Monday, October 18, 2010

ಕಷ್ಟವಿಲ್ಲದಿದ್ದರೆ ಖುಷಿ ಪಡಿ

ಆಫೀಸಿನಲ್ಲಿ ಬಹು ದಿನಗಳ ನಂತರ ಇಷ್ಟದ ಕೆಲಸ ಮಾಡುತ್ತಿದ್ದೆ. ನಾನು ಬರೆಯುತ್ತಿದ್ದ program ಗೆ ನಾನು ಬಳಸುತ್ತಿದ್ದ programming language ಬೇಕಾದಷ್ಟು API ಗಳನ್ನು ಕೊಟ್ಟು ನನ್ನ ಕೆಲಸ ಸುಲಭ ಮಾಡಿತ್ತು. (API = ನಾವು computer ಜೊತೆ ವ್ಯವಹರಿಸಲು ಸುಲಭವಾಗಲು ಅದಕ್ಕೆ ಸಂಬಂಧ ಪಟ್ಟ ಕೆಲವು ಸೂಚನೆಗಳು ಮೊದಲೇ ಲಭ್ಯವಿರುತ್ತವೆ. ನಾವು ಅದನ್ನು ಬಳಸಿ ಆ ಯಂತ್ರದ ಬಗೆ್ಗೆ ಬೇಕಾದ ಮಾಹಿತಿ ಪಡೆದು ನಮ್ಮ program ರಚಿಸಬಹುದು). ಹಾಗೇ ಟೈಪ್ ಮಾಡುತ್ತಾ "ಆಹಾ... ಇದರಲ್ಲಿ program ಬರೆಯುವುದೆಂದರೆ ಆಟವಾಡಿದಂತಾಗುತ್ತದೆ" ಎಂದು ಖುಷಿಯಿಂದ ಉದ್ಗರಿಸಿದೆ. ನನ್ನ ಪಕ್ಕ ಕುಳಿತಿದ್ದಾತ ಅದನ್ನು ಕೇಳಿ "ಹೌದೌದು... ನಿನ್ನ ಕೆಲಸ ಕಷ್ಟವಿಲ್ಲದೆ ನಡೆಯುತ್ತಿದ್ದರೆ ಖುಷಿ ಆಗದೆ ಇನ್ನೇನು" ಎಂದ. ನನಗೆ ನನ್ನ ಕೆಲಸ ಸುಲಭವಾಗಿದೆ ಎಂದು ಕೇಳಿದ ತಕ್ಷಣ ಮನಸಲ್ಲಿ ಸಿಟ್ಟು ಮಿಂಚಿದಂತಾಯಿತು. "ಯಾರು ಹೇಳಿದ್ದು? ತಾವು ಮಾಡುವ ಕೆಲಸ ಕಷ್ಟವೆಂದು ಬೇರೆಯವರದ್ದನ್ನು ಸುಲಭವೆನ್ನಬೇಕಿಲ್ಲ. ಎಲ್ಲರೂ ಅವರವರ ರೀತಿಯಲ್ಲಿ ಕಷ್ಟಪಡುತ್ತಾರೆ" ಎಂದೇನೋ ಹೇಳಿ ಸುಮ್ಮನಾದೆ. ಸಂಜೆ ಬಸ್ ನಲ್ಲಿ ಮನೆಗೆ ಹೋಗುವಾಗ ಬೆಳಗ್ಗಿನ ವಿಚಾರ ನೆನಪಿಗೆ ಬಂತು. ನನ್ನ ಕೆಲಸ ಸುಲಭವಿದೆ ಎಂದ ತಕ್ಷಣ ನನಗೆ ಸಿಟ್ಟು ಬಂದದ್ದು ಏಕೆ? ಕೆಲಸ ಸುಲಭವಿದೆ ಎಂದಾಗ ನನಗೆ ಕೀಳರಿಮೆಯೇಕೆ ಅನಿಸಿದೆ? ಕಷ್ಟವು ನನಗೆ ಇಷ್ಟವಾಗಿದೆಯೇ? ಕೆಲಸ ಸುಲಭವಾದರೆ ಸಂತೋಷವಾಗಬೇಕು ತಾನೇ? ಯೋಚನೆಗಳು ಸುಳಿದಾಡಿದವು.

ಏಳೆಂಟು ವರ್ಷಗಳ ಹಿಂದೆ ನಾನು engineering ವಿದ್ಯಾರ್ಥಿಯಾಗಿದ್ದೆ. ಆಗ ಅನೇಕರು electronics engineering ಬಲು ಕಷ್ಟ, civil engineering ಅಂತೂ ಕಬ್ಬಿಣದ ಕಡಲೆ, computer engineering ಸುಲಭ ಎಂದೆಲ್ಲ ತೋಚಿದಂತೆ ಮಾತನಾಡುತ್ತಿದ್ದರು. ನನಗೆ ಆಗ ಸಿಟ್ಟು ಬರುತ್ತಿತ್ತು. ನನ್ನಂತೆ ಅನೇಕ ಸಹಪಾಠಿಗಳಿಗೂ ಸಿಟ್ಟುಬರುತ್ತಿತ್ತು. ನಾವೆಲ್ಲ "computer engineering ಸುಲಭವಿಲ್ಲವೇ ಇಲ್ಲ" ಎಂದು ವಾದಕ್ಕಿಳಿಯುತ್ತಿದ್ದೆವು. ಸುಲಭವೆಂದರೆ ತೊಂದರೆಯೇನಿತ್ತು ಎಂದು ನನಗೆ ಈಗ ಅನಿಸುತ್ತದೆ. ಕಬ್ಬಿಣದ ಕಡಲೆ ಜಗಿದು ಹಲ್ಲು ಮುರಿದುಕೊಳ್ಳುವುದಕ್ಕಿಂತ ಬೆಣ್ಣೆ ಮೆಲ್ಲುವುದರಲ್ಲಿ smartness ಇಲ್ಲವೇ? ಕಷ್ಟದ ವಿಷಯ ಆರಿಸಿ ಸೋಲುವುದರಿಂದ ನಾನು ಪಾರಾಗಿದ್ದೇನೆ ಎಂಬುದನ್ನು ನಾನು ಜಾಣ್ಮೆಎಂದು ಪರಿಗಣಿಸಲು ಏಕೆ ಸಾಧ್ಯವಾಗಲಿಲ್ಲ ಎಂದು ಆಶ್ಚರ್ಯಪಡುತ್ತೇನೆ.

ಬಹುಶಃ ನಮಗೆ ಕಷ್ಟ ಅನುಭವಿಸಲು ಇಷ್ಟವಿದೆ. ಕಷ್ಟ ಪಟ್ಟರೆ ನಾನು great ಆಗುತ್ತೇನೆ ಎಂಬ ಭಾವನೆ ಮನಸಿನೊಳಗೆಲ್ಲೋ ಬೇರೂರಿಬಿಟ್ಟಿದೆ. ಯಾಕೆ? ಹೇಗೆ? ಗೊತ್ತಿಲ್ಲ. ಹೆಚ್ಚಿನ ವ್ಯಕ್ತಿಗಳ ಮನದೊಳಗೆ ಅರಿವೇ ಇರದಂತೆ ಈ ಭಾವನೆ ಅಡಗಿ ಕೂತಿದೆ. ಅದಕ್ಕೇ ನಮಗೆ ಸಂತೋಷ ಅನುಭವಿಸಲು ಹಿಂಜರಿಯುವ ಜನರು ಕಾಣುತ್ತಾರೆ. ಅಂಗಡಿಯಲ್ಲಿ ಕಿಕ್ಕಿರಿದು ಗಿರಾಕಿಗಳು ತುಂಬಿದ್ದರೂ "ವ್ಯಾಪಾರ ಏನೂ ಚೆನ್ನಾಗಿಲ್ಲ" ಎಂದು ಸದಾ ಗೋಳಾಡುವ ವ್ಯಾಪಾರಿಗಳನ್ನು ನಾನು ನೋಡಿದ್ದೇನೆ. "ಕಷ್ಟ ಪಟ್ಟು" ಜೀವನದಲ್ಲಿ ಮೇಲೆ ಬಂದವನನ್ನು ಜನರು ನೋಡುವ ಪರಿಗೂ "ಕಷ್ಟ ಪಡದೆ" ಮೇಲೆ ಬಂದವನನ್ನು ನೋಡುವ ಪರಿಗೂ ಬಹಳ ವ್ಯತ್ಯಾಸ ಕಾಣುತ್ತದೆ. "ಪಾಪ ಕಷ್ಟದಲ್ಲಿದ್ದಾರೆ" ಎನ್ನುವಾಗ ಕನಿಕರ ಪಡುವ ಹೃದಯ ಸುಖದಲ್ಲಿದ್ದವರನ್ನು ಕಂಡಾಗ ಸಂತಸಪಡುವುದಿಲ್ಲ. ಬೀದಿ ದೀಪದಡಿ ಓದಿ ಡಿಗ್ರಿ ಪಡೆದವ IIMನಲ್ಲಿ MBA ಮಾಡಿದವನ ಮುಂದೆ star ಆಗಿ ಕಾಣುತ್ತಾನೆ. ಯಾಕೆ?

ನಮ್ಮ ಮಕ್ಕಳು ಕಷ್ಟಪಡುವ ಪರಿಸ್ಥಿತಿ ಬರಬಾರದೆಂದು ನಾವೆಲ್ಲರೂ ಬಯಸುತ್ತೇವೆ. ಮುಂದೆ ಕೆಲ ಸಂದರ್ಭಗಳಲ್ಲಿ ಇತರನ್ನು "ಕಷ್ಟಗಳು ಏನೆಂದೇ ಗೊತ್ತಿಲ್ಲ" ಎಂದು ಮೂದಲಿಸುತ್ತೇವೆ. ಆದರೆ ಕಷ್ಟಗಳು ಗೊತ್ತಾಗಬಾರದೆನ್ನುವುದು ನಮ್ಮದೂ ಬಯಕೆಯಾಗಿರಲಿಲ್ಲವೇ? ನಮ್ಮ ನೆಂಟರೊಬ್ಬರು "ನಮ್ಮ ಬಳಿ ಬೇಕಾದಷ್ಟು ಅನುಕೂಲ (ಹಣ) ಇದೆ." ಎಂದು ಹೇಳುತ್ತಿರುತ್ತಾರೆ. ಅವರನ್ನು ನೋಡಿದವರು ಮೆರೆದಾಟ, ಜಂಭ ಕೊಚ್ಚಿಕೊಳ್ಳುವುದು ಎಂದು ಭಾವಿಸುತ್ತಾರೆ. ಅದೇ ಎಷ್ಟೋ ಜನ "ನಾವು ಬಹಳ ಕಷ್ಟದಲ್ಲಿದ್ದೇವೆ" ಎಂದಾಗ ಕಷ್ಟವನ್ನು "ಕೊಚ್ಚಿಕೊಳ್ಳುವುದು" ಎಂದು ಭಾವಿಸುವುದೇ ಇಲ್ಲ. ಏಕೆಂದರೆ ಕಷ್ಟ ನಮಗೆಲ್ಲ ಬಲು ಪ್ರಿಯ. ನಮ್ಮದಾಗಲೀ ಇತರರದ್ದಾಗಲೀ ಕಷ್ಟವೆಂದರೆ ಎಲ್ಲರಿಗೂ ಇಷ್ಟ. ಕಷ್ಟ ಪಟ್ಟು ಪಡೆದುದರ ಬಗ್ಗೆ ಯಾವತ್ತೂ ಹೆಮ್ಮೆ. ಹಾಗಾದರೆ ನಾವು ಸುಖಪಡುವುದು ಯಾವಾಗ?

ಯೋಚನೆ ಓಡುತ್ತಿದ್ದರೆ ಬಸ್ ನಿಲ್ದಾಣ ಬಂತು. ನೂಕು ನುಗ್ಗಲನಲ್ಲಿ ಇನ್ನೊಂದು ಬಸ್ ಹತ್ತಿ ಕಷ್ಟಪಟ್ಟು... ಅಲ್ಲಲ್ಲ ಖುಷಿಯಿಂದಲೇ ಸೀಟು ಹಿಡಿದೆ. ಮನೆ ತಲುಪುವವರೆಗೆ ಪುನಃ ಯೋಚನೆಯಲ್ಲಿ ಮುಳುಗಿದೆ. ಕಷ್ಟವಾದರೇನು ಸುಲಭವಾದರೇನು? ನಾವು ಮಾಡುವ ಕೆಲಸ ನಮಗೆ ಖುಷಿ ಕೊಡಬೇಕು ಅನಿಸಿತು. ಆಗ ಅಲ್ಲಿ ಕಷ್ಟವಿದ್ದರೂ ಹಾಗೆ ಅನಿ್ನಸುವುದಿಲ್ಲ. ಕಷ್ಟದ ವೈಭವೀಕರಣವಾಗಲೀ, ಸುಲಭದಿಂದ ಪಡೆದುದರ ಬಗ್ಗೆ ಕೀಳರಿಮೆಯಾಗಲೀ ಅಲ್ಲಿ ಉಂಟಾಗುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾದುದು ಖುಷಿಯಲ್ಲವೇ? ಖುಷಿ ಸಿಕ್ಕಾಗ ಅನುಭವಿಸಲೇನು ಕಷ್ಟ?
-

3 comments:

Chamaraj Savadi said...

ತುಂಬ ಚೆನ್ನಾಗಿ ಗ್ರಹಿಸಿ ಬರೆದಿದ್ದೀರಿ ಸಿಂಧೂ. ಇಷ್ಟವಾಯ್ತು.
ಕಷ್ಟಪಟ್ಟರೆ ಮಾತ್ರ ಸಾರ್ಥಕತೆ ಎಂಬ ಭಾವನೆ ನಮ್ಮ ಮೇಲೆ ಅನಗತ್ಯ ಹೊರೆಯನ್ನು ಹೊರಿಸಿದೆ. ಅದು ಹಾಗಲ್ಲ ಎಂಬುದನ್ನು ಅರಿತುಕೊಂಡರೆ, ಬದುಕನ್ನು ಇನ್ನಷ್ಟು ಆಸ್ವಾದಿಸಬಹುದು.

ಸರಿಯಾಗಿ ಹೇಳಿದ್ದೀರಿ.

ಮನಮುಕ್ತಾ said...

ನಿಮ್ಮ ಒಳ್ಳೆಯ ವಿಚಾರ ತು೦ಬಿದ ಬರಹ ಹಿಡಿಸಿತು..ನಿಜ ..ನಾವು ಮಾಡುವ ಕೆಲಸ ನಮಗೆ ಖುಶಿ ಕೊಡಬೇಕು..ಆಗ ಅದು ಕೆಲಸವಾಗುವುದಿಲ್ಲ..ಮನರ೦ಜನೆಯಾಗುತ್ತದೆ.
ನಿಮ್ಮ ಬರಹ ಓದುತ್ತದ್ದಾಗ ಕನ್ಫೂಷಿಯಸ್ ಅವರ ಒ೦ದು ವಾಕ್ಯ ನೆನಪಾಯಿತು.Choose a job you love, and you will never have to work a day in your life.

ವಿ.ರಾ.ಹೆ. said...

ನಿಜ , ಇಂತಹ ಸೂಕ್ಷ ವಿಚಾರಗಳನ್ನು ಎಕ್ಸ್ ಪ್ರೆಸ್ ಮಾಡುವುದು ಕಷ್ಟ. ನೀವು ಚೆನ್ನಾಗಿ ಹೇಳಿದ್ದೀರಿ.