3-4 ವರ್ಷಗಳ ಹಿಂದಿನ ಮಾತು. ನಾನು ಹಾಸ್ಟೆಲಲ್ಲಿ, ಪೇಯಿಂಗ್ ಗೆಸ್ಟ್ ಆಗಿ ಕಳೆದ ದಿನಗಳು. ಮದುವೆ, ಪೂಜೆ ಇತರ ಸಮಾರಂಭಗಳಿಗೆ ಒಮ್ಮೊಮ್ಮೆ ಹೋಗಬೇಕಾಗುತ್ತಿತ್ತು. ಅಲ್ಲಿ ಅನೇಕ ಸಂಬಂಧಿಗಳು ಸಿಗುತ್ತಿದ್ದರು. ಅನೇಕ ಹೆಂಗಸರನ್ನು ನೋಡಿ ಮಾತ್ರ ನೆನಪಿರುತ್ತಿತ್ತು. ಅವರು ಏನು, ಎಲ್ಲಿ ಇರುವುದು, ನನಗೆ ಯಾವ ರೀತಿ ಸಂಬಂಧಿಕರು? ಇವೆಲ್ಲ ನೆನಪೇ ಇರುತ್ತಿರಲಿಲ್ಲ. ಅದನ್ನು ತಿಳಿಯುವ ಆಸಕ್ತಿಯೂ ಇರುತ್ತಿರಲಿಲ್ಲ.
ಕೆಲವರಂತೂ ಕಂಡಾಕ್ಷಣ "ನನ್ನ ಗುರುತು ಸಿಕ್ಕಿತಾ?" ಎಂದು ಕೇಳುವುದು; ಹೌದೆಂದರೆ "ಹಾಗಾದರೆ ಯಾರೆಂದು ಹೇಳು" ಎಂದು ಪೀಡಿಸುವುದು ಮತ್ತೆ ನಾನು "ಅದೂ...ಆ..." ಎಂದು ತೊದಲಿದಾಗ "ನಾನು ನಿನ್ನ ಅಜ್ಜಿಯ ಸೋದರ ಮಾವನ....." ಎಂದು ಬಿಡಿಸಲಾರದ ಒಗಟೊಂದನ್ನು ನನ್ನ ಮುಂದಿಡುವುದು ಮಾಡುತ್ತಿದ್ದರು.
ಇನ್ನು ಕೆಲವರು ನಾನು ಹಾಸ್ಟೆಲಲ್ಲಿ ಯಾ ಪೇಯಿಂಗ್ ಗೆಸ್ಟ್ ಆಗಿ ಇರುವುದೆಂದು ತಿಳಿದ ಕೂಡಲೇ "ಬೆಳಗ್ಗೆ ಏಳುವುದು ಎಷ್ಟು ಗಂಟೆಗೆ? ತಿಂಡಿಗೆ ಏನು ಕೊಡುತ್ತಾರೆ? ಮಧ್ಯಾಹ್ನ ಊಟಕ್ಕೇನು ಕೊಡುತ್ತಾರೆ? ಎಷ್ಟು ಹೊತ್ತಿಗೆ ಊಟ? ಸ್ನಾನಕ್ಕೆ ಬಿಸಿನೀರು ಇದೆಯಾ?" ಎಂದೆಲ್ಲ ನಾನು ಗಣನೆಗೇ ತೆಗೆದುಕೊಂಡಿರದ ವಿಷಯಗಳನ್ನು ಕೇಳುತ್ತಾರೆ. ನಾನು ಎಷ್ಟೋ ಬಾರಿ "ನಾನು ಹೇಗಿದ್ದರೆ ಇವರಿಗೇನಪ್ಪಾ" ಎಂದು ಆಶ್ಚರ್ಯಪಟ್ಟಿದ್ದೇನೆ. ಈ ಅಪ್ರಯೋಜಕ ಕಾಡು ಹರಟೆಗಿಂತ ಏನಾದರೂ ಒಳ್ಳೆಯ ವಿಚಾರ ಮಾತಾಡಿದರೆ ಆಗುವುದಿಲ್ಲವೇ ಅಥವಾ ಸುಮ್ಮನಿರುವುದು ಒಳ್ಳೆಯದಲ್ಲವೇ? ಎಂದು ಅನಿಸಿದ್ದಿದೆ. ಇದನ್ನು ಕೆಲವರ ಬಳಿ ಹೇಳಲು ಹೋಗಿ "ಏನೂ ಮಾತನಾಡದೆ ಹೋದರೆ relations ಉಳಿಯುವುದು ಹೇಗೆ? ಇಷ್ಟಕ್ಕೂ ಅವರು ಹಾಗೆ ಕೇಳಿದರೆ ತಪ್ಪೇನಿದೆ?" ಎಂದೂ ನಾನು ಬೈಸಿಕೊಂಡದ್ದಿದೆ.
ಏನೇ ಇರಲಿ ನನಗಂತೂ ಈರೀತಿ ಹರಟುವುದಕ್ಕಿಂತ "blank" ಆಗಿ ಒಂದೆಡೆ ಕುಳಿತಿರುವುದು ಇಷ್ಟವಾಗುತ್ತದೆ. "blank" ಆಗಿರುವುದು ಹೇಗೆಂದು ಇನ್ನೊಮ್ಮೆ ಹೇಳುತ್ತೇನೆ.
ಮದುವೆಯಾದ ನಂತರ ಈ ಪ್ರಶ್ನೆಗಳ ಸ್ವರೂಪ ಬದಲಾಗಿದೆ. ಮಾತ್ರ ಅಷ್ಟೇ ಅಪ್ರಯೋಕವಾಗಿವೆ. "ಅಡುಗೆಗೆ ಏನು ಮಾಡುವುದು?", "ಇಬ್ಬರೂ ಕೆಲಸಕ್ಕೆ ಹೋಗುವಾಗ lunch box ಕೊಂಡೊಯ್ಯುತ್ತೀರಾ?", "ರಾತ್ರಿಗೆ ಅಡುಗೆ ಬೆಳಗ್ಗೆ ಮಾಡಿದುವುದಾ?", "ಎಷ್ಟು ಹೊತ್ತಿನ ಬಸ್ ಪ್ರಯಾಣ?" ಇತ್ಯಾದಿ. ಆದರೆ ಈಗ ನನಗೆ ಇವಕ್ಕೆ ಉತ್ತರಿಸುವುದರಲ್ಲಿ ತಪ್ಪು ಕಾಣುವುದಿಲ್ಲ. ಪ್ರಶ್ನೆಗಳು ಮೊದಲಿನಷ್ಟು irritate ಆಗುವುದಿಲ್ಲ.
ತೀರ ಇತ್ತೀಚೆಗಷ್ಟೇ ಯೋಚಿಸಿದೆ... ಈ ಬದಲಾವಣೆಗೆ ಕಾರಣ ಏನಿರಬಹುದೆಂದು. ಇನ್ನೂ ಗೊತ್ತಾಗಿಲ್ಲ. ಸಹನೆ ಹೆಚ್ಚಿದೆಯೇ? ಅಲ್ಲಾ ನಾನು ಇವನ್ನು tolerate ಮಾಡಲು ಕಲಿತಿರುವೆನೇ? ಇದಕ್ಕೇ maturity ಎನ್ನುವುದೇ? ಅಥವಾ ನನ್ನಲ್ಲಿ ಮಾತನಾಡಲು ವಿಷಯಗಳು ಮುಗಿದುಹೋಗಿವೆಯೇ?
ನಾನು ಇದನ್ನು ಇಷ್ಟಪಡುತ್ತಿದ್ದೇನೆಯೇ? ಅಯ್ಯೋ... ಹಾಗಾದರೆ ನಾನು ಮುಂದೊಂದು ದಿನ ಇವರಂತೆ ಬೇರೆಯವರ ತಲೆತಿನ್ನಲಿದ್ದೇನೆಯೇ? ನನಗೆ ವಯಸ್ಸಾಗುತ್ತಿರುವುದರ ಸೂಚನೆಯೇ? ಹಾ.. ಹೆದರಿಕೆಯಾಗತೊಡಗಿದೆ.
ವರ್ಷಗಳು ಉರುಳಿದಂತೆ ಜ್ಞಾನ ಹೆಚ್ಚಬೇಕು, ಅನಗತ್ಯ ಮಾತು ಕಡಿಮೆಯಾಗಬೇಕು ಎಂದು ನನ್ನ ಭಾವನೆ. ನನ್ನ ಜ್ಞಾನ ವೃದ್ಧಿಯಾಗುವುದು ನಿಂತಿದೆಯೇ? ತಲೆ ಬಡ್ಡಾಗುತ್ತಿದೆಯೇ? (ಮಂಗಳೂರು ಕಡೆ ಇದರ ಅರ್ಥ, ಮೆದುಳು sharpness ಕಳೆದುಕೊಂಡಿದೆ ಎಂದು) ಹಾಗಿದ್ದರೆ ನಾನು ಏನು ಮಾಡುತ್ತಿದ್ದೇನೆ? ಯೋಚಿಸತೊಡಗಿದ್ದೇನೆ.
ಇದಕ್ಕಾಗಿ ಹೊಸವರ್ಷದಲ್ಲಿ resolution ತೆಗೆದುಕೊಳ್ಳಲು ಆಲೋಚಿಸಿದ್ದೇನೆ.
ಈ ವರ್ಷದಿಂದ ಮುಂದೆಂದಿಗೂ ಅನಗತ್ಯ ಹರಟೆಯಲ್ಲಿ ತೊಡಗಲಾರೆ. ಅಥವಾ ಹೀಗೆ ಹೇಳಲೇನೋ... ಈ ವರ್ಷದಿಂದ ಮುಂದೆ ನಾನು knowledge ಹೆಚ್ಚಿಸಿಕೊಳ್ಳುವತ್ತ ಗಮನ ಕೊಡುತ್ತೇನೆ. (ಇದರಿಂದ ಅನಗತ್ಯ ಹರಟೆ ತಂತಾನೇ ಮರೆತುಹೋಗುವುದೆಂಬ ಅನಿಸಿಕೆ)... ಏನೋ... resolution ಏನು ಎಂದೂ ಹೊಳೆಯುತ್ತಿಲ್ಲ!!