Monday, May 10, 2010

Communication skills ಎಂದರೇನು?

ಹೋದ ತಿಂಗಳು interpersonal effectiveness ಎನ್ನುವ ತರಬೇತಿ ಕಾರ್ಯಕ್ರಮವನ್ನು ನಮ್ಮ ಆಫೀಸು ನಡೆಸಿದ್ದು ನಾನು ಅದರಲ್ಲಿ ಭಾಗಿಯಾಗಬೇಕಾಯಿತು. ಸಹೋದ್ಯೋಗಿಗಳೊಂದಿಗೆ ಯಾವ ರೀತಿ ವ್ಯವಹರಿಸಬೇಕೆನ್ನುವುದರ ಬಗ್ಗೆ ತರಬೇತಿ. ಎರಡು ದಿನದ ಕಾರ್ಯಕ್ರಮ ಚೆನ್ನಾಗಿತ್ತು. ಕೆಲಸವಿಲ್ಲದ ಎರಡು ದಿನ ಮೋಜಿನಿಂದಲೂ ಕಳೆಯಿತು.
ವಾರದಲ್ಲಿ ಕನಿಷ್ಠ ನಾಲ್ಕು ದಿನ ಇಪ್ಪತ್ತು ನಿಮಿಷಗಳಿಗೆ ಕಮ್ಮಿಯಿಲ್ಲದಂತೆ ಫೋನಿನಲ್ಲಿ ಹರಟುವ ನನ್ನ ಗೆಳತಿಗೆ ಫೋನು ಮಾಡಿದೆ. ತರಬೇತಿ ಕಾರ್ಯಕ್ರಮದ ಬಗ್ಗೆ ಹೇಳಿದೆ. ವಿಷಯ ಮಾತನಾಡುತ್ತಾ communication skills ನತ್ತ ತಿರುಗಿತು.

"ನನ್ನ ಪರಿಚಯದವನೊಬ್ಬ ತಾನು ಮದುವೆಯಾಗಲಿರುವ ಹುಡುಗಿಯ ಫೋಟೋವನ್ನು social networking site ಅಲ್ಲಿ ಹಾಕಿ ಬಹಳ ಚೆನ್ನಾಗಿರುವ ವಾಕ್ಯಗಳನ್ನು ಬರೆದಿದ್ದಾನೆ" ಎಂದೆ.

"ನಾನೂ ಅಂಥ ಅನೇಕ ಜನರನ್ನು ನೋಡಿದ್ದೇನೆ" ಎಂದಳು.

"ನಾನು ಉಡುಪಿಯಲ್ಲಿ ಯಾರದ್ದೋ ಮನೆ ಕೇಳಿಕೊಂಡು ಬಂದ ಅಪರಿಚಿತ ಹುಡುಗನ ಬಳಿ ಸುಮಾರು ಇಪ್ಪತ್ತು ನಿಮಿಷ ಹರಟಿ ಕೊನೆಯಲ್ಲಿ ಅವನು ಫೋನ್ ನಂಬರ್ ಕೇಳಿದಾಗ ಎಚ್ಚೆತ್ತುಕೊಂಡೆ. ಅಷ್ಟು ಮಾತಾಡಲು ಕಾರಣ ಅವನ ಮಾತಿನ ಶೈಲಿ, communication skills. ಕೊನೆಗೆ ನಾನು ಪೇಯಿಂಗ್ ಗೆಸ್ಟ್ ಆಗಿದ್ದ ಕಡೆ ಆಂಟಿಯನ್ನು ಕೇಳಿದಾಗ ಅವನ ಕೆಲಸವೇ ಅದು, ಸಿಕ್ಕಿದವರ ಜೊತೆ ಗಂಟೆಗಟ್ಟಲೆ ಹರಟುತ್ತಾನೆ ಎಂದರು" ಎಂದೆ.

"ಹೌದು. ಚೆನ್ನಾಗಿ ಮಾತನಾಡುವವರು ಎಂಥವರನ್ನೂ ಮರುಳು ಮಾಡಬಲ್ಲರು" ಎಂದಳು.

"ನನ್ನ ಗೆಳೆಯನೊಬ್ಬ ನೋಡಲು ಚಂದ ಇಲ್ಲ. ಆದರೆ ಮಾತನಾಡುವುದರಲ್ಲಿ ಬಲು ಜಾಣ. ಈ communication skills ನಿಂದಾಗಿ ಅವನಿಗೆ ಸುಂದರಿಯಾದ girl friend ಇದ್ದಾಳೆ" ಎಂದು ನಕ್ಕೆ.

"ಹಾಗಾದರೆ communication skills ಎಂದರೆ ನಿಜವಾಗಿ ಜನರನ್ನು ಮಂಗಮಾಡುವುದು ಎಂದಾಯಿತಲ್ಲವೇ?" ಎಂದಳು.
(ಮಂಗಳೂರು ಕನ್ನಡದಲ್ಲಿ ಮಂಗಮಾಡುವುದು ಎಂದರೆ ಮೂರ್ಖರನ್ನಾಗಿಸುವುದು)

"ಹೌದಲ್ಲವೇ!!" ಎನ್ನುತ್ತಾ ಇಬ್ಬರೂ ಮನಸಾರೆ ನಕ್ಕೆವು. ಇಂದಿನವರೆಗೂ ಯೋಚಿಸಿದಾಗೆಲ್ಲ ಅವಳು ಹೇಳಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ. ಕೆಲವೊಮ್ಮೆ ತರಬೇತಿ ಕಾರ್ಯಕ್ರಮಗಳೂ ಒಂದರ್ಥದಲ್ಲಿ ನಮ್ಮ ಕೆಲಸ ಸಾಧಿಸಲು ನಯ ವಿನಯಗಳ ಸೋಗು ಹಾಕಲು ಕಲಿಸುವುದು ಎಂದು ಅನ್ನಿಸುತ್ತದೆ.