವಗಂಗೆಯ ಬೆಟ್ಟದ ತಪ್ಪಲಲ್ಲಿ ಬಂಡೆಯೊಳಗೆ ಕೊರೆದಂತಿರುವ ಸ್ವರ್ಣಾಂಬಾ ದೇವಿ ದೇವಸ್ಥಾನ ಮತ್ತು ಗಂಗಾಧರೇಶ್ವರ ದೇವಸ್ಥಾನ ನೋಡಿ ನಾವು ಮೇಲಕ್ಕೆ ಹತ್ತಲನುವಾದೆವು. ಆರಂಭದಲ್ಲಿ ಅತ್ಯಂತ ಉತ್ಸಾಹದಲ್ಲಿ ಏರುತ್ತಿದ್ದ ನನಗೆ ಇದು ಸಾಮಾನ್ಯಕ್ಕೆ ತಲುಪುವ ತುದಿಯಲ್ಲ ಎಂದು ಅರಿವಾಗಲು ಬಹಳ ಹೊತ್ತು ಬೇಕಾಗಲಿಲ್ಲ. ಏರುತ್ತಿರುವಾಗ ಮೊದಲಿಗೆ ಬಂಡೆಯಲ್ಲೇ ಮೆಟ್ಟಿಲ ಆಕಾರ ಕೊರೆದು ಕಬ್ಬಿಣದ ಸ್ತಂಭ ಊರಿ ಸರಳು ಬಿಗಿದಿರುವುದರಿಂದ ಹತ್ತುವಿಕೆ ಸುಲಭವೆನಿಸುತ್ತಿತ್ತು. ಹಾಗೇ ಮುಂದುವರಿದಾಗ ಒಳಕಲ್ಲು ತೀರ್ಥ ಎಂಬ ಜಾಗ ಎದುರಾಯಿತು. ಇಲ್ಲಿ ಬಂಡೆಯಲ್ಲಿ ಸುಮಾರು 20ಅಡಿ ಒಳಗೆ ಗಣಪತಿ ಮತ್ತು ಈಶ್ವರನ ದೇವಸ್ಥಾನವಿದೆ. ವಿದ್ಯುತ್ ಇಲ್ಲದ ಕಾರಣ ಕತ್ತಲೆ ಇರುವುದರಿಂದ ಆಗ ಯಾರನ್ನೂ ಒಳಗಡೆ ಬಿಡುತ್ತಿರಲಿಲ್ಲ. ಬರುತ್ತಾ ನೋಡೋಣ ಎಂದು ನಾವು ಮುಂದುವರಿದೆವು.

ಇಲ್ಲಿಂದ ನಂತರ ಸುಮಾರು ಎತ್ತರದ ವರೆಗೆ ಕಬ್ಬಿಣದ railಗಳಿಲ್ಲ. ಇಲ್ಲಿ ಮೆಟ್ಟಿಲುಗಳಂತೆ ದೊಡ್ಡ ದೊಡ್ಡ ಕಲ್ಲುಗಳಿದ್ದು ಹತ್ತಲು railಗಳ ಅಗತ್ಯವೂ ಇಲ್ಲ. ಆದರೆ ಇಲ್ಲಿ ಹತ್ತುತ್ತಾ ನಮಗೆ ಕಾಲು ನೋವು ಬರಲಾರಂಭಿಸಿತು. ಏದುಸಿರು ತಗ್ಗಿಸಲು ಅಲ್ಲಲ್ಲಿ ನಿಲ್ಲಬೇಕಾಯಿತು. ಈ ಹಾದಿಯ ಕೊನೆಯಲ್ಲಿ ಶಿವ ಪಾರ್ವತಿಯರ 8-10 ಅಡಿ ಎತ್ತರದ ವಿಗ್ರಹ ರಚನೆಯಾಗುತ್ತಿತ್ತು. ಅದಕ್ಕಾಗಿ ಕೆಲಸಗಾರರು ಸಿಮೆಂಟು ಗೋಣಿಚೀಲಗಳನ್ನು ಕೆಳಗಿಂದ ಹೊತ್ತು ತರುತ್ತಿದ್ದರು! ನನಗೆ ಅವರನ್ನು ಕಂಡು ಬೇಸರವಾಯಿತು. ಆದರೇನು ಮಾಡುವುದು? ಹೊಟ್ಟೆಗೆ ಹಸಿವೆಯೆಂಬುದೊಂದು ಇದೆಯಲ್ಲವೇ ಎಂದುಕೊಂಡು ಸುಮ್ಮನಾದೆ. ಶಿವಪಾರ್ವತಿ ವಿಗ್ರಹದವರೆಗೆ ಅನೇಕ ಚಿಕ್ಕ ಅಂಗಡಿಗಳು ಚರುಮುರಿ, ಮಜ್ಜಿಗೆ, ಮುಳ್ಳು ಸೌತೆ, ಅನಾನಸು, ನೀರು ಮಾರಾಟ ಮಾಡುತ್ತಿದ್ದವು. ಇಲ್ಲಿಯವರೆಗೆ ನಮಗೆ ಯಾವುದೇ ಮಂಗಗಳೂ ಎದುರಾಗಲಿಲ್ಲ.



ಶಿವಗಂಗೆಗೆ ಹೊರಡುವ ಮೊದಲು ನಾನು ಅಲ್ಲಿಯ ಮಂಗಗಳ ಬಗ್ಗೆ ಸಾಕಷ್ಟು ಕೇಳಿದ್ದೆ. collegeಗೆ ಹಾಕುವಂತಹಾ ಬೆನ್ನಿನ ಚೀಲ ಕೊಂಡೊಯ್ಯುವುದು ಒಳಿತೆಂದು ತಿಳಿದಿದ್ದೆ. ಆದರೂ ಅನೇಕರು ತಮ್ಮ ಅನುಭವ ವಿವರಿಸಿ ಮಂಗಗಳ ಬಗ್ಗೆ ನನ್ನಲ್ಲಿ ಹೆದರಿಕೆ ಹುಟ್ಟಿಸಿದ್ದರು. ಕೆಲವರು ಮಂಗಗಳು ಬೆನ್ನಿನ ಚೀಲವನ್ನು ಹಿಂದಿಂದ ಎಳೆಯುತ್ತವೆ, ಕೊಡದಿದ್ದರೆ ಪರಚುತ್ತವೆ ಎಂದೂ, ಇನ್ನು ಕೆಲವರು, ಜಿಪ್ ತೆರೆದು ಹುಡುಕಾಡುತ್ತವೆ ಎಂದೂ ಹೇಳಿದ್ದರಿಂದ ನಾವು ನೀರು ಬಿಟ್ಟರೆ ಬೇರೇನೂ ತೆಗೆದುಕೊಂಡು ಹೋಗಿರಲಿಲ್ಲ. ಮಂಗಗಳು ಹೆಂಗಸರಿಗೆ ಜಾಸ್ತಿ ಉಪಟಳ ಕೊಡುತ್ತವೆ ಎಂದು ಕೇಳಿದ್ದ ನಾನು ಬ್ಯಾಗನ್ನು ಕೃಷ್ಣನಿಗೆ ತೊಡಿಸಿದ್ದೆ.
ಸದ್ಯಕ್ಕೆ ಮಂಗಗಳು ಎದುರಾಗದ್ದು ನೋಡಿ ನನಗೆ ಧೈರ್ಯ ಬಂತು. ಕೃಷ್ಣನಿಗೆ ಆಯಾಸ ಕಡಿಮೆ ಮಾಡಿಕೋ ಎಂದು ಬ್ಯಾಗನ್ನು ನಾನೇ ಎತ್ತಿಕೊಂಡೆ. ಹತ್ತು ಹೆಜ್ಜೆ ನಡೆಯುವುದರೊಳಗಾಗಿ ಮಂಗಗಳ ಹಿಂಡು ಕಂಡಿತು. "ಇಕೋ ಬ್ಯಾಗ್" ಎಂದು ಕೃಷ್ಣನತ್ತ ಬ್ಯಾಗ್ ಎಸೆದು ಕೋಲಿಗಾಗಿ ತಡಕಾಡಿದೆ. ಒಂದು ಧೈರ್ಯಕ್ಕೆ ಸಾಕಾಗುವಷ್ಟು ದೊಡ್ಡ ಕೋಲು ಸಿಕ್ಕಿತು. ಆದರೆ ಸ್ವಲ್ಪದರಲ್ಲೇ ಅದನ್ನು ಹಿಡಿದು ಹತ್ತುವುದು ಕಷ್ಟವಾಗಿ ಕೋಲೂ ಕೃಷ್ಣನ ಕೈ ಸೇರಿತು.

ಶಿವಪಾರ್ವತಿ ವಿಗ್ರಹದ ನಂತರ ಸಿಗುವುದು ಬಂಡೆಯ ತುದಿಗೆ ಹತ್ತುವ ಹಾದಿ. ಇದು ಬಹಳ ಇಳಿಜಾರಾಗಿದ್ದು ಹತ್ತಲು ಕಷ್ಟವಾಗುತ್ತದೆ. ಇಲ್ಲಿ ಬಂಡೆಯನ್ನು ಸುಮಾರಾಗಿ ಮೆಟ್ಟಿಲ ಆಕಾರಕ್ಕೆ ಕೊರೆದು ಎರಡೂ ಪಕ್ಕದಲ್ಲಿ railಗಳನ್ನು ಊರಿದ್ದಾರೆ. ಈ ಸರಳುಗಳಿಲ್ಲದಿದ್ದರೆ ಹತ್ತುವುದು ಬಹು ಕಷ್ಟವೇ ಸರಿ. ಅದಲ್ಲದೆ ಈ ಹಾದಿಯುದ್ದಕ್ಕೂ ಮಂಗಗಳು ಕುಳಿತಿರುತ್ತವೆ. ನಮ್ಮ ಅದೃಷ್ಟಕ್ಕೆ ಹಲವಾರು ಜನರಿಗೆ ಉಪದ್ರ ಕೊಡುತ್ತಿದ್ದ ಮಂಗಗಳು ನಮ್ಮ ಹತ್ತಿರವೂ ಸುಳಿಯಲಿಲ್ಲ. ಹೇಗೋ ಕಷ್ಟಪಡುತ್ತಾ ಮೇಲಕ್ಕೆ ಏರುತ್ತಾ ಹೋದೆವು. ಅಷ್ಟೆತ್ತರದಲ್ಲೂ ಮೇಕೆಗಳು ಬಂಡೆ ಮೇಲೆ ನಿಂತು ಮೇಯುತ್ತಿದ್ದುದನ್ನು ನೋಡಿ ಆಶ್ಚರ್ಯವಾಯಿತು. ತುದಿತಲುಪುತ್ತಾ ಮೊದಲಿಗೆ ಸಿಕ್ಕಿದ್ದು ನಂದಿ. ನಂದಿಯು ಸುಮಾರು ಹನ್ನೆರಡು ಅಡಿ ಎತ್ತರದ ಬಂಡೆಯ ಮೇಲೆ ಇದೆ. ಅಲ್ಲಿಗೆ ಹತ್ತಲೂ, ನಂದಿಯ ಸುತ್ತಲೂ ಕಬ್ಬಿಣದ ಸರಳು ಹಾಕಿದ್ದು, ಎಲ್ಲರಿಗೂ ಹತ್ತಲು ಅನುಕೂಲವಾಗುವಂತಿದೆ. ಆ ಸರಳುಗಳಿಲ್ಲದಿದ್ದರೆ ನನಗಂತೂ ಹತ್ತುವುದು ಅಸಾಧ್ಯವಾಗಿತ್ತು. ಅಲ್ಲಿಂದ ಅನತಿ ದೂರದಲ್ಲಿ ಬಂಡೆಯ ತುದಿಯೂ, ಅಲ್ಲಿ ಗಿರಿಗಂಗಾಧರೇಶ್ವರ ದೇವಸ್ಥಾನವೂ ಕಂಡಿತು.



ಅದರ ಎದುರಲ್ಲಿ ಒಬ್ಬ ಚರುಮುರಿ, ಮುಳ್ಳು ಸೌತೆ, ಮಜ್ಜಿಗೆ ನೀರು ಇತ್ಯಾದಿ ಮಾರುತ್ತಿದ್ದ. ಆತ ದಿನವೂ ಇಷ್ಟೆತ್ತರ ಹತ್ತಿ ಇವನ್ನೆಲ್ಲ ತರುತ್ತಿರಬಹುದೇ ಎಂದು ಯೋಚಿಸಿ ಅಚ್ಚರಿಯಾಯಿತು. ಇಲ್ಲೂ ಮಂಗಗಳಿಗೆ ಕೊರತೆಯಿರಲಿಲ್ಲ. ದೇವಸ್ಥಾನದ ಬಳಿ ಬಂದು ಉಪಟಳ ಕೊಡುವ ಮಂಗಗಳನ್ನು ಓಡಿಸಲು ಒಂದು ವಿಶಿಷ್ಟ ವಿಧಾನ ಉಪಯೋಗಿಸುತ್ತಿದ್ದುದನ್ನು ಇಲ್ಲಿ ನೋಡಿದೆ. ಒಂದು ಚಿರತೆಯ ಬೊಂಬೆಯನ್ನು ಒಬ್ಬ ಆಗಾಗ ದೇವಸ್ಥಾನದೊಳಗೊಂದ ತಂದು ಹೊರ ಭಾಗದಲ್ಲಿ ಇಡುತ್ತಿದ್ದ. ಅದನ್ನು ಕಂಡಾಕ್ಷಣ ಮಂಗಗಳು ಬಹು ದೂರ ಓಡಿ ಹೋಗುತ್ತಿದ್ದವು. ಮತ್ತೆ ಆತ ಅದನ್ನು ಒಳಗಿಟ್ಟು ಮಂಗಗಳು ಪುನಃ ಗುಂಪುಗೂಡಿದಾಗ ಹೊರತರುತ್ತಿದ್ದ. ಮಂಗಗಳನ್ನು ಓಡಿಸುವ ಮನುಷ್ಯನ ಮಂಗಬುದ್ಧಿ ನನಗೆ ತಮಾಷೆಯೆನಿಸಿತು.


(ಚಿರತೆ ಬೊಂಬೆಯನ್ನು ಒಳಗೆ ಒಯ್ಯುತ್ತಿರುವುದು)

ಬಂಡೆಯ ಮೇಲೆ ನಾವು ತಲುಪಿದಾಗ ಗಂಟೆ ಎರಡಕ್ಕೆ ಹತ್ತಿರವಾಗಿತ್ತು. ಆ ದಿನ ನಮ್ಮ ಅದೃಷ್ಟಕ್ಕೆ ಮೋಡ ಕವಿದಿದ್ದು ಬಿಸಿಲೇ ಇರಲಿಲ್ಲ. ಬಂಡೆಯ ಮೇಲೆ ice-cold ಗಾಳಿ ಜೋರಾಗಿ ಬೀಸುತ್ತಿತ್ತು. ಅಲ್ಲೇ ಕುಳಿತು ನಾವು ಹಲವಾರು ಫೋಟೋ ತೆಗೆದೆವು. ಮಂಗಗಳಿಗೆ ಹೆದರಿ ಆಹಾರ ತಾರದ ಕಾರಣ ಅಲ್ಲೇ ಚರುಮುರಿ ಕೊಂಡು ತಿನ್ನಬೇಕಾಯಿತು. ಎರಡು ಮೂರು ಲೋಟ ಮಜ್ಜಿಗೆ ನೀರೂ ಕುಡಿದೆವು. ಸಮಯ ಹೋಗಬೇಕೆಂದು ಸೂಚನೆ ಕೊಡುತ್ತಿದ್ದರೂ ಮನಸು ಕೇಳುತ್ತಲೇ ಇರಲಿಲ್ಲ. ಇನ್ನೊಂದು ಸ್ವಲ್ಪ ಹೊತ್ತು ಕೂತಿರಬೇಕು ಎನಿಸುತ್ತಿತ್ತು. ಬಂಡೆಯ ಮೇಲಿಂದ ಸುಮ್ಮನೇ ಕೆಳಗೆ ನೋಡುತ್ತ ಕುಳಿತುಕೊಳ್ಳುವುದು ಬಹಳ ಆನಂದ ನೀಡುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಮನಸನ್ನು ಇನ್ನು ಮರಳುವುದು ಒಳಿತು ಎಂದು ಸಮಾಧಾನಪಡಿಸಿ ಇಳಿಯಲು ಆರಂಭಿಸಿದೆವು.

ಇಳಿಯುವಿಕೆ ನಾವು ಯೋಚಿಸಿದಷ್ಟು ಸುಲಭವಾಗಿರಲಿಲ್ಲ. ನಾನು ಹಾಕಿದ ಸಾದಾ ಚಪ್ಪಲಿ ಹತ್ತುವಾಗ ಏನೂ ತೊಂದರೆ ಕೊಡದಿದ್ದರೂ ಇಳಿಯುವಾಗ ಬಹುವಾಗಿ ಕಾಡಿತು. ಇಳಿಜಾರಿನಲ್ಲಿ ಇಳಿಯುವಾಗ ಕಾಲು ಜಾರುವುದರಿಂದ ಚಪ್ಪಲಿಯ ಎದುರಿನ ಪಟ್ಟಿ ಮೊದಲ ಎರಡು ಬೆರಳುಗಳ ನಡುವೆ ನೋಯುವಷ್ಟು ಒತ್ತಡ ಹಾಕುತ್ತಿತ್ತು. ಅದಲ್ಲದೆ ಇಳಿಯುವಾಗ ಪಾದಗಳು ನಡುಗುತ್ತಿದ್ದವು. ನಡುಗುತ್ತಿರುವ ಪದಗಳಲ್ಲಿ ಹಿಡಿತವಿಲ್ಲದ ಚಪ್ಪಲಿ ಹಿಡಿಯುವುದು ಬಹಳ ತ್ರಾಸದಾಯಕವಾಗಿತ್ತು. ಇಳಿಯುತ್ತಾ ಪುನಃ ಒಳಕಲ್ಲು ತೀರ್ಥಎದುರಾಯಿತು. ಅಲ್ಲಿ ಈಗ ಲೈಟ್ ಹಾಕಿದ್ದರು. ತಲೆಗೆ ನಾಲ್ಕು ರೂಪಾಯಿಯಂತೆ ಕೊಟ್ಟು ಗುಹೆಯಂತಿದ್ದ ಬಂಡೆಯ ಒಳ ಹೊಕ್ಕೆವು. ಸುಮಾರು ಹತ್ತು ಅಡಿ ದೂರದ ವರೆಗೆ ಒಂದಡಿ ನೀರು ತುಂಬಿದ್ದ ಹಾದಿಯಲ್ಲಿ ನಡೆದಾಗ ದೇವರ ಎರಡು ಮೂರ್ತಿಗಳು ಕಂಡವು. ಮೂರ್ತಿಗಳ ಹಿಂದೆ ಎಡಕ್ಕೆ ಬಂಡೆಯಲ್ಲಿ ಒಂದು ಕೊಳವೆಯಂತಹ ಆಳದ ತೂತು ಇದ್ದು ಅದರೊಳಗೆ ಅನೇಕರು ಕೈ ಹಾಕುತ್ತಿದ್ದರು. ನಾನು ಅದರತ್ತ ಗಮನ ಕೊಡದೆ ಮುಂದುವರಿದೆ. ಕೃಷ್ಣನಿಗೆ ಅದರೊಳಗೆ ಕೈ ಹಾಕಿದಾಗ ನೀರು ಸಿಕ್ಕಿತಂತೆ. ಅಲ್ಲಿಂದ ಬಂದ ಮೇಲೆ ಬಂಡೆಯೊಳಗೆ ತೀರ್ಥ ಸಿಗುವುದು ಶುಭವೆಂದೂ, ನೀರನ್ನು ಮುಟ್ಟಿದವರು ಅದೃಷ್ಟವಂತರೆಂದೂ ನಂಬಿಕೆಗಳಿವೆ ಎಂದು ಒಬ್ಬರು ಹೇಳಿದರು. ನಾನೂ ಪ್ರಯತ್ನಿಸಬಹುದಿತ್ತು ಎಂದು ಆಗ ಬಹುವಾಗಿ ಅನಿಸಿತು.

ಗುಡ್ಡದ ಮೇಲಿಂದ ತಳ ತಲುಪಲು ನಮಗೆ ಒಂದು ಗಂಟೆ ಹಿಡಿಯಿತು. ಬಂಡೆಯನ್ನು ಹತ್ತುತ್ತಾ ಇಳಿಯುತ್ತಾ ಅನೇಕ ಸ್ಥಳೀಯರು ಸಿಗುತ್ತಿದ್ದರು. ಇವರು ಏನೂ ಮುಜುಗರವಿಲ್ಲದೆ ದುಡ್ಡು ಕೇಳುತ್ತಿದ್ದರು. ನಾವು ಹೀಗೇ ಅಲ್ಲಲ್ಲಿ ದುಡ್ಡು ಕೇಳಿದವರಿಗೆ ಒಂದೈದು ರುಪಾಯಿ ಕೊಡುತ್ತಾ ಕೆಳ ಬಂದಾಗ ಮೂವತ್ತೈದು ರೂಪಾಯಿ ಖಾಲಿಯಾಗಿತ್ತು!

ಅಲ್ಲಿಂದ ಹತ್ತು ಹೆಜ್ಜೆ ದೂರದಲ್ಲಿ ಕೊಳವೊಂದಿತ್ತು. ಅದರ ಹತ್ತಿರ ಹೋಗಿ ನೋಡಿದರೆ ದೂರದಿಂದ ಕಂಡ ಸೌಂದರ್ಯವೇ ಇರಲಿಲ್ಲ. ಕೊಳದ ಮೂಲೆಗಳಲ್ಲಿ ಪ್ಲಾಸ್ಟಿಕ್ ಮತ್ತು ಕಸ ಜಮೆಯಾಗಿತ್ತು. ಬೆಟ್ಟ ಹತ್ತುವಾಗಲೂ ಕಸಕ್ಕೆ, ಪ್ಲಾಸ್ಟಿಕ್ ಬಾಟಲಿಗಳಿಗೆ ಕೊರತೆಯಿರಲಿಲ್ಲ. ಎಲ್ಲೆಲ್ಲಿ ಕಸ ಎಸೆಯಬಾರದೆಂಬ ಬೋರ್ಡ ಇತ್ತೋ ಅವನ್ನು ಅಣಕಿಸುವಂತೆ ಅಲ್ಲೇ ಕಸ ರಾಶಿ ಬಿದ್ದಿತ್ತು. ಜನರಿಗೆ ಯಾವಾಗ ಬುದ್ಧಿ ಬರುವುದೋ ಎಂದು ಬೇಸರಿಸಿಕೊಂಡೆ. ನಾವು ಸ್ವಲ್ಪ ಹೊತ್ತು ಅಲ್ಲೇ ಅತ್ತಿತ್ತ ಅಡ್ಡಾಡಿದೆವು. ಹತ್ತಿರದಲ್ಲಿ ಕೆಲವು ಹೊಲಗಳಿದ್ದವು. ನಾನು ಮೊದಲ ಬಾರಿಗೆ ಕ್ಯಾಬೇಜಿನ ಹೊಲ ನೋಡಿದೆ. ಅನತಿ ದೂರದಲ್ಲಿ ಪ್ರವಾಸಿಗಳ ಉಪಯೋಗಕ್ಕೆ pay and use toilets ಇರುವುದು ಕಂಡಿತು. ನಮಗೆ ಹಸಿವೆಯಾಗಲಾರಂಭಿಸಿತ್ತು. ಚಿಕ್ಕ ಹಳ್ಳಿಯಂತಿದ್ದ ಆ ಜಾಗದಲ್ಲಿ ಊಟಕ್ಕೆ ಸರಿಯಾದ ವ್ಯವಸ್ಥೆಯೇನೂ ಕಾಣಿಸಲಿಲ್ಲ. ಡಾಬಸ್ ಪೇಟೆಯ ಕಾಮತ್ ಉಪಚಾರವೇ ಗತಿ ಎಂದು ಅನ್ನಿಸಿತು. ಹಾಗೇ ಗುಡ್ಡವನ್ನು ನೋಡುತ್ತಾ ಮರಳಿ ಹೊರಟೆವು.









ಡಾಬಸ್ ಪೇಟೆಯ ಕಾಮತ್ ಉಪಚಾರದ ಬಳಿ ಬಂದಾಗ ನಾಲ್ಕು ಗಂಟೆಯಾಗಿತ್ತು. ಅಲ್ಲಿ ದೋಸೆಗಳು ಮತ್ತು ಇಡ್ಲಿ-ವಡೆ ಮಾತ್ರ ಇತ್ತು. ಊರ ಹೊರಗಿನ ಹೋಟೆಲು, ಪ್ರವಾಸಿಗಳಿಂದ ಮಾತ್ರ ನಡೆಯ ಬೇಕಿದ್ದಂತೆ ಕಾಣುತ್ತಿದ್ದ ಕಾಮತ್ ಉಪಚಾರದಿಂದ ನಮಗೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಇಷ್ಟರವರೆಗೆ ರಾಗಿ ದೋಸೆ ತಿಂದಿರದ ನಮಗೆ ಅದರ ರುಚಿ ನೋಡೋಣ ಎನಿಸಿತು. ರವಾ ದೋಸೆಯಂತೆ ತಯಾರಿಸಿದ್ದ ರಾಗಿ ದೋಸೆ ನಿರೀಕ್ಷೆಯನ್ನು ಮೀರಿ ಚೆನ್ನಾಗಿತ್ತು. (ಆ ನಂತರ ನಾನು ಬೇರೆ ಕಡೆ ರಾಗಿ ದೋಸೆ ತಿಂದಿದ್ದರೂ ರುಚಿ ಅಂಥಾ ಅದ್ಭುತವಿರಲಿಲ್ಲ). ಅದರ ನಂತರ ಮಸಾಲೆ ದೋಸೆ ತರಹೇಳಿ, ಅದು ಬಲು ಉಪ್ಪಾಗಿದ್ದು, ಏಕೆ order ಮಾಡಿದೆನೋ ಎಂದುಕೊಂಡು ತಿಂದದ್ದು ಬೇರೆ ವಿಚಾರ.

ಅಲ್ಲಿಂದ ಮತ್ತೊಮ್ಮೆ NICE road ಹಿಡಿದು ವೇಗವಾಗಿ ಮನೆಯತ್ತ ಸಾಗಿದೆವು. ಸೂರ್ಯ ಕಂತಿ, ದೂರದಿಂದ ಕಾಣುತ್ತಿದ್ದ ಬೆಂಗಳೂರಿನ ಒಂದು ಪಾರ್ಶ್ವದಲ್ಲಿ ದೀಪಗಳು ಉರಿಯಲಾರಂಭಿಸಿದವು. ಒಂದು ಸುಂದರ ಪ್ರಯಾಣ ಕೊನೆಮುಟ್ಟುತ್ತಲಿತ್ತು. ಶಿವಗಂಗೆ ಹಾಗೂ ಅಂತಹಾ ಸ್ಥಳಗಳಿಗೆ ಆಗಾಗ ಹೋಗುತ್ತಾ ಇರಬೇಕು ಎನಿಸುತ್ತಿತ್ತು. ಹಾಗೇ ದಿನವನ್ನು ಮೆಲುಕು ಹಾಕುತ್ತಾ ಸೀಟಿಗೆ ಒರಗಿದೆ. ಮನೆಯಲ್ಲಿ ಮಾಡಲಿದ್ದ ಕೆಲಸಗಳು ನೆನಪಾಗತೊಡಗಿದವು. ಮರುದಿನ ಬರಲಿದ್ದ ನನ್ನ ಸಂಬಂಧಿಯೊಬ್ಬಳಿಗೆ ಏನು ಅಡುಗೆ ತಯಾರಿಸುವುದು ಎಂದು ಯೋಚಿಸುತ್ತಾ ಗಾಳಿಗೆ ಮುಖವೊಡ್ಡಿ ಕೂತೆ.
-

8 comments:

shivu.k said...

ಸಿಂದೂ ಮೇಡಮ್,

ಶಿವಗಂಗೆ ಪ್ರವಾಸದ ವಿವರಣೆ ಮತ್ತು ಚಿತ್ರಗಳು ಚೆನ್ನಾಗಿವೆ..

Nanda Kishor B said...

ಬಹಳ ಚೆನ್ನಾಗಿ ಬರೆದಿದ್ದೀರಿ. ಇದರೊಂದಿಗೆ ಹೋಗುವ road map ಅನ್ನು ಕೊಟ್ಟಿದ್ದರೆ ಹೋಗ ಬಯಸುವವರಿಗೆ ಬಹಳ ಉಪಯೋಗವಾಗುತ್ತಿತ್ತು.

Udaya said...

ಸುಮ್ಮ ಸುಮ್ಮನೇ ಕೇಳಿದವರಿಗೆಲ್ಲಾ ಐದೈದು ರೂಪಾಯಿ ಕೊಟ್ಟೆವು ಅಂತ ಎಷ್ಟು ಸಲೀಸಾಗಿ ಹೇಳ್ತಿದ್ದೀರ ! ದುಡ್ಡಿನ ಬೆಲೆ ಗೊತ್ತಿಲ್ಲದಿದ್ರೆ ಹೀಗೇ ಆಗೋದು. mostly you are a software engineer.

Chaithrika said...

ಉದಯ ಅವರೇ,
ಗೊತ್ತಿಲ್ಲದ ಜಾಗದಲ್ಲಿ ದುಡ್ಡಿಗಾಗಿ ಪೀಡಿಸಿದರೆ ಏನು ಮಾಡಬೇಕೆಂದು ಗೊತ್ತಾಗದೆ ಆ ಕ್ಷಣ ಮನಸ್ಸು ಹೇಳಿದಂತೆ ಮಾಡುವುದು. ದುಡ್ಡಿನ ಬೆಲೆ ಗೊತ್ತಿಲ್ಲ ಎಂಬ ನಿರ್ಧಾರಕ್ಕೆ ಹೇಗೆ ಬಂದಿರೋ ತಿಳಿಯಲಿಲ್ಲ. software engineer ಆದವರಿಗೆ ಬಿಟ್ಟಿ ದುಡ್ಡು ಬರುತ್ತದೆ ಎಂಬ ಕಲ್ಪನೆ ಇರಬೇಕು ನಿಮಗೆ. ಇರಲಿ, ನೀವು ಖಂಡಿತಕ್ಕೂ software engineer ಅಲ್ಲ ಅಂತ ತಿಳಿಯಿತು.

Udaya said...

ಗೊತ್ತಿಲ್ಲದ ಜಾಗ ಇರಬಹುದು, ಆದರೆ ಅದೇನು ಬಿಹಾರವಾ? ಪಾಕಿಸ್ತಾನವಾ? ಕೊಡಲೇಬೇಕು ಇಲ್ಲದಿದ್ದರೆ ಸುಮ್ಮನೇ ಬಿಡುವುದಿಲ್ಲ ಎನ್ನುವುದಕ್ಕೆ ಅಥವಾ ನೀವು ಅದಕ್ಕೆಲ್ಲಾ ಹೆದರಿಕೊಳ್ಳುವುದಕ್ಕೆ? ತೀರಾ ಕೊಡಬೇಕನಿಸಿದರೆ ಒಂದೋ ಎರಡೋ ರೂಪಾಯಿ ಕೊಡುವುದು ಸಾಮಾನ್ಯ , ಆದರೆ ಕೇಳಿದವರಿಗೆಲ್ಲಾ ಐದು ರೂಪಾಯಿ ಕೊಡುತ್ತಾ ಬಂದು ಸಲೀಸಾಗಿ ಮೂವತ್ತೈದು ರೂಪಾಯಿ ಖರ್ಚು ಮಾಡಿಬಿಟ್ಟೆವು ಅನ್ನುತ್ತಿದ್ದೀರಿ ನೀವು!

ಇನ್ನು ಸಾಫ್ಟ್ ವೇರ್ ಎಂಜಿನಿಯರ್ ಗಳಿಗೆ ದುಡ್ಡು ಬಿಟ್ಟಿ ಬರುವುದಿಲ್ಲ ಹೌದು, ಆದರೆ ಕೇವಲ ಇಷ್ಟೇ ತಾನೆ, 'ಹೋದರೆ ಹೋಗಲಿ' ಎಂಬ ಭಾವನೆ ಇರುತ್ತದೆ. ಜೊತೆಗೆ ಕಾಮನ್ ಸೆನ್ಸ್ ಸ್ವಲ್ಪ ಕಡಿಮೆ ಇರುತ್ತದೆ ಎಂಬುದು ಅನುಭವದ ಮಾತು.

Udaya said...

ಪೀಡಿಸಿದಾಕ್ಷಣ ಹೆಚ್ಚಿನ ದುಡ್ಡು ಕೊಡುವ ನಿಮ್ಮಂತಹ ಪ್ರವಾಸಿಗರಿಂದ ಇತರ ಪ್ರವಾಸಿಗರಿಗೂ ತೊಂದರೆ. ದುಡ್ಡಿಗೆ ಪೀಡಿಸುವವರು ಇದೇ ಉಪಾಯ ಮಾಡಿ ಹೇಗೂ ಕೊಡುತ್ತಾರೆ ದುಡ್ಡು ಎಂದು ಎಲ್ಲರನ್ನೂ ಪೀಡಿಸುತ್ತಾರೆ.

Nanda Kishor B said...

ಉದಯ ಅವರೇ,
{ಅದೇನು ಬಿಹಾರವಾ? ಪಾಕಿಸ್ತಾನವಾ?}
ಬಿಹಾರವೋ ಪಾಕಿಸ್ತಾನವೋ ಆದರೆ ಹೆದರಬೇಕು ಎಂದೂ ನಿಮ್ಮ ಮಾತಿನ ಅರ್ಥವೇ?

{ಕೊಡಬೇಕನಿಸಿದರೆ ಒಂದೋ ಎರಡೋ ರೂಪಾಯಿ ಕೊಡುವುದು ಸಾಮಾನ್ಯ , ಆದರೆ ಕೇಳಿದವರಿಗೆಲ್ಲಾ ಐದು ರೂಪಾಯಿ ಕೊಡುತ್ತಾ ಬಂದು ಸಲೀಸಾಗಿ ಮೂವತ್ತೈದು ರೂಪಾಯಿ ಖರ್ಚು ಮಾಡಿಬಿಟ್ಟೆವು ಅನ್ನುತ್ತಿದ್ದೀರಿ}
ಕೊಡುವವರು ಕೊಡುತ್ತಾರೆ ಸ್ವಾಮೀ ನಿಮಿಗೆ ಇಷ್ಟ ಇಲ್ಲದಿದ್ದರೆ ಕೊಡಬೇಡಿ. ಪೀಡಿಸಿದಾಕ್ಷಣ ಕೊಟ್ಟು ಬಿಡಲು ನೀವೇನು ಸಣ್ಣ ಮಗು ಅಲ್ಲವಲ್ಲ?

ಬರಹದಲ್ಲಿ ಲೇಖಕರು ತಾವು ಹಣ ಕೊಟ್ಟ ಖುಷಿಯನ್ನು ವ್ಯಕ್ತಪಡಿಸಿದ್ದು ಎಂದೇ ಹೇಗೆ ಹೇಳುತ್ತಿರಿ. ಅದು ಅವರ ಅನುಭವ. ಅನುಭವಕ್ಕೆ ಅದರದ್ದೇ ಆದ ಅಸ್ತಿತ್ವವಿದೆ ಅದರ ಮೇಲೆ ವಾದ ಸರಿಯಲ್ಲ.

ನಿಮ್ಮ ಬರವಣಿಗೆಯ ಹದ ಬಹಳ ಚೆನ್ನಾಗಿದೆ ಉದಯ್. ಉತ್ತಮ ಲೇಖಕರು ನೀವು. convincing power ತುಂಬಾ ಇದೆ ನಿಮ್ಮಲ್ಲಿ.

rukminimalanisarga.blogspot.com said...

ಸಿಂಧೂ
ಪ್ರವಾಸ ಲೇಖನ ಓದಿ ಸಂತೋಷವಾಯಿತು. ಹೀಗೆ ಬರೆಯುತ್ತಿರು.