Monday, March 15, 2010

ಸಣ್ಣದೊಂದು ಅನುಭವದ ಪಾಠ

ಎಷ್ಟೋ ದಿನಗಳಿಂದ ಉಸಿರುಗಟ್ಟಿಸುವಷ್ಟು ಕೆಲಸದಲ್ಲಿ ಹುದುಗಿ ಹೋಗಿದ್ದರಿಂದ ಅನೇಕ ಬರೆಯಲರ್ಹ ವಿಚಾರಗಳು ತಲೆಯಲ್ಲಿ ಬಂದರೂ ಬರೆಯಲಾಗದೆ ಕೆಲವಂತೂ ಮರೆತೇ ಹೋಗಿವೆ. ಏನಿಂಥಾ ಕೆಲಸ? ಎಂದು ಯೋಚಿಸುತ್ತಿದ್ದೀರಾದರೆ ಕೇಳಿ.

ನನ್ನ ಯಜಮಾನರಿಗೆ ಕಾಲಿನ ಚಿಕ್ಕ ಶಸ್ತ್ರಚಿಕಿತ್ಸೆಯೊಂದು ಆಗಬೇಕಾಗಿದ್ದು ಹಲವು ವರ್ಷಗಳಿಂದ "TODO" list ನಲ್ಲಿ ಇತ್ತು. ಹಠಾತ್ತಾಗಿ ಅದನ್ನು ಮಾಡಬೇಕಾದ ಸಂದರ್ಭ ಬಂದು (ಕಾಲ ಕೂಡಿಬಂದುದು ಎಂದು ಹೇಳಬಹುದೇನೋ) ಅದೇ ವಿಚಾರದಲ್ಲಿ ಎರಡು ತಿಂಗಳು ಆಫೀಸು, ಮನೆ, ಆಸ್ಪತ್ರೆ ಎಂದು ಓಡಾಡಬೇಕಾಗಿ ಬಂತು. ಅದರ ನಡುವೆ ಕೆಲ ವಾರಗಳಿಂದ ಪ್ರಾಜೆಕ್ಟ್ ನ ರಿಲೀಸ್ ಎಂದು ದಿನದಲ್ಲಿ ೧೦ ಗಂಟೆ ಆಫೀಸಿನಲ್ಲಿ ಒದ್ದಾಡಿ ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಿರಬೇಕಾದರೆ, ವೈರಸ್ ಗಳು "ನಿನ್ನನ್ನು ಸುಮ್ಮನೆ ಕೂರಲು ಬಿಡಲಾರೆವು" ಎಂದು ಶೀತ, ಕೆಮ್ಮು ತಂದಿಟ್ಟಿವೆ. ಯಜಮಾನರಿಗೆ ನಾಲ್ಕು ಚಕ್ರದ ವಾಹನ ಬಿಡಲು ಡಾಕ್ಟರು ಸಮ್ಮತಿ ನೀಡಿದ್ದೊಂದು ಸಮಾಧಾನ.

ಈ ಎರಡು ತಿಂಗಳಲ್ಲಿ ನನಗೆ ಹೊಸತಾದ ಬೇರೆ ಬೇರೆ ಅನುಭವಗಳಾಗಿವೆ. ಅವುಗಳಿಂದ ಚಿಕ್ಕ ಚಿಕ್ಕ ಪಾಠಗಳೂ ಸಿಕ್ಕಿವೆ. ಅದರಲ್ಲಿ ಒಂದನ್ನು ಇಲ್ಲಿ ಹೇಳಲಿದ್ದೇನೆ.

ನಾವು ಪ್ರತಿದಿನ ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಲೆತ್ನಿಸುತ್ತೇವೆ. ಹೆಚ್ಚಿನ ಸಲ ಅದು ನಮ್ಮ ಆಸಕ್ತಿಯಿಂದಾಗಿರುತ್ತದೆ. ನಮಗೆ ಉಪಯೋಗವಿದೆಯೋ ಇಲ್ಲವೋ ಎಂದು ನೋಡಲು ಹೋಗುವುದಿಲ್ಲ. ಕೆಲವು ಬಾರಿ ಹೀಗೆ ಯಾವತ್ತೋ ತಿಳಿದುಕೊಂಡ ವಿಚಾರಗಳು ಇನ್ನು ಯಾವತ್ತೋ ಉಪಯೋಗಕ್ಕೆ ಬರುತ್ತವೆ. ಸ್ಟೀವ್ ಜಾಬ್ಸ್ ಎಂದೋ ಕಲಿತ calligraphy, ಮೊದಲ Macintosh computer ನ ಸುಂದರ typography ಗೆ ಕಾರಣವಾದಂತೆ. (ನನ್ನದು ಇಷ್ಟು ದೊಡ್ಡ ವಿಚಾರವಲ್ಲ!)

ನಮ್ಮ ಆಸ್ಪತ್ರೆ ಖರ್ಚುಗಳನ್ನು ಇನ್ಶೂರೆನ್ಸ್ ಕಂಪನಿ ನೋಡಿಕೊಳ್ಳುವುದಿತ್ತು. ನಾನು ಆಸ್ಪತ್ರೆಯಲ್ಲಿ ಕುಳಿತು ನನ್ನ ಯಜಮಾನರ ಹೆಲ್ತ್ ಇನ್ಶೂರೆನ್ಸ್ ನ ಅತ್ಯಂತ ಉದಾಸೀನಮಯವಾದ document ಅನ್ನು ಓದುತ್ತಿದ್ದೆ. ಯಾಕೆ ಓದಬೇಕೆಂದೂ ತಿಳಿದಿರಲಿಲ್ಲ. ಮಾಡಲು ಕೆಲಸವಿಲ್ಲದೆ ಅದನ್ನು ಓದುತ್ತಿದ್ದೆ. ಡಿಸ್ಚಾರ್ಜ್ ಮಾಡುವ ದಿನ ನೋಡಿದಾಗ ಬಿಲ್ ನಲ್ಲಿ ಕೆಲವು ಸಾವಿರ ನಮ್ಮ ಕೈಯಿಂದ ಕೊಡಬೇಕೆಂದು(copayment) ಬರೆದಿತ್ತು. ನನಗೆ ಆಶ್ಚರ್ಯವಾಯಿತು. ಆ document ಪ್ರಕಾರ ನಮಗೆ ಕೋ-ಪೇಮೆಂಟು ಬೀಳಬಾರದಿತ್ತು. ಬಿಲ್ ಕೌಂಟರಿನಲ್ಲಿದ್ದವನ ಬಳಿ ಇನ್ಶೂರೆನ್ಸ್ ಕಂಪನಿ ಕಳಿಸಿದ ಮನ್ನಣೆ ಪತ್ರವನ್ನು (approval letter) ತೋರಿಸಲು ಕೇಳಿದೆ. ಅದನ್ನು ಓದಿ, ಆತ ಹಾಕಿರುವ ಲೆಕ್ಕಾಚಾರ ತಪ್ಪಿದೆಯೆಂದು ಮನವರಿಕೆ ಮಾಡಿಸಲು ಸಾಕು ಸಾಕಾಯಿತು. ಕೊನೆಗೆ ಆತ ತನ್ನ ತಪ್ಪನ್ನು ಒಪ್ಪಿ ಕ್ಷಮೆ ಕೇಳುತ್ತಾ ಹೊಸದಾಗಿ ಬಿಲ್ ತಯಾರಿಸಿ ಕೊಟ್ಟ. ನನಗೆ ಆ ಇನ್ಶೂರೆನ್ document ನಲ್ಲಿ ಏನಿದೆಯೆಂದು ತಿಳಿದಿಲ್ಲದಿದ್ದರೆ ಕೆಲವು ಸಾವಿರ ನಷ್ಟ ಮಾಡಿಕೊಳ್ಳಬೇಕಾಗುತ್ತಿತ್ತೇನೋ. ಸುಮ್ಮನೆ ಓದಿದ್ದು ಉಪಯೋಗಕ್ಕೆ ಬಂದಿತ್ತು.

ಇದು ಇನ್ನೊಂದು ವಿಷಯ. ನಾನು ಕಾರು ನಡೆಸಲು ಕಲಿತು, ಲೈಸನ್ಸ್ ಪಡೆದು ನಾಲ್ಕು ವರ್ಷವಾಗಿದೆಯೇನೋ. ಇಂದಿಗೂ ಸರಿಯಾಗಿ ನಡೆಸಿದ್ದಿಲ್ಲ. ಮೂರು ನಾಲ್ಕು ಕಿಲೋಮೀಟರು ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ನಡೆಸಿ ಸುಮ್ಮನೇ ಬಿಟ್ಟಿದ್ದೆ. ಅಭ್ಯಾಸ ಬಿಟ್ಟು ಹೋದಂತೆಲ್ಲ, ಕಾರು ಬಿಡಲು ಕುಳಿತಾಗ ಭಯ ಆವರಿಸಲಾರಂಭಿಸಿತ್ತು. ಆಸ್ಪತ್ರೆ, ಮನೆ, ಆಫೀಸು ಎಂದು ಓಡಾಡುವಾಗೆಲ್ಲಾ ರಿಕ್ಷಾ, ಟ್ಯಾಕ್ಸಿ ಅಥವಾ ವಜ್ರ (ಬಸ್ಸು)ವನ್ನು ನಂಬಿಕೊಂಡೇ ಬದುಕಬೇಕಾದ್ದಕ್ಕೆ ನನ್ನನ್ನು ನಾನೇ ಹಳಿದುಕೊಂಡಿದ್ದೆ. ಉಪಯೋಗವಿತ್ತೋ, ಇಲ್ಲವೋ ಕಾರೊಂದು ಕಲಿತಿದ್ದರೆ... ಎಂದು ಬಹಳ ಸಲ ಯೋಚಿಸುವಂತಾಗಿತ್ತು. ನಾವು ಏನಾದರೂ ಕಲಿಯುತ್ತಿರುವಾಗ ಸಧ್ಯದ ಉಪಯೋಗವನ್ನು ಮನಸಲ್ಲಿರಿಸದಿರುವುದೇ ಒಳ್ಳೆಯದೇನೋ. ಕಲಿತದ್ದು ಎಂದಾದರೂ ಒಂದುದಿನ ಉಪಯೋಗಕ್ಕೆ ಬರುತ್ತದೆ. ಕಲಿತದ್ದರ ಅಗತ್ಯ ಬಾರದಿದ್ದರೆ ಸುಮ್ಮನಿದ್ದುಬಿಡುವುದು, ಅಗತ್ಯ ಬಂದಾಗ ಕಲಿತಿರದೆ ದುಃಖಿಸುವುದಕ್ಕಿಂತ ಒಳ್ಳೆಯದೆಂದು ನಾನು ಅರಿತುಕೊಂಡೆ.

6 comments:

ವಿ.ರಾ.ಹೆ. said...

yes. ಕಲಿತ , ತಿಳಿದುಕೊಂಡ ವಿಷಯಗಳು ಜೀವನದಲ್ಲಿ ಯಾವಾಗಲಾದ್ರೂ ಉಪಯೋಗಕ್ಕೆ, ಸಹಾಯಕ್ಕೆ ಬಂದೇ ಬರುತ್ತವೆ. ಇಂತದ್ದೇ ವಿಷಯ ಅಂತ ಇಲ್ಲದೇ ಹೋದರೂ ಎಲ್ಲ ಸಾಮಾನ್ಯ ವಿಷಯಗಳಲ್ಲೂ ಕಲಿಯುವಿಕೆ, ತಿಳಿದುಕೊಳ್ಳುವಿಕೆ ನಮ್ಮ ಜೀವನದಲ್ಲಿ ನಿರಂತರವಾಗಿರಬೇಕೆನಿಸುತ್ತದೆ. Atleast ಕೆಲವೊಮ್ಮೆ ಅದೇ common sense ರೀತಿ ಕೆಲಸ ಮಾಡುತ್ತದೆ. ನಿಜಕ್ಕೂ ನಿಮ್ಮ ಘಟನೆ ಅನುಭವದ ಪಾಠ.

Anonymous said...

yes, learning is the name of the game. Age, location, position no bar...

Learning by experience is the best way, the learnings get etched in the mind...

To compensate for not posting the comment in Kannada, JAI Karnataka :P

ಸಾಗರದಾಚೆಯ ಇಂಚರ said...

ಕಲಿಯುವಿಕೆ ಒಂದು ತಪಸ್ಸು, ಅದರ ಉಪಯೋಗ ಒಂದಿಲ್ಲೊಂದು ದಿನ ಬರುತ್ತದೆ
ಬರಹ ಚೆನ್ನಾಗಿದೆ
ಹೊಸವರುಷದ ಶುಭಾಶಯಗಳು

ದರ್ಶನ said...

ಜ್ಞನಾರ್ಜನೆ ನಮ್ಮನ್ನು ಸದಾ ಸಂತೋಷವಾಗಿಡಬಲ್ಲದು
ಸದಾ ಹೊಸತನ್ನು ಕಲಿಯುತ್ತಿರಬೇಕು ಅನ್ನೊ ನಿಮ್ಮ ಆಸಕ್ತಿ ಪ್ರಶಂಸನಾರ್ಹ

ಅದು ಹೇಗೆ ನನ್ನ ಬ್ಲಾಗ್ ಹುಡುಕಿದ್ರೋ ಗೊತ್ತಿಲ್ಲ
thanks

pratiphalana.blogspot.com
sooryagrahana.blogspot.com

Raghu said...

ಇವಾಗ ಹೇಗಿದ್ದಾರೆ ನಿಮ್ಮವರು..? ಅನುಭವಕ್ಕಿಂತ ಬೇರೆ ಪಾಠ ಇದೆಯೇ...? ನಿನ್ನೆ ವಿಷೆಯ ಬಿಡಿ,,ನಾಳೆ ಬಗ್ಗೆ ನೋಡಿ.. :)
ನಿಮ್ಮವ,
ರಾಘು.

shivu.k said...

gooಮೇಡಮ್,

ಕಲಿಕೆಯೇ ಜೀವನವೆನ್ನುವ ಪಾಠ ಆಗಾಗ ಹೀಗೆ ನೆನಪಾಗುತ್ತಿರುತ್ತದೆಯಲ್ಲವೇ...ನೀವು ಹೇಳಿದ ಮೇಲೆ ನನ್ನಲ್ಲಿರುವ ಇನ್ಸೂರೆನ್ಸುಗಳನ್ನೆಲ್ಲಾ ಸುಮ್ಮನೇ ಓದಬೇಕೆನಿಸಿದೆ..ಓದುತ್ತೇನೆ..

ಧನ್ಯವಾದಗಳು.